ISSN (Print) - 0012-9976 | ISSN (Online) - 2349-8846

ದತ್ತಾಂಶಗಳಿಗೇ ಕುತ್ತೊದಗಿದೆಯೇ?

ಅಧಿಕೃತ ದತ್ತಾಂಶಗಳ ವಿಶ್ವಾಸಾರ್ಹತೆಯನ್ನು ಖಾತರಿ ಮಾಡಲು ಅಂಕಿಅಂಶ ಸಂಸ್ಥೆಗಳು ಸ್ವಾಯತ್ತವಾಗಿರಬೇಕಾದ್ದು ಅನಿವಾರ್ಯ.

 

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ನ್ಯಾಷನಲ್ ಸ್ಟಾಟಿಸ್ಟಿಕಲ್ ಕಮಿಷನ್ (ಎನ್‌ಎಸ್‌ಸಿ)-ರಾಷ್ಟ್ರೀಯ ಅಂಕಿಅಂಶಗಳ ಅಯೋಗದ ಇಬ್ಬರು ಸ್ವತಂತ್ರ ಸದಸ್ಯರು ಎನ್‌ಎಸ್‌ಸಿ ಗೆ ನೀಡಿರುವ ರಾಜೀನಾಮೆಯು ಭಾರತದಲ್ಲಿ ಸಾರ್ವಜನಿಕ ಸಂಸ್ಥೆಗಳ ಸ್ವಾಯತ್ತತೆಯ ಪ್ರಶ್ನೆಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ವಿಶ್ವಾಸಾರ್ಹ ಅಧಿಕೃತ ಅಂಕಿಅಂಶಗಳನ್ನು ತಯಾರು ಮಾಡುವುದರ ಜೊತೆಗೆ ಅವನ್ನು ಸಾರ್ವಜನಿಕರಿಗೂ ಎಟುಕುವಂತೆ ಮಾಡುವ ಉದ್ದೇಶದಿಂದಲೇ ಈ ಎನ್‌ಎಸ್‌ಸಿಯನ್ನು ೨೦೦೬ರಲ್ಲಿ ರಚಿಸಲಾಯಿತು. ಆದರೆ ತಮ್ಮ ಪದವಿಗಳಿಗೆ ರಾಜೀನಾಮೆ ಕೊಟ್ಟ ಸದಸ್ಯರುಗಳ ಪ್ರಕಾರ ಆ ಮೂಲಭೂತ ಉದ್ದೇಶವನ್ನು ಅಯೋಗವು ಪೂರೈಸುತ್ತಿಲ್ಲ. ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ-ರಾಷ್ಟ್ರೀಯ ಮಾದರಿಮೂಲಗಳ ಸರ್ವೇ ಕಚೇರಿ)ಯು ೨೦೧೭-೧೮ರ ಸಾಲಿನಲ್ಲಿ ನಡೆಸಿದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ(ಪಿಎಲ್‌ಎಫ್‌ಎಸ್)- ನಿಯಮಿತ ಕಾಲಾಂತರದಲ್ಲಿ ನಡೆಸುವ ಶ್ರಮಶಕ್ತಿ ಸರ್ವೆಯ ವರದಿಗೆ ಎನ್‌ಎಸ್‌ಸಿಯು ೨೦೧೮ರ ಡಿಸೆಂಬರ್‌ನಲ್ಲೇ ಅನುಮತಿ ನೀಡಿದ್ದರೂ ಸರ್ಕಾರವು (ನೀತಿ ಅಯೋಗವು) ಅದನ್ನು ಬಿಡುಗಡೆ ಮಾಡಲಿಲ್ಲ. ನೀತಿ ಅಯೋಗವು ತಮ್ಮ ಸಂಸ್ಥೆಯ ಜೊತೆ ಯಾವುದೇ ಸಮಾಲೋಚನೆಯನ್ನೂ ಮಾಡದೆ ಇಂಥಾ ಮಹತ್ವದ ಸಂಸ್ಥೆಯನ್ನೇ ಮೂಲೆಗುಂಪು ಮಾಡಿರುವ ಬಗ್ಗೆಯೂ ರಾಜೀನಾಮೆ ನೀಡಿದ ಸದಸ್ಯರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ನೀತಿ ಅಯೋಗವು ಎನ್‌ಎಸ್‌ಸಿಯ ಸಾಮರ್ಥ್ಯ ಮತ್ತು ಸ್ವಾಯತ್ತತೆಯನ್ನು ಕಡೆಗಣಿಸುತ್ತಿರುವುದು ಇದೇ ಮೊದಲಲ್ಲ. ನೀತಿ ಅಯೋಗ ಮತ್ತು ಕೇಂದ್ರೀಯ ಅಂಕಿಅಂಶ ಕಚೇರಿಯು,೨೦೧೮ರಲ್ಲಿ,  ಹಿಂದಿನ ವರ್ಷಗಳ ರಾಷ್ಟ್ರಿಯ ಅಭಿವೃದ್ಧಿ ದರವನ್ನು (ಜಿಡಿಪಿ) ೨೦೧೧-೧೨ನ್ನು ಮೂಲಾಧಾರವಾಗಿಟ್ಟುಕೊಂಡು ಪರಿಷ್ಕರಿಸಿದ ಸಂದರ್ಭದಲ್ಲೂ,  ಅಂಕಿಅಂಶ ಅಯೋಗವನ್ನು ಪಕ್ಕಕ್ಕೆ ಸರಿಸಿ ಹೊಸ ದರವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದವು. ನೀತಿ ಅಯೋಗವು ತನ್ನದೇ ಉಪಸಮಿತಿ ನೀಡಿದ ವರದಿಗಳನ್ನೇ ತಕೆಳಗು ಮಾಡಿ ಹಾಲೀ ಸರ್ಕಾರದ ಸಾಧನೆ ಹಿಂದಿನ ಸರ್ಕಾರಗಳಿಗಿಂತ ಉತ್ತಮವಾಗಿತ್ತು ಎಂದು ಬಿಂಬಿಸಲು ಪ್ರಯತ್ನಿಸಿತ್ತು. ಅದರಲ್ಲಿ ನೀಡಲಾಗಿದ್ದ ಅಂಕಿಅಂಶಗಳು ಎನ್‌ಎಸ್‌ಸಿ ನೀಡಿದ್ದ ವರದಿಗಿಂತ ಸಾಕಷ್ಟು ಭಿನ್ನವಾಗಿತ್ತು. ಹೀಗೆ ಅಧಿಕೃತ ಅಂಕಿಅಂಶಗಳನ್ನು ತಿದ್ದಲು ಪ್ರಯತ್ನಿಸುತ್ತಿರುವ ನೀತಿ ಅಯೋಗ ಮತ್ತು ಸಿಎಸ್‌ಒಗಳ ನಡೆಗಳು ಪರಿಣಿತರಿಂದ ಸಾಕಷ್ಟು ಟೀಕೆಗಳಿಗೆ ಒಳಗಾಗಿತ್ತು.

