ISSN (Print) - 0012-9976 | ISSN (Online) - 2349-8846

ನ್ಯಾಯ್ ಎಂಬ ಹಕ್ಕು

ನಾಗರಿಕರ ಹಕ್ಕುಗಳ ಬಗ್ಗೆ ಸಂವೇದನಾಶೀಲವಾಗಿರುವ ಸಾರ್ವಜನಿಕ ಸಂಸ್ಥೆಗಳು ಆದಾಯ ವರ್ಗಾವಣೆಯನ್ನು ಸಮರ್ಥವಾಗಿ ಮಾಡಬಲ್ಲವು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಈ ದೇಶದ ಶೇ.೨೦ರಷ್ಟು ಕಡು ಬಡವ ಕುಟುಂಬಗಳಿಗೆ ಕನಿಷ್ಟ ಆದಾಯವನ್ನು ಖಾತರಿಗೊಳಿಸು ಅಥವ ನ್ಯೂನತಮ್ ಆದಾಯ್ ಯೋಜನೆಯು (ನ್ಯಾಯ್) ಒಂದು ಮೆಚ್ಚಿಕೊಳ್ಳಹುದಾದ ಭರವಸೆಯಾಗಿದೆ. ಅದು ಈ ದೇಶದ ಬಡವರಲ್ಲಿ ಕನಿಷ್ಟ ಅರ್ಥಿಕ ಚೈತನ್ಯವನ್ನು ತುಂಬಲು ಒಂದು ಜನಕಲ್ಯಾಣ ಯೋಜನೆಯ ಅಗತ್ಯದ ನೈತಿಕ ಅನಿವಾರ್ಯತೆಯನ್ನು ಮುನ್ನೆಲೆಗೆ ತಂದಿದೆ. ಆಳುವ ಸರ್ಕಾರವು ಕಲ್ಯಾಣ ಯೋಜನೆಯ ಹೆಸರಿನಲ್ಲಿ ಆಯ್ದ ಮೂಲಭೂತ ಸೌಕರ್ಯ ಹಾಗೂ ಸೇವೆಗಳನ್ನು ಮಾತ್ರ ಒದಗಿಸುತ್ತಾ ಸಾಮಾಜಿಕ ಸಂರಕ್ಷಾ ಜಾಲವನ್ನು ದುರ್ಬಲಗೊಳಿಸುತ್ತಿದ್ದ ಸಂದರ್ಭದಲ್ಲಿ ಈ ಭರವಸೆ ಮಹತ್ವಪೂರ್ಣವಾಗಿದೆ.

ಕಳೆದ ಕೆಲ ದಿನಗಳಿಂದ ಈ ಯೋಜನೆಯ ವಿಶ್ವಾಸಾರ್ಹತೆಯ ಬಗ್ಗೆ ನಡೆಯುತ್ತಿರುವ ಚರ್ಚೆಯು ಈ ಯೋಜನೆಯ ಫಲಾನುಭವಿಗಳು ಇದನ್ನು ದೇಣಿಗೆ ಅಥವಾ ಸೌಲಭ್ಯವೆಂದು ಭಾವಿಸದೆ ಕನಿಷ್ಟ ಆದಾಯ ಖಾತರಿಯನ್ನು ಒಂದು ಭದ್ರತೆಯಾಗಿ ಪರಿಗಣಿಸಬೇಕೆಂದು ಪ್ರತಿಪಾದಿಸುತ್ತಾ ಯೋಜನೆಯ ಉತ್ತರದಾಯಿತ್ವವನ್ನು ಫಲಾನುಭವಿಗಳ ಮೇಲೆ ವರ್ಗಾಯಿಸಿದೆ. ಸಾಮಾನ್ಯವಾಗಿ ರಾಜಕೀಯ ಭರವಸೆಗಳು ಸಾಮಾಜಿಕ ಭದ್ರತೆಯನ್ನು ಸರ್ಕಾರವು ಕೊಡುವ ಅನುದಾನಗಳಿಗೆ ಸಂವಾದಿಯಾಗಿ ಬಳಸುವುದರಿಂದ ಸಾರ್ವಜನಿಕರ ಮನಸ್ಸಿನಲ್ಲೂ ಈ ಪ್ರಶ್ನೆ ರಿಂಗಣಿಸುತ್ತಿರುತ್ತದೆ. ಇದು ಘನತೆಯುಳ್ಳ ಬದುಕು ಮತ್ತು ನ್ಯಾಯದ ಬಗ್ಗೆ ಸಂವಿಧಾನವು ನಾಗರಿಕರಿಗೆ ಕೊಟ್ಟಿರುವ ಹಕ್ಕುಗಳನ್ನು ಒದಗಿಸುವಲ್ಲಿನ ವೈಫಲ್ಯಗಳಿಗೆ ಸರ್ಕಾರವನ್ನು ಉತ್ತರದಾಯಿಗಳನ್ನಾಗಿ ಮಾಡುವ ಪ್ರಕ್ರಿಯೆಗಳನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಆದರೆ ಭರವಸೆಗಳನ್ನು ಈ ರೀತಿ ಗ್ರಹಿಸಿಕೊಳ್ಳುವ ಪರಿಪಾಠಗಳಿಗೆ  ಸಾಮಾಜಿಕ ಭದ್ರತೆ ಮತ್ತು ಸರ್ಕಾರಿ ಅನುದಾನಗಳ ಬಗ್ಗೆ ನಮ್ಮ ಸಾಮಾನ್ಯ ಪ್ರಜ್ನೆಗಿರುವ ಪೂರ್ವಗ್ರಹ ಅಥವಾ ಸಂವೇದನಾ ಶೂನ್ಯತೆ ಅಥವಾ ಅನುಮಾನಗಳು ಕಾರಣವೇ? ಅಥವಾ ಅವು ಮಾನವ ಜೀವ ಅಥವಾ ಘನತೆಯ ಚೈತನವ್ಯವನ್ನು ಸಮಗ್ರವಾಗಿ ಕಡೆಗಣಿಸುವ ಇಂಥಾ ಸೇವೆಗಳನ್ನು ಒದಗಿಸುವ ಸಾಂಸ್ಥಿಕ ರಚನೆಗಳಿಂದ ಪ್ರೇರಿತವಾಗಿದೆಯೇ?

ಗ್ಯಾರಂಟಿ ಎನ್ನಿ, ಬೆಂಬಲ ಅಥವಾ ಅನುದಾನ ಎನ್ನಿ..ಈ ಎಲ್ಲ ನುಡಿಗಟ್ಟಿಗಳೂ ಪ್ರಭುತ್ವಕ್ಕೆ ಆರೋಪಿಸಲಾಗಿರುವ ಪೋಷಕ ಸ್ಥಾನವನ್ನು ಸೂಚಿಸುತ್ತದೆ. ಆದರೆ ನಾಗರಿಕರ ಜೀವ ಮತ್ತು ಜೀವನಗಳ ರಕ್ಷಣೆಯಾಗಬೇಕೆಂಬ ಸಾಂವಿಧಾನಿಕ ಹಕ್ಕುಗಳ ಭಾಗವಾಗಿ ಆ ಸೇವೆಗಳನ್ನು ಒದಗಿಸುತ್ತಿರುವಾಗ ಅದನ್ನು ನೀಡುವ ಪ್ರಭುತ್ವವನ್ನು ಪೋಷಕ ಸ್ಥಾನದಲ್ಲಿಟ್ಟು ಕಾಣುವ ಪರಿಭಾಷೆಗಳು ಎಷ್ಟು ಸೂಕ್ತ? ಕನಿಷ್ಟ ಆದಾಯವನ್ನು ಖಾತರಿಗೊಳಿಸುವ ಮೂಲಕ ಕನಿಷ್ಟ ಬದುಕುಳಿಯಲು ಬಡವರು ತೆಗೆದುಕೊಳ್ಳುವ ಕೀಲಕ ನಿರ್ಧಾರಗಳ ಮೇಲಿನ ಒತ್ತಡವನ್ನು ನಿವಾರಿಸಬಹುದು ಮತ್ತದು ಬಡವರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆಂದು ಅಧ್ಯಯನಗಳು ಹೇಳುತ್ತವೆ. ಆದರೆ ಆ ಯೋಜನೆಗಳನ್ನು ಮೇಲಿನಿಂದ ಕೆಳಗೆ ಹರಿಯುವಂಥಾ ಸಾಂಸ್ಥಿಕ  ರಚನೆಗಳ ಮೂಲಕ ಒದಗಿಸುವಾಗ ಖಾತರಿಗೊಳಿಸಬೇಕಾದ ಹಕ್ಕುಗಳು ಸರ್ಕಾರವು ನೀಡುವ ಸೌಲಭ್ಯ ಅಥವಾ ಅನುದಾನವೆಂಬಂತೆ ಕಾಣತೊಡಗುತ್ತದೆ. ಹಾಗೂ ಅವುಗಳು ಆಯಾ  ರಾಜಕೀಯ  ಉದ್ದೇಶಗಳಿಗೆ ತಕ್ಕಂತೆ ಮಣಿಯುವ ಯೋಜನೆಗಳಾಗಿ ಬಿಡುತ್ತವೆ. ನಿರ್ದಿಷ್ಟ ಸಮುದಾಯಗಳನ್ನು ಮಾತ್ರ ಉದ್ದೇಶಿಸಿ ರೂಪಿಸಲಾದ ಈ ಹಿಂದಿನ ಸಾಮಾಜಿಕ ಸುರಕ್ಷಾ ಯೋಜನೆಗಳಾಲ್ಲೂ ನಮ್ಮ ಅನುಭವ ಇದನ್ನೇ ಹೇಳುತ್ತದೆ. ಹಾಲಿ ಚಾಲ್ತಿಯಲ್ಲಿರುವ ಆಡಳಿತಶಾಹಿ ಮತ್ತು ಸೋರಿಕೆಗಳ ಬಗ್ಗೆ ಇರುವ ಪುರಾವೆಗಳನ್ನು ಗಮನಿಸಿದರೆ ಅವು ಬಡತನ ನಿರ್ಮೂಲನೆಯ ದಿಕ್ಕಿನಲ್ಲಿ ಆಗಬಹುದಾದ ಸಾಧನೆಗಳಿಗಿಂತ ಹಲವು ಪಟ್ಟು ಹೆಚ್ಚಿರುತ್ತದೆಂಬುದನ್ನು  ತಿಳಿಸುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯು ಪ್ರಸ್ತಾಪಿಸಿರುವ ಕನಿಷ್ಟ ಆದಾಯ ಖಾತರಿ ಯೋಜನೆಯು ಸಾರ್ವತ್ರಿಕ ಯೋಜನೆಯಲ್ಲ. ಬದಲಿಗೆ ನಿರ್ದಿಷ್ಟ ಗುಂಪನ್ನೇ ಗುರಿಯಾಗಿರಿಸಿಕೊಂಡಿರುವ ಯೋಜನೆಯಾಗಿರುವುದರಿಂದ ಅದು ಬಡವರ ಜೀವನಮಟ್ಟವನ್ನು ಉತ್ತಮಪಡಿಸುವಲ್ಲಿ ಎಷ್ಟು ಪರಿಣಾಮಕಾರಿಯಾಗಬಹುದು ಎಂಬ ಬಗ್ಗೆ ಸಕಾರಣ ಅನುಮಾನಗಳು ವ್ಯಕ್ತವಾಗುತ್ತಿವೆ. ಇಂಥಾ ಸೇವೆಗಳನ್ನು ಜನರಿಗೆ ತಲುಪಿಸುವ ವಿತರಣಾ ವ್ಯವಸ್ಥೆಯ ಇತಿಹಾಸವನ್ನು ಗಮನಿಸಿದಾಗ ಕನಿಷ್ಟ ಆದಾಯ ಖಾತರಿಯಂಥಾ ಸಾಮಾಜಿಕ ಸುರಕ್ಷಾ ಜಾಲ ಯೋಜನೆಗಳನ್ನು ಸಾರ್ವಜನಿಕರು ಸರ್ಕಾರವು ನೀಡುತ್ತಿರುವ ಸೌಲಭ್ಯ ವೆಂದು ಪರಿಗಣಿಸುವಂತಾಗುವುದೇ ಹೆಚ್ಚು.

