ಕಾರ್ಪೊರೇಟ್ ತೆರಿಗೆ ಕಡಿತದ ಭಾರವನ್ನು ಹೊರುವರು ಯಾರು?
ಕಾರ್ಪೊರೇಟ್ ತೆರಿಗೆ ಕಡಿತದ ಹೆಚ್ಚಿನ ಭಾರವನ್ನು ರಾಜ್ಯಗಳು ಹೊರಬೇಕಾಗುತ್ತದೆ. ಇದರಿಂದ ಬಂಡವಾಳ ಹೂಡಿಕೆಯು ಪುನಶ್ಚೇತನಗೊಳ್ಳುತ್ತದೆ ಎಂಬುದು ಕೂಡಾ ತಪ್ಪು ತಿಳವಳಿಕೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಕಾರ್‍ಪೊರೇಟ್ ತೆರಿಗೆಗಳನ್ನು ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಆರ್ಥಿಕತೆಯ ಬೆಳವಣಿಗೆಯ ಗತಿಯು ಮಂದಗೊಂಡಿದೆಯೆಂದು ಮತ್ತು ಅದು ಕೇವಲ ರೂಢಿಗತ ಚಕ್ರೋಪಾದಿ ವಿದ್ಯಮಾನವಲ್ಲವೆಂದು ಕೊನೆಗೂ ಒಪ್ಪಿಕೊಂಡಿದೆ. ಇದಕ್ಕೆ ಸ್ವಲ್ಪ ಹಿಂದೆ ವಿದೇಶಿ ಶೇರು ಹೂಡಿಕೆದಾರರ ಅತಿ ಆದಾಯದ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸಿದ್ದರೂ, ಒಂದು ಬ್ರಾಂಡಿನ ಸರಕುಗಳ ಚಿಲ್ಲರೆ ಮಾರಾಟವನ್ನು ಉದಾರೀಕರಿಸಿದರೂ, ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಶೇ.೧೦೦ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದರೂ, ಸಾರ್ವಜನಿಕ ಬಾಂಕುಗಳ ವಿಲೀನಗೊಳಿಸಿದರೂ ಅಷ್ಟಾಗಿ ಪ್ರತಿಕ್ರಿಯಿಸದ ಮಾರುಕಟ್ಟೆಯು, ೨೦೧೯ರ ಸೆಪ್ಟೆಂಬರ್ ೨೦ರಂದು ಘೋಷಿದ ಕಾರ್ಪೊರೇಟ್ ತೆರಿಗೆ ಕಡಿತವನ್ನು ಮಾತ್ರ ತುಂಬುಸಂತೋಷದಿಂದ ಸ್ವಾಗತಿಸಿತು.
