ISSN (Print) - 0012-9976 | ISSN (Online) - 2349-8846

ಬೆರಕೆ ಸರ್ಕಾರದ ಸಮರ್ಥನೆಯಲ್ಲಿ...

ರಾಜಕಾರಣದಲ್ಲಿ ಶುಭ್ರತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಬಿಜೆಪಿ ಮಾಡುವ  ಪ್ರತಿಯೊಂದು ಕೂಗಾಟವೂ ಪ್ರಜಾತಂತ್ರವು ಕಲುಷಿತಗೊಂಡಿರುವುದಕ್ಕೆ ಸಂಕೇತವಾಗಿದೆ. .

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ವಿರೋಧ ಪಕ್ಷಗಳ ಐಕ್ಯತೆಯ ಸಾಧ್ಯತೆಗಳು ಹೆಚ್ಚಾಗುತ್ತಿರುವಂತೆ ಬಿಜೆಪಿ ಪಾಳಯದಲ್ಲಿ ತಳಮಳಗಳು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಬಿಜೆಪಿಯ ಉನ್ನತ ನಾಯಕರು ವಿರೋಧಪಕ್ಷಗಳ ಬಗ್ಗೆ ಪದೇಪದೇ ಕೊಡುವ ನಿಂದನಾತ್ಮಕ ಹೇಳಿಕೆಗಳೇ ಅದಕ್ಕೆ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿಯವರು ವಿರೋಧಪಕ್ಷಗಳ ಐಕ್ಯತೆಯನ್ನೂ ಮತ್ತು ಅವರು ಒಟ್ಟುಗೂಡಿ ರಚಿಸಬೇಕೆಂದಿರುವ  ಸರ್ಕಾರವನ್ನು ಬೆರಕೆ ಸರ್ಕಾರವೆಂದು ಅವಹೇಳನ ಮಾಡಿದ್ದಾರೆ. ವಿರೋಧ ಪಕ್ಷಗಳು ಒಟ್ಟುಗೂಡಿ ರಚಿಸಬಹುದಾದ ಮೈತ್ರಿಕೂಟದ ಸರ್ಕಾರದಲ್ಲಿ ದಿನಕ್ಕೊಬ್ಬರು ಪ್ರಧಾನಮಂತ್ರಿಗಳಾಗುತ್ತಾರೆ ಎಂದು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಸಹ ಲೇವಡಿ ಮಾಡಿದ್ದಾರೆ. ಹಾಲಿ ಲೋಕಸಭೆಯ ಅಂತಿಮ ಅಧಿವೇಶನದ ಅಂತಿಮ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಒಂದು ಸ್ಥಿರ ಸರ್ಕಾರ ನೀಡಬೇಕೆಂದರೆ ಭಾರತಕ್ಕೆ ಬಹುಮತವಿರುವ ಸರ್ಕಾರವು ಅತ್ಯಗತ್ಯವೆಂದೂ, ಅಂಥ ಒಂದು ಸರ್ಕಾರವಿದ್ದಿದ್ದರಿಂದಲೇ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾಯಿ ಹೆಚ್ಚಾಗಿದೆ ಎಂತಲೂ ಪ್ರತಿಪಾದಿಸಿದರು. ತಮ್ಮ ಪಕ್ಷಕ್ಕೆ ರಾಷ್ಟ್ರೀಯ ನಾಯಕತ್ವ ಒದಗಿಸುವ ಸಾಮರ್ಥ್ಯವಿದೆಯೆನ್ನುವುದನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಪಕ್ಷ ಮತ್ತು ಅದರ ಬೆಂಬಲಿಗರು, ಪ್ರತಿಯಾಗಿ ವಿರೋಧಪಕ್ಷಗಳ ಕೂಟದ ನಾಯಕರು ಯಾರು ಎಂಬುದನ್ನು ಸದಾ ಪ್ರಶ್ನಿಸುತ್ತಾರೆ. ಸ್ಥಿರ ಸರ್ಕಾರ ಕೊಡುವ ಸಾಧ್ಯತೆ ಇರುವುದು ಧೃಢ ನಾಯಕತ್ವ ಹೊಂದಿರುವ ಬಿಜೆಪಿ ಪಕ್ಷಕ್ಕೆ ಮಾತ್ರ ಎಂಬ ಅಭಿಪ್ರಾಯವನ್ನು ಮತದಾರರ ಮನಸ್ಸಿನಲ್ಲಿ ಮೂಡಿಸುವ ಬಿಜೆಪಿಯ ಚುನಾವಣಾ ತಂತ್ರಕ್ಕೆ ಇವೆಲ್ಲವೂ ಪೂರಕವಾಗಿಯೇ ಇದೆ. ಮತದಾರರು ಬೆರಕೆ ಸರ್ಕಾರದ ಬಗ್ಗೆ ಎಚ್ಚರಿಕೆಯಿಂದಿರಬೇಕೆಂಬ ಬಿಜೆಪಿಯ ಹೇಳಿಕೆಗಳು ತನ್ನ ಸ್ವಂತ ಸಾಧನೆಯ ಮೇಲೆ ಮತ ಕೇಳಲು ಸಾಧ್ಯವಾಗದಿರುವ ಆ ಪಕ್ಷದ ಪರಿಸ್ಥಿತಿಯನ್ನು ಸೂಚಿಸುತ್ತಿದ್ದರೂ, ಸ್ಥಿರತೆ ಮತ್ತು ಏಕರೂಪತೆಯ ಬಗೆಗಿನ ಅದರ ಗೀಳಂತೂ ಅತ್ಯಂತ ಪ್ರಜಾತಂತ್ರ ವಿರೋಧಿಯಾಗಿದೆ.

