ISSN (Print) - 0012-9976 | ISSN (Online) - 2349-8846

ಎಲೆಕ್ಟೊರಲ್ ಬಾಂಡ್ಗಳು ಮತ್ತು ಅದರಾಚೆಗಿನ ಸಮಸ್ಯೆಗಳು

ಚುನಾವಣಾ ಸುಧಾರಣೆಗಳು ನಿಜಕ್ಕೂ ಒಂದು ಗಣನೀಯ ಬದಲಾವಣೆ ತರಬೇಕೆಂದರೆ ದೇಣಿಗೆ ಕೊಡುವವರ ಅನಾಮಿಕತೆಂii ಆಚೆಗೂ ಇರುವ ಸಮಸ್ಯೆಗಳನ್ನೂ ಪರಿಗಣಿಸಬೇಕು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದ ಚುನಾವಣೆಗಳಲ್ಲಿ ಹರಿಯುವ ಹಣವು ಎಲ್ಲಿಂದ ಬರುತ್ತದೆ? ಭಾರತದ ಚುನಾವಣಾ ಆಯೋಗವು ೧೯೫೨ರಲ್ಲಿ ನಡೆದ ಪ್ರಥಮ ಚುನಾವಣೆಯಿಂದ ಹಿಡಿದು ೨೦೧೪ರವರೆಗೆ ನಡೆದ ಚುನಾವಣೆಗಳಲ್ಲಿ ಆಗಿರಬಹುದಾದ ವೆಚ್ಚಗಳ ಒಂದು ಅಂದಾಜನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ೧೯೫೨ರಲ್ಲಿ ಒಂದು ಲೋಕಸಭಾ ಕ್ಷೇತ್ರಕ್ಕೆ ತಲಾ ೨.೬ ಲಕ್ಷ ರೂ ವೆಚ್ಚವಾಗಿದ್ದರೆ ೨೦೧೪ರ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೆ ಸರಾಸರಿ ೭.೧೩ ಕೋಟಿ ರೂ. ವೆಚ್ಚವಾಗಿರಬಹುದೆಂದು ಅಂದಾಜು ಮಾಡಲಾಗಿದೆ. ಅಂದರೆ ೧೯೫೨ಕ್ಕೆ ಹೋಲಿಸಿದಲ್ಲಿ ತಲಾವಾರು ವೆಚ್ಚವು  ೨೭೪ ಪಟ್ಟು ಹೆಚ್ಚಾಗಿದೆ. ಈ ಪರಿ ಹೆಚ್ಚಳವನ್ನು ಗಮನಿಸಿದ ಯಾರಿಗೇ ಆದರೂ ಭಾರತದ ರಾಜಕೀಯ ಪಕ್ಷಗಳ ಹಿಂದೆ ಯಾರೋ ಅತ್ಯಂತ ದಯಾಳು ಮತ್ತು ನಿಗೂಢ ಪ್ರಾಯೋಜಕರು ಇರಲೇ ಬೇಕೆಂಬ ಅನುಮಾನ ಬಾರದೇ ಇರದು. ಅಮೆರಿಕಾದ ಕ್ಯಾಲಿಫೋರ್ನಿಯಾ ಮತ್ತು ಬರ್ಕ್‌ಲಿ ವಿಶ್ವವಿದ್ಯಾಲಯವು ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡಿನ ೨೫೭೭ ರಾಜಕಾರಣಿಗಳ ಚುನಾವಣಾ ವೆಚ್ಚಗ ಬಗ್ಗೆ ಒಂದು ಅಧ್ಯಯನವನ್ನು ನಡೆಸಿದೆ. ಅದರ ವರದಿಯ ಪ್ರಕಾರ ಹಾಲಿ ಸಂಸತ್ ಸದಸ್ಯರು ಲೋಕಸಭೆಗೆ ಮರುಚುನಾವಣೆಯನ್ನು ಬಯಸಿ ಸ್ಪರ್ಧಿಸುವ ಸಂದರ್ಭದಲ್ಲಿ ಚುನಾವಣಾ ವೆಚ್ಚಗಳು ಅತಿ ಹೆಚ್ಚಿರುತ್ತದೆ ಮತ್ತು  ಅದು ಅವರ ಆದಾಯದ ಶೇ.