ISSN (Print) - 0012-9976 | ISSN (Online) - 2349-8846

ಹಕ್ಕುಗಳೇ ಇಲ್ಲದ ಜನಕಲ್ಯಾಣ ಕಾರ್ಯಕ್ರಮಗಳ ಸ್ಕೀಂ ಕಾರ್ಮಿಕರು

ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಜನಕಲ್ಯಾಣ ಯೋಜನಾ ಕಾರ್ಮಿಕರು ತಮ್ಮ ಹಕ್ಕುಗಳನ್ನು ಮಾನ್ಯ ಮಾಡಬೇಕೆಂದು ಹೋರಾಟ ಮುಂದುವರೆಸಿದ್ದಾರೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಮಹಾರಾಷ್ಟ್ರದ ಅಂಗನವಾಡಿ ಕಾರ್ಯಕರ್ತೆಯರು ಫೆಬ್ರವರಿ ತಿಂಗಳುದ್ದಕ್ಕೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಕಳೆದಿದ್ದಾರೆ. ಬಿಹಾರದಲ್ಲಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ತಯಾರಕರು ತಮ್ಮ ವೇತನವನ್ನು ಹೆಚ್ಚಿಸಬೇಕೆಂದು ಜನವರಿ ತಿಂಗಳುದ್ದಕ್ಕೂ ಹೋರಾಟ ನಡೆಸಿದರು. ಈ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ತಯಾರಕರು ದೇಶಾದ್ಯಂತ ಇರುವ ಕೇಂದ್ರದ ಮತ್ತು ರಾಜ್ಯಗಳ ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ಕಲ್ಯಾಣ ಕಾರ್ಯಕ್ರಮಗಳ ಕಾರ್ಮಿಕರ (ಸ್ಕೀಂ ವರ್ಕರ್ಸ್-ಸ್ಕೀಂ ಕಾರ್ಮಿಕರು) ಭಾಗವಾಗಿದ್ದಾರೆ. ಸಾರಾಂಶದಲ್ಲಿ ಈ ಕಾರ್ಮಿಕರು ಆಯಾ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ರಾಯಭಾರಿಗಳು ಮತ್ತು ಜಾರಿ ಮಾಡುವವರೂ ಆಗಿದ್ದಾರೆ. ಆದರೂ ಇಂಥ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತಿಬಾರಿಯೂ ಬೀದಿಗೆ ಬಂದು ಹೋರಾಡಬೇಕಾಗುತ್ತದೆ ಮತ್ತು ಅವರ ಬೇಡಿಕೆಗಳನ್ನು ಅತ್ಯಂತ ಪಾಕ್ಷಿಕವಾಗಿ ಈಡೇರಿಸಲಾಗುತ್ತದೆ ಮತ್ತು ಅದಕ್ಕೂ ಸಹ ಸರ್ಕಾರವು ಸಾಕಷ್ಟು ಹಿಂದುಮುಂದೆ ನೋಡುತ್ತಾ ವಿಳಂಬ ಮಾಡುತ್ತದೆ. .

ಈ ಸ್ಕೀಂ ಕಾರ್ಮಿಕರು ಭಾರತ ದೇಶಾದ್ಯಂತ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶದಂತಹ ಮೂಲಭೂತ ಕ್ಷೇತ್ರಗಳಲ್ಲಿನ ಕೀಲಕ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅವರಿಗೆ ಸ್ವಯಂ ಸೇವಕರೆಂಬ ಪಟ್ಟಿ ಕಟ್ಟಿ ಅತ್ಯಂತ ಕಡಿಮೆ ಸಂಭಾವನೆಯನ್ನು ಮತ್ತು ಅತಿ ಹೆಚ್ಚು ಕ್ಜೆಲಸದ ಹೊರೆಯನ್ನೂ ಹೊರಿಸಲಾಗಿದೆ ಮತ್ತು ಸರ್ಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯವೂ ದೊರೆಯದಂತೆ ಮಾಡಲಾಗಿದೆ. ಐಸಿಡಿಎಸ್ (ಇಂಟಗ್ರೇಟೆಡ್ ಚೈಲ್ದ್ ಡೆವಲಪ್‌ಮೆಂಟ್ ಸರ್ವೀಸಸ್- ಸಮಗ್ರ ಶಿಶು ಅಭಿವೃದ್ಧಿ ಸೇವೆ)ನಡಿ ದೇಶಾದ್ಯಂತ ೨೭ ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಕೆಲಸ ಮಾಡುತ್ತಿದ್ದರೆ ಅಷ್ಟೇ ಸಂಖ್ಯೆಯ ಕಾರ್ಮಿಕರು ಎಂಡಿಎಂಎಸ್ (ಮಧ್ಯಾಹ್ನದ ಬಿಸಿಯೂಟದ ಯೋಜನೆ) ಕಾರ್ಯಕ್ರಮದಡಿ ಕೆಲಸ ಮಾಡುತ್ತಿದ್ದಾರೆ. ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಆಶಾ ಮಾತು ಉಷಾ ಕಾರ್ಯಕ್ರಮz ೧೦ ಲಕ್ಷ ಕಾರ್ಮಿಕರು ಮತ್ತು ಮೂರು ಲಕ್ಷ ಏಎನ್‌ಎಂಗಳು ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ನ್ಯಾಷನಲ್ ಚೈಲ್ಡ್ ಲೇಬರ್ ಪ್ರಾಜೆಕ್ಟ್, ಸಣ್ನ ಉಳಿತಾಯ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮತ್ತು ನ್ಯಾಷನಲ್ ರೂರಲ್ ಲಿವ್ಲಿಹುಡ್ ಮಿಷನ್ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ) ಹಾಗೂ ಇನ್ನಿತರ ಯೋಜನೆಗಳಡಿ ಇನ್ನೂ ಹಲವಾರು ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಈ ಕಾರ್ಮಿಕರು ಮಾಡುವ ಕೆಲಸದ ವ್ಯಾಖ್ಯಾನ ಮತ್ತು ವ್ಯಾಪ್ತಿಯನ್ನು ಗಮನಿಸಿದರೆ ಮಹಿಳೆಯರೇ ಪ್ರಧಾನವಾಗಿರುವ ಈ ಶ್ರಮಶಕ್ತಿಯು ಅಲಕ್ಷಿತ ಸಮುದಾಯಗಳ ಸಂಕ್ಷೇಮವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂಬುದು ಅರ್ಥವಾಗುತ್ತದೆ. ಅವರು ಗರ್ಭಿಣಿಯರ, ಮಕ್ಕಳ, ರೋಗಿಗಳ ಮತ್ತು ಅಪೌಷ್ಟಿಕತೆಯಿಂದ ನರಳುತ್ತಿರುವವರ ಸಂಕ್ಷೇಮದ ಜವಾಬ್ದಾರಿ ಹೊತ್ತಿರುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಮುಖ ಮತ್ತು ಕೈಗಳಾಗಿದ್ದಾರೆ. ಅವರ ಕಾರ್ಮಿಕ ಸಂಘಟನೆಗಳ ಪ್ರಕಾರ ಈ ಎಲ್ಲಾ ಕೆಲಸದ ಹೊರೆಗಳನಡುವೆ ಅವರನ್ನು ಸರ್ಕಾರಿ ಸರ್ವೇ ಮತ್ತು ಇತರ ದತ್ತಾಂಶ ಸಂಗ್ರಹಗಳಿಗೂ ಬಳಸಿಕೊಳ್ಳಲಾಗುತ್ತದೆ. ಇಷ್ಟೆಲ್ಲಾ ಮಾಡಿದರೂ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದಿಲ್ಲ ಮತ್ತು ಅವರು ಮಾಡುವ ಕೆಲಸ ಮತ್ತು ಹೊತ್ತಿರುವ ಜವಾಬ್ದಾರಿಗಳಿಗೆ ಹೋಲಿಸಿದರೆ ಅವರಿಗೆ ನೀಡುವ ಸಂಭಾವನೆ ಏನೇನೂ ಸಾಲದು. ಇದಲ್ಲದೆ ಇಂಥಾ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್ಟಿನಲ್ಲಿ ಒದಗಿಸುವ ಅನುದಾನದಲ್ಲಿ ಆಗುವ ಕಡಿತವು ಈ ಕಾರ್ಮಿಕರ ಅಭದ್ರತೆಗೆ ಮತ್ತು ಇನ್ನಷ್ಟು ಕೆಲಸದ ಹೊರೆಗೆ ಕಾರಣವಾಗುತ್ತದೆ ಎಂದು ಅವರ ಕಾರ್ಮಿಕ ನಾಯಕರು ವಿವರಿಸುತ್ತಾರೆ. ಮಾಧ್ಯಮಗಳಲ್ಲಿ ಬಂದಿರುವ ವರದಿಯ ಪ್ರಕಾರ ೨೦೧೫-೧೬ರ ಸಾಲಿನ ಕೇಂದ್ರ ಬಜೆಟ್ಟಿನಲ್ಲಿ ಐಸಿಡಿಎಸ್ ಮತ್ತು ಎಮ್‌ಡಿಎಮ್‌ಎಸ್ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಅವರು ಮಾಡುತ್ತಿರುವ ಕೆಲಸಗಳ ಮಹತ್ವವನ್ನು ಗಮನಿಸಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಕಾರ್ಮಿಕರಿಗೆ ಗೌರವಯುತವಾದ ವೇತನ ಮತ್ತು ಕೆಲಸದ ಸೌಲಭ್ಯಗಳನ್ನು ಒದಗಿಸಬೇಕೆಂದು ನಿರೀಕ್ಷಿಸಲೇ ಬೇಕಾಗುತ್ತದೆ.

ಆದರೆ ಪರಿಸ್ಥಿತಿ ತದ್ವಿರುದ್ಧವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಮಹಾರಾಷ್ಟ್ರ ಸರ್ಕಾರವು ಈ ಕಾರ್ಮಿಕರನ್ನು ಹಕ್ಕುಗಳುಳ್ಳ ಕಾರ್ಮಿಕ ಸಮುದಾಯವೆಂದು ಪರಿಗಣಿಸುವ ಬದಲಿಗೆ ಈ ಕಾರ್ಮಿಕರ ಸೇವೆಯನ್ನು ೨೦೧೮ರ ಅಗತ್ಯ ಸೇವೆಗಳ ಕಾಯಿದೆ (ಎಸೆನ್ಷಿಯಲ್ ಸವೀಸ್ ಮೆಂಟೆನೆನ್ಸ್ ಆಕ್ಟ್-೨೦೧೮)ಯಡಿ ತಂದು ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿತು. ೨೦೧೯ರ ಜನವರಿಯಲ್ಲಿ ಬಿಹಾರದ ಅಂದಾಜು ೨.