ISSN (Print) - 0012-9976 | ISSN (Online) - 2349-8846

ಪ್ರಜಾತಂತ್ರವನ್ನು ಸೋಲಿಸಲೆಂದೇ ಯುದ್ಧಕೋರತನ

ಆಳುವ ಪಕ್ಷ ಮತ್ತು ಸರ್ಕಾರವು ಪ್ರಭುತ್ವವನ್ನು ಒಂದು ಯುದ್ಧ ಯಂತ್ರಾಂಗವನ್ನಾಗಿ ಬದಲಿಸಿಬಿಟ್ಟಿವೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಫುಲ್ವಾಮದಲ್ಲಿ  ಭಯೋತ್ಪಾದಕರು ನಡೆಸಿದ ದಾಳಿ ಮತ್ತು ಆ ನಂತರದಲ್ಲಿ ಭಾರತದ ವಾಯುಪಡೆಗಳು ನಡೆಸಿದ ಗಡಿಯಾಚೆಗಿನ ದಾಗಳ ನಂತರದಲ್ಲಿ ಸರ್ಕಾರವು ನಡೆದುಕೊಳ್ಳುತ್ತಿರುವ ರೀತಿ ನೈತಿಕವಾಗಿ ಹೊಣೆಗೇಡಿತನದಿಂದಲೂ ಮತ್ತು ಪ್ರಜಾತಂತ್ರದ ರಿವಾಜುಗಳಿಗೆ ತದ್ವಿರುದ್ಧವಾಗಿಯೂ ಇವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ತಿಕ್ಕಾಟವನ್ನು ಹೆಚ್ಚಿಸುತ್ತಾ ಯುದ್ಧಸಂಭವವು ಹೆಚ್ಚಾಗುತ್ತಿದ್ದಾಗಲೂ ಪ್ರಧಾನ ಮಂತ್ರಿಗಳಾಗಲೀ ಅವರ ಸಂಪುಟ ಸಹೋದ್ಯೋಗಿಗಳಾಗಲೀ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ರಾಷ್ಟ್ರವನ್ನುದ್ದೇಶಿಸಿ ಒಮ್ಮೆಯೂ ಮಾತನಾಡಲಿಲ್ಲ. ಭಾರತೀಯ ವಾಯುಪಡೆಯ ಅಧಿಕಾರಿಯು ಪಾಕಿಸ್ತಾನದ ವಶದಲ್ಲಿದ್ದಾಗಲೂ ಪ್ರಧಾನಿ ಮತ್ತವರ ಸಂಪುಟ ಸಹೋದ್ಯೋಗಿಗಳು ತಮ್ಮ ಪಕ್ಷದ ಪ್ರಚಾರ ಕೆಲಸದಲ್ಲೇ ನಿರತರಾಗಿದ್ದರು. ಸರ್ಕಾರವು ನಾಗರಿಕರಿಗೆ ಪಾರದರ್ಶಕ ರೀತಿಯಲ್ಲಿ ಉದ್ಭವವಾಗಿರುವ ಸಂದರ್ಭದ ಬಗ್ಗೆ ಯಾವ ಮಾಹಿತಿಗಳನ್ನೂ ತಲುಪಿಸಲಿಲ್ಲ. ಬದಲಿಗೆ ತಮ್ಮ ಬಳಗಕ್ಕೆ ನಿಷ್ಟವಾಗಿರುವ ಮಾಧ್ಯಮಗಳು