ಪ್ರಜಾತಂತ್ರದ ಒಂದು ಆದರ್ಶ ಮಾದರಿ
.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಭಾರತದ ಸಾಂಸ್ಥಿಕ ಮತ್ತು ಔಪಚಾರಿಕ ರಾಜಕಾರಣದಲ್ಲಿ ಅಧಿಕಾರದಲ್ಲಿರುವ ಅಥವಾ ಅಧಿಕಾರ ಗಳಿಸಬಹುದಾದ ಪಕ್ಷಕ್ಕೆ ಇತರರು ಪಕ್ಷಾಂತರ ಮಾಡುವುದು, ಸೇರಿಕೊಳ್ಳುವುದು ಅಥವಾ ವಿಲೀನಗೊಳುವುದು ನಿಯಮಿತ ರೀತಿಯಲ್ಲಿ ನಡೆಯುತ್ತಲೇ ಬರುತ್ತಿದೆ. ಈ ಬೆಳವಣಿಗೆಯು ಪ್ರಜಾತಂತ್ರದ ನೈತಿಕ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಆದರೆ ಗುಣಮಟ್ಟದ ರಾಜಕಾರಣವೊಂದಕ್ಕೆ ಒಬ್ಬ ಜನಪ್ರತಿನಿಧಿಯು ಬೇರೊಂದು ಪಕ್ಷಕ್ಕೆ ಹಾರುವ ಮುನ್ನ ತನ್ನ ಮತದಾರರೊಂದಿಗೆ ನಿರಂತರ ಸಂಪರ್ಕ ಮತ್ತು ಸಮಾಲೋಚನೆಯಲ್ಲಿದ್ದುಕೊಂಡು ತನ್ನ ಮತದಾರರ ಒಪ್ಪಿಗೆ ಪಡೆಯಬೇಕೆಂಬ ನೈತಿಕತೆಯುಳ್ಳ ಒಬ್ಬ ಆದರ್ಶ ರಾಜಕಾರಣಿಯ ಅಗತ್ಯವಿರುತ್ತದೆ. ಇಂಥಾ ಒಂದು ಆದರ್ಶವನ್ನು ಪರಿಪಾಲಿಸಲು ಬೇಕಾದ ಆತ್ಮ ಗೌರವ ಮತ್ತು ನೈತಿಕ ಸ್ಥೈರ್ಯವನ್ನು ಒಬ್ಬ ಜನಪ್ರತಿನಿಧಿಯು ತನ್ನ ಮತದಾರರ ಆಶೋತ್ತರಗಳಿಗೆ ಮತ್ತು ಶ್ರೇಯೋಭಿವೃದ್ಧಿಗಳಿಗೆ ಸದಾ ಕಟಿಬದ್ಧವಾಗಿರುವ ಮೂಲಕ ಪಡೆದುಕೊಳ್ಳಲು ಸಾಧ್ಯ. ಇಂಥಾ ಆತ್ಮಗೌರವಗಳಿಗೆ ಬದ್ಧವಾಗಿರುವ ಮಾದರಿ ಆದರ್ಶವಾದಿಯನ್ನು ಯಾರೂ ಬದಲಾಯಿಸಲು ಬಯಸುವುದಿಲ್ಲ. ಆತ್ಮಗೌರವದಂಥ ನೈತಿಕ ಆದರ್ಶಗಳನ್ನು ಅತ್ಯಂತ ಜತನವಾಗಿ ಕಾಪಾಡಿಕೊಂಡಿರುವ ಮತ್ತು ಅದೇ ಕಾರಣಗಳಿಗಾಗಿ ಇತರ ಯಾವುದೇ ಆಮಿಷಗಳಿಗೆ ಬಲಿಯಾಗದಿರುವ ಜನಪ್ರತಿನಿಧಿಯ ಮೇಲೆ ಜನರು ನೈತಿಕ ನಿರೀಕ್ಷೆಗಳನ್ನು ಇರಿಸಿಕೊಳ್ಳಬಹುದು. ಆದರೆ ಪಕ್ಷಾಂತರದಂಥ ಕ್ರಮಗಳು ರಾಜಕಾರಣವೆಂಬ ರಾಜಕೀಯ ಸಾಧನವನ್ನು ಗೊಂದಲಮಯಗೊಳಿಸಿವೆ.
