ISSN (Print) - 0012-9976 | ISSN (Online) - 2349-8846

ಆಲೂಗಡ್ಡೆ ರೈತರು ಮತ್ತು ಪೆಪ್ಸಿ ಕಂಪನಿಯ ಸಂಘರ್ಷ

ಪೆಪ್ಸಿ ಕಂಪನಿಯು ರೈತರ ಮೇಲೆ ಹಾಕಿದ್ದ ದಾವೆಗಳನ್ನು ಹಿಂತೆಗೆದುಕೊಂಡಿದೆ. ಆದರೂ ಈ ಗೆಲುವು ಕೆಲವು  ಸ್ವಹಿತಾಸಕ್ತಿಗಳದ್ದೇ ಹೊರತು ರೈತರ ಹಿತಾಸಕ್ತಿಗಳದ್ದಲ್ಲ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕೆಲವು ನಿರ್ದಿಷ್ಟ ಆಲೂ ತಳಿಗಳ ಮೇಲೆ ತನ್ನ ಕಂಪನಿಗಿದ್ದ ಬೌದ್ಧಿಕ ಸ್ವಾಮ್ಯ ಹಕ್ಕನ್ನು ಗುಜರಾತಿನ ಕೆಲವು ರೈತರು ಉಲ್ಲಂಘಿಸಿದ್ದಾರೆಂದು ಪೆಪ್ಸಿ ಕಂಪನಿಯು ಆ ರೈತರ ಮೇಲೆ ಹಾಕಿದ್ದ ದಾವೆಯು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿಬಿಟ್ಟಿತು. ನಮ್ಮ ದೇಶದಲ್ಲಿ ಯಾವುದೇ ವಿಷಯದಲ್ಲಿ ರೈತರೆಂಬ ಪದಬಳಕೆ ಆದರೂ ಸಾಕು ಅಪಾರ ನೈತಿಕ ಆಕ್ರೋಶವನ್ನು ಕೆರಳಿಸುತ್ತದೆಂಬುದನ್ನು ಇದು ಮತ್ತೊಮ್ಮೆ ಸಾಬೀತುಮಾಡಿದೆ. ದೇಶವೊಂದರ ಅರ್ಧಕ್ಕಿಂತ ಹೆಚ್ಚು ಜನರು ಉತ್ಪಾದನಾ ಸಾಧನಗಳ ವಿತರಣೆಗಳಲ್ಲಿ ಅಪಾರ ತಾರತಮ್ಯಕ್ಕೆ ಗುರಿಯಾಗಿರುವ ಮತ್ತು ಆದಾಯಗಳಲ್ಲಿ ಸದಾ ಏರುಪೇರುಗಳಿರುವ ಕೃಷಿ ಕ್ಷೇತ್ರವನ್ನೇ ತಮ್ಮ ಜೀವನೋಪಾಯಕ್ಕೆ ಆಧರಿಸಿರುವಾಗ ಇಂಥಾ ಆತಂಕ ಹಾಗು ಪ್ರತಿಕ್ರಿಯೆಗಳು ಅನಿವಾರ್ಯವೇ ಇರಬೇಕು. ಇಂಥಾ ಸನ್ನಿವೇಶವನ್ನು ಬಲಿಷ್ಠ  ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಅನೂಕೂಲಕ್ಕೆ ತಕ್ಕಂತೆ ಆಟವಾಡಲು ಬಸಿಕೊಳ್ಳಬಹುದು ಎಂಬ ಆತಂಕವನ್ನೂ ತಳ್ಳಿಹಾಕಲು ಬರುವುದಿಲ್ಲ. ಆದರೆ ಈ ಆತಂಕಗಳು ಜನರ ವಿವೇಚನಾ ಶಕ್ತಿಯನ್ನೇ ಕುಂಠಿತಗೊಳಿಸುವುದು ಮಾತ್ರ ಕಳವಳವನ್ನು ಹುಟ್ಟಿಸುತ್ತದೆ. ಅದರಲ್ಲೂ ಮುಖ್ಯವಾಗಿ ಹೊರಗಿನ ದೈತ್ಯ ಶತ್ರುಗಳನ್ನು ಕಲ್ಪಿಸಿಕೊಳ್ಳುವ ಭರದಲ್ಲಿ ಒಳಗಿನ ತಥಕಥಿತ ಸಂತರು ಅಂದರೇ ಭಾರತದ ಅಸಮರ್ಥ ಪ್ರಭುತ್ವವು ಭಾರತದ ಕೃಷಿಯನ್ನು ಅಭಿವೃದ್ಧಿ ಪಥದಿಂದ ಹೊರದೂಡಿ ಸಂಕಷ್ಟಕ್ಕೆ ಸಿಲುಕಿಸಿರುವ ವಾಸ್ತವವನ್ನು ಮರೆಯುವಂತಾಗಬಾರದು.