ವಿರೋಧಪಕ್ಷಗಳೆಲ್ಲವೂ ಒಂದಾಗಿ ಒಂದು ಪರ್ಯಾಯ ಸರ್ಕಾರ ರಚನೆ ಮಾಡಲು ನಡೆಸುತ್ತಿರುವ ರಾಜಕೀಯ ಪ್ರಯತ್ನಗಳನ್ನು ಚುನಾವಣಾ ಪ್ರಕ್ರಿಯೆಗಳಲ್ಲಿ ವಿವಿಧ ಹಿನ್ನೆಲೆಯ ಹಲವಾರು ಪಕ್ಷಗಳು ಒಟ್ಟಾಗಿ ಕೆಲಸ ಮಾಡಲೇಬೇಕಾದ ರಾಜಕೀಯ ಪ್ರಜಾತಂತ್ರದ  ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಇದು ವಿಭಿನ್ನ ಸಾಮಾಜಿಕ ಹಿನ್ನೆಲೆಯುಳ್ಳ ಗುಂಪುಗಳ ಸುಸಂಬದ್ಧ ರಾಜಕೀಯ ಆಶೋತ್ತರಗಳ ಸಂಕೇತವೂ ಸಹ ಆಗಿದೆ. ಆದರೆ ಒಂದು ಸರ್ವಾಧಿಕಾರಿ ಪಕ್ಷದೆದುರು ಇಂಥಾ ಪ್ರಜಾತಾಂತ್ರಿಕ ಆಶೋತ್ತರಗಳ ಪ್ರತಿಪಾದನೆ ಮಾಡುವುದನ್ನು ಬಿಜೆಪಿಯು ಬೆರಕೆ ಅಥವಾ ಕಲುಷಿತ ರಾಜಕೀಯ ಎಂದು ಬಣ್ಣಿಸುತ್ತದೆ. ಆದರೆ ಯಾವುದನ್ನು ಬಿಜೆಪಿಯ ಏಕರೂಪಿ ಧೋರಣೆಯು ಬೆರಕೆ ಅಥವಾ ಕಲುಷಿತ ಎಂದು ಕರೆಯುತ್ತದೆಯೋ ಅದುವೇ ಭಾರತದ ವಿಭಿನ್ನ ಮತ್ತು ಅಸಮಾನ ಸಾಮಾಜಿಕ ಅಸಮಾನತೆಗಳನ್ನು ನಿರ್ವಹಿಸಲು ಇರುವ ದಾರಿಯೂ ಆಗಿದೆ. ವಿವಿಧ ಬಗೆಯ ರಾಜಕೀಯ ಪಕ್ಷಗಳು ಒಟ್ಟಾಗಿ ಬರುತ್ತಿರುವುದು ರಾಜಕಾರಣದ ಒಕ್ಕೂಟ ಸ್ವರೂಪದ ಸಂಕೇತ ಮಾತ್ರವಲ್ಲದೆ ಹಾಲಿ ಸರ್ಕಾರದ ಕೇಂದ್ರೀಕರಿಸುವ ಮತ್ತು ಏಕರೂಪಿಗೊಳಿಸುವ ಧೋರಣೆಯ ವೈಫಲ್ಯದ ಸಂಕೇತವೂ ಆಗಿದೆ. ಬಿಜೆಪಿ ಮತ್ತು ಎನ್‌ಡಿಎ ವಿರುದ್ಧ ಒಂದೂಗೂಡುತ್ತಿರುವ ವಿರೋಧಪಕ್ಷಗಳು ವಿವಿಧ ಸಾಮಾಜಿಕ ಶಕ್ತಿಗಳನ್ನೂ, ಪ್ರದೇಶಗಳನ್ನೂ ಮತ್ತು ಅನನ್ಯತೆಗಳನ್ನೂ ಪ್ರತಿನಿಧಿಸುತ್ತಿದ್ದು ಅವೆಲ್ಲವನ್ನೂ ಯಾವುದಾದರೂ ಒಂದೇ ಪಕ್ಷವು ಪ್ರತಿನಿಧಿಸಲು ಸಾಧ್ಯವಿಲ್ಲ. ಹೀಗಾಗಿ ವಿವಿಧ ಬಗೆಯ ಹಾಗೂ ಕೆಲವೊಮ್ಮೆ ಪರಸ್ಪರ ವಿರುದ್ಧವಾದ ದೃಕ್ಕೋನಗಳನ್ನು ಮತ್ತು ಆಸಕ್ತಿಗಳನ್ನು ಒಳಗೊಳ್ಳಲು ಹಲವು ಪಕ್ಷಗಳು ಒಟ್ಟುಗೂಡಿ ರಚಿಸುವ ಮೈತ್ರಿಕೂಟ ಸರ್ಕಾರದ ಅಗತ್ಯವಿದೆ. ಈ ಒಳಗೊಳ್ಳುವ ಪ್ರಕ್ರಿಯೆಯನ್ನು ಖಾತರಿಗೊಳಿಸಿಕೊಳ್ಳಲು ಮಾಡಿಕೊಳ್ಳುವ ರಾಜಿಗಳು ಕೇಂದ್ರದಲ್ಲಿ ಸ್ಥಿರ ಸರ್ಕಾರ ರಚನೆಗೆ ಖಾತರಿಯನ್ನೊದಗಿಸುತ್ತದೆ. ಅದಿಲ್ಲದೆ ಹಾಲಿ ಸರ್ಕಾರದಂತೆ ಅಕಲುಷಿತ ಮತ್ತು ಏಕಪಕ್ಷೀಯ ಧೋರಣೆಗಳನ್ನು ಅನುಸರಿಸುವುದರಿಂದ ಸಾಮಾಜಿಕ ಬಿರುಕುಗಳು ಇನ್ನಷ್ಟು ಹೆಚ್ಚಾಗುತ್ತವೆ.