ಮೂಲಗಳನ್ನಾಧರಿಸಿ ಹಾಗೂ ಸುದ್ದಿಗಳ ಯಥಾರ್ಥತೆಯನ್ನು ಪರಿಶೀಲಿಸದೆ ಕೆವೊಮ್ಮೆ ತದ್ವಿರುದ್ಧ ವರದಿಗಳನ್ನು ಪ್ರಕಟಿಸುತ್ತಿದ್ದ ಮಾಧ್ಯಮಗಳನ್ನೇ ಸರ್ಕಾರವು ಕೂಡಾ ಆಧರಿಸಿದಂತೆ ಕಂಡುಬಂತು. ಘರ್ಷಣೆ ಅಥವಾ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಾಗರಿಕರು ಸತ್ಯಾಂಶಗಳನ್ನು ಆಧರಿಸಿ ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಹಾಗೂ ಆ ಮೂಲಕ ತಾರ್ಕಿಕವಾದ ಸಾರ್ವಜನಿಕ ಅಭಿಪ್ರಾಂi ರೂಪುಗೊಳ್ಳುವಂತೆ ಅನುವುಮಾಡಿಕೊಡಲು ಪಾರದರ್ಶಕತೆ ಅತ್ಯಂತ ಅನಿವಾರ್ಯ. ಆದರೆ ಈ ಸಂದರ್ಭದಲ್ಲಿ ಸರ್ಕಾರಕ್ಕೆ ನಾಗರಿಕರು ಮಾಹಿತಿ ಮತ್ತು ಸತ್ಯಾಂಶಗಳ ಆಧಾರದಲ್ಲಿ ತೀರ್ಮಾನಗಳಿಗೆ ಬರುವುದು ಬೇಕಿರಲಿಲ್ಲ. ಬದಲಿಗೆ ತಮ್ಮ ಚುನಾವಣಾ ಲಾಭಗಳಿಗಾಗಿ ಗೊಂದಲವನ್ನು ಹರಡುವುದೇ ಸರ್ಕಾರದ ಉದ್ದೇಶವಾಗಿತ್ತೆಂದು ಕಾಣುತ್ತದೆ.  ಹಾಗೆ ಮಾಡುವುದರ ಹಿಂದೆ ರಕ್ಷಣಾ ಮತ್ತು ವ್ಯೂಹಾತ್ಮ ನೀತಿಗಳಲ್ಲಿ ಮತ್ತು ಅದರ ಅನುಷ್ಠಾನಗಳಲ್ಲಿ ತನಿಂದಾಗಿರುವ  ಲೋಪದೋಷಗನ್ನು ಒಣ ಪೌರುಷದ ಮಾತುಗಳ ಹಿಂದೆ ಮರೆಮಾಚಿಕೊಳ್ಳುವ ಪ್ರಯತ್ನಗಳಿವೆ. ವಾಯುಪಡೆಯ ಅಧಿಕಾರಿಯು ಪಾಕಿಸ್ತಾನದಿಂದ ಬಿಡುಗಡೆಯಾಗಿ ಬಂದ ಮೇಲೆ ಮಾಡಿದ ಒಂದು ಟ್ವೀಟನ್ನು ಹೊರತು ಪಡಿಸಿದರೆ ಉದ್ವಿಘ್ನ ಗಳಿಗೆಗಳನ್ನು ಕಂಡ ಇಡೀ ಪ್ರಕರಣದುದ್ದಕ್ಕೂ ದೇಶದ ರಕ್ಷಣಾ ಮಂತ್ರಿಗಳು ಮತ್ತಿನ್ಯಾವ ಮಧ್ಯಪ್ರವೇಶವನ್ನೂ ಮಾಡಲಿಲ್ಲ ಎಂಬುದೇ ಸಾಕಷ್ಟು ಕಥೆಗಳನ್ನು ಹೇಳುತ್ತವೆ.

