ISSN (Print) - 0012-9976 | ISSN (Online) - 2349-8846

ದುರ್ಬಲ ಚುನಾವಣಾ ಅಯೋಗ

ಭಾರತದ ಚುನಾವಣಾ ಅಯೋಗವು ಮತಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯಕಾರಿ ಮಾದರಿಗಳೆಲ್ಲವನ್ನೂ ತಡೆಗಟ್ಟುವಷ್ಟು ಸಂಸಿದ್ಧವಾಗಿದೆಯೇ?

 

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ದೇಶದ ಪ್ರಜಾತಾಂತ್ರಿಕ ಸಂಸ್ಥೆಗಳ ಸಂರಕ್ಷಣೆ ಮತ್ತು ಆರೋಗ್ಯಗಳು ೨೦೧೯ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳನ್ನು ಆಧರಿಸಿದೆ. ಭಾರತದ ಚುನಾವಣಾ ಅಯೋಗವು ತನ್ನನ್ನೂ ಒಳಗೊಂಡಂತೆ ದೇಶದ ಇತರ ಎಲ್ಲಾ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಸಂರಕ್ಷಿಸಿಕೊಳ್ಳುವ ಲುವಾಗಿ ಭೀತಿಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಸಂಘಟಿಸುವ ಬೃಹತ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಆದರೆ ಈ ಪ್ರಜಾತಂತ್ರಿಕ ಸಂಸ್ಥೆಗಳ ಕಾರ್ಯನಿರ್ವಹಣೆಗಳ ದುರ್ಬಳಕೆ ಮಾಡಬಹುದಾದ ಸ್ವರೂಪಗಳು ಸಂಕೀರ್ಣಗೊಳ್ಳುತ್ತಿದೆ. ಆದ್ದರಿಂದ ಅದರ ಸಂಪೂರ್ಣ ಅರಿವು ಮತ್ತು ಹಿಡಿತವಿನ್ನೂ ಪಡೆದುಕೊಳ್ಳದ ಚುನಾವಣಾ ಅಯೋಗ ಪಕ್ಷಪಾತಿಯಾಗಿಬಿಡುವ ದೊಡ್ಡ ಅಪಾಯವನ್ನು ಎದುರಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ವಿವಾದಕ್ಕೀಡಾಗಿರುವ ಪಿಎಂ ನರೇಂದ್ರ ಮೋದಿ ಎಂಬ ಮೋದಿಯವರ ಅತ್ಮಕಥಾನಕವುಳ್ಳ ಸಿನಿಮಾದ ಬಿಡುಗಡೆಯ ಬಗ್ಗೆ ಅಯೋಗವೂ ಯಾವ ನಿರ್ಧಾವನ್ನು ತೆಗೆದುಕೊಳ್ಳದೆ ಧೃಢವಾದ ಅನಿಶ್ಚತತೆಯನ್ನೇ ವ್ಯಕ್ತಪಡಿಸುತ್ತಾ ಬಂದಿದೆ. ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್ (ಮೋದಿ: ಸಾಮನ್ಯ ಮನುಷ್ಯನೊಬ್ಬನ ಪಯಣ) ಎಂಬ ಶೀರ್ಷಿಕೆಯ ೧೦ ಕಂತುಗಳ ವೆಬ್ ಧಾರಾವಾಹಿಯು ಕೂಡಾ ಬಿಡುಗಡೆಗೊಳ್ಳುತ್ತಲಿದೆ. ಈ ಹಿಂದಿನ ೨೦೧೪ ಮತ್ತು ೨೦೧೭ರ ಚುನಾವಣೆಗಳಲ್ಲೂ ಮೋದಿಯನ್ನು ವೈಭವೀಕರಿಸುವ ಹಲವಾರು ಪ್ರಚಾರ ಸಿನಿಮಾಗಳು ಪ್ರಕರಣಗಳೆನ್ನೆದುರಿಸಿದ್ದವು. ಈ ಪ್ರಚಾರಾತ್ಮಕ ಸಿನಿಮಾಗಳು ಮೋದಿಯ ಬಗ್ಗೆ ಅವಿರ್ಮಶಾತ್ಮಕ ಪ್ರಶಂಸೆ ಮತ್ತು ಆದರಗಳನ್ನು ಪ್ರಕಟಿಸುತ್ತವೆ. ಹಾಗೂ ಅದೇ ಸಮಯದಲ್ಲಿ ಸಿನಿಮಾದಲ್ಲಿರುವ ವ್ಯಕ್ತಿಗೆ ಮತ್ತು ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸ್ಥಾನಮಾನಗಳನ್ನು ತಂದುಕೊಡುತ್ತವೆ. ಚುನಾವಣಾ ಪ್ರಕ್ರಿಯೆಗಳು ಇಷ್ಟು ನಿಚ್ಚಳವಾಗಿ ದುರ್ಬಳಕೆಯಾಗುತ್ತಿದ್ದರೂ ಚುನಾವಣಾ ಅಯೋಗವು ಯಾವ ಸ್ವಪ್ರೇರಿತ ಕ್ರಮಗಳನ್ನು ಕೂಡಾ ತೆಗೆದುಕೊಳ್ಳದಂತೆ ತಡೆಹಿಡಿದಿರುವುದೇನು? ಚುನಾವಣಾ ಅಯೋಗವು ತಾನು  ರೂಪಿಸಿರುವ ಮಾದರಿ ನೀತಿ ಸಂಹಿತೆಯನ್ನು ತಾನೇ ಗಂಭೀರವಾಗಿ ಪರಿಗಣಿಸುವುದಿಲ್ಲವೇ? ಒಂದು ವೇಳೆ ಗಂಭೀರವಾಗಿ ಪರಿಗಣಿಸುತ್ತಿದ್ದಲ್ಲಿ ಇಂತಹ ಉಲ್ಲಂಘನೆಗಳನ್ನು ಅದು ಹೇಗೆ ಪರಿಗಣಿಸಲಿದೆ?

