ISSN (Print) - 0012-9976 | ISSN (Online) - 2349-8846

ಡಿಜಿಟಲ್ ಚುನಾವಣಾ ಪ್ರಚಾರಗಳ ಮೇಲ್ವಿಚಾರಣೆ

ಸಾಮಾಜಿಕ ಜಾಲತಾಣಗಳಲ್ಲಿನ ಚುನಾವಣಾ ಪ್ರಚಾರದ ಬಗ್ಗೆ ಚುನಾವಣಾ ಅಯೋಗ ತಳೆದಿರುವ ಧೋರಣೆಯು ಎಲ್ಲರಿಗೂ ಸಮಾನ ಸ್ಪರ್ಧಾವಕಾಶಗಳನ್ನು ಒದಗಿಸುವುದರಲ್ಲಿ ವಿಫಲವಾಗಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಬರಲಿರುವ ಲೋಕಸಭಾ ಚುನಾವಣೆಗಾಗಿ ನಡೆಯುತ್ತಿರುವ ಪ್ರಚಾರಗಳು ಈವರೆಗಿನ ಚುನಾವಣೆಗಳಲ್ಲೇ ಅತಿಹೆಚ್ಚು ಡಿಜಿಟಲ್ ಗೊಂಡ ಪ್ರಚಾರವಾಗಿದೆ. ಎಲ್ಲಾ ಬಗೆಯ ಪಕ್ಷಗಳು ತಮಗೆ ಲಭ್ಯವಿರುವ ಸಾಮಾಜಿಕ ಜಾಲತಾಣ, ಮೊಬೈಲ್ ಆಪ್ಸ್, ಆನ್‌ಲೈನ್ ಚರ್ಚಾ ವೇದಿಕೆ ಮತ್ತು ಮತ್ತು ಸಮೂಹ ಮೆಸೇಜ್‌ಗಳಂಥ ಡಿಜಿಟಲ್ ಸಾಧನಗಳನ್ನು ಬಳಕೆ ಹಾಗೂ ದುರ್ಬಳಕೆಗಳನ್ನು ಮಾಡುತ್ತಿವೆ.

ಕಳೆದ ವಾರ ಸಾಮಾಜಿಕ ಜಾಲತಾಣಗಳ ಸೇವೆಯನ್ನು ಒದಗಿಸುವ ಎಲ್ಲಾ ಸೇವಾ ಪೂರೈಕೆದಾರರೂ ಇಂಟರ್‌ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ದಡಿ ಒಂದುಗೂಡಿ ಚುನಾವಣಾ ಅಯೋಗದೊಂದಿಗೆ ಸಮಾಲೋಚನೆ ಮಾಡಿದ ನಂತರದಲ್ಲಿ ತಮಗೇ ತಾವೇ ವಿಧಿಸಿಕೊಂಡ ಒಂದು  ನೀತಿ ಸಂಹಿತೆಯನ್ನು ಘೋಷಿಸಿದವು. ಈ ಮೂಲಕ ಫೇಸ್‌ಬುಕ್, ಗೂಗಲ್, ಟ್ವಿಟರ್, ಮತ್ತಿತರರ ತಾಣಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಚುನಾವಣಾ ಸಂಬಂಧಿತ ಹಣಪಡೆದ ಜಾಹೀರಾತುಗಳ ಮೇಲೆ ನಿಗಾ ಇಡುವುದಲ್ಲದೆ ಅವುಗಳ ಮೇಲೆ ಕ್ರಮಗಳನ್ನೂ ತೆಗೆದುಕೊಳ್ಳಲಿವೆ. ಚುನಾವಣಾ ಪ್ರಕ್ರಿಯೆಗಳ ಭೀತಿಮುಕ್ತ ಮತ್ತು ನ್ಯಾಯಸಮ್ಮತ ಸ್ವರೂಪಕ್ಕೆ ಧಕ್ಕೆ ತರುವ ರೀತಿ ತಮ್ಮ ತಾಣಗಳನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳುವುದಾಗಿಯೂ ಆ ಸ್ವಪ್ರೇರಿತ ನೀತಿ ಸಂಹಿತೆ ಭರವಸೆ ನೀಡುತ್ತದೆ.

