ISSN (Print) - 0012-9976 | ISSN (Online) - 2349-8846

ಒಂದು ಬಲಿಷ್ಟ ವಿರೋಧ ಪಕ್ಷ ಬೇಕೆಂಬ ಜನಾದೇಶ

ಸಾಮಾಜಿಕ ವೈರುಧ್ಯಗಳನ್ನು ಮತ್ತೆ ಪ್ರತಿಪಾದಿಸುವ ಮೂಲಕ ಅಧಿಕಾರದ ಅಹಂಕಾರವನ್ನು ಮಣಿಸಬಹುದು.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನ ಸಭಾ ಚುನಾವಣೆಗಳ ಫಲಿತಾಂಶಗಳು ಬಿಜೆಪಿ ಪಕ್ಷದ ಚುನಾವಣಾ ವಿಜಯದ ಅಭಿಯಾನವನ್ನು ನಿಲ್ಲಿಸಲು ಅಸಾಧ್ಯ ಎಂಬ ಮಿಥ್ಯೆಯನ್ನು ಮುರಿದಿದೆ. ಈ ಚುನಾವಣೆಗಳಲ್ಲಿ ತಾವೆಷ್ಟು ಸೀಟುಗಳನ್ನು ಪಡೆಯುತ್ತೇವೆ ಎಂಬ ಬಗ್ಗೆ ಆ ಪಕ್ಷದ ನಾಯಕರು ಮಾಡುತ್ತಿದ್ದ ಉತ್ಪ್ರೇಕ್ಷಿತ ಪ್ರತಿಪಾದನೆಗಳು ಸುಳ್ಳಾಗಿವೆ. ಹಾಗೂ ಅವರ ಸಾಧನೆಗಳು ೨೦೧೪ಕ್ಕಿಂತ ಕಡಿಮೆಯಾಗಿದೆ ಮಾತ್ರವಲ್ಲದೆ ಸ್ವಂತ ಸಾಮರ್ಥ್ಯದಿಂದ ಸರ್ಕಾರವನ್ನು ರಚಿಸಲಾಗದ ಮಟ್ಟಕ್ಕೆ ಕುಸಿದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಹಿಂದಿಗಿಂತ ಹೆಚ್ಚಿನ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಮೇಲೆ, ಬಿಜೆಪಿ ಪಕ್ಷವು ಜನರ ಅಭಿಪ್ರಾಯಗಳ ಮೇಲೆ ಸಂಪೂರ್ಣ ಹತೋಟಿ ಸಾಧಿಸಿರುವುದರಿಂದ ಮತ್ತು ಅಧಿಕಾರದ ಚುಕ್ಕಾಣಿಯನ್ನು ಹಿಡಿದುಕೊಂಡಿರುವುದರಿಂದ, ಶಾ-ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಸೋಲಿಸುವುದಿರಲಿ ಸವಾಲೆಸೆಯುವುದೂ ಕಷ್ಟವೆಂಬ ಅಭಿಪ್ರಾಯ ವ್ಯಾಪಕವಾಗಿತ್ತು. ಆದರೆ ಮತ್ತೆ ಮತ್ತೆ ಜನರ ಬಳಿಗೆ ಹೋಗಿ, ಅವರ ವಿಶ್ವಾಸವನ್ನು ಗೆದ್ದುಕೊಂಡು ಸಂಘಟಿಸುವುzಂಥ ಪ್ರಜಾತಂತ್ರದ ಪ್ರಾಥಮಿಕ ಪಾಠಗಳನ್ನು ಅನುಸರಿಸಿದರೆ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತದೆಂಬುದನ್ನು  ಈ ಫಲಿತಾಂಶಗಳು ಮತ್ತೊಮ್ಮೆ ಸಾರಿ ಹೇಳಿವೆ. ಇದನ್ನು ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷದ ಶರದ್ ಪವಾರ್ ಅವರು ಅನುಸರಿಸಿದರು. ಜನರ ಬಳಿ ನೇರವಾಗಿ ತೆರಳಿ ಸಂಪರ್ಕವನ್ನು ಸಾಧಿಸಿದ ಅವರ ಪ್ರಚಾರಾಂದೋಲನವು ಬಿಜೆಪಿಯ ಪ್ರಚಾರಗಗಳಿಗೆ ಪರಿಣಾಮಕಾರಿ ಪ್ರತಿ ಸವಾಲನ್ನೊಡ್ಡಿತು. ಉದಾಹರಣೆಗೆ ಸುರಿಮಳೆಯನ್ನೂ ಲೆಕ್ಕಿಸದೆ ಸತಾರದಲ್ಲಿ ನಡೆದ ಅವರ ಬೃಹತ್ ಜನಸಭೆ ಕಾರ್ಯಕರ್ತರಿಗೂ ಮತ್ತು ಬೆಂಬಲಿಗರಿಗೂ ದೊಡ್ಡ ಮಟ್ಟದ ಉತ್ತೇಜನವನ್ನು ನೀಡುವಂತಿತ್ತು. ಒಂದು ಕಡೆ ಆಡಳಿತರೂಢ ಬಿಜೆಪಿ ಪಕ್ಷವು ಕೇವಲ ರಾಷ್ಟ್ರಮಟ್ಟದ ಸಂಗತಿಗಳ ಬಗ್ಗೆ ಪ್ರಚಾರ ಮಾಡುತ್ತಾ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡುತ್ತಿದ್ದರೆ ಶರದ್ ಪವಾರ್ ಅವರು ಜನರ ಜೀವನ ಮತ್ತು ಜೀವನೋಪಾಯಗಳನ್ನು ಉದ್ದೇಶಿಸಿ ಪ್ರಚಾರ ನಡೆಸುತ್ತಾ ಚುನಾವಣೆಯನ್ನು ಜನರ ಸಮೀಪಕ್ಕೆ ಕೊಂಡೊಯ್ದರು. ದೇಶವನು ವಿರೋಧ ಪಕ್ಷ ಮುಕ್ತ ಭಾರತವನ್ನಾಗಿ ಮಾಡಬೇಕೆಂಬ ಕರೆಯನ್ನು ಮತದಾರರು ತಿರಸ್ಕರಿಸಿದ್ದಾರೆ. ಹಾಗೂ  ಮಹಾರಾಷ್ಟ್ರ ಮತ್ತು ಹರ್ಯಾಣಗಳಲ್ಲಿ ವಿರೋಧ ಪಕ್ಷಕ್ಕೆ ಕಸುವನ್ನು ತುಂಬಿ ಅವು ಆಡಳಿತ ರೂಢ ಪಕ್ಷದ ಉತ್ತರಾದಾಯಿತ್ವವನು ಆಗ್ರಹಿಸುವ ಸಮರ್ಥವಾದ ವಿರೋಧ ಪಕ್ಷದ ಕೆಲಸವನ್ನು ನಿರಂತರವಾಗಿ ಮತ್ತು ಧೃಢವಾಗಿ ಮಾಡಲು ಆದೇಶಿಸಿದ್ದಾರೆ. ವಿರೋಧ ಪಕ್ಷಗಳು ಕಳೆದ ಐದು ವರ್ಷಗಳಲ್ಲಿ ಅಂಥಾ ನಿರಂತರತೆಯನ್ನು ತೋರಿದ್ದರೆ ಅಥವಾ ಕಳೆದೆರಡು ತಿಂಗಳಲ್ಲಿ ಮಾಡಿದ ನಿರಂತರ ಪ್ರಚಾರವನ್ನು ಉದ್ದಕ್ಕೂ ಮಾಡಿಕೊಂಡು ಬಂದಿದ್ದರೆ ಫಲಿತಾಂಶಗಳು ಬೇರೆ ರೀತಿಯಾಗಿರುತ್ತಿತ್ತು.