ಕೆಲವು ಅತಿಮೂಲಭೂತ ವಿಷಯಗಳನ್ನು ಕಾನೂನಿನ ಕಣದಾಚೆಗೆ ನಿಂತು ಅರ್ಥಮಾಡಿಕೊಳ್ಳೋಣ. ಒಂದು ಬಲಿಷ್ಠ ಬಹುರಾಷ್ಟ್ರೀಯ ಕಂಪನಿಯು ತನ್ನ ಮಾರುಕಟ್ಟೆ ಬಲವನ್ನು ಬಸಿ ರೈತರು ತಮಗೆ ಬೇಕಾದ ಆಲೂ ತಳಿಯನ್ನು ಬೆಳೆಯದಂತೆ ನಿರ್ಬಂಧಿಸುತ್ತಿದೆಯೆಂ ಈ ವಿವಾದದಲ್ಲಿ ಒಂದು ಸಹಜ ಪ್ರಶ್ನೆಯು ಉದ್ಭವವಾಗುತ್ತದೆ: ತಮ್ಮ ಆಸುಪಾಸಿನಲ್ಲಿ ತಾವು ಬೆಳೆಯುತ್ತಿರುವ ಆಲೂ ತಳಿಗೆ ಮಾರುಕಟ್ಟೆ ಇಲ್ಲದಿದ್ದರೂ ಮತ್ತು ತಾವು ಬೆಳೆಯುತ್ತಿರುವ ತಳಿಯ ಮಾರುಕಟ್ಟೆಗೆ ಹಲವಾರು ನಿರ್ಬಂಧಗಳಿವೆ ಎಂದು ತಿಳಿದಿದ್ದರೂ ಆ ರೈತರು ಅದೇ ತಳಿಯ ಆಲುಗಡ್ಡೆಯನ್ನು ಬೆಳೆದಿದ್ದೇಕೆ?

ಪೆಪ್ಸಿ ಕಂಪನಿಯ ಸಹಯೋಗದಲ್ಲಿ ಆಲೂ ಉತ್ಪಾದನೆ ಮಾಡುತ್ತಿರುವ ಪ.ಬಂಗಾಳ ಮತ್ತಿತರ ರಾಜ್ಯಗಳ ರೈತರು ತಾವು ಈ ಹಿಂದೆ ಉತ್ಪಾದಿಸುತ್ತಿದ್ದ ಸ್ಥಳೀಯ ತಳಿಗಳಿಗೆ ಹೋಲಿಸಿದಲ್ಲಿ ಪಪ್ಸಿ ಕಂಪನಿಂi ತಳಿಗಳ ಉತ್ಪಾದನಾ ವೆಚ್ಚವೂ ಹೆಚ್ಚು ಮತ್ತು ಇಳುವರಿಯೂ ಕಡಿಮೆ ಎಂದು ಸತತವಾಗಿ ದೂರುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ,  ಕಂಪನಿಯೊಂದಿಗೆ ರೈತರು ಮಾಡಿಕೊಂಡಿರುವ ಮಾರುಕಟ್ಟೆ ಒಪ್ಪಂದವು ಅವರನ್ನು ಉತ್ಪಾದನಾ ನಂತರದ ಏರುಪೇರುಗಳಿಂದಲೂ ರಕ್ಷಿಸುತ್ತಿಲ್ಲ. ಏಕೆಂದರೆ ಆ ಒಪ್ಪಂದಗಳು  ಕಂಪನಿಯ ನಿರೀಕ್ಷಿತ ಗುಣಮಟ್ಟಕ್ಕೆ ತಕ್ಕಹಾಗಿಲ್ಲ ಎನ್ನುವ ನೆಪದಲ್ಲಿ ರೈತg ಸರಕನ್ನು ಕಂಪನಿಯು ತಿರಸ್ಕರಿಸುವುದರಿಂದಲೂ ರಕ್ಷಣೆ ನೀಡುವುದಿಲ್ಲ ಅಥವಾ ಮುಕ್ತಮಾರುಕಟ್ಟೆಗಳು ಸ್ಥಿರವಾಗಿದ್ದಾಗ ಕನಿಷ್ಟ ಅದಕ್ಕೆ ಸರಿಸಮನಾದ ಬೆಲೆಯನ್ನೂ ಸಹ ಖಾತರಿ ಮಾಡುವುದಿಲ್ಲ.