ಮೋದಿಯ ಪ್ರಚಾರಾಂದೋಲನವು ೨೦೧೪ರ ಚುನಾವಣೆಯಲ್ಲಿ ಬಿಜೆಪಿಯು ಜಯಗೊಳಿಸುವುದರೊಂದಿಗೇನೂ ಮುಕ್ತಾಯವಾಗಲಿಲ್ಲ; ಈ ಅವಧಿಯಲ್ಲಿ ಪ್ರಧಾನಿ ಕಾರ್ಯಾಲಯವು ಒಂದು ಬಾರಿಯೂ ಪತ್ರಿಕಾ ಗೋಷ್ಟಿಯನ್ನಾಗಲೀ ಅಥವಾ ಸಂವಾದವನ್ನಾಗಲೀ ಏರ್ಪಡಿಸದಿದ್ದರೂ, ಮುಖ್ಯವಾದ ವಿಷಯಗಳ ಬಗ್ಗೆ ಪ್ರಧಾನಿಗಳು ದೇಶವನ್ನುದ್ದೇಶಿಸಿ ಮಾಡಿದ ಭಾಷಣಗಳೆಲ್ಲಾ ಒಂದು ಪರಿಣಾಮಕಾರಿ ಪ್ರಚಾರ ಭಾಷಣಗಳಾಗಿಯೇ ಇರುತ್ತಿದ್ದವು. ಹಿಂದಿನ ಸರ್ಕಾರಗಳಿಗಿಂತ ಭಿನ್ನಾವಾಗಿ ಈ ಸರ್ಕಾರವು ವ್ಯೂಹಾತ್ಮಕ ವಿಷಯಗಳ ಬಗ್ಗೆ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಪಂಡಿತ ಭಾಷೆಯನ್ನು ಬಿಟ್ಟು ಆಡು ಭಾಷೆಯನ್ನು ಬಳಸುತ್ತಾ ಅತ್ಯಂತ ಸೂಕ್ಷ್ಮವಾಗಿ ಮತಾಭಿಪ್ರಾಯಗಳ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿದೆ. ಉದಾಹರಣೆಗೆ ಪ್ರಧಾನಿಗಳು ಮನ್ ಕಿ ಬಾತ್ ಆಡುವಾಗ ತಮ್ಮನ್ನು ತಾವು ಸೇವಕನೆಂದೂ, ಚೌಕಿದಾರನೆಂದೂ ಸಂಬೋಧಿಸಿಕೊಳ್ಳುತ್ತಾರೆ ಅಥವಾ ನೋಟು ನಿಷೇಧವನ್ನು ಒಪ್ಪಿಕೊಳ್ಳುವಂತೆ ರಾಷ್ಟ್ರೀಯ ದೂರದರ್ಶನದಲ್ಲಿ ಭಾಷಣ ಮಾಡುತ್ತಾ ಕಣ್ಣೀರು ಸುರಿಸುತ್ತಾರೆ. ಇದರಿಂದಾಗಿ ಜನರು ಅವರ ಬಗ್ಗೆ ಅನುಕಂಪ ತೋರಿಸುವ ಅನಿವಾರ್ಯಕ್ಕೊಳಗಾಗುತ್ತಾರೆ. ದೇಶವನ್ನೂ, ದೇಶದ ಸಮಸ್ಯೆಗಳನ್ನೂ, ಅಭಿವೃದ್ಧಿಯ ಪ್ರಶ್ನೆಯನ್ನೂ ದೇಶದ ಜನರು ಎನ್‌ಡಿಎ ಸರ್ಕಾರದ ಕನ್ನಡಕದಿಂದಲೇ ನೋಡಲು ಪ್ರಾರಂಭಿಸಿರುವಾಗ ಇಂಥಾ ನೈತಿಕ ದುರ್ಬಳಕೆಗಳ ಪರಿಣಾಮವನ್ನು ಅಳೆಯಲು ಸಾಧ್ಯವೇ? ಸರ್ಕಾರದ ಈ ಅನುದಿನದ ಅವತಾರವು ಅತ್ಯಂತ ಸೂಕ್ಷ್ಮವಾಗಿ ನೇಯಲ್ಪಟ್ಟ ರಾಜಕೀಯ ರಣತಂತ್ರದ ಭಾಗವೆಂಬುದು ಜನರಿಗೆ ಗೊತ್ತಿಲ್ಲವೆಂದೇನಲ್ಲ. ಆದರೆ ಜನರ ವ್ಯಕ್ತಿಗತ ಧಾರ್ಮಿಕ, ವ್ಯಾವಹಾರಿಕ ಮತ್ತು ನೈತಿಕ ಆಸಕ್ತಿಗಳಿಗೆ ಪೂರಕವಾಗಿರುವಷ್ಟು ಕಾಲ ಜನರೂ ಸಹ ಅವುಗಳು ಮಾಡುವ  ಸಾಂವಿಧಾನಾತ್ಮಕ ಮೌಲ್ಯಗಳ  ಉಲ್ಲಂಘನೆಯನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ.