ತೆರಿಗೆ ಸಂಗ್ರಹದ ಅಡಿಪಾಯವನ್ನು ವಿಸ್ತಾರಗೊಳಿಸುವುದು ಮತ್ತು ಆ ನಂತರದಲ್ಲಿ ತೆರಿಗೆ ದರವನ್ನು ಕಡಿತಗೊಳಿಸುವುದು ತೆರಿಗೆ ಸುಧಾರಣೆಯ ವಿಷಯದಲ್ಲಿ ಅತ್ಯಂತ ಉತ್ತಮವಾದ ಧೋರಣೆಯಾಗಿದೆ. ಈ ವಿಷಯವು ಕಾರ್ಪೊರೇಟ್ ಆದಾಯ ತೆರಿಗೆಯ ವಿಷಯಕ್ಕೆ ಇನ್ನೂ ಹೆಚ್ಚಾಗಿ ಅನ್ವಯಿಸುತ್ತದೆ. ಏಕೆಂದರೆ ಇಲ್ಲಿ ಆ ನೀತಿಯನ್ನು ಅನುಸರಿಸದಿದ್ದರೆ ಬಂಡವಾಳಿಗರು ಕಡಿಮೆ ತೆರಿಗೆಯ ದೇಶಗಳತ್ತ ವಲಸೆ ಹೋಗಬಹುದು. ಈ ಕಾರಣದಿಂದಾಗಿಯೇ ಸರ್ಕಾರವು ತೆರಿಗೆ ದರವನ್ನು ಕಡಿತಗೊಳಿಸುವ ಮುನ್ನ ವಿವಿಧ ತೆರಿಗೆ ವಿನಾಯತಿ ಮತ್ತು ಕಡಿತಗಳ ಬಗೆಗೆ ಸ್ಪಷ್ಟ ಧೋgಣೆಯನ್ನು ರೂಪಿಸಿಕೊಳ್ಳಬೇಕಿತ್ತು. ಕಾರ್ಪೊರೇಟ್ ತೆರಿಗೆಯನ್ನು ಶೇ.೨೫ಕ್ಕೆ ಇಳಿಸುವ ಬಗ್ಗೆ ಐದುವರ್ಷಗಳ ಹಿಂದೆ ಭರವಸೆ ನೀಡಿದ್ದ ಅಂದಿನ ಹಣಕಾಸು ಮಂತ್ರಿಯ ಘೋಷಣೆಯ ಹಿಂದೆ ಇದ್ದ ವ್ಯೂಹತಂತ್ರ ಇದೇ ಆಗಿತ್ತು. ಆದರೆ ಬಂಡವಾಳ ಹೂಡಿಕೆಯನು ಶತಾಯಗತಾಯ ಹೆಚ್ಚಿಸುವ ಅವಸರದಲ್ಲಿದ್ದ ಸರ್ಕಾರ ಇತರ ತೆರಿಗೆ ವಿನಾಯತಿಗಳನ್ನು ಪಡೆದುಕೊಳ್ಳದ ಕಾರ್ಪೊರೇಟ್ ಕಂಪನಿಗಳ ತೆರಿಗೆ ಹೊರೆಯನ್ನು ಏಕಾಏಕಿ ಶೇ.೨೨ಕ್ಕಿಳಿಸಿಬಿಟ್ಟಿತು. ಆದರೆ ಇವು ಜಾರಿಗೆ ಬರುವ ಮುನ್ನ ಹೊಸ ತೆರಿಗೆದರಕ್ಕೆ ಅರ್ಹತೆಯ ಮಾನದಂಡಗಳನ್ನು ರೂಪಿಸುವ ಮತ್ತು ಹೊಸ ದರಗಳಿಗೆ ವರ್ಗಾವಣೆಯಾಗುವ ಅವಧಿಯ ಸಮಸ್ಯೆಗಳನ್ನು ಎದುರಿಸಬೇಕಿರುತ್ತದೆ ಮತ್ತು ಇದಕ್ಕಿಂತ ಹೆಚ್ಚಿನ ತೆರಿಗೆ ದರಗಳನ್ನು ಕಟ್ಟುತ್ತಿರುವ ಸಣ್ಣ ಉದ್ಯಮಿಗಳ ಪ್ರಶ್ನೆಯೂ ಇದೆ. ಅಷ್ಟು ಮಾತ್ರವಲ್ಲದೆ, ತೆರಿಗೆ ಸಂಗ್ರಹದ ಅಡಿಪಾಯವನ್ನು ವಿಸ್ತಾರಗೊಳಿಸಿಕೊಳ್ಳುವ ಉದ್ದೇಶವೇ ಇದ್ದಲ್ಲಿ ಕನಿಷ್ಟ ಪರ್ಯಾಯ ತೆರಿಗೆ (ಮಿನಿಮಮ್ ಆಲ್ಟರ್ನೇಟೀವ್ ಟ್ಯಾಕ್ಸ್- ಎಮ್‌ಎಟಿ) ಯನ್ನು ಶೇ.೧೮ರಿಂದ ಶೇ.೧೫ಕ್ಕೆ ಇಳಿಸಿದ್ದರ ಹಿಂದಿನ ತರ್ಕವೇನು?