ಒಂದೆಡೆ ಬಿಕ್ಕಟ್ಟಿನ ಸಮಯವನ್ನು ಎದುರಿಸುವಲ್ಲಿ ಇಡೀ ದೇಶಕ್ಕೆ ರಾಜಕೀಯ ನಾಯಕತ್ವ ಒದಗಿಸಲು ಸರ್ಕಾರವು ಬೇಕೆಂತಲೇ ಹಿಂದೆ ಸರಿದರೂ ಆಳುವ ಪಕ್ಷವು ಮಾತ್ರ ವಾಯುದಾಳಿಯನ್ನು ತನ್ನ ಸಂಕುಚಿತ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲು ಹಿಂದೆಮುಂದೆ ನೋಡಲಿಲ್ಲ. ವಾಯುಪಡೆಯು ನಡೆಸಿದ ದಾಳಿಯನ್ನು ತಮ್ಮದೇ ಸಾಧನೆಯೆಂಬಂತೆ ಒಮ್ಮೊಮ್ಮೆ ಪರೋಕ್ಷವಾಗಿ ಮತ್ತು ಸಾಕಷ್ಟು ಬಾರಿ ಪ್ರತ್ಯಕ್ಷವಾಗಿ ಅದು ಹೇಳಿಕೊಳ್ಳುತ್ತಿದೆ. ೨೦೧೬ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಹೇಳಿಕೊಂಡ ಹಾಗೆ ಈ ಬಾರಿಯೂ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ತಮ್ಮ ಪಕ್ಷವೇ ಎದುರೇಟನ್ನು ನೀಡಿದೆ ಎಂದು ಹೇಳಿಕೊಳ್ಳುತ್ತಿದೆ. ತಾವು ಮಾತ್ರ ಈ ದೇಶದ ಭದ್ರತೆಯನ್ನು ಕಾಪಾಡುವವರು ಎಂದು ತೋರಿಸಿಕೊಳ್ಳಲು ವಾಯುದಾಳಿಯಲ್ಲಿ ನೂರಾರು ಭಯೋತ್ಪಾದಕರನ್ನು ಕೊಲ್ಲಲಾಗಿದೆಯೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಮತ್ತೊಂದು ಕಡೆ ವಾಯುಪಡೆಯು ತಮ್ಮಬಳಿ ಸತ್ತವರ ಸಂಖ್ಯೆಯ  ಬಗ್ಗೆ ನಿಖರ ಮಾಹಿತಿಯಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದೆ. ಈ ಭಿನ್ನ ಹೇಳಿಕೆಗಳು ಸಹಜವಾಗಿಯೇ ಸರ್ಕಾರವು ಹೇಳುತ್ತಿರುವ ಮತ್ತು ಮಾಧ್ಯಮಗಳು ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಹರಿಬಿಡುತ್ತಿರುವ ಸಂಖ್ಯೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇದು ಸರ್ಕಾರವು