ISSN (Print) - 0012-9976 | ISSN (Online) - 2349-8846

ಶ್ರೀಲಂಕಾದಲ್ಲಿ ಭಯೋತ್ಪಾದಕ ದಾಳಿ

ಬಿಕ್ಕಟ್ಟಿನಿಂದ ಕೂಡಿರುವ ಶ್ರೀಲಂಕಾ ಸರ್ಕಾರದ ಅಸಮರ್ಥತೆಯಿಂದಾಗಿಯೇ ಅಮಾಯಕ ಜೀವಗಳು ಬೆಲೆ ತೆರಬೇಕಾಗಿದೆ

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಶ್ರೀಲಂಕಾದಲ್ಲಿ ೨೦೧೯ರ ಏಪ್ರಿಲ್ ೨೧ರಂದು ನಡೆದ ಭಯೋತ್ಪಾದಕ ದಾಳಿಯು ಕೇವಲ ಆ ದ್ವೀಪರಾಷ್ಟ್ರವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈಸ್ಟರ್ ಹಬ್ಬದ ದಿನ ಕೆಥೋಲಿಕ್ ಚರ್ಚುಗಳಲ್ಲಿ ಮತ್ತು ಪ್ರವಾಸಿಗರು ಹೆಚ್ಚಾಗಿ ಉಳಿಯುವ ಐಷರಾಮಿ ಹೋಟೆಲುಗಳಲ್ಲಿ ಪರಸ್ಪರ ಸಂಯೋಜಿತವಾಗಿ ನಡೆದ ಬಾಂಬ್ ಸ್ಪೋಟಗಳಲ್ಲಿ ೩೫೦ ಜನರು ಬಲಿಯಾಗಿದ್ದಾರೆ. (ಪತ್ರಿಕೆಯು ಅಚ್ಚಿಗೆ ಹೋಗುವ ವೇಳೆಗೆ ಸತ್ತವರ ಸಂಖ್ಯೆ ಅಂದಾಜು ೨೫೩ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ). ಶ್ರೀಲಂಕಾದ ಕೊಚ್ಚಿಕಡೆಯ ಸೆಂಟ್ ಅಂಥೋನಿ ಚರ್ಚ್, ಕುತುವಾಪತೀಯಾದ ಸೇಂಟ್ ಸೆಬಾಸ್ಟಿನ್ ಚರ್ಚ್, ಬಟ್ಟಿಕಲೋವಾದ ಜಿಯೋನ್ ಚರ್ಚ್ ಹಾಗೂ ಶಾಂಗ್ರಿ-ಲಾ, ಕಿಂಗ್ಸ್‌ಬರಿ ಮತ್ತು ಸಿನಾಮಾವ್ ಗ್ರಾಂಡ್ ಹೋಟೆಲುಗಳಲ್ಲಿ ಆತ್ಮಹತ್ಯಾ ಬಾಂಬರುಗಳು ಬಾಂಬ್ ಸ್ಪೋಟ ಮಾಡಿದ್ದಾರೆಂದು ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‌ಐಎಸ್) ಸಂಸ್ಥೆಯು ಈ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವುದಾಗಿಯೂ ವರದಿಯಾಗಿದೆ. ದಾಳಿಯ ಪ್ರಮಾಣ ಮತ್ತು ತೀವ್ರತೆಗಳು, ದಾಳಿಗೆ ಆಯ್ಕೆ ಮಾಡಿಕೊಳ್ಳಲಾದ ಸ್ಥಳಗಳು ಮತ್ತು ಮತ್ತು ಪ್ರಾರ್ಥನೆಗಾಗಿ ಜನರು ಚರ್ಚುಗಳಲ್ಲಿ ಒಟ್ಟಾದಾಗ ನಡೆದಿರುವ ಬಾಂಬ್ ದಾಳಿಯು ನಿಜಕ್ಕೂ ಭಯಾನಕವಾಗಿದೆ. ಇತ್ತೀಚೆಗೆ ನ್ಯೂಜಿಲ್ಯಾಂಡಿನ ಕ್ರೈಸ್ಟ್‌ಚರ್ಚಿನ ಮಸೀದಿಯ ಮೇಲೆ ನಡೆದ  ದಾಳಿಯಲ್ಲಿ ವ್ಯಕ್ತವಾಗಿರುವಂತೆ ಇವು ಇತ್ತೀಚಿನ ಭಯೋತ್ಪಾದಕ ದಾಳಿಗಳ ಮಾದರಿಯಾಗಿಬಿಟ್ಟಿವೆ. ಈ ದಾಳಿಗಳು ಒಂದೆಡೆ ಬಿಕ್ಕಟ್ಟುಗಳಿಂದ ಶಿಥಿಲಗೊಂಡಿರುವ ಶ್ರೀಲಂಕಾದ ರಾಜಕಾರಣದ ದೌರ್ಬಲ್ಯಗಳನ್ನೂ ಮತ್ತೊಂದೆಡೆ ದಕ್ಷಿಣ ಏಶಿಯಾ ಪ್ರದೇಶದಲ್ಲಿ ತೀವ್ರಗೊಳ್ಳುತ್ತಿರುವ ಜನಾಂಗೀಯ ಘರ್ಷಣೆಗಳ ಸಂದರ್ಭದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಸಮುದಾಯಗಳು ಎದುರಿಸುವ ಅಭದ್ರತೆಗಳನ್ನು ಮುನ್ನೆಲೆಗೆ ತಂದಿದೆ.

