ISSN (Print) - 0012-9976 | ISSN (Online) - 2349-8846

ಭಾರತೀಯ ಪ್ರಜಾತಂತ್ರದ ಹೊಣೆಗೇಡಿ ಫಲಾನುಭವಿಗಳು ಯಾರು?

ತಾತ್ವಿಕ ನೀತಿಗಳ ಬಗ್ಗೆ ವಾಗ್ವಾದಗಳ ರಾಜಕೀಯದಲ್ಲಿ ತೊಡಗಲು ನಿರಾಕರಿಸುತ್ತಿರುವ ಎನ್‌ಡಿಎಯು ಪ್ರಜಾತಾಂತ್ರಿಕ ನಿಯಮಗಳನ್ನೇ ಉಲ್ಲಂಘಿಸುತ್ತಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತದ ಅಲಕ್ಷಿತ ಸಮುದಾಯಗಳು ಘನತೆಯಿಂದ ಮತ್ತು ಸುರಕ್ಷತೆಯಿಂದ ತಮ್ಮ ಜೀವನವನ್ನು ಸಾಗಿಸಲು ಸರ್ಕಾರದ ವಿರುದ್ಧ ತೋರುವ ಭಿನ್ನಮತ ಮತ್ತು ಪ್ರತಿರೋಧಗಳೇ ಈ ದೇಶದ ಪ್ರಜಾತಂತ್ರದ ಸಾರವನ್ನು ಶ್ರೀಮಂತಗೊಳಿಸುತ್ತಿದೆ ಮತ್ತು ಪ್ರಜಾತಂತ್ರದ ತತ್ವವನ್ನು ಕಾಪಾಡುತ್ತಿದೆ ಎಂದು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಬಡತನ, ನಿರುದ್ಯೋಗ, ಗ್ರಾಮೀಣ ಬಿಕ್ಕಟ್ಟು, ಆತಂಕ, ಭೀತಿ ಮತ್ತು ಹತಾಷೆಗಳಿಂದ ಮುಕ್ತವಾಗಲು ನಡೆಸುವ ಹೋರಾಟಗಳು ಅಂತರ್ಗತವಾಗಿಯೇ ಪ್ರಜಾತಂತ್ರದ ಸಾರವನ್ನು ಹೊಂದಿರುತ್ತವೆ. ಈ ಪ್ರತಿರೋಧಗಳು ಮನವರಿಕೆ ಮಾಡಿಕೊಡುವ, ಪರ್ಯಾಲೋಚನೆಯಿಂದ ಕೂಡಿದ ಮತ್ತು ಎದುರಾಳಿಗಳೊಂದಿಗೆ ಚರ್ಚೆಗೆ ಸಿದ್ಧವಾಗಿರುವ ಅಂಶಗಳನ್ನು ಹೊಂದಿರುತ್ತವೆ. ಜನಸಾಮಾನ್ಯರ ಮಟ್ಟಿಗೆ ಹೇಳುವುದಾದರೆ ಅವರ ವಾಗ್ವಾದಗಳು ಪುಸ್ತಕಗಳನ್ನು ಆಧರಿಸಿರುವುದಿಲ್ಲ. ಬದಲಿಗೆ ಅವರ ಅಗತ್ಯಗಳ ಹಿಂದೆ ಇರುವ ಸತ್ಯದ ನೆಲೆಗಟ್ಟಿನ ಮೇಲೆ ಅವರ ವಾದಗಳು ರೂಪುಗೊಂಡಿರುತ್ತವೆ. ಉದಾಹರಣೆಗೆ ಎಂಥಾ ಅಪಾಯಕಾರಿಯಾಗಿದ್ದರೂ, ಎಷ್ಟೇ ಶೋಷಕವಾಗಿದ್ದರೂ ಮತ್ತು ಎಷ್ಟೇ ಘನಹೀನವಾಗಿದ್ದರೂ ಒಂದು ಉದ್ಯೋಗ ಬೇಕೆಂಬುದು ಅಂಥಾ ಅಗತ್ಯಗಳಲ್ಲಿ ಒಂದು. ವಾಲ್ಮೀಕಿ ಸಮುದಾಯದ ಬಹುಪಾಲು ಜನ ಚರಂಡಿಗಳೊಳಗಿಳಿದು ಸ್ವಚ್ಚಗೊಳಿಸುವ ಕೆಲಸ ಮಾಡುತ್ತಾರೆ. ಅಂಥಾ ಅಸಹಾಯಕತೆಯಲ್ಲಿ ಅವರು ಬದುಕುತ್ತಿದ್ದಾರೆ. ಈ ಅಸಹಾಯಕತೆಯನ್ನು ಮೊದಲನೆಯದಾಗಿ ಘನತೆಯುಳ್ಳ ಕೆಲಸಗಳು ಸಿಗದಿರುವ ಸಂದರ್ಭದಲ್ಲಿಟ್ಟು ಮತ್ತು ಎರಡನೆಯದಾಗಿ ಸಿಕ್ಕ ಕೆಲಸವೂ ಮತ್ತೊಬ್ಬರ ಪಾಲಾಗಬಹುದೆಂಬ ಆತಂಕದ ಸಂದರ್ಭದಲ್ಲಿಟ್ಟು ನೋಡಬೇಕು. ಬದಕನ್ನರಸುತ್ತಾ ಕೆಲಸ ಕರೆದೆಡೆ ಹತಾಷವಾಗಿ ವಲಸೆ ಹೋಗುವ ಕೂಲಿಕಾರ್ಮಿಕರ ಪರಿಸ್ಥಿತಿಯೂ ಇದೇ ರೀತಿಯದ್ದು.