ಚುನಾವಣಾ ಅಯೋಗವು ತನ್ನ ಕ್ರಮಗಳನ್ನು ಕೇವಲ ನಮೋ ಟಿವಿಯ ವಿವರಗಳನ್ನು ಕೇಳುವುದಕ್ಕೆ, ಆಕಾಶವಾಣಿಯಿಂದ ಸಮಜಾಯಿಷಿಯನ್ನು ಪಡೆದುಕೊಳ್ಳುವುದಕ್ಕೆ, ರೈಲ್ವೆ ಸಚಿವಾಲಯದಿಂದ ಪ್ರತಿಕ್ರಿಯೆ ನಿರೀಕ್ಷಿಸುವುದಕ್ಕೆ, ಹಾಗು ತನ್ನ ಜವಾಬ್ದಾರಿಯನ್ನು  ಸೆನ್ಸಾರ್ ಮಂಡಳಿಗೆ ವರ್ಗಾಯಿಸುವುದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುವ ಮೂಲಕ ಸರ್ಕಾರಿ ಯಂತ್ರಾಂಗಗಳು ಮಾಡಬಹುದಾದ ದುರ್ಬಳಕೆಯ ಪ್ರಮಾಣಕ್ಕೆ ತಕ್ಕಂತೆ ತನ್ನನು ತಾನು ಸಿದ್ಧಗೊಳಿಸಿಕೊಳ್ಳುವುದರಲ್ಲಿ ವಿಪಲವಾಗಿದೆಯೆಂದು ಸ್ಪಷ್ಟಪಡಿಸುತ್ತಿದೆ. ಈ ಎಲ್ಲಾ ಸಂಸ್ಥೆಗಳು ವಿವಿಧ ಮಟ್ಟಗಳಲ್ಲಿ ಮಾಡುತ್ತಿರುವ ನೀತಿ ಸಂಹಿತೆಯ ಉಲ್ಲಂಘನೆಗಳನ್ನು ಗಮನಿಸಿದರೆ ಬ್ರಾಂಡ್ ಮೋದಿ ಎಷ್ಟು ವ್ಯಾಪಕವಾಗಿದೆಯೆಂಬುದು ಅರ್ಥವಾಗುತ್ತದೆ.