ಈ ದಾಳಿಯಲ್ಲಿ ದಿಗ್ಭ್ರಾಂತಗೊಳಿಸುವ ವಿಷಯವೇನೆಂದರೆ ಕೆಥೋಲಿಕ್ ಚರ್ಚುಗಳನ್ನು ಗುರಿಯಾಗಿರಿಸಿಕೊಂಡು ದಾಳಿಗಳು ನಡೆಯಬಹುದಾದ ಸಾಧ್ಯತೆಯ ಬಗ್ಗೆ ಪೊಲೀಸ್ ಬೇಹುಗಾರಿಕಾ ಮೂಲಗಳಿದ ವರದಿಯನ್ನು ನೀಡಲಾಗಿತ್ತು ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿ ರಾನಿಲ್ ವಿಕ್ರಮ ಸಿಂಘೆಯವರ ಪ್ರಕಾರ ಆ ಮಾಹಿತಿಯನ್ನು ಅಧಿಕೃತವಾಗಿ ಸಂಬಂಧಪಟ್ತವರಿಗೆ ರವಾನಿಸಿರಲಿಲ್ಲ. ಶ್ರೀಲಂಕಾದ ಸಶಸ್ತ್ರಪಡೆಗಳ ಪದನಿಮಿತ್ತ ಪರಮೋಚ್ಚ ದಂಡನಾಯಕರಾಗಿರುವ ಕಾರಣಕ್ಕಾಗಿ ಆ ದೇಶದ ರಕ್ಷಣಾ ಮತ್ತು ಕಾನೂನು ಸುವ್ಯವಸ್ಥೆಯ ಮಂತ್ರಿಯೂ ಶ್ರೀಲಂಕಾದ ಅಧ್ಯಕ್ಷರೇ ಆಗಿರುವುದರಿಂದ ಬೇಹುಗಾರಿಕಾ ಮಾಹಿತಿಯನುಸಾರ ಮುನ್ನೆಚರಿಕಾ ಕ್ರಮಗಳನ್ನು ತೆಗೆದುಕೊಳ್ಳದ ಗಂಭೀರ ಕರ್ತವ್ಯಲೋಪದ ಹೊಣೆಗಾರಿಕೆಯನ್ನು ಅಧ್ಯಕ್ಷರೇ ಹೊರಬೇಕಾಗುತ್ತದೆ. ಪ್ರಾಯಶಃ ಇದು ಶ್ರೀಲಂಕಾದ ಅಧ್ಯಕ್ಷರು ೨೦೧೮ರ ಅಕ್ಟೋಬರ್‌ನಲ್ಲಿ ಯಾವುದನ್ನು ಸಾಂವಿಧಾನಿಕ ಕ್ಷಿಪ್ರಕ್ರಾಂತಿ ಎಂದು ಬಣ್ಣಿಸಿದರೋ ಆ ನಂತರದಲ್ಲಿ ಕುಸಿದುಬಿದ್ದ ಆಡಳಿತ ಯಂತ್ರಾಂಗದ ಪರಿಣಾಮವೆಂದೇ ಕಾಣುತ್ತದೆ. ಇದಕ್ಕೆ ಪ್ರಧಾನ ಮಂತ್ರಿಗಳು ಸಹ ಹೊಣೆಯನ್ನು ಹೊರಬೇಕಾಗುತ್ತದೆ. ಏಕೆಂದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಧ್ಯಕ್ಷರ ವ್ಯಾಪ್ತಿಗೆ ಹಸ್ತಾಂತರವಾಗುವುದಕ್ಕೆ ಅವರ ಒಪ್ಪಿಗೆಯೂ ಇದ್ದಿತ್ತು. ಶ್ರೀಲಂಕಾದ ಅಧ್ಯಕ್ಷರಾದ ಮೈತ್ರಿಪಾಲ ಸಿರಿಸೇನಾರ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್‌ಎಲ್‌ಎಫ್‌ಪಿ) ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆಯವರ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‌ಪಿ)ಗಳ ನಡುವೆ ನಡೆಯುತ್ತಿರುವ ಘರ್ಷಣೆಯು ಈಗಾಗಲೇ ನೂರಾರು ಜನರನ್ನು ಬಲಿತೆಗೆದುಕೊಂಡಿದೆ. ಒಂದು ದುರಂತ  ವಿಪರ್ಯಾಸವೆಂದರೆ ಕೇವಲ ಒಂದು ದಶಕದ ಕೆಳಗಷ್ಟೇ ಆ ದೇಶ ಭೀಕರ ಅಂತರ್ಯುದ್ಧದಿಂದ ಜರ್ಝರಿತವಾಗಿತ್ತು. ಹೀಗಾಗಿ ಜನಾಂಗೀಯ ಸಾಮರಸ್ಯದ ಬೃಹತ್ ಜವಾಬ್ದಾರಿಯನ್ನು ಹೊತ್ತುಕೊಂಡೇ ೨೦೧೫ರಲ್ಲಿ ಈ ದುರ್ಬಲ ಸರ್ಕಾರವು ಅಧಿಕಾರಕ್ಕೆ ಬಂದಿತ್ತು.  ಆದರೆ ಆ ದೇಶ ಕಷ್ಟಪಟ್ಟು ಮರುರೂಪಿಸಿಕೊಂಡಿದ್ದ ಅಸ್ಥಿರ ಸಾಮಾಜಿಕ ಹೊಂದಾಣಿಕೆಗಳು ಅದೇ ಸರ್ಕಾರದ ಅಸಮರ್ಥತೆಯಿಂದಾಗಿಯೇ ಮತ್ತೊಮ್ಮೆ ಕುಸಿದುಬೀಳುವ ಅಪಾಯವನ್ನು ಎದುರಿಸುತ್ತಿದೆ.

ಜನಾಂಗೀಯ ಶ್ರೇಷ್ಠತೆ ಮತ್ತು ಸರ್ವಾಧಿಕಾರದ ಧೋರಣೆಯನ್ನು ಪ್ರತಿನಿಧಿಸುವ ಮಾಜಿ ಅಧ್ಯಕ್ಷ ಮಹೀಂದ್ರ ರಾಜಪಕ್ಸೆಯವರು  ಈ ಜನಾಂಗೀಯ ಮರುಸಾಮರಸ್ಯದ  ನೀತಿಗಳು ದೇಶದ ಭದ್ರತಾ ಪಡೆಗಳನ್ನು ಮತ್ತು ದೇಶದ ಭದ್ರತೆಯನ್ನು ಅವಗಣನೆ ಮಾಡುತ್ತಿದೆಯೆಂದು ಈಗಾಗಲೇ ಟೀಕಾಪ್ರಹಾರವನ್ನು ಪ್ರಾರಂಭಿಸಿದ್ದಾರೆ. ಶ್ರೀಲಂಕಾದಲ್ಲಿ ಈ ವರ್ಷಾಂತ್ಯದಲ್ಲಿ ಚುನಾವಣೆಗಳು ನಡೆಯಬೇಕಿರುವುದರಿಂದ ಇಂಥಾ ಧೋರಣೆಗಳು ಸಧೃಡಗೊಳ್ಳುತ್ತಾ ಹೋಗಬಹುದು. ಮಾತ್ರವಲ್ಲದೆ ಶ್ರೀಲಂಕಾದ ಅಧ್ಯಕ್ಷರಲ್ಲಿರುವ ತುರ್ತುಪರಿಸ್ಥಿತಿಯನ್ನು ಹೇರುವ ಹಾಗೂ ಇನ್ನಿತರ ಅಪಾರ ಅಧಿಕಾರಗಳು ಅದಕ್ಕೆ ಮತ್ತಷ್ಟು ಉತ್ತೇಜನವನ್ನೂ ಕೊಡಬಹುದು. ಅಂತಹ ಧೋರಣೆಗಳು ಸಮಾಜದಲ್ಲಿ ಸಧೃಢಗೊಳ್ಳುತ್ತಾ ಹೋದಲ್ಲಿ ಶ್ರೀಲಂಕಾದ ಅಲ್ಪಸಂಖ್ಯಾತ ಸಮುದಾಯದಲ್ಲಿ ಸದಾ ಮನೆಮಾಡಿರುವ ಅಭದ್ರತಾ ಭಾವನೆಗಳು ಮತ್ತಷ್ಟು ಉಲ್ಬಣಗೊಳ್ಳಲಿದೆ. ಐಎಸ್‌ಐಎಸ್ ನಂತ ಸಂಘಟನೆಗಳು ತಮ್ಮ ಭಯೋತ್ಪಾದನ ಪ್ರಚಾರ ತಂತ್ರಗಳ ಮೂಲಕ ಅಂಥಾ ಅಭದ್ರತಾ ವಾತಾವರಣವನ್ನು ನಿರಂತರಗೊಳಿಸುವ ಪ್ರಯತ್ನವನ್ನು ಮಾಡುತ್ತಿವೆ.