ಯಾವುದೇ ಸರ್ಕಾರವು ಅಧಿಕಾರದಲ್ಲಿದ್ದರೂ ಸಂವಿಧಾನ ಬದ್ಧವಾದ ಸ್ವಾತಂತ್ರ್ಯವನ್ನು ತನ್ನ ನಾಗರಿಕರಿಗೆ ಒದಗಿಸಬೇಕೆಂದರೆ ಈ ಬಗೆಯ ವಲಸೆಯ ಹಿಂದಿರುವ  ಹತಾಷೆ, ಆತಂಕ ಮತ್ತು ಬಿಕ್ಕಟ್ಟುಗಳ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿವಾರಿಸಲಾಗದಿದ್ದರೂ ಕನಿಷ್ತ ಮಟ್ಟಕ್ಕಾದರೂ ಇಳಿಸುವ ಕತವ್ಯವನ್ನು ಪಾಲಿಸಬೇಕಿರುತ್ತದೆ. ತನ್ನ ನಾಗರಿಕರ ಸ್ವಾತಂತ್ರ್ಯವನ್ನು ಖಾತರಿ ಮಾಡಲು ಬದ್ಧರಿರುವುದಾಗಿಯೂ ಮತ್ತು ಪ್ರಜಾತಂತ್ರದ ತತ್ವಗಳನ್ನು ಎತಿಹಿಡಿಯುತ್ತಿರುವುದಾಗಿಯೂ  ಹೇಳಿಕೊಳ್ಳುವ ಯಾವುದೇ ಸರ್ಕಾರವು ಅದನ್ನು ಸಾಧಿಸಲು ತಾನು ಅನುಸರಿಸುತ್ತಿರುವ ನೀತಿ ಮತ್ತು ದಿಕ್ಕುಗಳ ಬಗೆಗಿನ ಚರ್ಚೆಗಳಿಗೆ ಬೆನ್ನುಹಾಕಬಾರದು. ಒಂದು ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಕ್ಕೆ ಇಂಥ  ವಾಗ್ವಾದಗಳಲ್ಲಿ ಅಡಕವಾಗಿರುವ ತಾರ್ಕಿಕತೆಯ ಎಳೆಗಳು ಕಾಣುವಷ್ಟು ಪ್ರಜ್ನಾವಂತಿಕೆ ಇರಬೇಕು. ಈ ಬಗೆಯ ಚರ್ಚೆಗಳಲಿ ತೊಡಗಿಕೊಂಡು ತನ್ನ ಬದ್ಧತೆಗಳನ್ನು ಸಾರುವ ಮೂಲಕ ಮತದಾರರ ಬೆಂಬಲವನ್ನು ಗಟ್ಟಿಗೊಳಿಸಿಕೊಳ್ಳಬಹುದು. ತನ್ನ ಸಾಧನೆಗಳನ್ನು ತಾನೇ ಏಕಪಕ್ಷೀಯವಾಗಿ ಸಮರ್ಥಿಸಿಕೊಳ್ಳುವುದರಿಂದ, ಅಥವಾ ದೇಶದ ಸೇನೆ ಸಾಧಿಸಿದ ಯಶಸ್ಸಿನ ಬೆನ್ನೇರುವುದರಿಂದ ಇತರ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರವು ವಿಫಲವಾಗಿದ್ದರೂ ಜನರು ಅದನ್ನು ಲೆಕ್ಕಿಸದೆ ಸರ್ಕಾರಕ್ಕೆ ಬೆಂಬಲಿಸುವಂತಾಗುತ್ತದಷ್ಟೆ. ಏಕೆಂದರೆ ಆಗ ಸರ್ಕಾರವು ತನ್ನ ವೈಫಲ್ಯಗಳ ಬಗ್ಗೆ ಚರ್ಚಿಸುವ ಅವಕಾಶವನ್ನೇ ಜನರಿಗೆ ಕೊಟ್ಟಿರುವುದಿಲ್ಲ. ಹೀಗಾಗಿ ಇಂದು ನಾವು ಕೇಳಬೇಕಿರುವ ಪ್ರಮುಖವಾದ ಪ್ರಶ್ನೆಯೇನೆಂದರೆ ಕಳೆದ ಐದು ವರ್ಷಗಳಲ್ಲಿ ಈ ಎನ್‌ಡಿಎ ನೇತೃತ್ವದ ಸರ್ಕಾರ ಒಂದು ವಿವೇಕಯುತ ಪ್ರಜಾತಂತ್ರದ ಮೂಲಧಾತುವಾಗಿರು ಬಹಿರಂಗ ಚರ್ಚೆಗಳಿಂದ ವಿನಾಯತಿಯನ್ನು ಕೋರಿದೆಯೇ? ಹಾಗಿದ್ದಲ್ಲಿ ಈ ಸರ್ಕಾರವು ಪ್ರಜಾತಂತ್ರದ ಒಂದು ಹೊಣೆಗೇಡಿ ಫಲಾನುಭವಿಯಲ್ಲವೇ?

ಒಂದು ಪರ್ಯಾಲೋಚನಾ ಮಾದರಿಯು ಮತದಾರರೊಡನೆ ಪರಸ್ಪರ ಸಂವಾದವನ್ನು ಒಳಗೊಂಡಿರುತ್ತದೆ ಮತ್ತದು ಅತ್ಯಗತ್ಯವಾದ ಪ್ರಜಾತಾಂತ್ರಿಕ ಪದ್ಧತಿಯಾಗಿದೆ. ಅದರ ಬದಲಿಗೆ ಪ್ರಧಾನಿಗಳು ವಾರಕ್ಕೊಮ್ಮೆ ರೇಡಿಯೋದ ಮೂಲಕ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮವು ಅಂಥಾ ಒಂದು ಪ್ರಜಾತಾಂತ್ರಿಕ ಆಶಯವನ್ನು ಖಂಡಿತಾ ಖಾತರಿಗೊಳಿಸುವುದಿಲ್ಲ. ಈ ರೇಡಿಯೋ ಕಾರ್ಯಕ್ರದಲ್ಲಿ ಪರಸ್ಪರ ಮಾತುಕತೆಯ ಅಂಶವೇ ಇರುವುದಿಲ್ಲ. ಅದಕ್ಕಿಂತ ಮೇಲಾಗಿ ಪ್ರಧಾನಿಗಳಿಗೆ ತನ್ನ ದೇಶದ ಲಕ್ಷಾಂತರ ಜನತೆಯ ಮನಮಿಡಿತವೂ ಗೊತ್ತಿದೆ ಎಂಬ ನೆಲೆಯಲ್ಲೇ ಈ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪ್ರಧಾನಿಯೊಂದಿಗೆ ವಿಮರ್ಶಾತ್ಮಕ ಮಾತುಕತೆಯಲ್ಲಿ ತೊಡಗಿಕೊಳ್ಳಬೇಕಿದ್ದ ಮಾಧ್ಯಮಗಳೊಂದಿಗಿನ ಮುಖಾಮುಖಿಯ ಅಗತ್ಯವನ್ನೂ ಸಹ ಇದೇ ಕಾರಣ ಮುಂದೊಡ್ಡಿ ನಿವಾರಿಸಿಕೊಳ್ಳಲಾಗಿದೆ.  ಇದು ಪ್ರಧಾನಿಗಳು ನೇರವಾಗಿ ಜನರೊಂದಿಗೆ ಮಾತನಾಡುತ್ತಿದ್ದಾರೆಂಬ ಭಾವನೆಯನ್ನುಂಟುಮಾಡಿದರೂ ಇಲ್ಲಿ ಪ್ರಧಾನಿಗಳು ಮೇಲೆ ಕೂತು ಕೆಳಗಿರುವ ಜನರನ್ನುದ್ದೇಶಿಸಿ ಮಾತನಾಡುತ್ತಿರುತ್ತಾರೆ. ಮತ್ತು ಅಂಥಾ ಒಂದು ಮಾತುಕತೆಯಲ್ಲಿ  ಅಸಮತೋಲನವು ಅಂತರ್ಗತವಾಗಿರುತ್ತದೆ. ಪ್ರಧಾನಿಗಳು ಈಗ ಪ್ರಾರಂಭಿತಿರುವ ನಾನು ಚೌಕಿದಾರ ಪ್ರಚಾರದಲ್ಲಿನ ಪೂರ್ವಸಿದ್ಧತೆಯುಳ್ಳ ಸಂಭಾಷಣೆಗಳಲ್ಲೂ ಅದೇ ಧೋರಣೆಯೇ ಸ್ಪಷ್ಟವಾಗಿ ವ್ಯಕ್ತಗೊಳ್ಳುತ್ತಿದೆ.