ಶರದ್ ಪವಾರರಿಗೆ ಈಡಿ ಯಿಂದ ನೋಟಿಸ್ ಕಳಿಸಿದ್ದು ಮಹರಾಷ್ಟ್ರದ ಚುನಾವಣಾ ಪ್ರಚಾರದ ದಿಕ್ಕನ್ನೇ ಹಲವಾರು ರೀತಿಗಳಲ್ಲಿ ಬದಲಿಸಿಬಿಟ್ಟಿತೆಂದು ಹೇಳಬಹುದು. ಅತ್ಯಂತ ಮುಖ್ಯವಾಗಿ ಒಬ್ಬ ಧೃಢವಾದ ಪ್ರತಿಸ್ಪರ್ಧಿಯಾಗಿ ನಿಂತಿದ್ದಕ್ಕಾಗಿಯೇ ತಮ್ಮ ಸಮುದಾಯದ ಅತ್ಯಂತ ಪ್ರಮುಖ ನಾಯಕನೊಬ್ಬರ ಮೇಲೆ ಕೇಂದ್ರವು ದಾಳಿ ನಡೆಸಿದ್ದು ಇಡೀ ಮರಾಠ ಸಮುದಾಯವನ್ನು ಕೆರಳಿಸಿತು. ಆದರೆ, ಬಹಳಷ್ಟು ವ್ಯಾಖ್ಯಾನಕಾರರು ಹೇಳುವಂತೆ ಮರಾಠ ಸಮುದಾಯವು ಏಕರೂಪಿಯೂ ಆಗಿಲ್ಲ ಅಥವಾ  ಒಂದೇ ಬಗೆಯಲ್ಲಿ ಮತದಾನವನ್ನೂ ಮಾಡುತ್ತಿಲ್ಲ್ಲ. ಶರದ್ ಪವಾರರನ್ನು ಮರಾಠರ ಪ್ರಬಲ ನಾಯಕ ಇತ್ಯಾದಿ ವಿಶೇಷಣಗಳಿಂದ ಕರೆಯಲಾಗುತ್ತಿದ್ದರೂ ಅವರ ಪಕ್ಷಕ್ಕೆ ಮರಾಠ ಸಮುದಾಯದ ಒಂದು ವಿಭಾಗವು ಮಾತ್ರ ಮತವನ್ನು ನೀಡುತ್ತಾ ಬಂದಿದೆ. ಆದರೂ ಮಹಾರಾಷ್ಟ್ರದ ಸಾಮಾಜಿಕ-ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಪಟ್ಟ ಕಾರಣಗಳಿಂದಾಗಿ ಮತ್ತು ಮಹಾರಾಷ್ಟ್ರದ ರಾಜಕೀಯ ಆರ್ಥಿಕತೆಯ ಕಾರಣಗಳಿಂದಾಗಿ ಶರದ್ ಪವಾರರ ಹೆಸರು ಮರಾಠರಲ್ಲಿ ತಮ್ಮವರೆಂಬ ಭಾವನೆಯನ್ನು ಕೂಡಲೇ  ಮೂಡಿಸುತ್ತದೆ. ಪವಾರ್ ಅವರಿಗೆ ಈಡಿ ನೋಟಿಸನ್ನು ನೀಡಿದ್ದು ಮತ್ತು ಅದಕ್ಕೆ ಪವಾರರು ಆಕ್ರಮಣಶೀಲ ಪ್ರತಿಕ್ರಿಯೆಗಳನ್ನು ನೀಡಿದ ನಂತರ ಪವಾರರ ಬಗ್ಗೆ ಮರಾಠರಲ್ಲಿರುವ ತಮ್ಮವರೆಂಬ ಭಾವನೆಯು ರಾಜಕೀಯವಾಗಿ ಮತ್ತು ಚುನಾವಣಾತ್ಮಕವಾಗಿ ಚಾಲ್ತಿಗೆ ಬಂದಿತು. ಆದರೆ ಇದು ಕೇವಲ ಭಾವನಾತ್ಮಕ ಪ್ರತಿಕ್ರಿಯೆ ಮಾತ್ರವಾಗಿ ಉಳಿಯಲಿಲ್ಲ. ಏಕೆಂದರೆ ತಮ್ಮ ಮೇಲೆ ದಾಳಿ ಮಾಡಲಾಗುತ್ತಿದೆಯೆಂಬ ಭಾವನೆಗಳ ಜೊತೆಗೆ ಕೃಷಿಯೇತರ ಹಿನ್ನೆಲೆಯುಳ್ಳ ಆಡಳಿತ ರೂಢರು