ಎನ್‌ಎಸ್‌ಎಸ್‌ಒದ ಹಾಲಿ ವರದಿಯ ವಿಷಯಕ್ಕೆ ಬರುವುದಾದರೆ, ಅದು ನೋಟು ರದ್ಧತಿ ಮತ್ತು ಜಿಎಸ್‌ಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ನಂತರ ದೇಶದ ಔದ್ಯೋಗಿಕ ಪರಸರದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಒದಗಿಸುತ್ತಿತ್ತು. ಆದ್ದರಿಂದಲೇ ಆ ವರದಿಯು ಬಿಡುಗಡೆಯು ಬಹುಮಹತ್ವದ ವಿಷಯವಾಗಿತ್ತು. ಆ ವರದಿಯು ಬಹುನಿರೀಕ್ಷಿತವಾದ ಮನೆಮಾರು ಸರ್ವೆಯನಾಧರಿಸಿದ್ದರೂ ಸರ್ಕಾರ ಅದರ ಬಿಡುಗಡೆಯನ್ನು ಏಕೆ ತಡೆಹಿಡಿಯಿತು? ಆ ವರದಿಯು ದೇಶದ ಔದ್ಯೋಗಿಕ ವಾತಾವರಣದ ಬಗ್ಗೆ ಸರ್ಕಾರದ ಹೆಗ್ಗಳಿಕೆಗೆ ತದ್ವಿರುದ್ಧವಾಗಿ ಅತ್ಯಂತ ನಿರಾಶಾದಾಯಕ ಚಿತ್ರಣವನ್ನು ನೀಡುತ್ತಿದ್ದರಿಂದಲೇ  ಆ ವರದಿಯ ಬಿಡುಗಡೆಯನ್ನು ತಡೆಹಿಡಿಯಲಾತೆಂದು ವ್ಯಾಪಕವಾಗಿ ಭಾವಿಸಲಾಗಿದೆ.

