ಟಿವಿ ಸುದ್ದಿವಾಹಿನಿಗಳಿಗೆ ಸ್ವ-ಅರಿಮೆಯೆಂಬುದೊಂದು ಇದೆಯೇ?
ಭಾರತದ ಕೆಲವು ಟಿವಿ ಸುದ್ದಿವಾಹಿನಿಗಳು ತನ್ನ ವೀಕ್ಷಕರ ಮೇಲೆ ಯುದ್ಧೋನ್ಮಾದಿ ರಾಷ್ಟ್ರೀಯತೆಯನ್ನು ಹೇರುತ್ತಿವೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಭಾರತ-ಪಾಕಿಸ್ತಾನ ಗಡಿಯಲ್ಲಿ ಉಂಟಾಗಿದ್ದ ಉದ್ವಿಘ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ ಮಾಧ್ಯಮಗಳೆರಡೂ ಫುಲ್ವಾಮಾನಂತರದ ಸನ್ನಿವೇಶವನ್ನು ಏಕಪಕ್ಷೀಯವಾಗಿ ಪ್ರತಿನಿಧಿಸಿದ್ದನ್ನು ಕಂಡು ಸಾಕಷ್ಟು ಜನರು ಕೆಲವು ಸುದ್ದಿವಾಹಿನಿಗಳನ್ನು ನೋಡುವುದನ್ನೇ ನಿಲ್ಲಿಸಿದ್ದೇವೆಂದು ಹೇಳುತ್ತಿದ್ದಾರೆ. ಇದು ಈ ವಾಹಿನಿಗಳು ದೇಶದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಸಕಾರಣವಾದ ಮತ್ತು ತಾರ್ಕಿಕವಾದ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಯಸುವವರ ಮನಸ್ಸಿನಲ್ಲಿ ಎಂಥಾ ಭೀತಿ ಮತ್ತು ಬೆದರಿಕೆಗಳನ್ನು ಸೃಷ್ಟಿಸಿವೆಯೆಂಬುದನ್ನು ಅರ್ಥಪಡಿಸುತ್ತವೆ. ಎಲ್ಲಕ್ಕಿಂತ ಚಿಂತೆಗೀಡುಮಾಡುವ ವಿಷಯವೆಂದರೆ ತಾರ್ಕಿಕವಾಗಿ ಯೋಚಿಸಬಯಸುವವರು ಹೆದರಿಕೆಯಿಂದ ಬಾಯಿ ಮುಚ್ಚಿಕೊಳ್ಳುವಂತೆ ಮಾಡಲು ಈ ವಾಹಿನಿಗಳು ಬಳಸಿದ ಹ್ಯಾಷ್‌ಟ್ಯಾಗ್ ಆಂದೋಲನಗಳು. ಟಿವಿ ಸುದ್ದಿವಾಹಿನಿಗಳು ಈ ಬಗೆಯಲ್ಲಿ ಹ್ಯಾಷ್‌ಟ್ಯಾಗ್‌ಗಳನ್ನು ಬಳಸುತ್ತಿರುವಾಗ ಸಂಪಾದಕೀಯ ನೈತಿಕತೆಯ ಪ್ರಶ್ನೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಹ್ಯಾಷ್‌ಟ್ಯಾಗುಗಳು ಒಂದು ಘಟನೆಯ ಬಗ್ಗೆ ಅಥವಾ ಒಂದು ಸುದ್ದಿವಾಹಿನಿಯು ಜಾಲತಾಣದಲ್ಲಿ ಅಸ್ಥಿತ್ವದಲ್ಲಿರುವ ಬಗ್ಗೆ ನೋಡುಗರಿಗೆ ಮಾಹಿತಿಯನ್ನು ನೀಡುತ್ತದೆಂದು ಕೆಲವರು ವಾದಿಸಬಹುದು. ಆದರೆ ಹ್ಯಾಷ್‌ಟ್ಯಾಗುಗಳು ಕೇವಲ ಮಾಹಿತಿಯನ್ನು ಮಾತ್ರ ನೀಡುತ್ತಿದ್ದರೆ ಮಾತ್ರ ಇಂಥ ವರ್ಗೀಕರಣದ ತರ್ಕ ಅನ್ವಯವಾಗುತ್ತಿತ್ತು. ಆದರೆ ಅವು ಮಾಹಿತಿಯನ್ನು ನೀಡುವ ಬದಲಿಗೆ ಮೂರು ಆಯಾಮಗಳುಳ್ಳ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರಚಾರಕನ ಪಾತ್ರವನ್ನು ಸಹ ನಿರ್ವಹಿಸುತ್ತಿವೆ. ಆ ಮೂರು ಪಾತ್ರಗಳು: ಹ್ಯಾಷ್‌ಟ್ಯಾಗುಗಳಲ್ಲಿ ರಾಜಕೀಯಾರ್ಥವನ್ನು ತುಂಬುವುದು, ಈಗಾಗಲೇ ಧೃವೀಕೃತವಾದ ಕಥನಗಳೆಡೆಗೆ ತಮ್ಮ ದರ್ಶಕರನ್ನು ದೂಡುವುದು ಮತ್ತು ನಂಜುಪೂರಿತ ವಾಗ್ವಾದಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ತನ್ನ ದರ್ಶಕರನ್ನು ಉತ್ತೇಜಿಸುವುದು.
