ISSN (Print) - 0012-9976 | ISSN (Online) - 2349-8846

ಲಿಂಗಾಧಾರಿತ ನ್ಯಾಯ ಮತ್ತು ಎನ್ಡಿಎ ಸರ್ಕಾರ

ತ್ರಿವಳಿ ತಲಾಖ್ ಮಸೂದೆಯನ್ನು ಜಾರಿ ಮಾಡಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ತರಾತುರಿಯಲ್ಲಿ ಒಪ್ಪಿಕೊಳ್ಳುವ ತಪ್ಪನ್ನು ಮಾಡಬಾರದು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಎನ್‌ಡಿಎ ಸರ್ಕಾರವು ಮುಸ್ಲಿಮ್ ಮಹಿಳೆಯರ (ವಿವಾಹ ಹಕ್ಕಿನ ಪರಿರಕ್ಷಣಾ) ಮಸೂದೆ-೨೦೧೮ಕ್ಕೆ ಲೋಕಸಭೆಯಲ್ಲಿ ವೀರೋಚಿತವಾಗಿ ಅನುಮೋದನೆ ಪಡೆದುಕೊಂಡಿದ್ದರ ಬಗ್ಗೆ ಸಂತೃಪ್ತಗೊಂಡಂತಿದೆ. ಹಲವರ ಕಣ್ಣಿಗೆ ಈ ಕ್ರಮವು ಪ್ರಗತಿಪರವಾಗಿಯೂ ಕಾಣುತ್ತಿದೆ. ಆದರೆ ಮೇಲ್ನೋಟಕ್ಕೆ ಕಾಣುತ್ತಿರುವುದನ್ನು ಆಧರಿಸಿ ಈ ಮಸೂದೆಯನ್ನು ಅನುಮೋದಿಸುವುದು ಅವಸರದ ಕ್ರಮವಾದೀತು. ಉದಾಹರಣೆಗೆ, ಹೆಚ್ಚಿನ ಪರಿಶೀಲನೆಗಾಗಿ ಈ ಮಸೂದೆಯನ್ನು ಸದನದ ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂಬ ಸಲಹೆಯನ್ನು ಸರ್ಕಾರ ಖಡಾಖಂಡಿತವಾಗಿ ನಿರಾಕರಿಸಿತು. ಇಂಥಾ ಒಂದು ಮಸೂದೆಯನ್ನು ಜಾರಿಗೆ ತರುವಾಗ ಆ ವಿಷಯಕ್ಕೆ   ಸಂಬಂಧಪಟ್ಟವರೆಲ್ಲರನ್ನೂ ಒಳಗೊಳ್ಳುವ ಮತ್ತು ಸಮಾಲೋಚಿಸಬೇಕೆಂಬ ತತ್ವಕ್ಕೆ ಇದು ವಿರುದ್ಧವಾಗಿದೆ. ಇದರ ಬಗೆಗಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ ಕೇಂದ್ರದ ಕಾನೂನು ಮಂತ್ರಿಗಳು  ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಬಲಾತ್ಕಾರ ಮಾಡಿದವರಿಗೆ ಮರಣದಂಡನೆಯನ್ನು ವಿಧಿಸುವ ಸುಗ್ರೀವಾಜ್ನೆಯನ್ನು ತಂದಾಗಲೂ, ಸರ್ಕಾರವು ಯಾವ ಬಲಾತ್ಕಾರಿಯ ಜೊತೆ ಸಮಾಲೋಚನೆ ನಡೆಸಿರಲಿಲ್ಲವೆಂಬ ವಿಕೃತವಾದ ಹೇಳಿಕೆಯನ್ನು ನೀಡಿದರು. ಮೇಲಾಗಿ ತ್ರಿವಳಿ ತಲಾಖ್ ಮಸೂದೆಯಡಿಗೆ ಬರುವ ಆರೋಪಿಯನ್ನು ಅಪರಾಧೀಕರಿಸುವ ಅಂಶಗಳು ಅತ್ಯಂತ ಸಮಸ್ಯಾತ್ಮಕವಾಗಿವೆ. ಮದುವೆಯೆಂಬುದು ಸಿವಿಲ್ ಒಪ್ಪಂದವಾಗಿದ್ದು ಒಂದು ಸಿವಿಲ್ ಕರಾರಿನ ಉಲ್ಲಂಘನೆಗೆ ಸಿವಿಲ್ ಕ್ರಮಗಳನ್ನಷ್ಟೇ  ತೆಗೆದುಕೊಳ್ಳಬೇಕು. ಆದರೆ ತ್ರಿವಳಿ ತಲಾಖ್ ಮಸೂದೆಯು ಅದನ್ನು ಸಂಜ್ನೇಯ ಮತ್ತು ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸುತ್ತದೆ.