ಸತ್ಯಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿರುವುದಕ್ಕೂ ಮತ್ತು ಆಳುವ ಪಕ್ಷದ ಯುದ್ಧೋನ್ಮಾದಿ ರಾಷ್ಟ್ರೀಯತೆಯ ಪ್ರದರ್ಶನಗಳಿಗೂ ಇರುವ ಸಂಬಂಧವನ್ನು ಮತ್ತೊಮ್ಮೆ ಎತ್ತಿತೋರಿಸುತ್ತಿದೆ. ಇಂಥ ಹೇಳಿಕೆಗಳು ಮಿಲಿಟರೀಕರಣಗೊಂಡಿರುವ ನಾಗರಿಕ ಸಮಾಜದ ಒಂದು ವರ್ಗದ ಭಾವನೆಗಳಿಗೆ ಪ್ರತಿಸ್ಪಂದಿಯಾಗಿದೆ. ಮತ್ತದು ಉದ್ರಿಕ್ತ ರಾಷ್ಟ್ರೀಯ ಹೆಮ್ಮೆ ಮತ್ತು ವಿಜಯೋನ್ಮಾದಗಳು ತುಂಬಿಕೊಂಡಿರುವ ರಾಜಕೀಯ ಪರಿಭಾಷೆಯನ್ನು ನಿರ್ಮಿಸುವ ಉದ್ದೇಶಕ್ಕೆ ಪೂರಕವಾಗಿವೆ. ತಮ್ಮ ಕಾರ್ಯಾಚರಣೆಯಿಂದ ಉಂಟಾಗಿರುವ ವ್ಯೂಹಾತ್ಮಕ ಸಾಧನೆಗಳೇನು ಎಂಬ ವಿಶ್ಲೇಷಣೆಯನ್ನೇ ಮಾಡದೆ ಕೇವಲ ಸತ್ತ ಹೆಣಗಳ ಅಂಕಿಸಂಖ್ಯೆಗಳ ಪ್ರಚಾರದ ಮೂಲಕ ಯುದ್ಧೋನ್ಮಾದಿ ಮನಸ್ಸತ್ವವನ್ನು ಬೆಳೆಸಿಕೊಂಡಿರುವ ಬೆಂಬಲಿಗ ಪಡೆಯನ್ನು ಇನ್ನಷ್ಟು ಸಧೃಢೀಕರಿಸಿಕೊಳ್ಳಬಹುದಷ್ಟೆ.  ಇದು ಕೇವಲ ಹೀನದರ್ಜೆ ವಿದೇಶಾಂಗ ಮತ್ತು ರಕ್ಷಣಾ ನೀತಿ ಮಾತ್ರವಲ್ಲ ಬದಲಿಗೆ ಅದು ಯುದ್ಧ ಮತ್ತು ಸೈನಿಕ ಕಾರ್ಯಾಚರಣೆಗಳನ್ನು ಅಂತರಿಕ ರಾಜಕಿಯ ನೀತಿಯ ಉಪಕರಣವಾಗಿ ಬಳಸುವುದನ್ನೂ ಮಾನ್ಯ ಮಾಡುತ್ತದೆ. ಹಾಲೀ ಸರ್ಕಾರವು ಹೀಗೆ ತನ್ನ ಸಂಕುಚಿತ ಚುನಾವಣಾ ಹಿತಾಸಕ್ತಿಯನ್ನೇ  ರಾಷ್ಟ್ರೀಯ ಹಿತಾಸಕ್ತಿಯೆಂಬಂತೆ ಪ್ರಚಾರ ಮಾಡುತ್ತಿರುವುದರಿಂದ ಈ ಕಾರ್ಯಾಚರಣೆಯ ವ್ಯೂಹಾತ್ಮಕ ಪರಿಣಾಮಗಳ ಬಗ್ಗೆ ತಾರ್ಕಿಕ ಚರ್ಚೆಯೂ ಸಾಧ್ಯವಾಗುತ್ತಿಲ್ಲ್ಲ.