ರಾಷ್ಟ್ರೀಯವಾದದ ಪರಿಕಲ್ಪನೆಯು ಸರ್ಕಾರವು ಟಿವಿ ಆಂಕರುಗಳ ಗಂಟಲಲ್ಲಿ ತುರುಕಿರುವ ವಿಷಯಗಳಿಗಿಂತ ವಿಶಾಲವಾಗಿದೆಯೆಂಬ ಉದಾರವಾದಿ ಚಿಂತಕರ ಧ್ವನಿಗಳನ್ನು ಈ ಸುದ್ದಿವಾಹಿನಿಗಳ ಆಂಕರುಗಳು ನಿರಂತರವಾಗಿ ಖಂಡಿಸುತ್ತಾ ಬಂದಿದ್ದಾರೆ. ಎರಡು ದೇಶಗಳ ನಡುವಿನ ಘರ್ಷಣೆಯನ್ನು ಕಣ್ಣಿಗೆ ಹಬ್ಬವಾಗುವಂತೆ ಬಿತ್ತರಿಸುವ ಈ ವಾಹಿನಿಗಳು ಇತರ ಯಾವುದೇ ವಿಷಯಗಳಿಗಿಂತ ಗಡಿಯಲ್ಲಿನ ಉದ್ವಿಘ್ನ ಪರಿಸ್ಥಿಯೊಂದೇ ನಾವೆಲ್ಲರೂ ಚಿಂತಿಸಬೇಕಾದ ಏಕೈಕ ವಿಷಯವೆಂಬಂತೆ ಮಾಡುತ್ತಾ ನಮ್ಮ ಗಮನವನ್ನು ಇತರ ವಿಷಯಗಳಿಂದ ದಿಕ್ಕುತಪ್ಪಿಸುವ ಉದ್ದೇಶವನ್ನು ಹೊಂದಿವೆ. ದೇಶದ ಭದ್ರತೆಯನ್ನು ಹಾಗು ದೇಶದೊಳಗಿರುವ ಪ್ರತಿಯೊಬ್ಬರ ಭದ್ರತೆಯನ್ನು ಖಾತರಿ ಮಾಡಲು ಭಯೋತ್ಪಾದನೆಯ ಮೇಲೆ ಯುದ್ಧ ಮಾಡುವುದೊಂದೇ ಏಕೈಕ ದಾರಿಯೆಂದು ಈ ಆಂಕರುಗಳು ಹೇಳುವಂತಿದೆ. ಹೊರಗಿನ ಶತ್ರುವಿನಿಂದ ರಕ್ಷಣೆ ಪಡೆದುಕೊಳ್ಳುವುದು ಅತ್ಯಂತ ಪ್ರಾಥಮಿಕ ಸಾಮಾಜಿಕ ಸುರಕ್ಷೆಯೆಂಬುದು ಇವರು ಮುಂದಿಡುತ್ತಿರುವ ವಾದ. ಈ ಧೋರಣೆಯು ರಾಷ್ಟ್ರೀಯ ಭದ್ರತೆಯನ್ನೇ ತಮ್ಮ ಪ್ರಾಥಮಿಕ ಕರ್ತವ್ಯವನ್ನಗಿಸಿಕೊಳ್ಳಬೇಕೆಂದು ಬಡವರ ಮೇಲೆ, ನಿರುದ್ಯೋಗಿಗಳ ಮೇಲೆ, ನಿರ್ಗತಿಕರ ಮೇಲೆ, ಮತ್ತು ಸಂಕಷ್ಟದಲ್ಲಿರುವ ರೈತಾಪಿಯ ಮೇಲೆ ಅಪಾರ ನೈತಿಕ ಒತ್ತಡವನ್ನು ಹಾಕುತ್ತವೆ. ಆದರೆ ಮತ್ತೊಂದೆಡೆ ತಮ್ಮ ದಂತಗೋಪುರುಗಳಲ್ಲಿ ಸುರಕ್ಷೆ ಮತ್ತು ಸೌಲಭ್ಯಗಳನ್ನು ಅನುಭವಿಸುತ್ತಾ ಸಂತೃಪ್ತರಾಗಿರುವ ಶ್ರೀಮಂತರು ಮಾತ್ರ ಇಂಥಾ ಯಾವ ಒತ್ತಡಗಳನ್ನೂ ಅನುಭವಿಸುವುದಿಲ್ಲ. ಈ ಟಿವಿ ಆಂಕರುಗಳಿಂದಲೇ ಜನಸಾಮಾನ್ಯರಲ್ಲಿ ನಿರೀಕ್ಷೆ ಹಾಗೂ ಅತ್ಯುತ್ಸಾಹಗಳೂ ಹುಟ್ಟಿಕೊಳ್ಳುತ್ತವೆ. ಇದರಿಂದಾಗಿಯೇ ಜನಸಾಮಾನ್ಯರಲ್ಲಿ ಭಾರತೀಯ ಸೈನ್ಯವು ಶತ್ರು ಪಾಳಯಕ್ಕೆ ಹೆಚ್ಚು ಹಾನಿಯನ್ನುಂಟು ಮಾಡಬೇಕೆಂಬ ನಿರೀಕ್ಷೆಯೂ ಮತ್ತು ಭಾರತೀಯ ವಾಯುಪಡೆಯ ದಾಳಿಯಲ್ಲಿ ಸತ್ತ ಉಗ್ರಗಾಮಿಗಳ ಸಂಖ್ಯೆಯನ್ನು ತಿಳಿದುಕೊಳ್ಳುವ ಉತ್ಸಾಹವೂ ಹುಟ್ಟಿಕೊಂಡಿದೆ. ಹೀಗೆ ಈ ಟಿವಿ ಚರ್ಚೆಗಳು ಹೊರಗಿನ ಶತ್ರುವಿನ ಮೇಲೆ ದಾಳಿ ಮಾಡುವ ಮತ್ತು ಅಂತರಿಕವಾಗಿ ಸಕಾರಣ ವಿಮರ್ಶೆಗಳನ್ನು ದಮನ ಮಾಡುವ ಸರ್ಕಾರದ ತಂತ್ರೋಪಾಯಗಳಿಗೆ ಪೂರಕವಾಗಿ ಕೆಲಸ ಮಾಡಿವೆ.
ಆಕ್ರಮಣಕಾರಿ ಸಂಕಥನಗಳು ಜನಸಾಮಾನ್ಯರಲ್ಲಿ ಸಹಜವಾಗಿರುವ ಸೇಡು ಮತ್ತು ಆಕ್ರಮಣಗಳ ಬಗೆಗಿನ ಧೋರಣೆಗಳೊಂದಿಗೆ ಚೆನ್ನಾಗಿ ಬೆರೆತುಕೊಳ್ಳುತ್ತದೆ. ಮತ್ತು ಇದು ಬಡವರ್ಗಗಳ ಬದುಕಿನ ಏಕೈಕ ತೊಡಗುವಿಕೆಯೂ ಆಗಿಬಿಡುತ್ತದೆ. ಈ ಎಲ್ಲಾ ಜನವರ್ಗಗಳಿಗೆ ಮತ್ತು ಟಿವಿ ವಾಹಿನಿಗಳಿಗೆ ಸರ್ಕಾರವು ಆಕ್ರಮಣ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವುದು ಅಪಾರ ತೃಪ್ತಿಯನ್ನು ತರುತ್ತದಲ್ಲದೆ ರಾಷ್ಟ್ರೀಯವಾದ ನೆಲೆಗಟ್ಟಿನಲ್ಲೂ ಸಂಪೂರ್ಣವಾಗಿ ಸಮರ್ಥನೀಯವಾಗಿಬಿಡುತ್ತದೆ. ಅವು ರಾಷ್ಟ್ರೀಯ ಭದ್ರತೆಯ ಬಗ್ಗೆ ಸರ್ಕಾರದ ಧೋರಣೆಯೊಡನೆ ಸಮ್ಮತಿಸುವಂತೆ ನಮ್ಮನ್ನು ಬಲವಂತಪಡಿಸುತ್ತವೆ.