ಆದರೂ ಪಶ್ಚಿಮ ಬಂಗಾಳದ ಕೋಲ್ಡ್ ಸ್ಟೋರೇಜ್ (ಶೀತಲ ಸಂಗ್ರಾಹಕ) ಸಂಸ್ಥೆಯ ಒಂದು ಅಂದಾಜಿನ ಪ್ರಕಾರ ಪೆಪ್ಸಿ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಕಳೆದ ಒಂದು ದಶಕದಲ್ಲಿ ಏಳುಪಟ್ಟು ಹೆಚ್ಚಿದೆ. ಈ ತದ್ವಿರುದ್ಧರೂಪದ ಉದಾಹರಣೆಗಳಿಗೆ ಯಾವುದೇ ಆರ್ಥಿಕ ತರ್ಕವನ್ನು ಒದಗಿಸುವುದು ಕಷ್ಟವಾದರೂ ಅದು ತಳಮಟ್ಟದಲ್ಲಿರುವ ವಾಸ್ತವ ಪರಿಸ್ಥಿತಿಗಳ ಬಗ್ಗೆ ಕಣ್ಣು ತೆರೆಸುವಂತಿದೆ. ಬೆಳೆದ ಬೆಳೆಗೆ ಸಾಕಷ್ಟು ಮಾರುಕಟ್ಟೆ ಅವಕಾಶಗಳಿಲ್ಲದಿರುವ ವಾಸ್ತವಗಳಿಂದಾಗಿಯೇ ರೈತರು ತಮಗೆ ದಕ್ಕಬಹುದಾದ ಆದಾಯಕ್ಕಿಂತ ಜಾಸ್ತಿ ಖಚಿತ ಮಾರುಕಟ್ಟೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿರುವುದನ್ನು ಇದು ಸೂಚಿಸುತ್ತದೆ.

ಕಳೆದ ಮೂರು ದಶಕಗಳಲ್ಲಿ ಆಲೂ ಉತ್ಪಾದನೆಯು ಶೇ.೨೨೭ರಷ್ಟು ಹೆಚ್ಚಿದೆ. ೧೯೮೮-೮೯ರಲ್ಲಿ ಆಲೂ ಉತ್ಪಾದನೆಯು ೧೪.೮೬ ಮಿಲಿಯನ್ ಟನ್ನಿನಷ್ಟು ಇದ್ದದ್ದು ೨೦೧೭-೧೮ರಲ್ಲಿ ೪೮.೬ ಮಿಲಿಯನ್ ಟನ್ನಿಗೆ ಏರಿದೆ. ಅದರೆ ವಿಚಿತ್ರವೇನೆಂದರೆ ಆಲೂಗಡ್ಡೆಯನ್ನು ಎಲ್ಲೆಡೆ ಬಳಸುತ್ತಿದ್ದರೂ ಅದರ ತಲಾವಾರು ಬಳೆಕೆಯ ಪ್ರಮಾಣ ಮಾತ್ರ ಶೇ.೨೨ ರಷ್ಟು ಮಾತ್ರ ಏರಿಕೆ ಕಂಡಿದೆ. ೧೯೮೭-೮೮ರಲ್ಲಿ ತಲಾವಾರು ಆಲೂ ಬಳಕೆ ೧೪ ಕೆಜಿಗಳಷ್ಟಿದ್ದರೆ ೨೦೧೬-೧೭ರಲ್ಲಿ ಅದು ಕೇವಲ ೧೭ ಕೆಜಿಗಳಿಗೆ ಮಾತ್ರ ಏರಿಕೆಯಾಗಿದೆ. ಇಂದು ಭಾರತದಲ್ಲಿ ಅಂದಾಜು ೧೩೩ ಕೋಟಿ ಜನಸಂಖ್ಯೆ ಇದ್ದರೂ ಆಲೂ ಬಳಕೆಯ ಬೇಡಿಕೆಯು ಅದರ ಹಾಲಿ ಉತ್ಪಾದನೆಯ ಶೇ.೫೦ರಷ್ಟು ಮಾತ್ರವಿದೆ.