ಒಂದು ತೆರಿಗೆ ನೀತಿಗೆ ಹಲವಾರು ಲಕ್ಷ್ಯಗಳನ್ನು ಹೇರುವ ಮತ್ತು ತೆರಿಗೆ ವಿನಾಯತಿಗಳ ಪ್ರಸರಣೆಯನ್ನು ಹೆಚ್ಚಿಸುವ ಸಲಹೆಯನ್ನು ಯಾವ ಗಂಭೀರ ಅರ್ಥಶಾಸ್ತ್ರಜ್ನರೂ ನೀಡುವುದಿಲ್ಲ. ಈ ನೀತಿಯಿಂದ ಸರ್ಕಾರಕ್ಕೆ ಬರಬೇಕಿದ್ದ ತೆರಿಗೆಗಳನ್ನು ಬಿಟ್ಟುಕೊಡಲಾಗುತ್ತದೆ ಮತ್ತು ಅನುದ್ದಿಶ್ಯಪೂರ್ವಕವಾಗಿ ತೆರಿಗೆ ಸಂಗ್ರಹ ಸ್ವರೂಪಗಳಲ್ಲೂ ವಿಕೃತಿಗಳು ಸಂಭವಿಸುತ್ತವೆ ಮತ್ತು ಈ ನೀತಿಯಿಂದ ಅಪೇಕ್ಷಿತ ಫಲಿತಾಂಶಗಳು ದೊರೆಯುವುದೂ ಸಹ ಅನುಮಾನಸ್ಪದವಾಗಿದೆ. ವಾಸ್ತವವಾಗಿ ಬಜೆಟ್ಟಿನಲ್ಲಿ ಉಲ್ಲೇಖಿಸಿರುವಂತೆ ತೀವ್ರಗತಿಯ ಅಪಮೌಲ್ಯೀಕರಣ, ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಫಿಸಲಾಗಿರುವ ಘಟಕಗಳ ರಫ್ತು ಆದಾಯ, ವಿದ್ಯುತ್ತಿನ ಸಾಗಾಟ ಮತ್ತು ವಿತರಣೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಖನಿಜ ತೈಲಗಳ ಉತ್ಪಾದನೆ, ದತ್ತಿ ನಿಧಿ ಮತ್ತು ಸಂಸ್ಥೆಗಳಿಗೆ ನೀಡುವ ಕೊಡುಗೆಗಳು, ಈಶಾನ್ಯ ರಾಜ್ಯಗಳಲ್ಲಿ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಸ್ಥಾಪಿಸಲಾಗುವ ಘಟಕಗಳು ಮತ್ತು ಆಹಾರ ವಸ್ತುಗಳ ಸಂಸ್ಕರಣೆ ಮತ್ತು ಸಂಗ್ರಹಗಳಂಥ ೨೮ ಉದ್ಯಮಗಳಿಗೆ ತೆರಿಗೆ ವಿನಾಯತಿಯನ್ನು ನೀಡಲಾಗುತ್ತದೆ.
ಘೋಷಿಸಲಾದ ತೆರಿಗೆ ಕಡಿತಗಳಿಂದ ಹೆಚ್ಚಿನ ಲಾಭ ದೊರಕುತ್ತದೆಂಬ ತಪ್ಪು ಅಭಿಪ್ರಾಯಗಳಿಂದಾಗಿ ಮಾರುಕಟ್ಟೆಯು ಸರ್ಕಾರದ ಘೋಷಣೆಗಳಿಗೆ ತತ್ ಕ್ಷಣದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ದಾಖಲಿಸಿತು. ತೆರಿಗೆ ಕಡಿತಗಳನ್ನು ಘೋಷಿಸುವ ಮೊದಲು ಹೆಚ್ಚುವರಿ ತೆರಿಗೆಗಳೆಲ್ಲವನ್ನೂ ಸೇರಿಸಿ ಒಟ್ಟಾರೆ ಶೇ.