ಈ ಮಸೂದೆಯನ್ನು ೨೦೧೮ರ ಸುಪ್ರೀಂ ಕೋರ್ಟಿನ ತೀರ್ಪಿನನ್ವಯವೇ ಜಾರಿಗೊಳಿಸಲಾಗುತ್ತಿದೆ ಎಂಬ ಸರ್ಕಾರದ ಸಮಜಾಯಿಷಿಗಳು ತೃಪ್ತಿಕರವಾಗಿಲ್ಲ. ಏಕೆಂದರೆ  ತ್ರಿವಳಿ ತಲಾಖ್ ಪದ್ಧತಿಯು ವೈಯಕ್ತಿಕ ಕಾನೂನು ಮತ್ತು ಧಾರ್ಮಿಕ ವಿಷಯಕ್ಕೆ ಸಂಬಂಧಪಟ್ಟ ವಿಷಯವಾದ್ದರಿಂದ ಈ ಪದ್ಧತಿಯನ್ನು ನಿವಾರಣೆ ಮಾಡಲು ಸರ್ಕಾರವು ಒಂದು ಕಾನೂನನ್ನೇ ತರಬೇಕಾದ ಅಗತ್ಯವಿದೆಯೆಂದು ಆಗ್ರಹಿಸಿದ್ದು ಈ ಪ್ರಕರಣದ ಅಲ್ಪಮತದ ತೀರ್ಪೇ ವಿನಃ ಬಹುಸಂಖ್ಯಾತ ನ್ಯಾಯಾಧೀಶರ ತೀರ್ಪಲ್ಲ. ಸರ್ಕಾರಕ್ಕೆ ಮುಸ್ಲಿಮ್ ಮಹಿಳೆಯರ ಬಗ್ಗೆ ನಿಜವಾದ ಕಾಳಜಿಯೇ ಇದ್ದಿದ್ದಲ್ಲಿ, ತಲಾಖ್ ಸಂಹಿತೆಯನ್ನು ನಿಗದೀಕರಿಸಿ, ವಿವಾಹವು ಅನೂರ್ಜಿತಗೊಳ್ಳಲು ಅಗತ್ಯವಿರುವ ನ್ಯಾಯಸಮ್ಮತ ಪ್ರಕ್ರಿಯೆಯನ್ನು ರೂಪಿಸುವ ದಿಕ್ಕಿನಲ್ಲಿ ಕಾಂಗ್ರೆಸ್‌ನ ಸಂಸದರು ಮಂಡಿಸಿದ್ದ ಖಾಸಗಿ ವ್ಯಕ್ತಿ ಮಸೂದೆಯನ್ನು ಪರಿಗಣಿಸಬಹುದಿತ್ತು. ಹಲವಾರು ಮಹಿಳಾ ಸಂಘಟನೆಗಳು ಅದರಲ್ಲೂ ಈ ಪ್ರಕರಣದೊಳಗೆ ಸುಪ್ರೀಂ ಕೋರ್ಟಿನಲ್ಲಿ ಮಧ್ಯಪ್ರವೇಶ ಮಾಡಿದ್ದ ಮಹಿಳಾ ಸಂಘಟನೆಗಳು ಸಹ ಈ ವಿಷಯದ ಬಗ್ಗೆ ಯಾವುದೇ ಮಸೂದೆಯನ್ನು ಮಂಡಿಸುವ ಮುನ್ನ ವಿಸ್ತೃತವಾದ ಸಮಾಲೋಚನೆ ಮಾಡಬೇಕೆಂದು ಎಷ್ಟೇ ಆಗ್ರಹಿಸಿದ್ದರೂ, ಸರ್ಕಾರವು ಅದಕ್ಕೆ ಕಿಂಚಿತ್ತೂ ಕಿವಿಗೊಡಲಿಲ್ಲ. ನ್ಯಾಯದ ಬಗೆಗಿನ ಕಾಳಜಿಗಿಂತ ಹೆಚ್ಚಾಗಿ ಅಪರಾಧೀಕರಿಸುವ ಒತ್ತಿರುವ ಶಾಸನವನ್ನು ತರುವೆಡೆಗೆ ಅದು ತನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿದೆ.