ಮಾರುಕಟ್ಟೆಯ ಬಗ್ಗೆಯ ಅಗತ್ಯಮಾಹಿತಿಯ ಕೊರತೆ ಮತ್ತು ಶೀತ ಸಂಗ್ರಾಹಕ (ಕೋಲ್ಡ್ ಸ್ಟೋರೇಜ್)ಗಂಥ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿಯೂ ಸರಬರಾಜು ನಿರ್ವಹಣೆಯ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗಿದೆ. ಇಂದು ದೇಶಾದ್ಯಂತ ಉತ್ಪಾದಿಸಿದ ಆಲೂಗಡ್ಡೆಯೆಲ್ಲವನ್ನೂ ಶೀತ ಸಂಗ್ರಾಹಕಗಳಿಗೆ ಸರಬರಾಜು ಮಾಡಿದಲ್ಲಿ ಒಟ್ಟಾರೆ ಉತ್ಪಾದನೆಯ ಶೇ.೭೦ರಷ್ಟನ್ನು ಮಾತ್ರ ಸಂಗ್ರಹಿಸಿಡಬಹುದಾದ ಸಾಮರ್ಥ್ಯ ಮಾತ್ರ ಲಭ್ಯವಿದೆ. ಇದರ ಜೊತೆಗೆ ಸುಧಾರಿತ ತಂಪೀಕರಣ ತಂತ್ರಜ್ನಾನವನ್ನು ಬಳಸಬೇಕೆಂಬ ಶರತ್ತಿನೊಂದಿಗೆ ಕೋಲ್ಡ್ ಸ್ಟೋರೇಜ್‌ಗಳ ಸ್ಥಾಪನಾ ವೆಚ್ಚಕ್ಕೆ ಕೊಡುತ್ತಿದ್ದ ಸಬ್ಸಿಡಿಯನ್ನು ಶೇ.೨೦ರಿಂದ ಶೇ.೪೦ಕ್ಕೆ ಏರಿಸಲಾಗಿದೆ. ಇದು ಒಂದೋ ಬಹುಉಪಯೋಗಿ, ಬಹು ಕಪಾಟಿನ ಮತ್ತು ಹೆಚ್ಚು ವಿದ್ಯುತ್ ಬಳಕೆ ಮಾಡುವ ಸ್ಟೋರೇಜ್ ಸೌಲಭ್ಯಗಳಿಗೆ ಉತ್ತೇಜನ ನೀಡುತ್ತದೆ ಅಥವಾ ಶೀತ ಸಂಗ್ರಾಹಕ ತಂತ್ರಜ್ನಾನ ಕೆಳಗಿನವರೆಗೆ ಪಸರಿಸುವುದನ್ನು ತಡೆಗಟ್ಟುತ್ತದೆ. ಎರಡರಲ್ಲಿ ಯಾವೊಂದು ಸಂಭವಿಸಿದರೂ ಸಣ್ಣ ರೈತರಿಗಂತೂ ಅದು ಎಟುಕುವುದಿಲ್ಲ.