ಒಬ್ಬ ಜನಪ್ರತಿನಿಧಿಯು ರಾಜ್ಯ ಶಾಸನಸಭೆಗಳಿಗೆ ಅಥವಾ ಕೇಂದ್ರದ ಸಂಸತ್ತಿಗೆ ಆಯ್ಕೆಯಾಗಲು ಕಾರಣವಾದ ಚುನಾವಣಾ ಜನಾದೇಶವನ್ನು ಉಲ್ಲಂಘಿಸುವುದರಿಂದ ಪಕ್ಷಾಂತರದಂಥಾ ರಾಜಕೀಯ ಕ್ರಮಗಳು ನೈತಿಕವಾಗಿ ಆಕ್ಷೇಪಣಾರ್ಹವಾಗಿರುತ್ತವೆ. ಆದರೆ ಪ್ರಜಾತಂತ್ರದ ಗುಣಮಟ್ಟ ಕುಸಿಯಲು ಆ ಪಕ್ಷಾಂತರಿಯಷ್ಟೇ ಮುಖ್ಯವಾಗಿ ಅಂಥಾ ಪಕ್ಷಾಂತರಗಳಿಂದ ಲಾಭವನ್ನು ಪಡೆಯುವ ರಾಜಕೀಯ ಪಕ್ಷವೂ ಹೊಣೆದಾಯಿಯಾಗಿರುತ್ತದೆ. ಒಂದು ಪಕ್ಷಾಂತರವು ತನ್ನ ಮತದಾರರ ನೈತಿಕ ನೆಲೆಯಿಂದ ರೂಪಿತವಾದ ಸಾರ್ವಜನಿಕ ಕಾರಣಗಳನ್ನು ಬಿಟ್ಟು ಕೇವಲ ಸ್ವಾರ್ಥದಿಂದ ಪ್ರೇರಿತವಾಗಿದ್ದಾಗ ಆತ್ಮಗೌರವವು ಹಾನಿಗೊಳಗಾಗುತ್ತದೆ. ಅಂಥಾ ಪಕ್ಷಾಂತರಿಗಳು ಕೇವಲ ವ್ಯಾವಹಾರಿಕ ರಾಜಕಾರಣದಲ್ಲಿ ಮಾತ್ರ ಬದುಕಬಯಸುತ್ತಾರೆ. ಆದರೆ ಅದರಲ್ಲಿ ಯಾವುದೇ ವಿಮೋಚನಾವಾದಿ ಸತ್ವವಿರುವುದಿಲ್ಲ. ಆದರೆ ಅಂಥಾ ಸತ್ವಗಳೇ ಆಯಾ ರಾಜಕಾರಣಿಯ ವೈಯಕ್ತಿಕ ಮಿತಿಗಳನ್ನು ಮಾತ್ರವಲ್ಲದೆ ಜನಪ್ರತಿನಿಧಿಗಳನ್ನು ಭಾವೀ ಪಕ್ಷಾಂತರಿಯನ್ನಾಗಿ ಮಾಡಬಲ್ಲ ಶಕ್ತಿ ಹೊಂದಿರುವ ರಾಜಕೀಯ ಪಕ್ಷಗಳ ಮಿತಿಯನ್ನು ಮೀರುವಂತೆ ಪ್ರಚೋದಿಸಬೇಕು.
ವಿಮೋಚನವಾದಿ ಆಶಯಗಳಿಗೆ ತೋರುವ ಬದ್ಧತೆಗಳೇ ಒಬ್ಬ ಆದರ್ಶವಾದಿ ರಾಜಕಾರಣಿಯಾಗುವ ಶರತ್ತುಗಳನ್ನು ಪೂರೈಸುತ್ತದೆ. ತನ್ನ ವೈಯಕ್ತಿಕ ಸ್ವಾರ್ಥದ ಮಿತಿಗಳನ್ನು ಮತ್ತು ಆಯಾ ಪಕ್ಷದ ಸ್ವಾರ್ಥಗಳನ್ನು ಮೀರಬಲ್ಲ ನೈತಿಕ ಸ್ಥೈರ್ಯಗಳೇ ಒಂದು ಪ್ರಜಾತಂತ್ರದ ನೈತಿಕ ಗುಣಮಟ್ಟವನ್ನು ಖಾತರಿಗೊಳಿಸುತ್ತದೆ. ಬೇರೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವ ಶಾಸಕ ಹಾಗೂ ಅಂಥವರನ್ನು ಸೇರಿಸಿಕೊಳ್ಳುವ ಪಕ್ಷಗಳಿಬ್ಬರೂ ಸಹ ಈ ಕ್ರಮವನ್ನು ತೆಗೆದುಕೊಳ್ಳಲು ಸ್ವಾರ್ಥವನ್ನು ಮೀರಿದಂv ಒಂದೇ ಒಂದು ಕಾರಣವನ್ನಾದರೂ ಒದಗಿಸಬೇಕಾಗುತ್ತದೆ. ಇಂಥ ಒಂದು ನೈತಿಕ ಮುಂದೊಡಗನ್ನು ತೆಗೆದುಕೊಳ್ಳುವ ಮೂಲಕ ಆ ಪಕ್ಷಾಂತರಿ ಶಾಸಕನ ಆತ್ಮಗೌರವವೂ ಮಾತ್ರವಲ್ಲದೆ ಒಂದು ಸಾರ್ವಜನಿಕ ಸಂಸ್ಥೆಯಾಗಿ ರಾಜಕೀಯ ಪಕ್ಷದ ಆತ್ಮ ಗೌರವವೂ ಹೆಚ್ಚುತ್ತದೆ. ಆದರೆ ಪಕ್ಷಾಂತರದಲ್ಲಿ ತೊಡಗಿರುವವರ ಮಟ್ಟಿಗೆ ಹೇಳುವುದಾದರೆ ಅದು ಒಂದು ವ್ಯಾವಹಾರಿಕ ಸಾಧನವಾಗಿದೆಯೇ ವಿನಾ ಸ್ವಾರ್ಥಾತೀತವಾಗಿಲ್ಲ. ಎಲ್ಲವನ್ನೂ ಅರಗಿಸಿ ಜೀರ್ಣಿಸಿಕೊಳ್ಳಬೇಕೆಂಬ ಧೋರಣೆಯಲ್ಲಿ ಆ ಕಾರಣಗಳ ವ್ಯಾವಹಾರಿಕತೆ ವ್ಯಕ್ತಗೊಳ್ಳುತ್ತದೆ. ಅದು ಮೂಲಭೂತವಾಗಿ ಪಕ್ಷಾಂತರ ಕ್ರಿಯೆಯಿಂದಲೇ ಬೆಳೆದಿರುವ ಪಕ್ಷವೊಂದಕ್ಕೆ ಅದು ತನ್ನ ಶ್ರೇಷ್ಟತೆ ಮತ್ತು ಅಧಿಪತ್ಯವನ್ನು ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆಯ ನೆರಳಲ್ಲಿ ಬೆಳೆಯುವ ಬಯಕೆಯೂ ಆಗಿರುತ್ತದೆ. ತಮ್ಮ ಪಕ್ಷಕ್ಕೆ ಪಕ್ಷಾಂತರ ಮಾಡುವ ಅಥವಾ ತಮ್ಮಲ್ಲಿ ವಿಲೀನಗೊಳ್ಳುವ ಪಕ್ಷಾಂತರಿಗಳ ಮೇಲೆ ಅಧಿಪತ್ಯವನ್ನು ಸಾಧಿಸುವ ಮೂಲಕ ಅವರು ಪಕ್ಷಾಂತರವೆನ್ನುವದು