ಚುನಾವಣಾ ಅಯೋಗದ ನಡವಳಿಕೆಗಳು ಪಕ್ಷಪಾತಿಯಾಗಿರುವಂತೆ ಕಾಣಿಸಿಕೊಳ್ಳುತ್ತಿರುವುದರಿಂದ ಮತ್ತು ಚುನಾವಣಾ ಕಣದಲ್ಲಿ ಅಸಮತೆಯು ಎದ್ದುಕಾಣುತ್ತಿರುವುದರಿಂದ ಚುನಾವಣಾ ಅಯೋಗವು ನ್ಯಾಯಸಮ್ಮತವಾಗಿ ಕಾರ್ಯ ನಿರ್ವಹಿಸಬಲ್ಲದೇ ಎಂಬ ಬಗ್ಗೆ ಇದ್ದ ಅನುಮಾನಗಳು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಆಳುವ ಪಕ್ಷದ ಬಳಿ ಅಪಾರವಾದ ಸಂಪನ್ಮೂಲವು ಕೇಂದ್ರೀಕರಣಗೊಂಡಿರುವುದರಿಂದ ಮತ್ತು ಆ ಪಕ್ಷವು ಸಮಾಜ ವಿಭಜಕ ಮತ್ತು ನಂಜುಪೂರಿತ ಪ್ರಚಾರಗಳಲ್ಲೇ ತೊಡಗಿಸಿಕೊಂಡಿರುವುದರಿಂದ ಈ ಅಸಮತೆಯು ಉಂಟಾಗಿದೆ. ಯೋಗಿ ಆದಿತ್ಯನಾಥ್ ಅವರು ಭಾರತದ ಸೇನೆಯನ್ನು ಮೋದಿ ಸೇನಾ ಎಂದು ಉಲ್ಲೇಖಿಸಿರುವ ಬಗ್ಗೆ ಚುನಾವಣಾ  ಅಯೋಗವು ಕಾರಣ ಕೋರಿ ಪತ್ರ ಬರೆದಿದೆ.  ರಾಜಸ್ಥಾನದ ರಾಜ್ಯಪಾಲರು ಮೋದಿಯನ್ನು ಮರು ಆಯ್ಕೆ ಮಾಡಬೇಕೆಂದು ಬಹಿರಂಗವಾಗಿ ಕರೆಕೊಟ್ಟಿರುವ ಬಗ್ಗೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ಆದರೂ  ಚುನಾವಣಾ ಅಯೋಗವು ನೀತಿ ಸಂಹಿತೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಯಾವ ಕ್ರಮಗಳು ಜನೋನ್ಮಾದ, ಧರ್ಮ ಮತ್ತು ಬಂಡವಾಳ ಬಲಗಳಿಂದ ಶಕ್ತಗೊಂಡಿರುವ ಮೋದಿ ಪ್ರಚಾರವನ್ನು ಅಂಕೆಯಲ್ಲಿಡುವಷ್ಟು ಶಕ್ತವಾಗಿಲ್ಲ.

ವಾಸ್ತವಿಕ ಆಡಳಿತ ಮತ್ತು ಶಬ್ದಾಡಂಬರಗಳ ಪ್ರಚಾರಗಳ ನಡುವಿನ ಗೆರೆಯು ನಿರಂತರವಾಗಿ ಮಸುಕಾಗಿಸುತ್ತಿರುವುದರಿಂದ ಚುನಾವಣಾ ಪ್ರಕ್ರಿಯೆಗಳ ದುರ್ಬಳಕೆಗಳ ಪ್ರಮಾಣ, ಸ್ವರೂಪ ಮತ್ತು ಮೂಲಗಳು  ಮರೆಯಾಗಿಹೋಗುತ್ತಿವೆ. ಶಬ್ದಾಡಂಬರಗಳನ್ನು ಪ್ರಕ್ರಿಯೆಗಳ ದುರ್ಬಳಕೆ ಎಂದು ಭಾವಿಸಬಹುದೇ? ಚುನಾವಣ ಅಯೋಗವು ಸಿನಿಮಾ, ಟಿವಿ ಮತ್ತು ಮುದ್ರಣ ಮಾಧ್ಯಮಗಳ ಚಟುವಟಿಕೆಗಳ ಬಗ್ಗೆ ನಿಗಾ ಇರಿಸಬೇಡವೇ? ಮಾದರಿ ನೀತಿ ಸಂಹಿತೆಗಳ ಉಲ್ಲಂಘನೆಯನ್ನು ತಡೆಗಟ್ಟುವುದಕ್ಕಾಗಿ ಕೈಗೊಳ್ಳಬೇಕಿರುವ ಮೊಟ್ಟ ಮೊದಲ ಕ್ರಮವೆಂದರೆ ಪ್ರಚಾರಕಾಗಿ ಬಳಸುತ್ತಿರುವ ಮಾಧ್ಯಮಗಳಲ್ಲಿರುವ ವೈವಿಧ್ಯತೆಯನ್ನು ಪರಿಗಣಿಸುವುದೇ ಆಗಿದೆ.  ಹಾಗೂ ಮತಪ್ರಕ್ರಿಯೆಗಳನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯ ಮತ್ತು ಅದನ್ನು ಹೇಗೆ ತಡೆಗಟ್ಟಲು ಸಾಧ್ಯ ಎಂಬ ಬಗ್ಗೆ ಅಯೋಗವು ತನ್ನ ಮೂಲಭೂತ ತಿಳವಳಿಕೆಯನ್ನು ಪುನರ್‌ರೂಪಿಸಿಕೊಳ್ಳಬೇಕಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top