ಗ್ರಾಮಿಣ ಮತ್ತು ಕೃಷಿ ಕ್ಷೇತ್ರವನ್ನು ಕಡೆಗಣಿಸಿರುವ ಸಂಗತಿ ಹಾಗೂ ಮರಾಠ ಮತ್ತು ಧನಗರ್ ಅಂಥ ಕೃಷಿ ಸಮುದಾಯಗಳಿಗೆ ನೀಡಲಾದ ಮೀಸಲಾತಿಗಳ  ಅಸಮರ್ಪಕ ಅನುಷ್ಠಾನದಂತ ವಿಷಯಗಳೂ ಕೂಡಾ ಸೇರಿಕೊಂಡವು. ಹೀಗೆ ಈ ಆಕ್ರೋಶಗಳಿಗೆ ಜರ ದೈನಂದಿನ ಸಮಸ್ಯೆಗಳೂ ಬೆರೆತುಕೊಂಡಿತು. ಅಷ್ಟೇ ಅಲ್ಲದೆ  ಹಾಲಿ ಆಡಳಿತ ರೂಢರ ಸಾಮಾಜಿಕ ಹಿನ್ನೆಲೆಯು ಜನತೆಯಲ್ಲಿ ಪೇಶ್ವೆ ಆಡಳಿತದ ಬಗ್ಗೆ ಇದ್ದ ಆಕ್ರೋಶವನ್ನೂ ಮರುಕಳಿಸುವಂತೆ ಮಾಡಿದ್ದರಿಂದ  ಪ್ರತಿರೋಧವು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗುಳಿಯಲಿಲ್ಲ. 

ವಿಶೇಶವಾಗಿ ಎನ್‌ಸಿಪಿ ಪಕ್ಷವು ಮಾಡಿದ ಪ್ರಚಾರ ತಂತ್ರಗಳಲ್ಲಿ ಮತ್ತು ಟಿಕೆಟ್ ವಿತರಣೆಯಲ್ಲಿ ವಿವಿಧ ಜನವರ್ಗಗಳ ಬೆಂಬಲವನ್ನು ಪಡೆದುಕೊಳ್ಳಬೇಕೆಂಬ ಇರಾದೆ ಸ್ಪಷ್ಟವಾಗಿ ಕಾಣುತ್ತಿತ್ತು. ಇದರ ಪ್ರಭಾವು ಪಶ್ಚಿಮ ಮಹಾರಾಷ್ಟ್ರ ಮಾತ್ರವಲ್ಲದೆ ಉತ್ತರ ಮಹಾರಾಷ್ಟ್ರ, ಮರಾಠವಾಡ ಮತ್ತು ವಿದರ್ಭಗಳಲ್ಲೂ ಎದ್ದುಕಾಣುತ್ತಿದೆ. ಎನ್‌ಸಿಪಿ ಪಕ್ಷದ ಪ್ರಚಾರಗಳಲ್ಲಿ ಪ್ರಧಾನವಾಗಿ ಮರಾಠ ಸಮುದಾಯಕ್ಕೆ ಸೇರಿದ ನಾಯಕರು ಮಾತ್ರವಲ್ಲದೆ ಮಾಲಿ ಮತ್ತು ವಂಜಾರಿಯಂಥ  ಹಿಂದುಳಿದ ಜಾತಿಗಳಿಗೆ ಸೇರಿದ ಪ್ರಮುಖ ಉದಯೋನ್ಮುಖ ನಾಯಕರು ಮತ್ತು ಮುಸ್ಲಿಮರೂ ಸೇರಿದ್ದರು. ಅಷ್ಟು ಮಾತ್ರವಲ್ಲದೆ ಪಶ್ಚಿಮ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಹಲವಾರು ಸ್ಥಾಪಿತ ಮರಾಠಾ ನಾಯಕರ ಎದುರಾಗಿ  ಹಿಂದುಳಿದ ಜಾತಿಗಳಿಗೆ ಸೇರಿದ ಅದರಲ್ಲೂ ವಿಶೇಷವಾಗಿ ಧನಗರ್ ಸಮುದಾಯಕ್ಕೆ ಸೇರಿದ ನಾಯಕರನ್ನು ಎನ್‌ಸಿಪಿ ಕಣಕ್ಕೆ ಇಳಿಸಿತ್ತು. ಶಿವಾಜಿ ಮಹಾರಾಜರೂ ಸಹ ಅವರ ಕಾಲದಲ್ಲಿ ಸ್ಥಾಪಿತ ಪಟ್ಟಭದ್ರ ಸಮುದಾಯಗಳಿಗೆ ವಿರುದ್ಧವಾಗಿ ಮರಾಠ ಸಮುದಾಯದ ಬೆಂಬಲವನ್ನು ಕೇಂದ್ರವಾUmಟ್ಟುಂಡು ಇತರ ಸಮುದಾಯಗಳ ವಿಸ್ತೃತ ಬೆಂಬಲವನ್ನು ಸಂಚಯಿಸಿಕೊಂಡು ಅಧಿಕಾರವನ್ನು ಗೆದ್ದುಕೊಂಡಿದ್ದರು. ಆ ಇತಿಹಾಸವು ಈಗಲೂ ಜನರ ಮನಸ್ಸಿನಲ್ಲಿದ್ದು ಎನ್‌ಸಿಪಿ ಸಹ ಅದೇ ಮಾದರಿಯ ಸಾಮಾಜಿಕ ಸಂಯೋಜನೆಯ ಪ್ರಯೋಗವನ್ನು ಮಾಡಿತ್ತು. ಜೆಪಿ ಪಕ್ಷವು ಕಳೆದ ಮೂರು ದಶಕಗಳಿಂದ ಹಿಂದುಳಿದ ಜಾತಿಗಳಲ್ಲಿ ಮಾಧವ ಸಮೀಕರಣವನ್ನು ಎಂದರೆ  ಮಾಲಿ-ಧನಗರ್-ವನಜಾರಿ-ಮಾಧವ- ಜಾತಿ ಸಮೀಕರಣವನ್ನು ಮಾಡಿಕೊಳ್ಳುತ್ತಾ ಬಂದಿದೆ. ಹಾಲಿ ಚುನಾವಣಾ ಫಲಿತಾಂಶಗಳು ಅ ಸಮೀಕರಣಕ್ಕೆ ಪ್ರಬಲವಾದ ಸವಾಲನ್ನು ಹಾಕಬಲ್ಲ ಸೂಚನೆಗಳನ್ನು ಒದಗಿಸುತ್ತಿದೆ. ಒಬ್ಬ ಬ್ರಾಹ್ಮಣ ಮುಖ್ಯಮಂತ್ರಿಯ ನೇತೃತ್ವದಲ್ಲಿ  ಮಾಧವ ಸಮೀಕರಣದೊಳಗೆ ಉದ್ಭವವಾಗುವ ಘರ್ಷಣೆಗಳನ್ನು ನಿವಾರಿಸುವ ಕಷ್ಟಗಳೇನೆಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಈ ಬಗ್ಗೆ ಹಿಂದುಳಿದ ಜಾತಿಗಳಲ್ಲಿರುವ ಅಸಮಾಧಾನವನ್ನು ವಿರೋಧ ಪಕ್ಷಗಳು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿವೆಯೆಂಬುದನ್ನು ಅವರು  ಮಾಡಿದ ಪ್ರಚಾರಗಳು ತೋರಿಸುತ್ತಿವೆ. ಮತ್ತು ಆ ಮೂಲಕ ಅದು  ಮಹಾರಾಷ್ಟ್ರದಲ್ಲಿ ಸಂಘಪರಿವಾರದ ಸಾಮಾಜಿಕ ನೆಲೆಯ ತಿರುಳೇನೆಂದು ಸ್ಪಷ್ಟಪಡಿಸುತ್ತಿದೆ. ವಿವಿಧ ಸಾಮಾಜಿಕ ಗುಂಪುಗಳ ನಡುವೆ ಇರುವ ಘರ್ಷಣೆಗಳನ್ನು ಒಂದು ನಿಯಂತ್ರಿತ ಮಾದರಿಯಲ್ಲಿ ಹರಿತಗೊಳಿಸುವುದು, ಮರಾಠ ಸಮುದಾಯವನ್ನು ಪ್ರತ್ಯೇಕಗೊಳಿಸುವುದು ಮತ್ತು ಕೊಡುಕೊಳ್ಳೆಗಳ ಮೂಲಕ ಎಲ್ಲಾ ಸಮುದಾಯಗಳ ಬೆಂಬಲವನ್ನು ಪಡೆದುಕೊಳ್ಳುವ ತಂತ್ರವನ್ನು ಹಾಲೀ ಮುಖ್ಯಮಂತ್ರಿಯ ನೇತೃತ್ವದಲ್ಲಿ ಆಡಳಿತರೂಧ ಪಕ್ಷವು ಅನುಸರಿಸಿಕೊಂಡು ಬಂದಿದೆ. ಈ ರೀತಿಯಲ್ಲಿ ಸಾಮಾಜಿಕ ವೈರುಧ್ಯಗಳನ್ನು ನಿಭಾಯಿಸುವ ಕುತಂತ್ರಗಳನ್ನು ಆಧರಿಸಿಯೇ ಹಾಲೀ  ಚುನಾವಣೆಯಲ್ಲಿ  ಸಂಪೂರ್ಣ ಗೆಲುವನ್ನು ಸಾಧಿಸುವ ಕನಸುಗಳನ್ನೂ ಸಹ ಅದು ಕಟ್ಟಿಕೊಂಡಿತ್ತು. ಈ ಸಾಮಾಜಿಕ ವೈರುಧ್ಯಗಳು ತಮ್ಮ ಭಾರಕ್ಕೆ ತಾವೇ ಕುಸಿಯುವ ಹಂತವನ್ನು ತಲುಪಿದ್ದು ಅವುಗಳನ್ನು ನಿರಂತ್ರವಾಗಿ ತಮಗೆ ಬೇಕಾದಂತೆ ನಿರ್ವಹಿಸುತ್ತಾ ಹೋಗುವುದು ಸಾಧ್ಯವಿಲ್ಲವೆಂಬುದನ್ನೇ ಫಲಿತಾಂಶಗಳೂ ಸಹ ತೋರಿಸಿಕೊಟ್ಟಿವೆ.

ಈ ಎಲ್ಲಾ ಒಂದಕ್ಕೊಂದು ಬೆಸೆದುಕೊಂಡಿರುವ ಕಾರಣಗಳಿಂದಾಗಿ ಆಡಳಿತ ರೂಢ  ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವ ನೈಜ ಅವಕಾಶವು ವಿರೋಧ ಪಕ್ಷಗಳಿಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಬಹುಪಾಲು ಸಮಯ ಅವು ನಿಷ್ಕ್ರಿಯವಾಗಿದ್ದರಿಂದ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷವು ಎದುರಿಸುತ್ತಿದ್ದ ಹತಾಷೆ ಮತ್ತು ದಿಕ್ಕುಗೇಡಿತನಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ ಈಗಲೂ ಸಹ ವಿರೋಧ ಪಕ್ಷವು ಜನಾದೇಶವನ್ನು ಒಪ್ಪಿಕೊಂಡು ಜನಸಮುದಾಯಗಳನ್ನು ಸಂಘಟಿಸುವ ಮೂಲಕ ಆಳುವ ಪಕ್ಷಕ್ಕೆ ರಾಜಕೀಯ ಬಿಕ್ಕಟ್ಟನ್ನು ಉಂಟುಮಾಡುವಂಥ  ಒಂದು ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡಬಹುದು. ಆಳುವ ಕೂಟವು ಬಿಕ್ಕಟ್ಟುಗಳೊಂದಿಗೇ ಅಧಿಕಾರವನ್ನು ಪಡೆದಿರುವುದರಿಂದ ಬರಲಿರುವ ದಿನಗಳಲ್ಲಿ ಅಂಥಾ ಹಲವಾರು ಸಾಧ್ಯತೆಗಳಿರುವುದಂತೂ ನಿಜ.

Back to Top