ಸರ್ಕಾರವು ಸಚಿವ ಸಂಪುಟ ವ್ಯವಸ್ಥೆಯನುಗುಣವಾಗಿ ಕಾರ್ಯನಿರ್ವಹಿಸದೆ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲೇ ಅತಿ ಹೆಚ್ಚು ಅಧಿಕಾರವು ಕೇಂದ್ರೀಕೃತವಾಗಿರುವುದು ಹಾಲಿ ಸರ್ಕಾರವು ಪಾಲಿಸುತ್ತಿರುವ ಏಕಪಕ್ಷೀಯ ಧೋರಣೆಗಳಿಗೆ ಒಂದು ಉದಾಹರಣೆಯಾಗಿದೆ. ಒಂದು ಮೈತ್ರಿಕೂಟ ಸರ್ಕಾರದಲ್ಲಿ ಯಾವ ಒಂದು ಪಕ್ಷವೂ ಇನ್ನಿತರ ಪಕ್ಷಗಳಿಗಿಂತ ನಿರ್ಣಯಾತ್ಮಕವಾದ ಹೆಚ್ಚಿನ ಅಧಿಕಾರ ಹೊಂದಿರುವುದಿಲ್ಲ ಹಾಗೂ  ಪ್ರಧಾನಮಂತ್ರಿಯೂ ಸಹ ಸಮಾನರಲ್ಲಿ ಮೊದಲಿಗರಷ್ಟೇ ಆಗಿರುತ್ತಾರೆ ಮತ್ತು ಒಟ್ಟಾರೆ ಸಂಪುಟವು ಸಾಮೂಹಿಕವಾಗಿ ಸಂಸತ್ತಿಗೆ ಉತ್ತರದಾಯಿಯಾಗಿರುವ ಪ್ರಜಾತಾಂತ್ರಿಕ ಪದ್ಧತಿ ಮರಳುತ್ತದೆ. ಕಳೆದ ಐದು ವರ್ಷಗಳಲ್ಲಿ ನಾವು ಕಾಣುತ್ತಿರುವಂತೆ ಪ್ರಧಾನಿ ಕಾರ್ಯಾಲಯದಲ್ಲಿ ಅತಿ ಹೆಚ್ಚು ಅಧಿಕಾರವು ಕೇಂದ್ರೀಕರಣಗೊಂಡಿರುವುದು  ಸಂಸತ್ತಿನ ಸಾಂಸ್ಥಿಕ ಮಹತ್ವವನ್ನೂ ಕುಗ್ಗಿಸುತ್ತದೆ ಮತ್ತು ಆ ಮೂಲಕ ಜನರ ಪ್ರಾತಿನಿಧಿತ್ವದ ಪ್ರಜಾತಂತ್ರಿಕ ತತ್ವವನ್ನೂ ಮೂಲೆಗುಂಪುಮಾಡುತ್ತದೆ. ಒಂದು ಸಂಸದೀಯ ಪ್ರಜಾತಂತ್ರವನ್ನು ಹೀಗೆ ರಹಸ್ಯವಾಗಿ ಅಧ್ಯಕ್ಷೀಯ ಮಾದರಿ ಪ್ರಜಾತಂತ್ರವನ್ನಾಗಿಸುವ ಪ್ರಕ್ರಿಯೆಯಲ್ಲಿ ಸರ್ವಾಧಿಕಾರಿ ಧೋರಣೆಗಳು ಮನೆಮಾಡಿವೆ. ಹೀಗಾಗಿ ಸಂಸತ್ತಿನ ಪಾತ್ರವನ್ನು ಮರಳಿ ಸ್ಥಾಪಿಸಲು ಮತ್ತು ಜನರ ರಾಜಕೀಯ ಇಚ್ಚೆಯನ್ನು ರಾಜಕೀಯ ಪ್ರಕ್ರಿಯೆಯೊಳಗೆ ಮರಳಿಸುವ ಸಾಧ್ಯತೆಯನ್ನು ಹೆಚ್ಚು ಮಾಡಲು ಇಂದಿನ ಪರಿಸ್ಥಿತಿಯಲ್ಲಿ ಒಂದು ಮೈತ್ರಿಕೂಟದ ಸರ್ಕಾರದ ಅಗತ್ಯವಿದೆ.