ಮತ್ತೊಂದು ಕಡೆ ಉಳಿದ ಶೇ.೫೦ ಭಾಗದಲ್ಲಿ ಕೇವಲ ಶೇ.೬ರಷ್ಟನ್ನು ಮಾತ್ರ ಇನ್ನಿತರ ಆಲೂ ಉತ್ಪನ್ನ ಉದ್ದಿಮೆಗಳಿಗೆ ಬಳಸಲಾಗುತ್ತದೆ. ೨೦೦೦ದ ಏಪ್ರಿಲ್  ಮತ್ತು ೨೦೧೭ರ ಮಾರ್ಚ್ ನಡುವೆ ಭಾರತಕ್ಕೆ ೭.೫೪ ಬಿಲಿಯನ್ ಡಾಲರ್ (೭೫೪ ಕೋಟಿ ಡಾಲರ್)ಗಳಷ್ಟು ವಿದೇಶಿ ನೇರ ಬಂಡವಾಳವು ಹರಿದು ಬಂದಿದ್ದರೂ ಆಹಾರೋತ್ಪನ್ನ ಉದ್ದಿಮೆಯು ಒಟ್ಟಾರೆ ಕೃಷಿ ಕ್ಷೇತ್ರಕ್ಕೆ ಶೇ.೮.೩೯ರಷ್ಟು ಮೌಲ್ಯ ವರ್ಧನೆಯನ್ನು ಮಾತ್ರ ಸೇರ್ಪಡೆ ಮಾಡಿದೆ. ಸರ್ಕಾರಗಳ ನೀತಿಗಳು ಸಹ ಅದಕ್ಕೆ ತಕ್ಕಹಾಗಿವೆ. ಸರ್ಕಾರದ ಶೇ.೧೦೦ರಷ್ಟು  ವಿದೇಶಿ ನೇರ ಹೂಡಿಕೆಗೆ ಅನುಮತಿ ಒದಗಿಸುವ ನೀತಿಗಳು ಸಹ ಒಂದೋ ಪ್ರಾಥಮಿಕ ಸ್ಥರದ ಉತ್ಪನ್ನಗಳ ಮೇಲೆ ಅಥವಾ ಆಹಾರ ವಸ್ತುಗಳ ಬಿಡಿ ಮಾರಾಟದ ಸುತ್ತಾ ಕೇಂದ್ರೀಕರಿಸಿರುವುದು ಸಹ ಇದೇ ಧೋರಣೆಯ ಪ್ರತಿಫಲನವಾಗಿದೆ.

ಆಲೂ ಉತ್ಪನ್ನಗಳ ಉದ್ದಿಮೆಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ಪ್ರಧಾನವಾಗಿ ಔಪಚಾರಿಕ ವಲಯದ ಸಣ್ಣಪುಟ್ಟ ಉದ್ದಿಮೆಗಳೇ ಹೆಚ್ಚಾಗಿದ್ದು ಅವು  ಶೇ.೫೦ರಷ್ಟು ಮಾರುಕಟ್ಟೆಯನ್ನು ನಿಯಂತ್ರಿಸುವುದರಿಂದ ಈ ಕ್ಷೇತ್ರದಲ್ಲಿ ತಂತ್ರಜ್ನಾನ ವರ್ಗಾವಣೆ ಅಥವಾ ಬಂಡವಾಳ ಹೂಡಿಕೆ ಮತ್ತು ಖಾತರಿ ಮಾರುಕಟ್ಟೆಯ ಅವಕಾಶಗಳು ಸಹ ತುಂಬಾ ಸೀಮಿತವಾಗಿಯೇ ಇವೆ. ಹೀಗಾಗಿ ಈ ಮಾರುಕಟ್ಟೆಯಲ್ಲಿರುವ ಕೆಲವೇ ದೊಡ್ಡ ಮತ್ತು ಸಂಘಟಿತ ಉದ್ದಿಮೆಗಳ ಜೊತೆ ಕರಾರು ಒಪ್ಪಂದವನ್ನು ಮಾಡಿಕೊಳ್ಳುವುದರಿಂದ ಮೇಲಿನ ಮೂರು ಸೌಕರ್ಯಗಳು ದೊರೆಯಬಹುದಾದರೂ, ಈ ದೊಡ್ಡ ಕಂಪನಿಗಳು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತಮ್ಮ ಬೃಹತ್ ಶಕ್ತಿಯನ್ನು ಬಳಸಿಕೊಂಡು ರೈತರಿಗೆ ಅವರ ಶ್ರಮದ ಬೆಲೆಯನ್ನು ಬಿಟ್ಟರೆ ಬೇರೆ ಯಾವ ಲಾಭಾಂಶವನ್ನೂ ಕೊಡದೆ ಹೋಗಬಹುದು. ಆದರೆ ಇದೂ ಕೂಡಾ ಸಂಪೂರ್ಣ ಸತ್ಯವಲ್ಲ. ಮಾರ್ಪಾಡಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಕಾಯಿದೆಯಲ್ಲಿರುವ ಆಯ್ದ ಅವಕಾಶಗಳ ದುರ್ಬಳಕೆಗೆ  (ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಗುತ್ತಿಗೆ ಕೃಷಿಗೆ ಅವಕಾಶವಿಲ್ಲದಿದ್ದರೂ ಸಹಯೋಗಿ (ಕೊಲ್ಯಾಬರೇಟೀವ್) ಕೃಷಿಯ ಹೆಸರಿನಲ್ಲಿ ಗುತ್ತಿಗೆ ಕೃಷಿಗೆ ಆವಕಾಶ ಮಾಡಿಕೊಡುವ ಮೂಲಕ ಅಥವಾ ಕಾನೂನುಬದ್ಧ ಅವಕಾಶವಿರುವ ಗುಜರಾತಿನಂಥ ಕಡೆ ಗುತ್ತಿಗೆ ಕೃಷಿಗೇ ಅವಕಾಶ) ಮಾಡಿಕೊಡುವ ಮೂಲಕ ಈ ಪ್ರಭುತ್ವವೂ ರೈತರನ್ನು ಶೋಷಿಸುವುದರಲ್ಲಿ ಪಾಲ್ಗೊಂಡಿದೆ.