೪೪-೪೭ರಷ್ಟಾಗುತ್ತದೆ. ಈ ಅಧ್ಯಯನದ ತಾತ್ಪರ್ಯವೆಂದರೆ ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಧನಸಂಪನ್ಮೂಲವನ್ನು ಒದಗಿಸುವುದೆಂಬುದು ತನ್ನಂತೆ ತಾನೇ ಒಂದು ಆರ್ಥಿಕತೆಯಾಗಿದ್ದು ಇದರ ಮೇಲಿರುವ ಪ್ರಭುತ್ವ ಹಿಡಿತವು ನಿಗೂಢ ಧನ ಸಹಕಾರವು ಹೆಚ್ಚಾಗಲು ಉತ್ತೇಜನ ನೀಡುತ್ತದೆ. ಹೀಗಾಗಿಯೇ ಎನ್‌ಡಿಎ ಸರ್ಕಾರವು  ರಾಜಕೀಯ ಪಕ್ಷಗಳ ಧನ ಸಹಕಾರದ ವಿಷಯಗಳಲ್ಲಿನ ಪಾರದರ್ಶಕತೆಯ ಬಗ್ಗೆ ಎಷ್ಟೇ ಕೊಚ್ಚಿಕೊಂಡರೂ ಅದು ಜಾರಿ ಮಾಡಿರುವ ಎಲೆಕ್ಟೊರಲ್ ಬಾಂಡ್ ಯೋಜನೆಯು ಅತ್ಯಂತ ಅಪಾರದರ್ಶಕವಾಗಿಯೇ ಇರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ಭಾರತದಲ್ಲಿ ಚುನಾವಣಾ ಸುಧಾರಣೆಯ ಇತಿಹಾಸವು ಅಷ್ಟೇನೂ ಉತ್ಸಾಹದಾಯಕವಾಗಿಲ್ಲ. ಅದರಲ್ಲಿ ಚುನಾವಣಾ ಮತ್ತು ರಾಜಕೀಯ ಧನಸಂಪನ್ಮೂಲಗಳ ಹರಿವನ್ನು ನಿಯಂತ್ರಿಸುವ ನಿಯಮಗಳನ್ನು ಗಟ್ಟಿಯಾಗಿ ಜಾರಿಗೊಳಿಸಲು ಮತ್ತು ಅನುಸರಿಸುವಂತೆ ಮಾಡಲು ಬೇಕಾದ ರಾಜಕೀಯ ಇಚ್ಚಾಶಕ್ತಿಯು ಕಂಡುಬರುವುದಿಲ್ಲ. ಆದರೆ ಈವರೆಗೆ ಚುನಾವಣಾ ಧನಸಂಪನ್ಮೂಲದ ನಿಯಮಗಳನ್ನು ಪರೋಕ್ಷವಾಗಿ ಉಲ್ಲಂಘಿಸುತ್ತಿದ್ದ ಚುನಾವಣಾ ರಾಜಕಿಯ ಪಕ್ಷಗಳ ವಂಚನೆಗೆ ಎಲೆಕ್ಟೊರಲ್ ಬಾಂಡ್ ವ್ಯವಸ್ಥೆಯು ಈಗ ಶಾಸನಾತ್ಮಕ ರಕ್ಷಣೆಯನ್ನೇ ಒದಗಿಸುತ್ತದೆ. ಈ ವ್ಯವಸ್ಥೆಯ ಅತ್ಯಂತ ಕಳವಳ ಹುಟ್ಟಿಸುವ ಸಂಗತಿಯೆಂದರೆ ಇದರಡಿ ಹಣ ನೀಡುವವರ ಮತ್ತು ಪಡೆದುಕೊಳ್ಳುವವರಿಬ್ಬರ ಕಪ್ಪುಹಣದ ಆದಾಯಗಳು ಶಾಸನಬದ್ಧವಾಗಿ ಬಿಳಿಯಾಗಿಬಿಡುತ್ತವೆ. ಉದಾಹರಣೆಗೆ ಎನ್‌ಡಿಎ ಸರ್ಕಾರವು  ೨೦೧೬ರ ಹಣಕಾಸು ಕಾಯಿದೆಯಲ್ಲಿನ ವಿದೇಶೀ ಮೂಲ ಎಂಬುದರ ನಿರ್ವಚನವನ್ನು ಸಡಿಲಗೊಳಿಸಿ ಶೆಲ್ ಕಂಪನಿಗಳಿಂದಲೂ ರಾಜಕೀಯ ದೇಣಿಗೆ ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಮತ್ತೊಂದು ಕಡೆ ವಿದೇಶಿ ದೇಣಿಗೆಯ ಪ್ರಮಾಣಕ್ಕೆ ಇದ್ದ ನಿರ್ಬಂಧವನ್ನು ತೆಗೆದುಹಾಕಿದ್ದಲ್ಲದೆ ಅದನ್ನು ೪೨ ವರ್ಷಗಳಷ್ಟು ಹಿಂದಿನ ಚುನಾವuಗಳವರೆಗೂ ಪೂರ್ವಾನ್ವಯವಾಗುವಂತೆ ೨೦೧೦ರ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ)ಗೆ ತಿದ್ದುಪಡಿ ಮಾಡುವ ಮೂಲಕ ಈ ಹಿಂದಿನ ಚುನಾವಣೆಗಳಲ್ಲಿ ಹೀಗೆ ಅಕ್ರಮವಾಗಿ ದೇಣಿಗೆಯನ್ನು ಪಡೆದುಕೊಂಡಿದ್ದರ ಬಗ್ಗೆ ನ್ಯಾಯಾಲಯಗಳು ನಡೆಸುತ್ತಿದ್ದ ವಿಚಾರಣೆಯಿಂದಲೂ ರಾಜಕೀಯ ಪಕ್ಷಗಳು ಪಾರಾಗುವಂತೆ ನೋಡಿಕೊಂಡಿದೆ. ೨೦೧೪ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಈ ಬಗೆಯ ಅಕ್ರಮಗನ್ನು ಎಸಗಿದ್ದವೆಂದು ದೆಹಲಿ ನ್ಯಾಯಾಲಯ ಹೇಳಿತ್ತು. ಅಷ್ಟು ಮಾತ್ರವಲ್ಲದೆ ೨೦,೦೦೦ ರೂ,ಗಳಿಗಿಂತ ಕಡಿಮೆ ಮೊತ್ತದ ದೇಣಿಗೆಗಳ ಅನಾಮಧೇಯತೆಗೆ ಅವಕಾಶ ಮಾಡಿಕೊಡುವಂತೆ ೧೯೫೧ರ ಪ್ರಜಾ ಪ್ರತಿನಿಧಿ ಕಾಯಿದೆ ಮತ್ತು ೧೯೬೧ರ ಆದಾಯ ತೆರಿಗೆ ಕಾಯಿದೆಗಳಿಗೂ ತಿದ್ದುಪಡಿ ತರಲಾಗಿದೆ. ಆದರೆ ದೇಣಿಗೆ ಕೊಡುವವರು ಈ ಪ್ರಮಾಣದ ಮೊತ್ತವನ್ನು  ಎಷ್ಟು ಬಾರಿ ದೇಣಿಗೆ ಕೊಡಬಹುದು ಎಂಬ ಬಗ್ಗೆ ಕಾಯಿದೆಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ.  ವಿಪರ್ಯಾಸವೆಂದರೆ ನೋಟು ನಿಷೇಧದ ಮೂಲಕ ಕಪ್ಪುಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆವೆಂದು ಕೊಚ್ಚಿಕೊಳ್ಳುವ ಸರ್ಕಾರವೇ ಇಂಥಾ ತಿದ್ದುಪಡಿಗಳನ್ನೂ ಜಾರಿಗೆ ತಂದಿರುವುದು. ಈ ಎಲೆಕ್ಟೊರಲ್ ಬಾಂಡ್ ವ್ಯವಸ್ಥೆಯು ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆಗೆ ಧಕ್ಕೆ ತರುತ್ತದೆಂದು