೪೮ ಲಕ್ಷ ಮಧ್ಯಾಹ್ನದ ಬಿಸಿಯೂಟ ತಯಾರಕರು ವೇತನ ಹೆಚ್ಚಳಕ್ಕಾಗಿ ಕೆಲಸ ನಿಲ್ಲಿಸಿ ಹೋರಾಟದಲ್ಲಿ ತೊಡಗಿದರು. ಇದರಿಂದ ಲಕ್ಷಾಂತರ ಶಾಲಾ ಮಕ್ಕಳಿಗೆ ತೊಂದರೆಯಾದರೂ ಆ ಹೋರಾಟಕ್ಕೆ ಕಿವಿಗೊಡದ ಬಿಹಾರ ಸರ್ಕಾರ ಸತತ ೩೯ ದಿನಗಳ ಕಾಲ ಬಿಸಿಯೂಟ ಕಾರ್ಮಿಕರು ಹೋರಾಟ ಮಾಡುವಂತೆ ಮಾಡಿ ಕೊನೆಗೆ ಅತ್ಯಲ್ಪ ಪ್ರಮಾಣದ ವೇತನವನ್ನು ಮಾತ್ರ ಹೆಚ್ಚಿಸಿತು. ಯಾವುದೇ ಅಂಗನವಾಡಿಗಳಲ್ಲಿ ೨೫ಕ್ಕಿಂತ ಕಡಿಮೆ ಮಕ್ಕಳಿದ್ದರೆ ಅಂತಹ ಅಂಗನವಾಡಿಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆಯೆಂದು ಅವರ  ಕಾರ್ಮಿಕ ಸಂಘವು ಆರೋಪಿಸುತ್ತಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ ೯೭೦೦೦ ದೊಡ್ಡ ಮತ್ತು  ೧೦೦೦೦ ಸಣ್ಣ ಅಂಗನವಾಡಿಗಳಿದ್ದು ಪ್ರತಿ ಅಂಗನವಾಡಿಗಳಲ್ಲಿ ಕನಿಷ್ಟ ಒಬ್ಬ ಶಿಕ್ಷಕ/ಉಸ್ತುವಾರಿ ಮತ್ತು ಒಬ್ಬ ಸಹಾಯಕರಿರುತ್ತಾರೆ. ಇವುಗಳು ಬಂದ್ ಆದರೆ ಇಷ್ಟು ದೊಡ್ಡ ಪ್ರಮಾಣದ ಕಾರ್ಮಿಕರ ಭವಿಷ್ಯ ಅತಂತ್ರವಾಗುತ್ತದೆ.

ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳಡಿ ದೇಶಾದ್ಯಂತ ಕೆಲಸ ಮಾಡುವ ೫೦ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಬೇಡಿಕೆಗಳತ್ತ ಸರ್ಕಾರದ ಗಮನ ಸೆಳೆಯಲು  ೨೦೧೮ರ ಜನವರಿ ೧೭ರಂದು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರವನ್ನು ಮಾಡಿದರು ಮತ್ತು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳ ಮುಂದೆ ಪ್ರತಿಭಟನಾ ಪ್ರದರ್ಶನವನ್ನು ಮಾಡಿದರು. ದೇಶದ ಹತ್ತೂ ಕೇಂದ್ರೀಯ ಟ್ರೇಡ್ ಯೂನಿಯನ್ನುಗಳು ಒಟ್ಟು ಸೇರಿ ಈ ಮುಷ್ಕರಕ್ಕೆ ಕರೆ ನೀಡಿದ್ದರು. ವಾಸ್ತವವಾಗಿ ಈ ಕಾರ್ಮಿಕರ ಬಗ್ಗೆ ಸರ್ಕಾರಕ್ಕೆ ಎಷ್ಟು ನಿರ್ಲಕ್ಷ್ಯವಿದೆಯೆಂದರೆ ೨೦೧೩ರಷ್ಟು ಹಿಂದೆಯೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ (ಐಎಲ್‌ಸಿ) ತನ್ನ ಶಿಫಾರಸ್ಸುಗಳಲ್ಲಿ ಕೇಂದ್ರ ಸರ್ಕಾರದ ಯೋಜನಾ ಕಾರ್ಯಕ್ರಮಗಳಡಿ ದುಡಿಯುತ್ತಿರುವ ಸ್ವಯಂ ಸೇವಕರನ್ನು ಕಾರ್ಮಿಕರನ್ನಾಗಿ ಪರಿಗಣಿಸಬೇಕೆಂದೂ, ಕನಿಷ್ಟ ಕೂಲಿ ಹಾಗೂ ಪಿಂಚಣಿ ಸೌಲಭ್ಯಗಳನ್ನು ನೀಡಬೇಕೆಂದೂ, ಹಾಗೂ ಸಾಮೂಹಿಕವಾಗಿ ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಜೊತೆ ಮತುಕತೆಯಾಡುವ ಹಕ್ಕುಗಳನ್ನು ನೀಡಬೇಕೆಂದೂ ಆಗ್ರಹಿಸಿದ್ದರೂ ಅವ್ಯಾವುದನ್ನೂ ಸರ್ಕಾರ ಈವರೆಗೆ ಕಿಂಚಿತ್ತೂ ಪರಿಗಣಿಸಿಲ್ಲ. ಈಗ ಹಾಲಿ ಮುಷ್ಕರ ನಿರತರಾಗಿರುವ ಕಾರ್ಮಿಕರು ಮೇಲಿನ ಐಎಲ್‌ಸಿ ಶಿಫಾರಸ್ಸುಗಳನ್ನು ಜಾರಿಗೆ ತರಬೇಕೆಂದೂ, ಪ್ರಾವಿಡೆಂಟ್ ಫಂಡ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಬೇಕೆಂದೂ, ಕೇಂದ್ರೀಯ ಸಮಾಜ ಕಲ್ಯಾಣ ಯೋಜನೆಗಳಿಗೆ ಬಜೆಟ್ಟಿನಲ್ಲಿ ಸಾಕಷ್ಟು ಅನುದಾನಗಳನ್ನು ಒದಗಿಸಬೇಕೆಂದೂ, ಸೂಕ್ತವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದೂ ಹಾಗೂ ಕೆಲವು ಕೇಂದ್ರೀಯ ಯೋಜನೆಗಳನ್ನು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಿಕೊಡುವ ಮೂಲಕ ಅವುಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ನಿಲ್ಲಿಸಬೇಕೆಂದೂ ಆಗ್ರಹಿಸುತ್ತಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರ ಕೆಲಸದ ಬಗ್ಗೆ ಸಮಾಜದ ದೃಷ್ಟಿಕೋನವಿರುವಂತೆ ತಮ್ಮ ಕೆಲಸದ ಮೌಲ್ಯವನ್ನು ಸಹ ಕೆಳ ಅಂದಾಜು ಮಾಡಿ ನೋಡಲಾಗುತ್ತಿದೆಯೆಂದೂ ಮತ್ತು ತಮ್ಮ ಬೇಡಿಕೆಗಳನ್ನು ಮೂಲೆಗುಂಪು ಮಾಡಲಾಗುತ್ತಿದೆಯೆಂದೂ ಈ ಕಾರ್ಮಿಕರು ಬೊಟ್ಟುಮಾಡಿ ತೋರಿಸುತ್ತಾರೆ. ಸರ್ಕಾರವು ತನ್ನ ಕೀಲಕ ಸಂಕ್ಷೇಮ ಕರ್ತವ್ಯಗಳಿಂದ ಹಿಂದೆಸರಿಂiಬೇಕೆಂಬ ವ್ಯೂಹತಂತ್ರದ ಭಾಗವಾಗಿಯೇ ಈ ಸೇವೆಗಳನ್ನು ಖಾಸಗೀಕರಿಸಲಾಗುತ್ತಿದೆ ಮತ್ತು ಬಜೆಟ್ಟಿನಲ್ಲಿ ಅನುದಾನಗಳನ್ನು ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ಈ ಕಾರ್ಮಿಕರ ಹೋರಾಟಗಳು ಕಾರ್ಮಿಕರ ಯಾವುದೋ ಒಂದು ವಿಭಾಗದ ಕಾರ್ಮಿಕರ ಕೇವಲ ಆರ್ಥಿಕ ಬೇಡಿಕೆಗಳಿಗಾಗಿನ ಹೋರಾಟವೆಂಬ ವ್ಯಾಪ್ತಿಯನ್ನು ಮೀರಿ ಇನ್ನೂ ವಿಶಾಲವಾಗಿದೆ ಮತ್ತು ಗಹನವಾದದ್ದಾಗಿದೆ.

Back to Top