ಅದೇನೇ ಇದ್ದರೂ ಹಾಲಿ ನಡೆದ ಭಯೋತ್ಪಾದಕ ದಾಳಿಗೆ ಶ್ರೀಲಂಕಾದೊಳಗಿನ ಜನಾಂಗೀಯ ಘರ್ಷಣೆಗಳೊಂದಿಗೆ ನೇರ ಸಂಬಂಧವನ್ನು ಕಲ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಶ್ರೀಲಂಕಾದ ಮುಸ್ಲಿಮರು ಮತ್ತು ಶ್ರೀಲಂಕಾದ ಕ್ರಿಶ್ಚಿಯನ್ನರ ನಡುವೆ ಘರ್ಷಣೆಯ ಯಾವುದೇ  ಇತಿಹಸವಿಲ್ಲ. ಬದಲಿಗೆ ಆ ಎರಡೂ ಸಮುದಾಯಗಳು ಬಹುಸಂಖ್ಯಾತ ಬೌದ್ಧ ಉಗ್ರಗಾಮಿಗಳ ದಾಳಿಗಳಿಗೆ ಗುರಿಯಾಗಿವೆ. ಆದರೂ ಈ ದಾಳಿಯು ಮಾತ್ರ ದೇಶದ ಸಾಮಾಜಿಕ ಹಂದರದ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಮುಸ್ಲಿಮರ ವಿರುದ್ಧ ಪ್ರತ್ಯೇಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಆಗ್ರಹಗಳನ್ನು ಕೆಲವು ಸಂಸದರು ಮಾಡುತ್ತಿರುವ ಬಗ್ಗೆ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣಗಳು ನಡೆಯುತ್ತಿರುವ ಬಗ್ಗೆ ಮತ್ತು ಪ್ರತೀಕಾರ ಕ್ರಮಗಳಿಗೆ ಗುರಿಯಾಗುವ ಭೀತಿಯಿಂದ ನೆಗೋಂಬೋ ರೇವುಪಟ್ಟಣದಿಂದ ೭೦೦ಕ್ಕೂ  ಹೆಚ್ಚು   ಅಹಮದೀಯ ಮುಸ್ಲಿಮರು ತಲೆಮರೆಸಿಕೊಂಡು ಓಡಿಹೋಗಿರುವ ಬಗ್ಗೆ ವರದಿಗಳು ಬರುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಸಿಂಹಳದ ಬೌದ್ಧ ಉಗ್ರಗಾಮಿ ಸಂಘಟನೆಯಾದ ಭೋದು ಬಾಲ ಸೇನಗಳಂತಹ ಸಂಘಟನೆಗಳಿಂದ ಮುಸ್ಲಿಂ ಸಮುದಾಯಗಳು ಬಹಳಷ್ಟು ಬಾರಿ ದಾಳಿಗಳಿಗೆ ಗುರಿಯಾಗಿವೆ. ೧೯೮೦ ಮತ್ತು ೧೯೯೦ರ ದಶಕಗಳಲ್ಲಿ ಜಾಫ್ನಾ ಪ್ರಾಂತ್ಯದಲ್ಲಿ ಮುಸ್ಲಿಮರು ಅದರಲ್ಲೂ ತಮಿಳು ಜನಾಂಗೀಯ ಮುಸ್ಲಿಮರು ಲಿಬರೇಷನ್ ಟೈಗರ್ಸ್ ಆಫ ತಮಿಳ್ ಈಳಂನ ದೌರ್ಜನ್ಯಗಳಿಗೆ ತುತ್ತಾಗಿದ್ದರು. ಇದಲ್ಲದೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿನ ಕೆಲವು ತೀವ್ರಗಾಮಿ ಶಕ್ತಿಗಳು ಸೌದಿ ಅರೇಬಿಯಾದಿಂದ ಧನ ಸಹಾಯವನ್ನು ಪಡೆದುಕೊಳ್ಳುವ ವಹಾಬಿಸಂನ ತೀವ್ರಗಾಮಿ ಪ್ರಭಾವಕ್ಕೆ ಗುರಿಯಾಗುತ್ತಿರುವ ಬಗ್ಗೆಯೂ ಕಳವಳಗಳು ವ್ಯಕ್ತವಾಗುತ್ತಿವೆ. ಹೀಗೆ ದೇಶದಲ್ಲಿರುವ ಸಂಘರ್ಷಮಯ ವಾತಾವರಣವನ್ನು ಸರಿಯಾಗಿ ನಿಭಾಯಿಸಬೇಕೆಂದರೆ ಶ್ರೀಲಂಕಾದ ರಾಜಕೀಯ ನಾಯಕತ್ವವು ಅದರಲ್ಲೂ ಅಧಿಕಾರದಲ್ಲಿರುವವರು ೨೦೧೫ರಲ್ಲಿ ನೀಡಲಾದ ಭರವಸೆಗಳಿಗೆ ಬದ್ಧರಾಗಿರುವುದು ಅತ್ಯಗತ್ಯ. ಅದನ್ನು ಬಿಟ್ಟು ಅವರು ದೇಶವನ್ನು ಕಾಡಿದ ಬಹುಸಂಖ್ಯಾತ ಮೇಲರಿಮೆ ಮತ್ತು ಸರ್ವಾಧಿಕಾರದ ಭೂತಗಳನ್ನು ಮತ್ತೆ ಬಡಿದೆಬ್ಬಿಸಬಾರದು. ಇಲ್ಲದಿದ್ದಲ್ಲಿ ಬಲಪಂಥೀಯ ತೀವ್ರಗಾಮಿ ಶಕ್ತಿಗಳು ಬಲಗೊಂಡು ಜಾಗತಿಕ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ.

ಭಾರತೀಯ ದೃಷ್ಟಿಕೋನದಿಂದ ನೋಡುವುದಾದರೆ ಈ ಭಯೋತ್ಪಾದಕ ದಾಳಿಯ ನಂತರದಲ್ಲಿ ನರೇಂದ್ರ ಮೋದಿಯವರು ಆ ದುರಂತವನ್ನೂ ಸಹ ತಮ್ಮ ಚುನಾವಣಾ ರ್‍ಯಾಲಿಗಳಲ್ಲಿ ಅತ್ಯಂತ ಲಜ್ಜಾಹೀನವಾಗಿ ಬಳಸಿಕೊಂಡಿದ್ದು ತುಂಬಾ ಕಳವಳಕಾರಿ ಸಂಗತಿಯಾಗಿದೆ. ಈ ಖಂಡನೀಯ ವರ್ತನೆಗಳನ್ನು ಶ್ರೀಲಂಕಾದ ವಿಶ್ಲೇಷಕರು ಮತ್ತು ನಾಗರಿಕರು ಸರಿಯಾಗಿಯೇ ಟೀಕಿಸಿದ್ದಾರೆ. ಭಾರತೀಯ ಪ್ರಧಾನಿಯೊಬ್ಬರು ಇಂತಹ ನಿಲುವುಗಳನ್ನು ತೆಗೆದುಕೊಳ್ಳುವುದರಿಂದ ದಕ್ಷಿಣ ಏಷಿಯಾ ಪ್ರಾಂತ್ಯದಲ್ಲಿ ಈಗಾಗಲೇ ಅಸ್ಥಿರವಾಗಿರುವ ಭಾರತದ ಪರಿಸ್ಥಿತಿಯು ಮತ್ತಷ್ಟು ಬಲಹೀವಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು.

Back to Top