ಸಂಪರ್ಕ ಜಾಲದ ತಾಣವಾಗಿದ್ದ ಸಾಮಾಜಿಕ ಜಾಲತಾಣಗಳು ಕಳೆದೊಂದು ದಶಕದಲ್ಲಿ ನಾಗರಿಕರನ್ನು ಸಬಲೀಕರಿಸುವ, ಶಿಕ್ಷಿತರನ್ನಾಗಿಸುವ, ವಿಮೋಚನೆ ಮಾಡುವ ಮತ್ತು ಪ್ರಜಾತಂತ್ರದ ಕಾರ್ಯನಿರ್ವಹಣೆಯ ರೀತಿನೀತಿಗಳನ್ನೇ ಬದಲಾಯಿಸುವ ನಾಗರಿಕರ ಕ್ರಿಯಾಶೀಲತೆಯ ಪ್ರಮುಖ ಮಾದರಿಯಾಗಿಬಿಟ್ಟಿದೆ. ಆದರೆ ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣವು ಬಯಲುಗೊಳಿಸಿರುವಂತೆ ಇದೇ ಸಾಧನಗಳನ್ನು ಬಳಸಿಕೊಂಡೇ ಕೋಟ್ಯಾಂತರ ನಾಗರಿಕರ  ಖಾಸಗಿ ಮಾಹಿತಿಗಳನ್ನು ರಾಜಕೀಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಯಿತು. ನಮ್ಮ ದೇಶದಲ್ಲಿ ಖಾಸಗಿ ಮಾಹಿತಿಗಳ ರಾಜಕೀಯ ದುರ್ಬಳಕೆಗಳ ಜೊತೆಗೆ ಸುಳ್ಳು ಮಾಹಿತಿಗಳನ್ನು ಹರಡುವುದಕ್ಕೂ ಮತ್ತು ಸುದ್ದಿ ತಾಣಗಳ ಹೆಸರಿನಲ್ಲಿ ರಾಜಕೀಯ ದುರುದ್ಡೇಶಗಳುಳ್ಳ ಮಾಹಿತಿಸಾರವನ್ನು ಹಂಚುವುದಕ್ಕೂ ಇದೇ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಸಬಲೀಕರಿಸುವ ಸಾಧನಗಳಾಗಿದ್ದರೂ ಸಹ ಹಣ ಮತ್ತು ಅಧಿಕಾರದ ಪ್ರಭಾವಗಳಿಗೆ ಪಕ್ಕಾಗಿ ಅಸಮಾನ ಅವಕಾಶಗಳನ್ನೊದಗಿಸುವ ಅಸಮಾನತೆಯ ತಾಣವೇ ಆಗಿದೆಯೆಂಬುದನ್ನು  ಈ ಉದಾಹರಣೆಗಳು ಸಾಬೀತುಪಡಿಸುತ್ತವೆ.

ಚುನಾವಣಾ ಆಯೋಗವು ೨೦೧೮ರ ಜುಲೈನಲ್ಲಿ ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ,  ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಮಾಡುವ ಚುನಾವಣಾ ಸಂಬಂಧಿ ವೆಚ್ಚಗಳಲ್ಲಿ ಸಮರೂಪತೆಯನ್ನು ತಂದು ಚುನಾವಣೆಗಳ ಮೇಲೆ ಹಣದ ಪ್ರಭಾವವನ್ನು ಸೀಮಿತಗೊಳಿಸುವ ಉದ್ದೇಶದಿಂದ ಪಕ್ಷಗಳ ಚುನಾವಣಾ ಸಂಬಂಧೀ ವೆಚ್ಚಗಳ ಮೇಲೆ ಮಿತಿಯನ್ನು ಹೇರುವ ಬಗ್ಗೆ ಚರ್ಚಿಸಲಾಯಿತು. ಈ ಪ್ರಸ್ತಾವನ್ನು ವಿರೋಧಿಸಿದ್ದು ಭಾರತೀಯ ಜನತಾ ಪಕ್ಷ (ಬಿಜೆಪಿ) ಮಾತ್ರ. ಇತ್ತೀಚಿನ ಪತ್ರಿಕಾ ವರದಿಗಳ ಪ್ರಕಾರ ಬಿಜೆಪಿಯು ಫೇಸ್‌ಬುಕ್ ಮೇಲೆ ಮತ್ತು ಭಾರತ್ ಎಕ್ ಮನ್ ಕಿ ಬಾತ್ ಮತ್ತು ನೇಷನ್ ವಿತ್ ನಮೋ ದಂಥ ಬಿಜೆಪಿಪರ ಫೇಸ್‌ಬುಕ್ ಪೇಜುಗಳ ಮೇಲೆ ಮಾಡಿರುವ ಜಾಲತಾಣ ವೆಚ್ಚಗಳು ಇತರ ಪಕ್ಷಗಳಿಗಿಂತ ಎಷ್ಟೋಪಾಲು ಹೆಚ್ಚಾಗಿದೆ. ಬಿಜೆಪಿ ಮತ್ತು ಅದರ ಬಳಗದ ಫೇಸ್‌ಬುಕ್ ಪೇಜುಗಳು ೨೦೧೯ರ ಫೆಬ್ರವರಿಯಲ್ಲಿ ೨.೩೭ ಕೋಟಿ ರೂಪಾಯಿ ವೆಚ್ಚ ಮಾಡಿದ್ದವು. ಇದು ಆ ತಿಂಗಳಿನಲ್ಲಿ ಆದ ಒಟ್ಟು ವೆಚ್ಚದ ಶೇ.೫೦ಕ್ಕಿಂತ ಹೆಚ್ಚಾಗಿತ್ತು. ಅದೇ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳೆಲ್ಲಾ ಒಟ್ಟು ಸೇರಿ ೧೯.೮ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದರೆ ಕಾಂಗ್ರೆಸ್ ಮತ್ತು ಅದರ ಸಂಬಂಧೀ ಪೇಜುಗಳು ೧೦.೬ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದವು. ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಪ್ರಮುಖ ವ್ಯಕ್ತಿಗಳು ಫೇಸ್‌ಬುಕ್ಕಿನಲ್ಲಿ ಸತತ ಮತ್ತು ಸುದೀರ್ಘ ಪ್ರಚಾರ ನಡೆಸುವ ಪ್ರಭಾವೀ ವ್ಯಕ್ತಿ ಮಾರ್ಕೆಟಿಂಗ್ (ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್)ಪದ್ಧತಿಯಲ್ಲಿ ಇಂಥಾ ಪ್ರಚಾರಗಳು ನಡೆಯುತ್ತದೆ. ಅಂಥಾ ಬಹಳಷ್ಟು ಪ್ರಚಾರ ಆಂದೋಲನಗಳಿಗೆ ಹಣವನ್ನು ನಗದಿನ ರೂಪದಲ್ಲಿ ಪಾವತಿಸಲಾಗುತ್ತದೆ. ಆದ್ದರಿಂದ ಅವುಗಳ ಚಲನೆಯನ್ನು ಪತ್ತೆಹಚ್ಚಲಾಗುವುದಿಲ್ಲ. ನಿರ್ದಿಷ್ಟ ರಾಜಕೀಯ ಪಕ್ಷದ ಪರವಾಗಿ ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡುವ ವ್ಯಕ್ತಿಗಳು ಯಾರೆಂದು ಪತ್ತೆ ಹಚ್ಚುವುದು ಹೆಚ್ಚೂ ಕಡಿಮೆ ಅಸಾಧ್ಯವೇ ಸರಿ. ಗೂಢಲಿಪಿ ಸಂದೇಶ ಮಾದರಿಯನ್ನು  ಬಳಸುವ ವಾಟ್ಸಾಪ್‌ಗಳನ್ನೂ ರಾಜಕೀಯ ಜಾಹಿರಾತಿಗಾಗಿ ಬಳಸಿಕೊಳ್ಳುತ್ತಿರುವುದರಿಂದ ಜಾಲತಾಣಗಳ ನಿಗಾ ಮಾಡುವ ಪ್ರಕ್ರಿಯೆ ಮತ್ತಷ್ಟು ಜಟಿಲಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಪಾತ್ರವನ್ನು ಪ್ರಶ್ನಿಸುವುದು ಅತ್ಯಗತ್ಯವಾಗಿದೆ. ೨೦೧೪ರ ಲೋಕಸಭಾ ಚುನಾವಣೆಗೆ ಸಾಕಷ್ಟು ಮುಂಚೆಯೇ ಅಂದರೆ ೨೦೧೩ರ ಅಕ್ಟೋಬರ್‌ನಲ್ಲೇ ಚುನಾವಣಾ ಆಯೋಗವು ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಚುನಾವಣಾ ಅಂiಗದ ನಿರ್ದೇಶನಗಳನ್ನು ಬಿಡುಗಡೆ ಮಾಡಿ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವನ್ನು ಗಣನೆಗೆ ತೆಗೆದುಕೊಂಡಿತ್ತು. ಆದರೆ ಈ ನಿರ್ದೇಶನಗಳನ್ನು ಅದು ಸ್ಪರ್ದಿಗಳಿಗೆ, ರಾಜಕೀಯ ಪಕ್ಷಗಳಿಗೆ, ಮಾಧ್ಯಮಗಳಿಗೆ ಮತ್ತು ಚುನಾವಣಾ ವೀಕ್ಷಕರಿಗೆ ಮಾತ್ರ ಸೀಮಿತಗೊಳಿಸಿತ್ತು. ಆ ನಂತರ ಹಲವಾರು ರಾಜ್ಯಗಳ ಶಾಸನಾ ಸಭಾ ಚುನಾವಣೆಗಳು ಕೂಡಾ ನಡೆದು ಅಲ್ಲಿಯೂ ಜಾಲತಾಣಗಳ ವಿಸ್ಟ್ರುತ ಬಳಕೆಯಾಗಿದ್ದರೂ ಈ ನಿರ್ದೇಶನಗಳ ಸುತ್ತೋಲೆಯನ್ನ್ರು ಸಮಕಾಲೀನಗೊಳಿಸುವ ಯಾವುದೇ ಪ್ರಯತ್ನವನ್ನೂ ಮಾಡಲಾಗಿಲ್ಲ. ಸ್ಪರ್ಧಿಗಳು ಮತ್ತು ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವ ಬಗ್ಗೆ ಯಾವ ಹೊಸ ಮಾರ್ಗಸೂಚಿಗಳನ್ನೂ ನಿಡಲಾಗಿಲ್ಲ. ಹಾಗೆಯೇ ಈ ಜಾಲತಾಣಗಳಲ್ಲಿನ ಪ್ರಚಾರಕ್ಕಾಗಿ ಪಕ್ಷಗಳು ವೆಚ್ಚ ಮಾಡುತ್ತಿರುವ ಅಸಾಧಾರಣ ಮೊತ್ತದ ಹಣವನ್ನು ನಿಯಂತ್ರಿಸುವ  ಗೋಜಿಗೂ ಹೋಗಿಲ್ಲ.

ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಈ ಸಾಮಾಜಿಕ ಜಾಲತಾಣಗಳ ಸ್ವಪ್ರೇರಿತ ನೀತಿ ಸಂಹಿತೆಯೂ ಮಾಡಬಹುದಾದದ್ದು ಅತ್ಯಲ್ಪವೇ.  ಅದೂ ಕೂಡ ಅತ್ಯಂತ ತಡವಾಗಿ. ಏಕೆಂದರೆ ಅದು ಚುನಾವಣಾ ಪ್ರಚಾರದ ಸಮಯದಲ್ಲಿ ಹಣಪಾವತಿ ಪಡೆದ ಪ್ರಚಾರಗಳ ಮೇಲೆ ಗಮನವಿಡಲು ಸಾಮಾಜಿಕ ಜಾಲತಾಣ ಸಂಸ್ಥೆಗಳು ಮತ್ತು ಚುನಾವಣಾ ಅಯೋಗವು ಯಾವ ರೀತಿಯ ಒಡನಾಟವನ್ನಿಟ್ಟುಕೊಳ್ಳಬೇಕೆಂಬುದನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ. ಈ ತಾಣಗಳು ರಾಜಕೀಯ ಜಾಹಿರಾತುಗಳನ್ನು ಪ್ರಕಟಿಸುವ ವೇದಿಕೆಗಳೂ ಆಗಿರುವುದರಿಂದ ಪಕ್ಷಗಳು, ಸ್ಪರ್ಧಿಗಳು ಮತ್ತು ಅವರ ಬೆಂಬಲಿಗರು ನೀಡುವ ಜಾಹಿರಾತುಗಳ ದೃಷ್ಟಿಯಿಂದ ಸಹಜವಾಗಿಯೇ ಅವೆಲ್ಲವೂ ಚುನಾವಣಾ ಅಯೋಗದ ನೀತಿ ಸಂಹಿತೆಯ ಭಾಗವಾಗುತ್ತದೆ. ೨೦೧೩ರಲ್ಲಿ ಚುನಾವಣಾ ಅಯೋಗವು ನೀಡಿದ ನಿರ್ದೇಶನದಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೀಡುವ ಜಾಹಿರಾತುಗಳಿಗೆ ಪೂರ್ವಾನುಮತಿ ಪಡೆದುಕೊಳ್ಳುವುದನ್ನೂ ಮತ್ತು ಅದಕ್ಕೆ ಪಾವತಿ ಮಾಡಲಾದ ಹಣದ ಬಗ್ಗೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ಅವು ತನ್ನ ನಿರ್ದೇಶನಗಳನ್ನು ಪಾಲಿಸುವಂತೆ ಮಾಡುವ ಕ್ರಮಗಳನ್ನು ಆಯೋಗವು ಇದೀಗ ತೆಗೆದುಕೊಳ್ಳುತ್ತಿದೆ. ಅದೂ ಕೂಡಾ ಆಯಾ ಜಾಲತಾಣಗಳ ಸ್ವಪ್ರೇರಣೆಯ ಆಧಾರದಲ್ಲಿ. ಇದು ಚುನಾವಣಾ ಪ್ರಕ್ರಿಯೆಗಳಲ್ಲಿ ಡಿಜಿಟಲ್ ತಾಣಗಳ ಮತ್ತದರ ಪಾತ್ರದ ಬಗ್ಗೆ ಚುನಾವಣಾ ಅಯೋಗದ ಜಡ ಮತ್ತು ಕಾಲಬಾಹಿರ ಧೋರಣೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಇದರ ಪರಿಣಾಮವಾಗಿ ಚುನಾವಣಾ ಆಯೋಗವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ಸಂದರ್ಭಗಳಲ್ಲೂ ಸಮಾನ ಭೂಮಿಕೆ ಕಲ್ಪಿಸುವಲ್ಲಿ ವಿಫಲವಾಗಿದೆ.