ಮೂಲಭೂತವಾಗಿ ನೋಡಿದರೆ ಪ್ರಜಾತಂತ್ರವೆಂಬುದು ನಿರಂತರವಾದ ಸವಾಲು ಮತ್ತು ಸ್ಪರ್ಧೆಗಳಿಗೆ ಮತ್ತು ರಾಜಕೀಯ ಶಕ್ತಿಗಳ ಹೊಂದಾಣಿಕೆಗಳ ಸ್ಥಿತ್ಯಂತರಗಳಿಗೆ ಅವಕಾಶ ಮಾಡಿಕೊಡುವ  ಹಾಗೂ ಯಾವುದೇ ಒಂದು ರಾಜಕೀಯ ಶಕ್ತಿಗೆ ಅಥವಾ ಪಾತ್ರಧಾರಿಗೆ ನಿರಂತರತೆ ಅಥವಾ ಶಾಶ್ವತತೆಗೆ ಅವಕಾಶ ಮಾಡಿಕೊಡದ ಒಂದು ಅಸ್ಥಿರವಾದ/ಅಸ್ಥಿರಗೊಳಿಸುವ ವ್ಯವಸ್ಥೆಯಾಗಿದೆ. ಹೀಗಾಗಿ ಮುಂದಿನ ಐವತ್ತು ವರ್ಷಗಳ ಕಾಲ ತಮ್ಮ ಪಕ್ಷವೇ ಅಧಿಕಾರದಲ್ಲಿರುತ್ತದೆಂಬ ಅಥವಾ ವಿರೋಧ ಪಕ್ಷಗಳು ಈ ಬಾರಿಯ ಚುನಾವಣೆಯ ಆಸೆಯನ್ನು ಕೈಬಿಟ್ಟು ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದೆಂಬ ಲೇವಡಿಗಳಿಗೆ ಪ್ರಜಾತಂತ್ರದಲ್ಲಿ ಸ್ಥಾನವಿಲ್ಲ. ಪ್ರಜಾತಂತ್ರದ ಈ ಕ್ರಾಂತಿಕಾರಕ ಅಸ್ಥಿರತೆಯೆಂದರೆಕೇಂದ್ರದಲ್ಲಿ ಸರ್ಕಾರಗಳನ್ನು ಪದೇಪದೇ ಉರುಳಿಸುವುದು ಅಥವಾ ಬದಲಿಸುವುದೆಂದಲ್ಲ. ಈ ಹಿಂದೆ ಕೇಂದ್ರದಲ್ಲಿ ರಚಿಸಲಾಗಿದ್ದ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಸರ್ಕಾರಗಳು ತಥಾಕಥಿತ ರಾಷ್ಟ್ರೀಯ ಪಕ್ಷಗಳು ತೋರಿದ ದೊಡ್ಡಣ್ಣನ ಧೋರಣೆಯಿಂದಾಗಿ ಅಸ್ಥಿರತೆಗೆ ಗುರಿಯಾದವು ಎಂಬುದನ್ನು ನಾವಿಲ್ಲಿ ನೆನಪಿಡಬೇಕು. ಆದರೆ ಒಂದು ವೇಳೆ ಅಂಥಾ ಅಸ್ಥಿರತೆ ಮತ್ತು ಬದಲಾವಣೆಗಳು ಸಾಮಾಜಿಕ ತಳಮಳ ಮತ್ತು ಕೋಲಾಹಲಗಳ ಪರಿಣಾಮವಾಗಿ ಸಂಭವಿಸಿದ್ದಾದಲ್ಲಿ ಸ್ಥಿರತೆಯ ಹೆಸರಲ್ಲಿ ಆ ಪ್ರಕ್ರಿಯೆಯನ್ನು ತಡೆಗಟ್ಟುವ ಪ್ರಯತ್ನಗಳಿಂದ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಅಡ್ಡಗಾಲು ಹಾಕಿದಂತೆಯೇ ಆಗುತ್ತದೆ. ಇಂಥಾ ರಾಜಕೀಯ ಅಸ್ಥಿರತೆಗಳೇ ಬಹುಸಂಖ್ಯಾತ ಜನರಿಗೆ ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಅವಕಾಶ ಮಾಡಿಕೊಡುವುದಲ್ಲದೆ ಬಹುಸಂಖ್ಯಾತg ಸಂಕ್ಷೇಮ ಮತ್ತು ಆಸಕ್ತಿಗಳ ಪರವಾಗಿರುವಂತೆ ವ್ಯವಸ್ಥೆಯ ಕ್ಷಿತಿಜಗಳನ್ನು ವಿಸ್ತರಿಸುತ್ತದೆ.  ಒಂದು ಏಕಶಿಲಾರೂಪಿ ಏಕಪಕ್ಷದ ಸರ್ಕಾರಗಳಿಗಿಂತ ಮಿತ್ರಕೂಟದ ಸರ್ಕಾರದಲ್ಲಿರುವ ವೈರುಧ್ಯಗಳನ್ನು ಜನಪರವಾದ ನೀತಿಗಳನ್ನು ಜಾರಿ ಮಾಡುವತ್ತ ಬಳಸಿಕೊಳ್ಳಬಹುದಾದ ಸಾಧ್ಯತೆ ಹೆಚ್ಚು.