ಆದರೆ ನಂತರದಲ್ಲಿ ಎನ್‌ಎಸ್‌ಎಸ್‌ಒನ ವರದಿಯ ಅಂಶಗಳು ಮಾಧ್ಯಮದಲ್ಲಿ ಸೋರಿಕೆಯಾಗಿದ್ದು ದೇಶವು ಎದುರಿಸುತ್ತಿರುವ ಉದ್ಯೋಗ ಬಿಕ್ಕಟ್ಟು ಎಷ್ಟು ತೀವ್ರವಾಗಿದೆಯೆಂಬುದನ್ನು ಸೂಚಿಸುತ್ತಿದೆ. ಸೋರಿಕೆಯಾದ ವರದಿಂii ಪ್ರಕಾರ ೨೦೧೭-೧೮ರಲ್ಲಿ ನಿರುದ್ಯೋಗ ದರವು ಸಾಧಾರಣ ಕಾಲಾವಧಿಯಲ್ಲಿ ಶೇ.೬.೧ರಷ್ಟಿದ್ದರೆ ಹಾಲಿ ವಾರವಾರು ಸ್ಥಿತಿಗತಿ (ಕರೆಂಟ್ ವೀಕ್ಲಿ ಸ್ಟೇಟಸ್-ಸಿಡಬಲ್ಯೂಎಸ್)ಯ ಲೆಕ್ಕಾಚಾರದಲ್ಲಿ ನಿರುದ್ಯೋಗದ ಪ್ರಮಾಣ ೮.೯ರಷ್ಟು ಪ್ರಮಾಣದಲ್ಲಿದ್ದು ಗಾಬರಿ ಹುಟ್ಟಿಸುವಂತಿದೆ. ನಗರ ಪ್ರದೇಶದಲ್ಲಿ ಈ ಎರಡು ಬಗೆಯ ನಿರುದ್ಯೋಗ ದರಗಳು ಅನುಕ್ರಮವಾಗಿ ಶೇ.೭.೮ ಮತ್ತು ಶೇ.೯.೬ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.೫.೩ ಮತ್ತು ಶೇ.೮.೫ರಷ್ಟಿತ್ತು. ಅಷ್ಟು ಮಾತ್ರವಲ್ಲ ೧೫-೨೯ರ ವಯೋಗುಂಪಿನ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಇನ್ನೂ ಹೆಚ್ಚಿತ್ತು. ಆದರೆ ಲೇಬರ್ ಫೋರ್ಸ್ ಪಾರ್ಟಿಸಿಪೇಷನ್ ರೇಟ್ (ಎಲ್‌ಎಫ್‌ಪಿಆರ್)- ಶ್ರಮಶಕ್ತಿ ಭಾಗೀದಾರಿಕೆಯ ದರ ಶೇ.೩೬.೯ಕ್ಕಿಳಿದಿದ್ದು ಹೆಚ್ಚೆಚ್ಚು ಶ್ರಮಿಕರು ಅದರಲ್ಲೂ ಮಹಿಳೆಯರು ಶ್ರಾಮಿಕ ಪಡೆಯಿಂದ ಹಿಂದೆ ಸರಿಯುತ್ತಿದ್ದಾರೆಂಬುದನ್ನು ಸೂಚಿಸುತ್ತದೆ. ಅಭಿವೃದ್ಧಿಶೀಲ ದೇಶವಗಿರುವುದರ ಜೊತೆಗೆ ಅಧಿಕ ಯುವಜನಸಂಖ್ಯಾ ಲಾಭವನ್ನು ಹೊಂದಿರುವ ದೇಶವಾಗಿರುವ ಭಾರತದಲ್ಲಿ ಹೆಚ್ಚು ನಿರುದ್ಯೋಗ ದರ ಮತ್ತು ಅದರ ಜೊತೆಗೆ ಕಡಿಮೆ ಎಲ್‌ಎಫ್‌ಪಿಆರ್ ದರಗಳಿರುವುದು ಒಳ್ಳೆಯ ಲಕ್ಷಣವಲ್ಲ.

ಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರರೂಢ ಎನ್‌ಡಿಎ ಸರ್ಕಾರವು ಸದರಿ ವರದಿಯು ಕೇವಲ ಒಂದು ಕರಡು ಸ್ವರೂಪದ್ದೆಂದು ಪ್ರತಿಪಾದಿಸುವ ಮೂಲಕ ರಾಜೀನಾಮೆ ನೀಡಿದ ಸದಸ್ಯರ ಕಾಳಜಿಗಳನ್ನು ತಳ್ಳಿಹಾಕುವ ಪ್ರಯತ್ನವನ್ನು ಮಾಡುತ್ತಿದೆ. ಎನ್‌ಎಸ್‌ಎಸ್‌ಒ ನೀಡಿರುವ ವರದಿ ಕರಡು ಸ್ವರೂಪದ್ದೇ ಆಗಿರಬಹುದು; ಆದರೆ ಒಂದೊಮ್ಮೆ ಆ ವರದಿಯು ಪ್ರಕಟವಾದರೆ ದೇಶದಲ್ಲಿನ ಹೆಚ್ಚುತ್ತಿರುವ ಉದ್ಯೋಗ ಬಿಕ್ಕಟ್ಟಿನ ಚಿತ್ರಣವನ್ನು ಕೊಡುವುದಂತೂ ಸತ್ಯ. ಅದು ಉದ್ಯೋಗ ಸೃಷ್ಟಿಯು ಹೆಚ್ಚಾಗಿದೆಯೆಂಬ ಬಗ್ಗೆ ಎನ್‌ಡಿಎ ಸರ್ಕಾರವು ಸದನದಲ್ಲಿ ಮತ್ತು ಮಾಧ್ಯಮಗಳಲ್ಲಿ ಮಾಡುತ್ತಿರುವ ಪ್ರತಿಪಾದನೆಗಳನ್ನು ಸುಳ್ಳೆಂದು ಸಮರ್ಥವಾಗಿ ಸಾಬೀತು ಮಾಡಲು ವಿರೋಧಪಕ್ಷಗಳಿಗೆ ಬಲವನ್ನು ತುಂಬುತ್ತದೆ. ಹಾಗೆಯೇ ೨೦೧೪ರ ಚುನಾವಣೆಯ ಸಂದರ್ಭದಲ್ಲಿ ಒಂದು ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವ ಬಗ್ಗೆ ಎನ್‌ಡಿಎ ಕೊಟ್ಟಿದ್ದ ಭರವಸೆಯನ್ನು ಮರೆಯದಿರೋಣ. ಇದರ ಜೊತೆಗೆ ಈ ವರದಿಯು ಪ್ರಕಟಗೊಂಡರೆ ದೇಶದ ಹಾಲೀ ನಿರುದ್ಯೋಗ ಪರಿಸ್ಥಿತಿ ಕಳೆದ ೪೫ ವರ್ಷಗಳಲ್ಲೇ ಅತ್ಯಂತ ಹೀನಾಯವಾಗಿದೆಯೆಂಬುದನ್ನು ಸಹ ಸಾಬೀತುಪಡಿಸುತ್ತದೆ. ಹೀಗಾಗಿ ಈ ವರದಿಯನ್ನು ಬಿಡುಗಡೆ ಮಾಡಿದರೆ ತನ್ನ ಗೋರಿಯನ್ನು ತಾನೇ ತೋಡಿಕೊಂಡಂತೆ ಎನ್ನುವುದು ದೆಹಲಿಯಲ್ಲಿರುವ ಸರ್ಕಾರಕ್ಕೆ ತಿಳಿದಿದೆ. ಅದರಲ್ಲೂ ಚುನಾವಣೆ ಸನಿಹದಲ್ಲಿರುವಾಗ ಇಂಥಾ ಒಂದು ವರದಿಯು ಬಿಡುಗಡೆಯಾಗುವುದು ವಿನಾಶಕಾರಿ ಎಂಬುದೂ ಅದಕ್ಕೆ ಗೊತ್ತಿದೆ.

ನಿರುದ್ಯೋಗದ ಬಗೆಗಿನ ಈ ವರದಿ ಮತ್ತು ಅಂಕಿಅಂಶಗಳು ಬಿಡುಗಡೆಯಾಗುವುದು ಮೌಲಿಕ ರಾಜಕೀಯ ಮತ್ತು ಸಧೃಢ ಆರ್ಥಿಕ ವಿಶ್ಲೇಷಣೆಯ ಮೌಲಿಕ ಮೌಲ್ಯಮಾಪನಗಳ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಅಂಥಾ ಮಾಹಿತಿಪೂರ್ಣ ಅಂಕಿಅಂಶಗಳು ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿಯಾದ ನೀತಿಗಳನ್ನು ರೂಪಿಸಲು ಸಹಕರಿಸುತ್ತವೆ. ಅಷ್ಟು ಮಾತ್ರವಲ್ಲದೆ ಅದು ಹೂಡಿಕೆದಾರರು ಮತ್ತು ವ್ಯವಹಾರೋದ್ಯಮಿಗಳು ತಮ್ಮ ವ್ಯಾಹಾರಿಕ ಯೋಜನೆಗಳನ್ನು ರೂಪಿಸಿಕೊಳ್ಳಲೂ ಸಹಾಯ ಮಾಡುತ್ತದೆ. ಅದೇನೇ ಇದ್ದರೂ ನಡೆದುಕೊಂಡು ಬಂದ ರೀತಿರಿವಾಜುಗಳನ್ನು ಬದಿಗೆ ಸರಿಸುವ ಮೂಲಕ ಮತ್ತು ಎನ್‌ಎಸ್‌ಸಿಯನ್ನು ಮೂಲೆಗುಂಪು ಮಾಡುವ ಮೂಲಕ ನೀತಿ ಅಯೋಗವು ಅಂಕಿಅಂಶ ಸಂಸ್ಥೆಯ ಸ್ವಾಯತ್ತತೆಯನ್ನು ಅಲಕ್ಷಿಸಿದೆ. ಮತ್ತು ಆ ಮೂಲಕ ಅಧಿಕೃತ ಅಂಕಿಅಂಶಗಳ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. 

Back to Top