ತಮ್ಮ ರಾಜಕೀಯ ಅಧಿಪತ್ಯ ಮತ್ತು ಸಾಮಾಜಿಕ ಶ್ರೇಷ್ತತೆಯನ್ನು ಸಾಬೀತುಪಡಿಸಲು ಪಡೆದುಕೊಂಡಿರುವ ಪರವಾನಗಿ ಎಂಬಂತೆ ವರ್ತಿಸುತ್ತಾರೆ. ವಾಸ್ತವವಾಗಿ ಪಕ್ಷಾಂತರವು ಈ ಬಗೆಯ ವಿಲೀನ ಪ್ರಕ್ರಿಯೆಯ ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ವ್ಯಕ್ತಿಗಳನ್ನು ಸಾಧನಗಳಂತೆ ಮಾತ್ರ ಪರಿಗಣಿಸುವ ಮೂಲಕ ಈ ಮೇಲಾಧಿಪತ್ಯದ ಪ್ರಕ್ರಿಯೆಯಲ್ಲಿ ತೊಡಗಿರುವವರು ವ್ಯಕ್ತಿಗಳ ನಡುವೆ ಸಾಪೇಕ್ಷ ಅಥವಾ ಭಿನ್ನಭಿನ್ನ ಮೌಲ್ಯಾಂಕ ನೀಡುವ ಧೋರಣೆಯನ್ನು ವ್ಯಕ್ತಪಡಿಸುತ್ತಾರೆಯೇ ಆತ್ಮ ಗೌರವಗಳ ಬುನಾದಿಯಾಗಿರುವ ಸಕಲ ಮನುಷ್ಯರಿಗೂ ಒಂದೇ ಮೌಲ್ಯವೆಂಬ ಧೋರಣೆಯನ್ನಲ್ಲ.
ಒಬ್ಬ ವ್ಯಕ್ತಿಯು ಒಂದು ಸ್ವಗೌರವವುಳ್ಳ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಲು ಒಂದು ಆದರ್ಶ ರಾಜಕೀಯ ವರ್ತುಲದ ಅಗತ್ಯವಿರುತ್ತದೆ. ಆದರೆ ಅಂಥ ಒಂದು ಆದರ್ಶ ರಾಜಕೀಯ ವರ್ತುಲದ ನಿರ್ಮಾಣಕ್ಕೆ ಬೇಕಾದ ಸೈದ್ಧಾಂತಿಕ ಚೌಕಟ್ಟನ್ನು ಸಂವಿಧಾನವೇ ಒದಗಿಸಿದೆ. ಆದರೆ ಎಲ್ಲವನ್ನು ತನ್ನಲೇ ಅರಗಿಸಿಕೊಳ್ಳಬೇಕೆಂಬ ಧೋರಣೆಯೇ ಈ ರಾಜಕೀಯ ಪಕ್ಷಗಳ ಮಿತಿಯೂ ಆಗಿದೆ. ತನ್ನೊಳಗೆ ಬಂದು ಸೇರಿದ ಪಕ್ಷಾಂತರಿಯಲ್ಲಿ ಆತ್ಮ ಗೌರವವನ್ನು ಹುಟ್ಟುಹಾಕಬಲ್ಲ ನೈತಿಕ ಸಂಪನ್ಮೂಲಗಳನ್ನು ಒದಗಿಸುವ ಯಾವ ಸಕಾರಾತ್ಮಕ ಅಜೆಂಡಾಗಳು ಈ ರಾಜಕೀಯ ಪಕ್ಷಗಳಿಗಿಲ್ಲ. ಈ ಪಕ್ಷಗಳು ಪಕ್ಷಾಂತರವನ್ನು ಪ್ರಚೋದಿಸುವುದು ಅವರೊಳಗಿರುವ ಚೈತನ್ಯವನ್ನು ಕ್ರಿಯೆಗಿಳಿಸಲು ಅಲ್ಲ. ಬದಲಿಗೆ ಕೇವಲ ವ್ಯಾವಹಾರಿಕ ಉದ್ದೇಶಗಳಿಗಾಗಿ. ಪಕ್ಷಾಂತರ ಮಾಡಿ ಹೊಸದಾಗಿ ಆಳುವ ಪಕ್ಷವನ್ನು ಸೇರಿಕೊಂಡ ಅಥವಾ ಆಳಲಿರುವ ಪಕ್ಷವನ್ನು ಸೇರಿಕೊಂಡ ಯಾವೊಬ್ಬ ಪಕ್ಷಾಂತರಿಯೂ ಸಹ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರದರ್ಶಿಸಬಲ್ಲ ನೈತಿಕ ಸ್ಥೈರ್ಯವನ್ನು ತೋರಿದ ಒಂದು ಉದಾಹರಣೆಯೂ ಈವರೆಗೆ ಕಂಡುಬಂದಿಲ್ಲ. ಹೀಗಾಗಿ ಈ ವ್ಯಾವಹಾರಿಕ ಮೌಲ್ಯವೇ ಸಾರ್ವತ್ರಿಕ ಮೌಲ್ಯವಾಗಿಬಿಡುತ್ತದೆ ಮತ್ತು ಅಂತರ್ಗತ ಮೌಲ್ಯವುಳ್ಳ ವ್ಯಕ್ತಿಯನ್ನು ಕೇವಲ ಒಂದು ಸರಕನ್ನಾಗಿಸಿಬಿಡುತ್ತದೆ. ಒಂದು ಸರಕಾಗಿಬಿಡುವ ಇಂಥಾ ಪಕ್ಷಾಂತರಿ ರಾಜಕಾರಣಿಗಳು ಅಂತರ್ಗತ ಮೌಲ್ಯವನ್ನೆಲ್ಲಾ ಕಳೆದುಕೊಂಡು ತಮಗಾಗಲೀ, ಪಕ್ಷಕ್ಕಾಗಲೀ ಅಥವಾ ರಾಜಕಾರಣಕ್ಕಾಗಲೀ ಒಂದು ಉನ್ನತ ಮೌಲಿಕ ಮಾನದಂಡವನ್ನು ಸೃಷ್ಟಿಸುವಲ್ಲಿ ವಿಫಲವಾಗುತ್ತಾರೆ. ಹೀಗೆ ಸರಕಾಗಿ ಒಂದು ಸಾರ್ವತ್ರಿಕ ಗುರುತನ್ನು ಪಡೆದವರು ಆಳುವ ಅಥವಾ ಆಳಲಿರುವ ಪಕ್ಷಗಳಿಗೆ ಸುಲಭವಾಗಿ ದಕ್ಕುತ್ತಾರೆ. ಕೇವಲ ವೈಯಕ್ತಿಕ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡುವವರು ಯಾರಿಗೂ ಅನಿವಾರ್ಯರೇನೂ ಆಗುವುದಿಲ್ಲ. ಹೀಗಾಗಿ ಯಾವುದೇ ನಿರ್ದಿಷ್ಟ ಜಾತಿ,ಭಾಷೆ, ಸಿದ್ಧಾಂತ, ಅಥವಾ ಪ್ರದೇಶದ ಮೌಲಿಕ ವ್ಯತ್ಯಾಸಗಳಿಲ್ಲದೆ ಸಾರ್ವತ್ರಿಕ ಗ್ರಾಹಕ ಸರಕುಗಳಾಗಿಬಿಡುವ ಈ ಪಕ್ಷಾಂತರಿಗಳನ್ನು ಅದೇ ಮಾದರಿಯ ಇನ್ನೊಂದು ಸುಲಭದ ಅಥವಾ ಅಗ್ಗದ ಸರಕು ಸಿಕ್ಕಿದಾಗ ಎಲ್ಲವನ್ನೂ ತನ್ನಲೇ ವಿಲೀನಗೊಳಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯುಳ್ಳ ಪಕ್ಷವು ಸುಲಭವಾಗಿ ಕೈಬಿಡುವಂತಾಗುತ್ತದೆ. ಪ್ರಜಾತಂತ್ರದ ಗುಣಮಟ್ಟವು ಆದರ್ಶ ಮಾದರಿಗಳಿಂದಲ್ಲದೆ ಹೇಗೆ ಬೇಕಾದರೂ ಬದಲಿಸಬಲ್ಲ ಮಾದರಿಗಳ ರಾಜಕೀಯ ಉತ್ಪನ್ನಗಳಿಂದ ನಿರ್ಧರಿತವಾಗುವುದು ಅತ್ಯಂತ ದುರದೃಷ್ಟಕರವಾದದ್ದಾಗಿದೆ.