ಹೀಗಾಗಿಯೇ ನೆರೆದೇಶದೊಡನೆ ಘರ್ಷಣೆಯ ಸಾಧ್ಯತೆ ಎದುರಾಗಿದ್ದಾಗಲೂ ಆಳುವ ಪಕ್ಷ ಮತ್ತು ಸರ್ಕಾರವು ದೇಶದೊಳಗೆ ಒಂದು  ಸರ್ವಸಮ್ಮತಿಯನ್ನು ರೂಢಿಸಲು ಪ್ರಯತ್ನಿಸುವುದರ ಬದಲಿಗೆ ಇತರರೊಡನೆ ಘರ್ಷಣೆಯ ಹಾದಿಯನ್ನು ತುಳಿಯುವುದೇ ಸೂಕ್ತವೆಂದು ಭಾವಿಸಿತು. ವಿರೋಧಪಕ್ಷಗಳು ಕೊಲ್ಲಲ್ಪಟ್ಟ ಭಯೋತ್ಪಾದಕರ ಸಂಖ್ಯೆಯ ಕುರಿತು ಮತ್ತು ಗಡಿಯಾಚೆಗಿನ ಭಯೋತ್ಪಾದಕ ಸೌಕರ್ಯಗಳಿಗೆ ಮಾಡಿರುವ ಹಾನಿಯ ಕುರಿತು ನಿಖರ ಮಾಹಿತಿಗಳನ್ನು ಕೇಳುತ್ತಿರುವಾಗ ಸರ್ಕಾರ ಅದಕ್ಕೆ ಉತ್ತರಿಸದೆ ಸೇನಾಪಡೆಗಳನ್ನು ಗುರಾಣಿಯನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಸೂಕ್ತವಾದ ವೇದಿಕೆಯಿಂದ ಸರಿಯಾಗಿ ಉತ್ತರಿಸಬೇಕಾದ ಎಲ್ಲಾ ಪ್ರಜಾತಾಂತ್ರಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರ್ಕಾರವು ಬದಲಿಗೆ ಇತರ ಎಲ್ಲಾ  ವೇದಿಕೆಗಳಿಂದ ವಿರೋಧ ಪಕ್ಷಗಳು ಸೇನಾಪಡೆಗಳನ್ನು ಅನುಮಾನಿಸುತ್ತಿವೆಯೆಂದು ದಾಳಿ ನಡೆಸುತ್ತಿದೆ. ಒಂದು ಪ್ರಜಾತಂತ್ರದಲ್ಲಿ ಸೇನಾಪಡೆಗಳು ಸಹ ಪ್ರಶ್ನಾತೀತವೇನಲ್ಲ. ಆದರೆ ಆಳುವ ಪಕ್ಷವು ಸೇನಾಪಡೆಗಳನ್ನು ಅನುಮಾನಿಸಬಾರದೆಂಬ ವಾದವನ್ನು ಮುಂದಿಡುತ್ತಾ ಸೇನಾಪಡೆಗಳನ್ನು ಸಹ ತನ್ನ ಚುನಾವಣಾ ಉದ್ದೇಶಗಳಿಗೆ ಸರ್ಕಾರವು ಬಳಸಿಕೊಳ್ಳುತ್ತಿದೆ. ಹಾಗೂ ಆ ಮೂಲಕ ನಮ್ಮ ಪ್ರಜಾತಂತ್ರದ ಪ್ರಮುಖ ಗುಣಲಕ್ಷಣವಾಗಿರುವ ಸೇನಾಪಡೆಗಳ ಪಕ್ಷಾತೀತ ಸ್ವರೂಪಕ್ಕೆ ಅಪಾಯವನ್ನೊಡ್ಡುತ್ತಿದೆ. ಆದರೆ ರಾಜಕೀಯವನ್ನೇ ಒಂದು ಯುದ್ಧ ಕಾರ್ಯಾಚರಣೆಯೆಂದು ಭಾವಿಸುವ ಆಳುವ ಪಕ್ಷವೊಂದು ಅಂಥ ಅಪಾಯಗಳ ಕಾಳಜಿಯನ್ನೂ ತೋರುತ್ತದೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ.

ಈಗಿನ ಆಳುವ ಸರ್ಕಾರ ಮತ್ತು ಪಕ್ಷಗಳಲ್ಲಿ ಪ್ರಭುತ್ವನ್ನು ಒಂದು ಯುದ್ಧ ಯಂತ್ರಾಂಗವನ್ನಾಗಿ ನೋಡುವಂಥಾ ರಾಜಕಿಯ ದೃಷ್ಟಿಕೋನವು ಅಂತರ್ಗತವಾಗಿದೆ. ನೋಟು ನಿಷೇಧದಂತ ಕ್ರಮಗಳನ್ನು ಸಹ ಕಪ್ಪುಹಣದ ಮೇಲೆ ನಡೆಸಿದ ಸರ್ಜಿಕಲ ಸ್ಟ್ರೈಕ್ ಅಥವಾ ಯುದ್ಧವೆಂದೇ ಬಣ್ಣಿಸಿದ್ದ ಈ ಸರ್ಕಾರ ಅದನ್ನು ಪ್ರಶ್ನಿಸಿದವರನ್ನೆಲ್ಲ ಆಗಲೂ ದೇಶದ್ರೋಹಿಗಳೆಂದೇ ಜರೆದಿತ್ತು. ಆಳುವ ಪಕ್ಷದ ಈ ಬಗೆಯ ನಿರಂತರ ಯುದ್ಧರೀತಿಯ ಆಕ್ರಮಣಗಳೆಲ್ಲಾ ವಿರೋಧಪಕ್ಷಗಳ ವಿರುದ್ಧವೇ ಆಗಿದ್ದು ಆ ಮೂಲಕ ಅವರು ಪ್ರತಿನಿಧಿಸುವ ಜನರ ವಿರುದ್ಧವೂ ಆಗಿದೆ. ಇದರಿಂದ ಆಳುವ ಪಕ್ಷಕ್ಕೆ ಅಧಿಕಾರದಲ್ಲಿರುವುದು ಮುಖ್ಯವೇ ಹೊರತು ಪ್ರಭುತ್ವದ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಉಳಿಸಿಕೊಳ್ಳುವುದಲ್ಲ ಎಂಬುದು ಸ್ಪಷ್ಟವಾಗುತ್ತದೆ.  ವಾಯುಪಡೆಯು ನಡೆಸಿದ ದಾಳಿಗಳನ್ನು ತನ್ನ ಸಾಧನೆಯೆಂದು ಪ್ರಚಾರ ಮಾಡುತ್ತಾ ಅದನ್ನು ಪ್ರಶ್ನಿಸಿದವರೆಲ್ಲಾ ಅಂತರಿಕ ಶತ್ರುಗಳೆಂದು ಬಣ್ಣಿಸುತ್ತಿರುವುದು ಅದರ ಶಾಶ್ವತ ಯುದ್ಧೋನ್ಮಾದಿ ಧೋರಣೆಯ ಪ್ರತಿಫಲನವಾಗಿದೆ. ತಥಾಕಥಿತ ಅಂತರಿಕ ಶತ್ರುಗಳ ಮೇಲೆ ಯುದ್ಧ ಮಾಡುವುದೊಂದೇ ತನ್ನ ಏಕೈಕ ಗುರಿಯಾಗಿರಿಸಿಕೊಂಡಿರುವ ಒಂದು ಸೈನ್ಯೀಕೃತ ಸಂಸ್ಥೆಯೇ ಆಗಿರುವ ಆರೆಸ್ಸೆಸ್ಸಿನ ಮಾರ್ಗದರ್ಶನದಲ್ಲಿ ನಡೆಯುವ ಸರ್ಕಾರವೊಂದು ಇಂಥಾ ಆಲೋಚನೆಗಳನ್ನು ಹೊಂದಿರುವ ಬಗ್ಗೆ ಆಶ್ಚರ್ಯಪಡಬೇಕಾದ್ದೇನಿಲ್ಲ. ಒಂದು ಪ್ರಜಾತಂತ್ರದಲ್ಲಿ ನಾಗರಿಕರನ್ನು ಸದಾ ಯುದ್ಧಕ್ಕೆ ಸಜ್ಜು ಮಾಡದೆ ಸಂವಾದದಲ್ಲಿ ಜೊತೆಯಾಗಲು ಸಿದ್ಧಗೊಳಿಸಬೇಕು. ಇಂಥಾ ಸಂವಾದಗಳಲ್ಲಿ ತೊಡಗಲಾಗದ ತನ್ನ  ಅಸಮರ್ಥತೆಯಿಂದಾಗಿಯೇ ಹಾಲೀ ಸರ್ಕಾರವು ತನ್ನ ರಾಜಕೀಯ ನಡೆಗಳನ್ನು ಮತ್ತು ಪರಿಭಾಷೆಗಳನ್ನು ಮಿಲಿಟರೀಕರಣಗೊಳಿಸಿಕೊಂಡಿದೆ.

Back to Top