ವಿರೋಧಪಕ್ಷಗಳ ಐಕ್ಯತೆಯು ಒಂದು ಮಜ್‌ಬೂರ್ (ದುರ್ಬಲ) ಸರ್ಕಾರವನ್ನು ನೀಡಿದರೆ ಬಿಜೆಪಿಯು ಒಂದು ಮಜಬೂತ್ (ಬಲಿಷ್ಠ) ಸರ್ಕಾರವನ್ನು ನೀಡುತ್ತದೆಂಬ ಅಮಿತ್ ಶಾ ಅವರ ಹೇಳಿಕೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಒಂದು ಪ್ರಜಾತಂತ್ರದಲ್ಲಿ ಆಳುವ ಸರ್ಕಾರಗಳು ಬಹುಸಂಖ್ಯಾತ ಜನತೆಯ ಆಶೋತ್ತರಗಳು ಮತ್ತು ಒತ್ತಡಗಳೆದುರು ಮಜ್‌ಬೂರ್ ಆಗಿರಬೇಕೆ ವಿನಃ ಜನರ ಧ್ವನಿಗಳಿಗೆ ಕಲ್ಲಾಗುವ ಮಜ್‌ಬೂತ್ ಸರ್ಕಾರವಾಗಿರಬಾರದು.

 

Back to Top