ಚುನಾವಣಾ ಆಯೋಗವು ಸರಿಯಾಗಿಯೇ ಆಕ್ಷೇಪಿಸಿದೆ. ಆದರೆ ಅದರ ಆಕ್ಷೇಪಣೆಯು ಎಲ್ಲಾ ಪಕ್ಷಗಳಿಗೂ ಸಮಾನ ಭೂಮಿಕೆಯನ್ನು ಒದಗಿಸಿಕೊಡಬೇಕೆಂಬ ಸೀಮಿತ ನೆಲೆಯಿಂದ ಹುಟ್ಟುತ್ತಿದೆಯೇ ವಿನಃ ಸಾರ್ವತ್ರಿಕ ವಯಸ್ಕ ಮತದಾನದ ಆಶಯಗಳನ್ನು ಉಳಿಸಿಕೊಳ್ಳಬೇಕೆಂಬ ಪ್ರೇರಣೆಯಿಂದಲ್ಲ. ಆದರೆ ಚುನಾವಣೆಗಳು ಹೆಚ್ಚೆಚ್ಚು ಸ್ಪರ್ಧಾತ್ಮಕ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ಚುನಾವಣೆಗಳಲ್ಲಿ ಸಮಾನ ಭೂಮಿಕೆಯೆಂಬುದು ಮರೀಚಿಕೆಯಾಗುತ್ತಿದೆ. ಚುನಾವಣೆಗಳು ಹೆಚ್ಚೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ಗೆಲ್ಲುವ ಅವಕಾಶಗಳು ಕಡಿಮೆ ಇರುವ ಪಕ್ಷಗಳು ಅಪಾಯದಿಂದ ಪಾರಾಗಲು ಹೆಚ್ಚೆಚ್ಚು ಹಣಬಲವನ್ನು ಅವಲಂಬಿಸುವುzರಿಂದ ಚುನಾವಣಾ ಕಣವು ನಗದೀಕರಣಗೊಳ್ಳುವ ಸಂಭವವೂ ಸಹ ಹೆಚ್ಚಾಗುತ್ತಾ ಹೋಗುತ್ತದೆ. ಅದೇ ಸಮಯದಲ್ಲಿ ಚುನಾವಣೆಯಲ್ಲಿ ತಮ್ಮನ್ನು ಸ್ಪರ್ದಿಯಾಗಿಸಲು ಅಥವಾ ಓಟಿಗೊಂದು ನೋಟು ಇತ್ಯಾದಿಗಳ ಹೆಸರಲ್ಲಿ ಹಣದ ಪಾವತಿಯು ಹೆಚ್ಚಾಗುವುದು, ಅದರಿಂದ ಸ್ಪರ್ಧಿಗಳ ಸಂಖ್ಯೆಯೂ ಹೆಚ್ಚಾಗುವುದು, ಆ ಮೂಲಕ ವಿಭಜಿತ ಮತದಾನವಾಗುವುದು ಹಾಗೂ ಅದರಿಂದಾಗಿ ಪ್ರಜಾತಂತ್ರದ ಪ್ರಾತಿನಿಧಿಕ ಸ್ವರೂಪಕ್ಕೆ ಧಕ್ಕೆ ಒದಗುವ ವಿಷವೃತ್ತದಲ್ಲಿ ಚುನಾವಣಾ ಪ್ರಕ್ರಿಯೆಗಳು ಸಿಲುಕಿಕೊಳ್ಳುತ್ತವೆ. ಇಂಥಾ ಸಂದರ್ಭದಲ್ಲಿ ಒಟ್ಟಾರೆ ಚುನಾವಣಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಖಾತರಿ ಮಾಡಬೇಕಾದ ಚುನಾವಣಾ ಆಯೋಗದಂಥ ಯಾವುದೇ ಸಾಂವಿಧಾನಿಕ ನಿಯಂತ್ರಣಾ ಸಂಸ್ಥೆಗಳು ಇದರ ಬಗ್ಗೆ ಸ್ಪರ್ಧಿಸುವ ಪಕ್ಷಗಳ ರಾಜಕೀಯ ಇಚ್ಚಾಶಕ್ತಿಯನ್ನು ಎಷ್ಟಿದೆಯೆಂಬುದರ ಮೇಲೂ ನಿಗಾ ಇರಿಸುವಷ್ಟು ಎದೆಗಾರಿಕೆಯನ್ನೂ ತೋರಿಸಬೇಕು.

ಒಂದು ನೈತಿಕ ಚುನಾವನಾ ಪ್ರಕ್ರಿಯೆಗಳನ್ನು ನಡೆಸಲು ಹಣದ ಪ್ರಸರಣೆಯು ಅಡ್ಡಿಯೆಂದು  ಚುನಾವಣಾ ಆಯೋಗವು ಭಾವಿಸಿದ್ದಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ೪೦ ಲಕ್ಷದಿಂದ ೭೦ ಲಕ್ಷಕ್ಕೇರಿಸಿದ್ದೇಕೆ? ಅದೂ ಅಯೋಗವು ನಿಗದಿಪಡಿಸಿದ ಮೊತ್ತದ ಶೇ.೨೦-೩೦ರಷ್ಟು ಮಾತ್ರ ವೆಚ್ಚ ಮಾಡಿರುವುದಾಗಿ  ಪ್ರಮುಖ ಚುನಾವಣಾ ಪಕ್ಷಗಳ ಪ್ರಮುಖ ಅಭ್ಯರ್ಥಿಗಳ ಸ್ವಘೋಷಿತ ಲೆಕ್ಕಪತ್ರವು ಘೋಷಿಸುತ್ತಿರುವಾಗ ಈ ಏರಿಕೆಗೆ ಅರ್ಥವೇನಿತ್ತು? ಅದಕ್ಕಿಂತ ಮಿಗಿಲಾಗಿ ಒಂದು ಕ್ಷೇತ್ರದ ಅಭ್ಯರ್ಥಿಯು ಚುನಾವಣೆಯಲ್ಲಿ ಸ್ಪರ್ಧಿಸಲು ಇಂತಿಷ್ಟು ಹಣವೇ ಸಾಕು ಎಂದು ಚುನಾವಣಾ ಆಯೋಗ ಹೇಗೆ ನಿಗದಿ ಪಡಿಸಲು ಸಾಧ್ಯ? ಅಬ್ಯರ್ಥಿಗಳ ಘೋಷಿತ ಲೆಕ್ಕಾಚಾರಗಳು ನಿಗದಿಪಡಿಸಿದ ಮೊತ್ತಕಿಂತ ಕಡಿಮೆ ತೋರುತ್ತಿದ್ದರೂ ಆಯೋಗವೇ ಅದರ ಗರಿಷ್ಟ ಪ್ರಮಾಣವನ್ನು ಹೆಚ್ಚಿಸುವುದರ ಮೂಲಕ ಏನು ಹೇಳುತ್ತಿದೆ? ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾಡುತ್ತಿರುವ ವೆಚ್ಚಕ್ಕಿಂತ ಕಡಿಮೆಮೊತ್ತವನ್ನು ದಾಖಲಿಸುತ್ತಿದ್ದಾರೆಂಬುದನ್ನೂ  ಮತ್ತು ಅದನ್ನು ನಿಯಂತ್ರಿಸುವಲ್ಲಿ ತನ್ನ ಉಸ್ತುವಾರಿ ವ್ಯವಸ್ಥೆಯು ಸಮರ್ಥವಾಗಿಲ್ಲವೆಂಬುದನ್ನೂ ಅದು ಮೌನವಾಗಿ ಒಪ್ಪಿಕೊಳ್ಳುತ್ತಿದೆಯೇ?