೩೫ರಷ್ಟು ತೆರಿಗೆದರ ನಿಗದಿಯಾಗಿದ್ದರೂ, ವಿನಾಯತಿಗಳೆಲ್ಲವನ್ನೂ ಲೆಕ್ಕ ಹಾಕಿದಾಗ ಪರಿಣಾಮಕಾರಿ ತೆರಿಗೆ ದರ ಶೇ.೨೯.೪೯ರಷ್ಟು ಮಾತ್ರ ಆಗುತ್ತಿತ್ತು. ಈ ದರದಲ್ಲಿ ಸರ್ಕಾರಕ್ಕೆ ಕಾರ್ಪೊರೇಟ್ ತೆರಿಗೆಗಳಿಂದ ೭,೬೬,೦೦೦ ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗುತ್ತಿತ್ತು. ಆದರೆ ಇತ್ತೀಚಿನ ತೆರಿಗೆ ಕಡಿತಗಳ ಘೋಷಣೆಯ ನಂತರದಲ್ಲಿ ಈ ಮೊತ್ತದಲ್ಲಿ ೧.೧೨ ಲಕ್ಷ ಕೋಟಿ ರೂ.ಗಳು ಕೊರತೆ ಬೀಳುತ್ತದೆ. ಹೊಸದಾಗಿ ಪ್ರಾರಂಭವಾಗುವ ಕಂಪನಿಗಳಿಗೆ ಶೇ. ೧೫ರಷ್ಟು ತೆರಿಗೆ ದರವನ್ನು ಮಾತ್ರ ನಿಗದಿ ಮಾಡಲಾಗಿದ್ದದೂ, ಈ ಸೌಲಭ್ಯವನ್ನು ಅವು ಅದಾಯವನ್ನು ಗಳಿಸಲು ಪ್ರಾರಂಭಿಸಿದ ನಂತರವಷ್ಟೇ ಪಡೆದುಕೊಳ್ಳಲು ಸಾಧ್ಯ. ಆದರೆ ೨೦೧೯-೨೦೨೦ರ ಸಾಲಿನ ತೆgಗೆ ಸಂಗ್ರಹದ ಅಂದಾಜುಗಳು ಉತ್ಪ್ರೇಕ್ಷಿತವಾದದ್ದಾಗಿದೆ. ಆದ್ದರಿಂದ ತೆರಿಗೆ ನಷ್ಟದ ಪ್ರಮಾಣವು ಘೋಷಿತ ಪ್ರಮಾಣಕ್ಕಿಂತ ಕಡಿಮೆಯೇ ಆಗಬಹುದು. ಆದರೆ ತೆರಿಗೆ ಸಂಗ್ರಹವೂ ಕೂಡಾ ಕಡಿಮೆಯಾಗಲಿದೆ ಎಂಬುದನ್ನು ಮರೆಯಬಾರದು.
ವಿಪರ್ಯಾಸವೆಂದರೆ ತೆರಿಗೆ ಕಡಿತದಿಂದ ಉಂಟಾಗುವ ಹೊರೆಯ ಭಾರವನ್ನು ರಾಜ್ಯಗಳೇ ಹೊರಬೇಕಾಗುತ್ತದೆ. ಈ ತೆರಿಗೆ ಕಡಿತವು ಮೂಲ ತೆರಿಗೆ ದರಕ್ಕೆ ಅನ್ವಯವಾಗುತ್ತದೆಯೇ ವಿನಾ ಹೆಚ್ಚುವರಿ ತೆರಿಗೆಗಳಿಗಲ್ಲ. ಹೀಗಾಗಿ ಹಾಲಿ ಇರುವ ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಈ ತೆರಿಗೆ ಕಡಿತಗಳಿಂದ ರಾಜ್ಯಗಳಿಗೆ ಅಂದಾಜು ೬೦,೦೦೦ ಕೋಟಿ ರೂ.