ಹೀಗಾಗಿ ಪೆಪ್ಸಿ ಕಂಪನಿಯು ಕೇಸುಗಳನ್ನು ವಾಪಸ್ ಪಡೆದಿರುವುದನ್ನು ಸಸ್ಯ ಪ್ರಬೇಧಗಳ ಮತ್ತು ರೈತರ ಹಿತಾಸಕ್ತಿಯ ರಕ್ಷಣೆಯ ವಿಷಯದಲ್ಲಿ ಭಾರತದ ಕಾನೂನುಗಳ ವಿಜಯವೆಂದು ಭಾವಿಸಲಾಗದು. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ನೋಡುವುದಾದಲ್ಲಿ ಈ ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ನೈಜ ರೈತ ಹಿತಾಸಕ್ತಿಯು ಒಳಗೊಂಡಿರುವಂತಿಲ್ಲ. ಗುಜರಾತಿನ ಪ್ರಾದೇಶಿಕ ಮಾರುಕಟ್ಟೆಯ ಮೇಲೆ ಕಬ್ಜಾ ಹೊಂದಿರುವ ಪ್ರಾದೇಶಿಕ ಶಕ್ತಿಗಳ ವಿರುದ್ಧ ಪೆಪ್ಸಿ ಕಂಪನಿ ಗುದ್ದಾಟದಲ್ಲಿ ತೊಡಗಿತ್ತು. ಈ ಚುನಾವಣೆಯ ಸಂದರ್ಭದಲ್ಲಿ ಸರ್ಕಾರವು ರೈತ ಪಕ್ಷಪಾತಿ ಧೋರಣೆಯನ್ನು ಪ್ರದರ್ಶಿಸುವ ಮೂಲಕ ತನ್ನ ಲಾಭವನ್ನು ಖಾತರಿಪಡಿಸಿಕೊಂಡಿದೆಯಷ್ಟೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಭಾರತದ ಕೃಷಿ ವೈವಿಧ್ಯತೆಯನ್ನು ನಾಶ ಮಾಡುತ್ತಿರುವ ಬಗ್ಗೆ ಹೋರಾಟಗಾರರು ಮಾಡುತ್ತಿರುವ ಆರೋಪಗಳನ್ನು ಉತ್ತರಿಸುವ ಭರದಲ್ಲಿ ಸರ್ಕಾರದ ಸ್ಪರ್ಧಾತ್ಮಕ ಬೆಂಬಲ ಬೆಲೆ ನೀತಿಗಳ ಮತ್ತು ಕುಸಿಯುತ್ತಿರುವ ಕೃಷಿ ಸಂಶೋಧನಾ ವೆಚ್ಚಗಳಂಥ ನೀತಿಗಳ ಪಾತ್ರವನ್ನು ಕಡೆಗಣಿಸುವಂತಾಗಬಾರದು.

Back to Top