ಇದರ ಬಗ್ಗೆ ಹಲವಾರು ಶಿಫಾರಸ್ಸುಗಳು ಮತ್ತು ಆಯೋಗಗಳ ಅಧ್ಯಯನ ವರದಿಗಳು ಕೊಳೆಯುತ್ತಾ ಬಿದ್ದಿದ್ದರೂ ಚುನಾವಣೆಗಳ ವೆಚ್ಚವನ್ನು ಮತ್ತು ಅದರ ದೇಣಿಗೆಯ ಬಗೆಯನ್ನು ನಿಯಂತ್ರಿಸಲಾಗದಿರುವುದು ಏನನ್ನು ಸೂಚಿಸುತ್ತಿದೆ? ಅದು  ರಾಜಕೀಯ ದೇಣಿಗೆಯ ವಿಷಯದಲ್ಲಿ ಪ್ರಭುತ್ವ ನಿರ್ದೇಶಿತ ಮುಕ್ತ ಮಾರುಕಟ್ಟೆ ನೀತಿಯನ್ನು ಅನುಸರಿಸುತ್ತಿರುವುದರಿಂದ ನಮ್ಮ ಸಾಂಸ್ಥಿಕ ಸಂರಚನೆಗಳು ವಿರೂಪಗೊಂಡಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ರಾಜಕೀಯ ಪಕ್ಷಗಳು ಮತ್ತವರಿಗೆ  ದೇಣಿಗೆ ನೀಡುವವರ ಸಂಬಂಧಗಳು ಬಹಿರಂಗಗೊಳ್ಳುವುದರಿಂದ ಪ್ರಭುತ್ವದ ನೀತಿಗಳು ಹೆಚ್ಚೆಚ್ಚು ಮತದಾರ ಕೇಂದ್ರಿತವಾಗಬಲ್ಲದು. ಆದರೆ ಚುನಾವಣಾ ಆಯೋಗ ಮತ್ತೀಗ ಸುಪ್ರೀಂ ಕೋರ್ಟಿನಂತಹ ಇತರ ನಿಯಂತ್ರಣಾ ಸಂಸ್ಥೆಗಳು ಈಗಲೂ ಸಹ ೮೫ ಕೋಟಿ ಮತದಾರರ ಹಿತಾಸಕ್ತಿಗಿಂತ ಹೆಚ್ಚಾಗಿ ಕೆಲವೇ ದೇಣಿಗೆ ನೀಡುವ ದಾತರ ಹಿತಾಸಕ್ತಿಯನ್ನು ಮಾತ್ರ ಪರಿಶೀಲಿಸುತ್ತಿವೆ.  ಆದರೆ ಈ ದೂರದೃಷ್ಟಿಯಿಲ್ಲದ ರಾಜಕೀಯ ಕೆಸರೆರಚಾಟದಲ್ಲಿ ಚುನಾವಣಾ ಸುಧಾರಣೆಗಳ ಮೇಲೆ ನಿಜವಾದ ಪ್ರಭಾವ ಬೀರಬಹುದಾದ ವಿಷಯಗಳಾಗಿದ್ದ ಚುನಾವಣಾ ವೆಚ್ಚಗಳನ್ನು ಸೂತ್ರೀಕರಿಸುವ, ಮಾದರಿ ನೀತಿ ಸಂಹಿತೆಯ ಅವಧಿಯಾಚೆಗೂ ರಾಜಕಿಯ ಪಕ್ಷಗಳಮೇಲೆ ನಿಗಾ ಇರಿಸುವ, ಮತ್ತು ಚುನಾವಣಾ ವ್ಯವಸ್ಥೆಯ ಸಂರಚನೆಯಲ್ಲೇ ಬರಬೇಕಿರುವ ಬದಲಾವಣೆಗಳ ವಿಷಯಗಳು ಹಿಂದಕ್ಕೆ ಸರಿದುಬಿಟ್ಟಿವೆ.

Back to Top