ಈ ಡಿಜಿಟಲ್ ವಲಯವು ಭೌತಿಕ, ಸಾಮಾಜಿಕ ಮತ್ತು ರಾಜಕೀಯದಂಥಾ ಇತರ ವಲಯಗಳಿಗೆ ಹೊರತಾದದ್ದೇನಲ್ಲ. ಡಿಜಿಟಲ್ ವಲಯವನ್ನು ಇದರಿಂದ ಹೊರತುಪಡಿಸಿ ಪ್ರತ್ಯೇಕವಾಗಿ ನೋಡುವುದು ವಿವೇಕವಲ್ಲ. ಡಿಜಿಟಲ್ ತಾಣಗಳು ಮತ್ತು ತಂತ್ರಜ್ನಾನಗಳು ಹೇಗೆ ಪ್ರಜಾತಂತ್ರಿಕ ವ್ಯವಸ್ಥೆಗಳನ್ನೂ ಮತ್ತು ಆ ಮೂಲಕ ಚುನಾವಣಾ ಪ್ರಕ್ರಿಯೆಗಳ ನೀತಿಬದ್ಧತೆಯನ್ನು ಪ್ರಭಾವಿಸುತ್ತವೆ ಎಂಬುದನ್ನು ಪ್ರಶ್ನಿಸುವ ಅಗತ್ಯವನ್ನು ನಾವು ಪರಿಗಣಿಸದೇ ಇದ್ದದ್ದರಿಂದ ನಾವೀಗ ದಾರಿಕಾಣದ ಸ್ಥಿತಿಯಲ್ಲಿದ್ದೇವೆ. ವಿಶ್ವದ ಅತಿ ದೊಡ್ಡ ಚುನಾವಣೆ ಪ್ರಾgಂಭವಾಗುವುದಕ್ಕೆ ಕೇವಲ ಒಂದು ತಿಂಗಳಿರುವಾಗ ಒಂದು ಸ್ವಪ್ರೇರಿತನೀತಿ ಸಂಹಿತೆಯನ್ನು ರೂಪಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣ ಪೂರೈಕೆದಾರರು ಒಂದು ವಿಫಲ ಸಾರ್ವಜನಿಕ ಸಂಪರ್ಕ ಕಸರತ್ತಿನಲ್ಲಷ್ಟೆ ತೊಡಗಿದ್ದಾರೆ. ಚುನಾವಣಾ ಪೂರ್ವದ ಇಡೀ ಅವಧಿಯಲ್ಲಿ ಚುನಾವಣಾ ಅಯೋಗವು ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿಪೂರ್ಣವಾದ  ಮತ್ತು ಸೂಕ್ಷ್ಮವಾದ ಒಂದು ಮಾಹಿತಿ ಆಗರವನ್ನು ಸೃಷ್ಟಿಸಿಕೊಂಡಿದ್ದರೆ ತೀವ್ರಗತಿಯಲ್ಲಿ ವಿಕಸಿತಗೊಳ್ಳುತ್ತಿರುವ ಈ ಡಿಜಿಟಲ್ ತಂತ್ರಜ್ನಾನದ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿತ್ತು. ೨೦೨೪ರ ಚುನಾವಣೆಯಲ್ಲಾದರೂ ಸಾಮಾಜಿಕ ಜಾಲತಾಣ ಮತ್ತು ಚುನಾವಣೆಗಳ ಚಿತ್ರಣದ ಬಗ್ಗೆ ಪಟ್ಟು ಸಾಧಿಸಬೇಕೆಂದರೆ ಅದಕ್ಕೆ ಬೇಕಿರುವ ಸಿದ್ಧತೆಯನ್ನು ಚುನಾವಣಾ ಅಯೋಗ ಈಗಲಿಂದಲೇ ಪ್ರಾರಂಭಿಸಬೇಕಿದೆ.

 

Updated On : 18th Apr, 2019
Back to Top