ಆದರೂ ದೈವಕೃಪೆಗೋ ಅಥವಾ  ಆಚ್ಚೇದಿನಗಳಿಗೋ ಕಾಯುತ್ತಾ ಕೂರಬೇಕಾದ ಇಂದಿನ ದಿನಗಳಲ್ಲಿ ಕಾಂಗ್ರೆಸ್‌ನ ನ್ಯಾಯ್ ಯೋಜನೆಯು ಆಶಾವಾದವನ್ನು ಹುಟ್ಟಿಸುವ ಕಿರಣವೆಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಈ ಪ್ರಣಾಳಿಕೆಯಿಂದ ದೈವದ ಸಾಕ್ಷಾತ್ಕಾರವಾಗುತ್ತದೆಂದು ಇದರ ಅರ್ಥವಲ್ಲ. ಆದರೆ ಇಲ್ಲಿ ಒಂದು ಪ್ರಜ್ನಾಪೂರ್ವಕ ಆಯ್ಕೆಯ ಅವಕಾಶವಿದೆ. ಕಾಂಗ್ರೆಸ್ ಪ್ರಣಾಳಿಕೆಂiiಲ್ಲಿ ಈ ಯೊಜನೆಯು ರಾಜಕಾರಣದಲ್ಲಿ ಯಾವ ಬಗೆಯ ಪರಿಣಾಮ ಬೀರಬಹುದು ಎಂಬ ಚರ್ಚೆ, ಅಥವಾ ಊಹೆಗಳನ್ನು ಮಾಡುತ್ತಾ ಕೂರುವದಕ್ಕಿಂತ ಈ ಯೋಜನೆಯನ್ನು ಅದರ ಸಾಧ್ಯತೆ ಮತ್ತು ಅನುಷ್ಠಾನ ಗಳ ದೃಷ್ಟಿಂಂದ ಈ ವಿಶ್ಲೇಷಿಸುವುದು ಉತ್ತಮ.  ಈ ಯೋಜನೆಯ ಫಲಾನುಭವಿಗಳನ್ನು ೫ ಕೋಟಿ ಕುಟುಂಬಗಳೆಂಬ ಮತ್ತು ಅವುಗಳಿಗೆ ರೂ.೭೨೦೦೦ ಕನಿಷ್ಟ ಅದಾಯ ಅಗತ್ಯವೆಂಬ ನಿರ್ಧಾರಕ್ಕೆ ಬರಲು ಕಾgಣವಾದ ಅಧಾರಗಳೇನು? ಇಷ್ಟು ವಿಸ್ತೃತವಾದ ಯೋಜನೆಗಳಿಗೆ ಸಂಪನ್ಮೂಲವನ್ನು ಒದಗಿಸಿದ ನಂತರವೂ ವಿತ್ತೀಯ ಕೊರತೆ ಶೇ.೩ ಅನ್ನು ದಾಟುವುದಿಲ್ಲ ಎಂಬ ಗ್ರಹಿಕೆಯ ಹಿಂದಿನ ಅಂಕಗಣಿತವೇನು? ಈ ಯೋಜನೆಗಾಗಿ ಆಗುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು ಹೇಗೆ ಹಂಚಿಕೊಳ್ಳಲಿವೆ? ಈಗಾಗಲೆ ಈ ಬಗೆಯ ನೇರ ಹಣಕಾಸು ವರ್ಗಾವಣೆಯ ಯೋಜನೆಗಳನ್ನು ಜಾರಿ ಮಾಡುತ್ತಿರುವ ಅಂಧ್ರಪ್ರದೇಶ ಮತ್ತು ಒರಿಸ್ಸಾ ದಂತಾ ರಾಜ್ಯಗಳು ಈ ಮಾದರಿಯನ್ನು ಏಕೆ ಅನುಸರಿಸಬೇಕು? ಈ ಯೋಜನೆಯನ್ನು ಫಲಾನುಭವಿಗಳಿಗೆ ಸಮರ್ಥವಾಗಿ ಮುಟ್ಟಿಸುವ ನಿಟ್ಟಿನಲ್ಲಿ ಏನಾದರೂ ಸಾಂಸ್ಥಿಕ ಸುಧಾರಣೆಗಳಾಗಲಿವೆಯೇ? ಈ ಯೋಜನೆಯು ಅಂತಿಮವಾಗಿ ಈಗ ಅಸ್ಥಿತ್ವದಲ್ಲಿರುವ ಹಲವು ವಿಕೃತ ಮತ್ತು ಸಂಪನ್ಮೂಲ ಸೋರಿಕೆಯಾಗುತ್ತಿರುವ ಇತರ ಬಡತನ ನಿರ್ಮೂಲನ ಹಾಗೂ ಸಬ್ಸಿಡಿ ಯೋಜನೆಗಳ ಸ್ಥಾನವನ್ನು ಆಕ್ರಮಿಸಲಿದೆಯೇ?