ಗಳ ನಷ್ಟವಾಗಲಿದೆ. ಮೇಲಾಗಿ, ತೆರಿಗೆ ಕಡಿತಗಳಿಂದಾಗಿ ಕೇಂದ್ರ ಸರ್ಕಾರಕ್ಕೆ ಆಗಲಿರುವ ೮೦,೦೦೦ ಕೋಟಿ ರೂ.ಗಳಷ್ಟು ನಷ್ಟದಲ್ಲಿ ಅಂದಾಜು ೨೦,೦೦೦ ಕೋಟಿ ರೂ.ಗಳು ಅದಕ್ಕೆ ವಾಪಸ್ ಬರಲಿದೆ. ಏಕೆಂದರೆ ಕಡಿಮೆ ತೆರಿಗೆ ದರದಿಂದ ಸಾರ್ವಜನಿಕ ಕಂಪನಿಗಳ ತೆರಿಗೆ ನಂತರದ ಆದಾಯವು ಹೆಚ್ಚುತ್ತದೆ. ಮತ್ತು ಆ ಉದ್ಯಮಗಳಲ್ಲಿರುವ ಕೇಂದ್ರ ಸರ್ಕಾರದ ಹೂಡಿಕೆಯ ಮೇಲಿನ ಡಿವಿಡೆಂಡ್ (ಲಾಭದ ಪಾಲು) ಕೂಡಾ ಹೆಚ್ಚುತ್ತದೆ. ಅದಕ್ಕೆ ತದ್ವಿರುದ್ಧವಾಗಿ, ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹದ ಅಂದಾಜು ಉತ್ಪ್ರೇಕ್ಷಿತವಾಗಿರುವುದರಿಂದ ಕೇಂದ್ರೀಯ ತೆರಿಗೆ ಸಂಗ್ರಹ ಮತ್ತು ಅದರಲ್ಲಿ ರಾಜ್ಯಗಳ ಪಾಲು ಕಡಿಮೆಯಾಗಲಿದೆ. ಇದರಿಂದ ರಾಜ್ಯಗಳ ವಿತ್ತೀಯ ಪರಿಸ್ಥಿತಿ ಬಿಗಡಾಯಿಸುವುದರಿಂದ ರಾಜ್ಯಗಳು ತಮ್ಮ ವೆಚ್ಚವನ್ನು ಅಯೋಜಿತವಾಗಿ ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯಗಳು ವಿಧಿಸುತ್ತಿದ್ದ ಎಲ್ಲಾ ವೆಚ್ಚಾಧಾರಿತ ತೆರಿಗೆಗಳನ್ನು ಜಿಎಸ್‌ಟಿ ವ್ಯವಸ್ಥೆಗೆ ಬಿಟ್ಟುಕೊಟ್ಟ ಮೇಲೆ ರಾಜ್ಯಗಳ ಬಳಿ ಇದ್ದ ತಮ್ಮದೇ ಸ್ವಂತ ಆದಾಯಗಳ ಮೂಲವೆಂದರೆ ಸ್ಟಾಂಪ್ ಮತ್ತು ರಿಜಿಸ್ಟ್ರೇಷನ್ ಬಾಬತ್ತುಗಳ ಮೇಲಿನ ಶುಲ್ಕಗಳು ಮಾತ್ರ. ಆದರೆ ಒಟ್ಟಾರೆ ಆರ್ಥಿಕತೆಯ ಬೆಳವಣಿಗೆಯೇ ಮಂದಗತಿಯಲ್ಲಿರುವುದರಿಂದ ಈ ಮೂಲದಿಂದಲೂ ರಾಜ್ಯಗಳಿಗೆ ಬರುತ್ತಿದ್ದಾ ಆದಾಯದಲ್ಲಿ ಖೋತಾ ಆಗಲಿದೆ.