ಆ ಟಿವಿ ವಾಹಿನಿಗಳು ಅಂತರಿಕ ಸಾಮಾಜಿಕ ಜೀವನದಲ್ಲೂ ಆಳವಾದ ಬೇಧವನ್ನು ಬಿತ್ತುತ್ತವೆ. ಏಕೆಂದರೆ ಶಾಂತಿ ಸಮಯದಲ್ಲಿ ತಮ್ಮ ಆಕ್ರಮಣಶೀಲತೆಯನ್ನು ಪ್ರದರ್ಶಿಸಲು ನಾಗರಿಕರಿಗೆ ಒಂದು ಅಂತರಿಕ ಗುರಿಯ ಅಗತ್ಯವಿರುತ್ತದೆ. ಹೀಗಾಗಿ ಗಡಿಯಲ್ಲೋ ಅಥವಾ ನೆರೆಹೊರೆಯಲ್ಲೋ ಒಬ್ಬ ಶತ್ರು ಇರುವುದು ಶಾಶ್ವತ ಮತ್ತು ಸಹಜ ಅಗತ್ಯವಾಗಿಬಿಡುತ್ತದೆ. ಟಿವಿ ವಾಹಿನಿಗಳು ತೋರುವ ಈ ಬಗೆಯ ಅಗ್ಗದ ಯುದ್ಧಕೋರ ಪ್ರದರ್ಶನಗಳು ಈ ವಾಹಿನಿಗಳಿಗೆ ತಮ್ಮ ಬಗ್ಗೆ ಇರುವ ಸ್ವ ಅರಿಮೆ ಏನು ಎಂಬ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಪ್ರಶ್ನಾರ್ಥಕ ನಡಾವಳಿಯನ್ನು ಪ್ರದರ್ಶಿಸುತ್ತಿರುವ ವಾಹಿನಿಗಳನ್ನೂ ಒಳಗೊಂಡಂತೆ ಎಲ್ಲಾ ಸುದ್ದಿ ವಾಹಿನಿಗಳು ತಾವು ಯಾವುದೇ ವಿಕೃತಿಯಿಲ್ಲದೆ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದಾಗಿಯೂ ಮತ್ತು ತಾವು ಸುದ್ದಿಯನ್ನು ಸುದ್ದಿಮನೆಯಲ್ಲೇನೂ ಸಿದ್ಧಗೊಳಿಸುತ್ತಿಲ್ಲವೆಂದೂ ಪರಿಭಾವಿಸಿಕೊಳ್ಳುತ್ತವೆ.
ಆದರೆ ಕೆವು ಟಿವಿ ವಾಹಿನಿಗಳ ಅಧಿಕೃತ ನಡಾವಳಿಗಳು ಅವುಗಳ ಸ್ವ-ಅರಿಮೆಗೂ ಮತ್ತು ಸ್ವ-ಅಭಿವ್ಯಕ್ತಿಗೂ ನಡುವೆ ನೈತಿಕ ಹೊಂದಾಣಿಕೆ ಇಲ್ಲದಿರುವುದನ್ನು ಎತ್ತಿತೋರಿಸುತ್ತವೆ. ಒಂದು ಟಿವಿ ವಾಹಿನಿಯು ತಾನು ಶಾಂತಿ ಮತ್ತು ಸೌಹಾರ್ದತೆಯನ್ನು ಬಿತ್ತುತ್ತಿದ್ದೇನೆಂಬ ಅರಿಮೆಯನ್ನು ಇಟ್ಟುಕೊಂಡಿದ್ದಲ್ಲಿ ತನ್ನ ಅಭಿವ್ಯಕ್ತಿಯಲ್ಲಿ ಅದಕ್ಕೆ ತದ್ವಿರುದ್ಧವಾಗಿ ಶಾಂತಿಯ ಧ್ವನಿಗಳನ್ನು ಆಕ್ರಮಣಕಾರಿಯಾಗಿ ಖಂಡಿಸುವುದಿಲ್ಲ ಮತ್ತು ಹಿಂಸೆ ಹಾಗು ದ್ವೇಷಗಳ ಪ್ರಚಾರಕ್ಕಿಳಿಯುವುದಿಲ್ಲ. ಈ ವಾಹಿನಿಗಳ ಟಿವಿ ಆಂಕರ್‌ಗಳಿಗೆ ಅಂಥಾ ಧ್ವನಿಗಳ ಬಗ್ಗೆ ಕಂಠಮಟ್ಟ ದ್ವೇಷವಿದ್ದರೂ ಅದನ್ನು ಪ್ರದರ್ಶಿಸಬಾರದೆಂದು ಆ ವಾಹಿನಿಗಳು ಸಂಬಂಧಪಟ್ಟವರಿಗೆ ತಿಳಿಹೇಳಬೇಕಾಗುತ್ತದೆ. ಏಕೆಂದರೆ ವಾಹಿನಿಗಳ ಸಾರ್ವಜನಿಕ ಪ್ರತಿಷ್ಟೆಯನ್ನು ಅವುಗಳ ಸ್ವ-ಅರಿಮೆಗಿಂತ ಹೆಚ್ಚಾಗಿ ಸ್ವ-ಅಭಿವ್ಯಕ್ತಿಯಿಂದಲೇ ಅಳೆಯಲಾಗುತ್ತದೆ. ರಾಷ್ಟ್ರೀಯವಾದದ ಸಹಜ ಸಾರವಾದ ದ್ವೇಷ ಮತ್ತು ಸಾಮಾಜಿಕ ಅಭದ್ರತೆಗಳಿಂದ ಮುಕ್ತಿ, ನಾಗರಿಕ ಸೌಹಾರ್ದತೆಗೆ ಉತ್ತೇಜನ ಹಾಗೂ ರಾಷ್ಟ್ರೀಯ ಸಾರ್ವಭೌಮತೆಗಳನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಅವರು ಹೊಣೆಗಾರಿಕೆಯನ್ನು ತೋರುವ ಅಗತ್ಯವಿದೆ. ಮಾನವೀಯ ಮೌಲ್ಯಗಳಿಗೆ ಧಕ್ಕೆ ತರುವ ಶಕ್ತಿಗಳ ಬಗ್ಗೆ ವಾಹಿನಿಗಳು ಜನರಲ್ಲಿ ಸಾಮಾಜಿಕ ಜಾಗೃತಿ ಉಂಟುಮಾಡಬೇಕೆಂದು ನಿರೀಕ್ಷಿಸಲಾಗುತ್ತದೆಯಷ್ಟೆ. .
ಪ್ರಶ್ನೆಗೊಳಪಟ್ಟಿರುವ ವಾಹಿನಿಗಳಿಗೆ ಸಂಬಂಧಿಸಿ ಹೇಳುವುದಾದರೆ ಅವುಗಳ ಸ್ವ-ಅರಿಮೆ ಮತ್ತು ಸ್ವ-ಅಭಿವ್ಯಕ್ತಿಗಳ ನಡುವೆ ಹೊಂದಾಣಿಕೆಯಿಲ್ಲವೆಂಬುದು ಸ್ಪಷ್ಟವಾಗಿದೆ. ಅವೆರಡರ ನಡುವೆ ಹೊಂದಾಣಿಕೆಯಿಲ್ಲದಿರುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಅವುಗಳನ್ನು ನಡೆಸುವುದು ಟಿಆರ್‌ಪಿ (ಟಾರ್ಗೆಟ್ ರೇಟಿಂಗ್ ಪಾಯಿಂಟ್) ಗಳು ಮತ್ತು ಜಾಹಿರಾತುಗಳು. ಎರಡನೆಯದಾಗಿ ಕೆಲವು ಟಿವಿ ಆಂಕರುಗಳಲ್ಲಿ ಮನೆಮಾಡಿಕೊಂಡಿರುವ ಅತಿಯಾದ ಆತ್ಮವಿಶ್ವಾಸವು ತಾವೇನು ಮಾಡುತ್ತಿದ್ದೇವೆ ಎಂಬ ಬಗ್ಗೆ ತಮ್ಮನ್ನು ಪ್ರಶ್ನಿಸಿಕೊಳ್ಳಬಲ್ಲ ನೈತಿಕ ಸಾಮರ್ಥ್ಯವನ್ನೇ ಹಾಳುಗೆಡವಿದೆ. ಹಾಗೆ ಅವರು ತಮ್ಮನ್ನು ಪ್ರಶ್ನಿಸಿಕೊಳ್ಳಬೇಕೆಂದರೆ ತಾವು ಸರ್ಕಾರದಿಂದ ಭಿನ್ನವಾದ ಹಾಗೂ ಸ್ವತಂತ್ರವಾದ ಶಕ್ತಿಗಳೆಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದರೆ ಪರಸ್ಪರರಿಗೆ ಲಭ್ಯವಾಗುವ ಲಾಭಪ್ರಯೋಜನಗಳೇ ಕೆಲವು ಟಿವಿ ವಾಹಿನಿಗಳ ಮತ್ತು ಸರ್ಕಾರದ ಸಂಬಂಧಗಳನ್ನು ನಿರ್ದೇಶಿಸುತ್ತಿರುವಂತಿದೆ.