ಇಂಥಾ ದೊಡ್ಡ ಯೋಜನೆಯನ್ನು ಜಾರಿ ಮಾಡುವಾಗ ಈಗಲೇ ಎಲ್ಲಕ್ಕೂ ಸಿದ್ಧ ಉತ್ತರವಿರುವುದಿಲ್ಲವೆಂಬುದು ಮತು ಹಲವಾರು ವಿಷಯಗಳನ್ನು ಯೋಜನೆಯನ್ನು ಜಾರಿ ಮಾಡುವಾಗ ಎದುರಾಗುವ ಸವಾಲು ಮತ್ತು ಲೋಪದೋಷಗಳ ಮೂಲಕವೇ ಕಲಿಯಬೇಕಾಗುತ್ತನ್ನುವುದು ನಿಜ. ಆದರೆ ಇಂಥ ಬೃಹತ್ ಯೋಜನೆಗಳು ಕೇವಲ ಪ್ರಣಾಳಿಕೆಯಲ್ಲಿ ನೀಡಿದ ಮತ್ತೊಂದು ಭರವಸೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಮತದಾರರದ್ದೇ ಆಗಿರುತ್ತದೆ. ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳಲು ಬೇಕಾದ ಸಂಪನ್ಮೂಲವನ್ನು ಹೇಗೆ ರೂಢಿಸಿಕೊಳ್ಳುತ್ತದೆಂಬುದನ್ನು ಈ ಭರವಸೆಯನ್ನು ನೀಡಿದ ಪಕ್ಷವೇ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಈ ಯೋಜನೆಗೆ ನಿರಂತರವಾಗಿ ಚಾತಕಪಕ್ಷಿಗಳಂತೆ ಕಾಯುತ್ತಲೇ ಕೂರಬೇಕಾದ ಪರಿಸ್ಥಿಯನ್ನು ತಂದೊಡ್ಡಿ ಯೋಜನೆಯನ್ನೇ ಸತ್ವಹೀನಗೊಳಿಸದಂತೆ ನೋಡಿಕೊಳ್ಳುವ  ಜವಾಬ್ದಾರಿ ಆ ರಾಜಕೀಯ ಪಕ್ಷಕ್ಕಿದೆ. ಏಕೆಂದರೆ ವಿಳಂಬಗೊಂಡ ನ್ಯಾಯ, ನಿರಾಕರಿಸಿದ ನ್ಯಾಯವೇ ಆಗಿರುತ್ತದೆ. ಇದಕ್ಕಾಗಿ ಸಂಬಂಧಿಸಿದ ಎಲ್ಲಾ ಹಂತಗಳಲ್ಲೂ ಈಗಿರುವ ಮನೋಭಾವ ಮತ್ತು ಧೋರಣೆಗಳು ಮೂಲಭೂತವಾಗಿ ಬದಲಾಗಬೇಕಿರುವ ಅಗತ್ಯವಿದೆ.  ಜನಸಾಮಾನ್ಯರು ಮತ್ತು ಹಾಲಿ ಹಾಗೂ ಭಾವಿ ಸರ್ಕಾರಗಳು ಇಷ್ಟನ್ನಂತೂ ಪರಿಗಣಿಸಲೇ ಬೇಕು. ಮೊದಲನೆಯದು, ನ್ಯಾಯ ಮತ್ತು ಘನತೆಗಳು ಹಕ್ಕುಗಳೇ ವಿನಃ ಸೌಲಭ್ಯ ಅಥವಾ ಅನುದಾನಗಳಲ್ಲ. ಎರಡನೆಯದು, ಹಕ್ಕುಗಳು ಆಯ್ದುನೀಡುವ ಸನ್ನದುಗಳಲ್ಲ ಅಧವಾ ಮುಂದೆಂದೋ ಸಾಧಿಸಬೇಕೆಂದು ಇಟ್ಟುಕೊಳ್ಳಬೇಕಾದ ಗುರಿಗಳಲ್ಲ. ಅವು ಅದರ ಫಲಾನುಭವಿಗಳ ಶಾಸನಬದ್ಧ ಅಧಿಕಾರವಾಗಿದೆ.

 

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top