ಮೇಲಾಗಿ, ಸುಪ್ರೀಂ ಕೋರ್ಟಿನ ಬಹುಸಂಖ್ಯಾತ ನ್ಯಾಯಾಧೀಶರ  ಆದೇಶವು ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಮತ್ತು/ಅಥವಾ ಇಸ್ಲಾಮೀಯ ಸಂಪ್ರದಾಯಗಳಿಗೆ ವಿರುದ್ಧವಾದದ್ದೆಂದು ಘೋಷಿಸಿ ಅಸಿಂಧುಗೊಳಿಸಿರುವಾಗ ತ್ರಿವಳಿ ತಲಾಖಿನ ಆಚರಣೆಯನ್ನು ಅಪರಾಧೀಕರಿಸುವ (ಕ್ರಿಮಿನಲೈಸ್) ಅಗತ್ಯವೇನಿತ್ತು? ವಿರೋಧ ಪಕ್ಷಗಳ ಸಂಸದರೂ ಮತ್ತು ಮುಸ್ಲಿಮ ಮಹಿಳೆಯರೊಡನೆ ಕೆಲಸ ಮಾಡುತ್ತಿರುವ ಸಾಮಾಜಿಕ ಸಂಘಟನೆಗಳೂ ಸೂಚಿಸುತ್ತಿರುವಂತೆ ಈ ಮಸೂದೆಯು ತ್ರಿವಳಿ ತಲಾಖ್ ಹೇಳಿದ ವ್ಯಕ್ತಿಗೆ ಮೂರು ವರ್ಷದ ಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ಕಲ್ಪಿಸುತ್ತಿದ್ದರೂ ಸಂತ್ರಸ್ತ ಮಹಿಳೆಯ ಮತ್ತವರ ಕುಟುಂಬದ ಮುಂದಿನ ಜೀವನ ನಿರ್ವಹಣೆಯ ಪ್ರಶ್ನೆಯ ಬಗ್ಗೆ ಮಾತ್ರ ದಿವ್ಯ ಮೌನ ತಾಳಿದೆ. ಇದು ಮುಸ್ಲಿಮ್ ಮಹಿಳೆಯರ ಸಂಕ್ಷೇಮವನ್ನು ಖಾತರಿಗೊಳಿಸಬೇಕೆಂಬ ಉದ್ದೇಶವನ್ನು ಮತ್ತಷ್ಟು ವಿಫಲಗೊಳಿಸುತ್ತದೆ. ತ್ರಿವಳಿ ತಲಾಖನ್ನು ಅಪರಾಧೀಕರಿಸುವ ಬದಲಿಗೆ ಅದನ್ನು ಕೌಟುಂಬಿಕ ಹಿಂಸೆಯೆಂದು ಪರಿಗಣಿಸಿ ೨೦೦೫ರ ಕೌಟುಂಬಿಕ ಹಿಂಸೆ ಕಾಯಿದೆಯಡಿ ತರಬಹುದಿತ್ತು. ಹಾಗೆ ಮಾಡಿದ್ದಲ್ಲಿ, ಎಲ್ಲಾ ಧರ್ಮಗಳಲ್ಲೂ ಇರುವ ವಿವಾಹಿತ ಮಹಿಳೆಯರನ್ನು ಪರಿತ್ಯಜಿಸುವ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಅವಕಾಶವನ್ನು ತೆರೆದಿಡುತ್ತಿತ್ತು. ಹಾಲಿ ಚರ್ಚೆಯಲ್ಲಿರುವ ಮಸೂದೆಯು ತ್ರಿವಳಿ ತಲಾಖ್ ಹೇಳುವ ಮೂಲಕ ಹೆಂಡತಿಯನ್ನು ಪರಿತ್ಯಜಿಸುವ ಮುಸ್ಲಿಮ್ ಗಂಡಸನ್ನು ಮಾತ್ರ ಶಿಕ್ಷೆಗೊಳಪಡಿಸುತ್ತದೆ. ಆದರೆ ಅದೇ ರೀತಿಯಲ್ಲಿ ಹೆಂಡತಿಯರನ್ನು ಪರಿತ್ಯಜಿಸುವ ಇತರ ಧರ್ಮೀಯ ಪುರುಷರನ್ನು ಶಿಕ್ಷಿಸುವ ಯಾವ ಕಾನೂನೂ ಇಲ್ಲ. ಇದು ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ಸಾರ್ವತ್ರಿಕ ತತ್ವಕ್ಕೆ ವಿರುದ್ಧವಾಗಿದ್ದು ಮುಸ್ಲಿಮೇತರ ಮಹಿಳೆಯರಿಗೆ ಅನ್ಯಾಯ ಮಾಡುತ್ತದೆ.

ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರಿಗೆ ಲಿಂಗನ್ಯಾಯವನ್ನು ದೊರಕಿಸುವ ಉದ್ದೇಶವಿದಿದ್ದರೆ ಖಂಡಿತಾ ಈ ಎಲ್ಲಾ ಅಂಶಗಳನ್ನು ಪರಿಗಣಿಸುತ್ತಿತ್ತು. ಆದರೆ ಆಳುವ ಸರ್ಕಾರದ ಮತ್ತದರ ಮಾತೃಸಂಸ್ಥೆಯಾದ ಸಂಘಪರಿವಾರದ ಸೈದ್ಧಾಂತಿಕ ಧೋರಣೆ ಮತ್ತು ಆಚರಣೆಗಳು ಸದಾ ಪುರುಷಪ್ರಧಾನ ಮೌಲ್ಯಗಳನ್ನು ಎತ್ತಿಹಿಡಿಯುತ್ತಲೇ ಬಂದಿರುವುದರಿಂದ ಈ ಮಸೂದೆಯ ಹಿಂದಿನ ಸರ್ಕಾರದ ಉದ್ದೇಶಗಳ ಬಗ್ಗೆ ಸದಾ ಅನುಮಾನಸ್ಪದವಾಗಿಯೇ ಇತ್ತು. ಬಿ. ಆರ್ .ಅಂಬೇಡ್ಕರ್ ಅವರು ೧೯೫೧ರಲ್ಲಿ ಮಂಡಿಸಿದ ಹಿಂದೂ ಕೋಡ್ ಬಿಲ್ ವಿರುದ್ಧ ಹಿಂದೂತ್ವವಾದಿಗಳು ಮತ್ತು ಸಂಘಪರಿವಾರದವರು ದ್ವೇಷಪೂರಿತ ದಾಳಿಗಳನ್ನು ಮಾಡಿದ್ದರು. ಇದು ವೈಯಕ್ತಿಕ ಕಾನೂನುಗಳಲ್ಲಿ ಯಾವುದೇ ಸುಧಾರಣೆಯನ್ನು ತರಬಾರದೆಂಬ ಎಂ.ಎಸ್. ಗೋಳ್ವಾಲ್ಕರ್ ಅವರ ನೀತಿಗೆ ತಕ್ಕಹಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್ ಮಸೂದೆಯು ಲಿಂಗನ್ಯಾಯದ ವಿಷಯವಾಗಿದ್ದು ಶಬರಿಮಲ ವಿಷಯವು ಸಂಪ್ರದಾಯಕ್ಕೆ ಸಂಬಂಧಪಟ್ಟ ವಿಷಯವೆಂದು ಹೇಳಿದ್ದಾರೆ. ಅದರ ಮೂಲಕ ಅವರು ಹಿಂದೂ ಸಂಪ್ರದಾಯಗಳು ಲಿಂಗನ್ಯಾಯದ ತತ್ವಗಳನ್ನು ಉಲ್ಲಂಘಿಸಿದರೂ ಅವನ್ನು ಎತ್ತಿಹಿಡಿಯಬೇಕೆಂದೇ ಸಾರಾಂಶದಲ್ಲಿ ಹೇಳುತ್ತಿದ್ದಾರೆ. ಈಗ ಅದೇ ಶಕ್ತಿಗಳು ತಾವು ಲಿಂಗನ್ಯಾಯವನ್ನು ಪ್ರತಿಪಾದಿಸುತ್ತಿರುವಾಗ ಆ ವಾದದ ತಳಹದಿಯೇ ಹುಸಿಯಾಗಿದೆ ಎಂದಷ್ಟೇ ಹೇಳಬಹುದು. ಇನ್ನು ಮುಸ್ಲಿಂ ಮಹಿಳೆಯರಿಗೆ ಈ ಶಕ್ತಿಗಳು ಕೊಟ್ಟಿರುವ ಯಾತನೆ, ನಡೆಸುತ್ತಲೇ ಬಂದಿರುವ ಹಿಂಸಾಚಾರ ಮತ್ತು ಅಪಮಾನಗಳ ಇತಿಹಾಸವನ್ನು ಗಮನಿಸಿದಾಗ  ತಾವು ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ಈ ಮಸೂದೆಯನ್ನು ತಂದಿದ್ದೇವೆ ಎಂಬ ಅವರ ವಾದ ಎಷ್ಟು ಶುಷ್ಕವೆಂಬುದು ಗೊತ್ತಾಗುತ್ತದೆ. ೨೦೦೨ರ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಂತ ಅನಾಗರಿಕವಾದ ಹಿಂಸಾಚಾರಗಳನ್ನು ಎಸಗಲಾಗಿತ್ತು. ಇಷ್ಟು ಸಾಲದೆಂಬಂತೆ ಆಗಿನ ಆಡಳಿತರೂಢ ಬಿಜೆಪಿ ಸರ್ಕಾರದ ರಕ್ಷಣೆಯಲ್ಲಿ ಹಿಂಸಾಚಾರಕ್ಕೆ ಕಾರಣರಾದ ದಾಳಿಕೋರರಿಗೆ ರಕ್ಷಣೆ ಕೊಡಲಾಯಿತಲ್ಲದೆ ಅವರನ್ನು ವೀರರೆಂಬಂತೆ ನಡೆಸಿಕೊಳ್ಳಲಾಯಿತು. ಹಾಲಿ ಕೇಂದ್ರದಲ್ಲಿ ಆಳ್ವಿಕೆಯಲ್ಲಿರುವ ಸರ್ಕಾರ ಮತ್ತು ಪಕ್ಷವುಮುಸ್ಲಿಂ ಸಮುದಾಯದ ಸಾಮಾಜಿಕ ಸುಧಾರಣೆ ಮಾಡುವ ದುರಹಂಕಾರದ ಸೋಗನ್ನು ಹಾಕುತ್ತಿರುವುದರಿಂದ ಆ ಪಕ್ಷ ಮತ್ತು ಸರ್ಕಾರದ ಇತಿಹಾಸವನ್ನು ಮತ್ತೊಮ್ಮೆ ನಿಕಷಕ್ಕೆ ಒಡ್ಡಬೇಕಿದೆ. ಈಗಲೂ ಮುಸ್ಲಿಮರ ಮೇಲೆ ಗುಂಪುದಾಳಿ ಮಾಡುತ್ತಾ ಆ ಸಮುದಾಯದಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸುತ್ತಿರುವ ವ್ಯಕ್ತಿ ಮತ್ತು ಗುಂಪುಗಳಿಗೆ ಆಶ್ರಯವನ್ನು ನೀಡುತ್ತಲೇ ಅದು ಮುಸ್ಲಿಂ ಸಮುದಾಯದ ಬಗೆಗಿನ ಕಾಳಜಿ ಇರುವ ಮಾತುಗಳನ್ನಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತೀವ್ರವಾದ ಸಾಮಾಜಿಕ ಆತಂಕವು ಆವರಿಸಿಕೊಂಡಿರುವಾಗ ಸಾಮಾಜಿಕ ಸುಧಾರಣೆಯ ಪ್ರಯತ್ನಗಳಿಗೆ ಬೇಕಾದ ಸಮ್ಮತಿ ದೊರಕುವುದಿಲ್ಲ. ಆದರೆ ಅದೇ ಸಮಯದಲ್ಲಿ ಮುಸ್ಲಿಂ ಸಮುದಾಯದಲ್ಲಿ ಮನೆ ಮಾಡಿರುವ ಆತಂಕವನ್ನೇ ಬಳಸಿಕೊಂಡು ಸಮುದಾಯದಲ್ಲಿ ಯಾವುದೇ ಸುಧಾರಣೆಯು ಬರದಂತೆ ತಡೆಗಟ್ಟುವ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ)ಯ ಸಿನಿಕ ಧೋರಣೆಯನ್ನು ಸಹ ವಿರೋಧಿಸಬೇಕಿದೆ. ಹೀಗಾಗಿ ಸಮುದಾಯದ ಹೊರಗಿನಿಂದ ಸುಧಾರಣೆ ನಡೆಸುವ ಪ್ರಯತ್ನವನ್ನು ನಿಲ್ಲಿಸಬೇಕು. ಸಮುದಾಯದೊಳಗೆ ಅಂಥಾ ಸುಧಾರಣೆಗಳಿಗಾಗಿ ಮುಂದೊಡಗು ತೆಗೆದುಕೊಳ್ಳುವ ನೈತಿಕ ಸಾಮರ್ಥ್ಯ ಯಾರದ್ದು ಎಂಬುದು ಸೂಕ್ತವಾದ ಮಾನದಂಡವೇ ಆಗಿದೆ. ಅದೇನೇ ಇದ್ದರೂ ಹಾಲಿ ಸರ್ಕಾರ ಮತ್ತು ಆಳುವ ಪಕ್ಷಕ್ಕೆ ಮಾತ್ರ ಅಂಥಾ ಯಾವುದೇ ಅರ್ಹತೆಯಿಲ್ಲವೆಂಬುದು ಎಲ್ಲಕ್ಕಿಂತ ಸ್ಪಷ್ಟವಾಗಿರುವ ಸತ್ಯವಾಗಿದೆ.

Back to Top