ಒಂದು ಪರ್ಯಾಲೋಚನೆಯ ಸಂವಾದವನ್ನು ಆಧರಿಸಿದ ಪ್ರಜಾತಂತ್ರದಲ್ಲಿ ಚರ್ಚೆಯಲ್ಲಿ ಇತರರನ್ನು ತೊಡಗಿಸಿಕೊಳ್ಳುವುದು ಮತ್ತು ವಿರೋಧಪಕ್ಷಗಳನ್ನು  ಭಿನನಾಭಿಪ್ರಾಯಗಳ ವಾಗ್ವಾದಕ್ಕೆ ಆಹ್ವಾನಿಸುವುದು ಆಳುವ ಪಕ್ಷದ ನಾಯಕರ ಕರ್ತವ್ಯವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕಳೆದ ಐದು ವರ್ಷಗಳಲ್ಲಿ ಆಳುವ ಪಕ್ಷವು ನೈತಿಕವಾಗಿ ಆಕ್ರಮಣಕಾರಿ ಭಾಷೆಯನ್ನು ಬಳಸುತ್ತಾ ತನ್ನ ವಿರೋಧಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಾ ಮತ್ತು ಪ್ರತಿರೋಧಗಳ ಧ್ವನಿಗಳನ್ನು ದೈಹಿಕವಾಗಿಯೇ ಕೊಂದುಹಾಕುತ್ತಾ ವಾಗ್ವಾದ ಮತ್ತು ಚರ್ಚೆಗಳಿಗಿರುವ ಅವಕಾಶಗಳೇ ತೀವ್ರವಾಗಿ ಕುಗ್ಗಿಹೋಗುವಂತೆ ಮಾಡುವ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಇಂಥಾ ಆಕ್ರಮಣಕಾರಿ ಭಾಷೆಗಳನ್ನು ಬಳಸಿದ ನಂತರ ಆಳುವ ಪಕ್ಷದ ಕೆಲವು ಬೆಂಬಲಿಗರು ನನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೋ ಅಥವಾ ನನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದೋ ಹೇಳಿಕೆಯನ್ನು ಕೊಡುವುದು ಕಂಡುಬರುತ್ತಿದೆ. ಆದರೆ ಅಂಥಾ ಹೇಳಿಕೆಗಳು ನೈತಿಕ ಹಿನ್ನೆಲೆಯ ತಪ್ಪುಗಳಾಗಿದ್ದು ಕಾನೂನಾತ್ಮಕವಾಗಿ ಶಿಕ್ಷಿಸಲಾಗುವುದಿಲ್ಲ. ಇಂಥಾ ತಪ್ಪುಗಳನ್ನು ಪದೇಪದೇ ಮಾಡುವುದರಿಂದ ಎದುರಾಳಿಗಳು ಸಹ ಅದೇ ಭಾಷೆಯನ್ನು ಬಳಸುವಂತೆ ಮಾಡಿ ಇತರರ ನೈತಿಕ ಸಾಮರ್ಥ್ಯವನ್ನು ಹಾಳುಗೆಡವುವಂತಾಗುತ್ತಿದೆ. ಹಲವು ಪ್ರಮುಖ ವಿಷಯಗಳಿಗೆ ಸಂಬಂಧಪಟ್ಟ ಅಂಕಿಅಂಶಗಳು ಸಾರ್ವಜನಿಕ ವಲಯಕ್ಕೆ ತಲುಪದಂತೆ ತಡೆಹಿಡಿಯುವುದರಲ್ಲೂ ಸಾರ್ವಜನಿಕ ಚರ್ಚೆಯ ಬಗ್ಗೆ ಸರ್ಕಾರಕಿರುವ ಭಯವು ವ್ಯಕ್ತಗೊಂಡಿದೆ.