ಇದಲ್ಲದೆ, ಕಾರ್ಪೊರೇಟ್ ತೆರಿಗೆ ಕಡಿತಗಳು ಆರ್ಥಿಕತೆಯನ್ನು ನಿಜಕ್ಕೂ ಪುನಶ್ಚೇತನಗೊಳಿಸಬಲ್ಲವೇ ಎಂಬ ಪ್ರಶ್ನೆಯೂ ಇದೆ. ತೆರಿಗೆ ಕಡಿತದ ಬಗ್ಗೆ ಮಾರುಕಟ್ಟೆಯ ದಿಡೀರ್ ಪ್ರತಿಕ್ರಿಯೆ ಏನೇ ಇದ್ದರೂ ಅವು ಆರ್ಥಿಕತೆಯಲ್ಲಿ ದಿಡೀರ್ ಏರಿಕೆಯನ್ನು ತರಬಹುದೇ ಎಂಬುದು ಸಂದೇಹಾಸ್ಪದವಾಗಿದೆ. ಮೊದಲನೆಯದಾಗಿ ಶೇ.೧೫ರಷ್ಟು ತೆರಿಗೆ ದರವು ಹೊಸ ಕಂಪನಿಗಳಿಗೆ ಅನ್ವಯವಾಗುವುದು ಅವುಗಳು ಉತ್ಪಾದನೆಯನ್ನು ಪ್ರಾರಂಭಿಸಿ ಆದಾಯವನ್ನು ಗಳಿಸಲು ಪ್ರಾರಂಭಿಸಿದ ಮೇಲೆ ಹೀಗಾಗಿ಼ ಈ ತೆರಿಗೆ ಕಡಿತವು ಎಷ್ಟರ ಮಟ್ಟಿಗೆ ಆರ್ಥಿಕತೆಗೆ ಉತ್ತೇಜನ ನೀಡಬಲ್ಲದು ಎಂಬುದು ಕೂಡಾ ಅನುಮಾನಸ್ಪದವೇ ಆಗಿದೆ. ಎರಡನೆಯದಾಗಿ, ಇಂದು ದೇಶವು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಮೂಲಕಾರಣವಿರುವುದು ಬೇಡಿಕೆಯಲ್ಲಿನ ಕೊರತೆಯಿಂದಾಗಿ. ಹೀಗಾಗಿ ಹೂಡಿಕೆಗಳನ್ನು ಹೆಚ್ಚಿಸುವ ಈ ಕ್ರಮಗಳು ಎಷ್ಟರ ಮಟ್ಟಿಗೆ ಬೇಡಿಕೆಗಳನ್ನು ಹೆಚ್ಚಿಸೀತು? ಪ್ರಸ್ತುತ ವಾತಾವರಣದಲ್ಲಿ, ಸರ್ಜಾರವು ತನ್ನ ವೆಚ್ಚವನ್ನು ಹೆಚ್ಚಿಸುವ ಮೂಲಕ ಮಾತ್ರ ಬೇಡಿಕೆಯನ್ನು ಹೆಚ್ಚಿಸಬಲ್ಲದು. ಆದರೆ ಅದನ್ನು ಮಾಡಲು ವಿತ್ತೀಯ ಕೊರತೆಯನ್ನು ನಿಗ್ರಹಿಸಬೇಕಾದ ಒತ್ತಡಗಳು ಅಡ್ಡಿಯಾಗುತ್ತದೆ. ಹಣಕಾಸು ಮಂತ್ರಿಗಳು ಸಾರ್ವಜನಿಕ ಉದ್ದಿಮೆಗಳು ಹೆಚ್ಚಿನ ಹೂಡಿಕೆಯನ್ನು ಮಾಡಬೇಕೆಂಬ ಒತ್ತಡಗಳನ್ನು ಹಾಕುತ್ತಿದ್ದಾರೆ. ಆದರೆ ಮತ್ತೊಂದು ಕಡೆ ತನ್ನ ಲಾಭದ ಹೆಚ್ಚಿನ ಪಾಲನ್ನು ಸರ್ಕಾರಕ್ಕೆ ಡಿವಿಡೆಂಡುಗಳ ರೂಪದಲ್ಲಿ ಜೊಡಬೇಕೆಂದು ಒತ್ತಾಯಿಸುತ್ತಾ ಹೂಡಿಕೆ ಮಾಡಲು ಬೇಕಾದ ಸಂಪನ್ಮೂಲಗಳನ್ನೇ ಕಿತ್ತುಕೊಳ್ಳುತ್ತಿದೆ. ಹೀಗಾಗಿ ಬರಲಿರುವ ತಿಂಗಳಲ್ಲಿ ಆರ್ಥಿಕ ನೀತಿಗಳ ಪರಿಸರ ಹೇಗೆ ಬದಲಾಗಬಹುದೆಂಬುದನ್ನು ಕಾದು ನೋಡಬೇಕಿದೆ.