ಈಗ ಕೇಳಲೇಬೇಕಿರುವ ಪ್ರಶ್ನೆಯೇನೆಂದರೆ: ಅವರು ನೈತಿಕವಾಗಿ ಆಕ್ರಮಣಕಾರಿಯಾದ ಭಾಷೆಯನ್ನೇಕೆ ಬಳಸುತ್ತಾರೆ? ಚರ್ಚೆಯ ಬಗ್ಗೆ ಅವರಿಗಿರುವ ಭಯದಿಂದಾಗಿಯೇ ಈ ಭಾಷೆಯನ್ನು ಅವರು ಬಳಸುತ್ತಾರೆ. ವಾಸ್ತವವಾಗಿ ಸಾರಭೂತವಾದ ರಾಜಕೀಯದ ಎದುರು ಸಾಂಕೇತಿಕ ರಾಜಕೀಯವನ್ನು ಮುಂದಿರಿಸುತ್ತಾ ಚರ್ಚೆಯನ್ನು ತಡೆಗಟ್ಟಲು ಅವರು ಪ್ರಯತ್ನಿಸುತ್ತಾರೆ. ಉದಾಹರಣೆಗೆ ರಾಷ್ಟ್ರ ಮತ್ತು ನಾಗರಿಕರ ನಡುವಿನ ಸಾವಯವ ಸಂಬಂಧಗಳ ಆಧಾರದಲ್ಲಿ ಚಲನಶೀಲವಾಗಿರಬೇಕಿದ್ದ ನಮ್ಮ  ರಾಷ್ಟ್ರೀಯತೆಯು ಎನ್‌ಡಿಎ ಸರ್ಕಾರವು ರಾಷ್ಟ್ರೀಯತೆಯ ಬಗ್ಗೆ ಹುಟ್ಟುಹಾಕಿದ ಸಾಂಕೇತಿಕ ರಾಜಕೀಯದ ಅತಿಬಳಕೆಯಿಂದಾಗಿ ಜಡಗೊಂಡುಬಿಟ್ಟಿದೆ. ಒಂದು ರಾಷ್ಟ್ರದ ಜನರ ಸ್ಥಿತಿಗತಿಯನ್ನು ಆಧರಿಸಿಯೇ ಒಂದು ದೇಶ ಎಷ್ಟು ಶಕ್ತಿಶಾಲಿ ಎಂಬುದು ನಿರ್ಧಾರವಾಗುತ್ತದೆ. ಒಂದು ರಾಷ್ಟ್ರದ ಜನತೆಗೆ ಆರೋಗ್ಯ, ಉದ್ಯೋಗ ಮತ್ತು ವಸತಿಯಂಥ ಅಗತ್ಯಗಳು ಎಷ್ಟರಮಟ್ಟಿಗೆ ನಿಲುಕುತ್ತಿದೆ ಎಂಬುದನ್ನು ಆಧರಿಸಿಯೇ ಸಂವೇದನಾಶೀಲ ರಾಷ್ಟ್ರದ ಪರಿಕಲ್ಪನೆ ನಿಂತಿದೆ. ಮನವರಿಕೆಯಾಗುವಂಥ ಪ್ರತಿಪಾದನೆಯನ್ನು ಮುಂದಿಡುವಲ್ಲಿನ ವೈಫಲ್ಯವು ಸರ್ಕಾರಕ್ಕೆ ವಿನಾಯತಿಯನ್ನೇನೂ ನೀಡುವುದಿಲ್ಲ. ಆದರೆ ಪ್ರಜಾತಾಂತ್ರಿಕ ಸಾರಕ್ಕೆ ಯಾವುದೇ ಕೊಡುಗೆಯನ್ನು ನೀಡದ ಪಕ್ಷವೊಂದು ಎರಡನೇ ಬಾರಿ ಅಧಿಕಾರವನ್ನು ಪಡೆಯಲು ಮಾತ್ರ ಚುನಾವಣಾ ಪ್ರಜಾತಂತ್ರವನ್ನೇ ಬಳಸಿಕೊಳ್ಳುತ್ತಿದೆ.

 

Back to Top