ಮಾಲ್ಡೀವ್ಸನಲ್ಲಿ ಭಾರತದ ಹಸ್ತಕ್ಷೇಪ
ಹಿಂದೂ ಮಹಾಸಾಗರದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವುದೇ ಅಮೆರಿಕ ಹಾಗೂ ಭಾರತದ ದೀರ್ಘಕಾಲೀನ ಯೋಜನೆಯಾಗಿರುವಂತೆ ಕಾಣುತ್ತಿದೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಕಳೆದ ಒಂದು ತಿಂಗಳಿಂz ಮಾಲ್ಡೀವ್ಸ್‌ನಲ್ಲಿ ಮುಂದುವರೆದಿರುವ ರಾಜಕೀಯ ಬಿಕ್ಕಟ್ಟನ್ನು ಗಮನಿಸದ ನಂತರವೂ ಯಾರಿಗಾದರೂ ಅಮೆರಿಕ ಹಾಗೂ ಭಾರತಕ್ಕೆ ಮಾಲ್ಡೀವ್ಸ್ ಜನತೆಯ ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ ಕಾಳಜಿ ಇದೆ ಎಂದು ಅನಿಸಿದಲ್ಲಿ ಅದಕ್ಕಿಂತ ರಾಜಕೀಯ ಮುಠಾಳತನ ಮತ್ತೊಂದಿಲ್ಲ ಎಂದೇ ಹೇಳಬೇಕು. ಹಿಂದೂ ಮಹಾಸಾಗರದಲ್ಲಿರುವ ಈ ದ್ವೀಪ ಸಮೂಹವು ಭಾರತ, ಜಪಾನ್, ಚೀನಾ ಮತ್ತಿತರ ಪೂರ್ವ ನೈರುತ್ಯದ ದೇಶಗಳಿಗೆ ತೈಲವನ್ನು ಸರಬರಾಜು ಮಾಡುವ ಹಾಗೂ ಆ ದೇಶಗಳ ಉತ್ಪನ್ನವನ್ನು ಪಶ್ಚಿಮ ಏಷಿಯಾ, ಆಫ್ರಿಕಾ ಮತ್ತು ಐರೋಪ್ಯ ದೇಶಗಳಿಗೆ ಸಾಗಾಟ ಮಾಡುವ ರಹದಾರಿಗೆ ಅತ್ಯಂತ ಸಮೀಪವಾಗಿದೆ. ಭಾರತವು ಮಾಲ್ಡೀವ್ಸ್ ಅನ್ನು ತನ್ನ ಆಶ್ರಿತ ದೇಶವೆಂದು ಭಾವಿಸಿಕೊಂಡಿದೆ. ಹಾಗಿದ್ದರೂ ಅಮೆರಿಕ ಹಾಗೂ ಭಾರತಗಳ ಆಶಯಕ್ಕೆ ತದ್ವಿರುದ್ಧವಾಗಿ ಮಾಲ್ಡೀವ್ಸ್ ಸರ್ಕಾರವು ಚೀನಾದ ಮಹಾನ್ ಹೆದ್ದಾರಿ ಮೂಲಸೌಕರ್ಯ ಯೋಜನೆಯ ಭಾಗವಾಯಿತಲ್ಲದೆ ಚೀನಾದೊಡನೆ ಮುಕ್ತ ವ್ಯಾಪಾರ ಒಪ್ಪಂದಕ್ಕೂ ಸಹಿ ಹಾಕಿದೆ.
ಇದೇ ಫೆಬ್ರವರಿ ೫ ರಂದು ಮಾಲ್ಡೀವ್ಸ್ ದೇಶದ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ತಮ್ಮ ದೇಶದ ಜನತೆಯ ಎಲ್ಲಾ ಪ್ರಜಾತಾಂತ್ರಿಕ ಹಕ್ಕುಗಳನ್ನೂ ೧೫ ದಿನಗಳ ಕಾಲ ಮೊಟಕುಗೊಳಿಸಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರು ಮತ್ತು ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಾಧೀಶರನ್ನು ಬಂಧಿಸಿದರು. ಈ ಇಬ್ಬರು ನ್ಯಾಯಾಧೀಶರು ಫೆಬ್ರವರಿ ೧ ರಂದು ದೇಶದ ಮಾಜಿ ಅಧ್ಯಕ್ಷರಾಗಿದ್ದ ಮುಹಮ್ಮದ್ ನಶೀದ್ ಅವರನ್ನೂ ಒಳಗೊಂಡಂತೆ ವಿರೋಧ ಪಕ್ಷದ ಹಲವು ಪ್ರಮುಖರನ್ನು ಬಿಡುಗಡೆಗೊಳಿಸಿದ್ದರು. ಅದಾದ ಮರುದಿನವೇ ದೇಶಭ್ರಷ್ಟರಾಗಿ ಶ್ರೀಲಂಕಾದಲ್ಲಿದ್ದ ನಶೀದ್ ಅವರು ಭಾರತವು ಮಾಲ್ಡಿವ್ಸ್ ಮೇಲೆ ಸೇನಾ ಆಕ್ರಮಣವನ್ನು ನಡೆಸಿ ಯಾಮೀನ್ ಅವರನ್ನು ಪದಚ್ಯುತಗೊಳಿಸಬೇಕೆಂದು ಪ್ರಚೋದನಾತ್ಮಕ ಹೇಳಿಕೆಯನ್ನು ಕೊಟ್ಟರು. ಸುಪ್ರೀಂ ಕೋರ್ಟು ತನ್ನ ನಿಲುವನ್ನು ಬೆಂಬಲಿಸುತ್ತದೆಂಬ ಖಚಿತ ನಿರೀಕ್ಷೆಯಲ್ಲಿದ್ದ ಯಾಮೀನರಿಗೆ ಆದರ ದಿಡೀರ್ ಆದೇಶ ಆಘಾತವನ್ನೇ ಉಂಟುಮಾಡಿತ್ತು. ಅಮೆರಿಕ, ಭಾರತದ ಮತ್ತು ಐರೋಪ್ಯ ಒಕ್ಕೂಟಗಳು ಮಾಲ್ಡೀವ್ಸ್‌ನ ವಿರೋಧ ಪಕ್ಷವನ್ನು ಬೆಂಬಲಿಸುತ್ತಿದ್ದರಿಂದ ಆ ನ್ಯಾಯಾಧೀಶರ ಮೇಲೆ ತೀವ್ರವಾದ ಒತ್ತಡವಿದ್ದಿರಬೇಕು. ಯಾಮೀನ್‌ನ ಭಿನ್ನಮತೀಯರನ್ನೂ ಸಹ ನ್ಯಾಯಾಲಯ ಬಿಡುಗಡೆ ಮಾಡಿರುವುದರಿಂದ ಅವರು ಪಕ್ಷಾಂತರ ಮಾಡಿದ್ದರೆ ಯಾಮೀನ್ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿತ್ತು. ಮತ್ತು ಅದರಿಂದಾಗಿ ನಷೀದ್ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯಾಗಿಬಿಡುತ್ತಿದ್ದರು. ಹೀಗಾಗಿ ಯಾಮೀನ್ ತುರ್ತುಸ್ಥಿತಿಯನ್ನು ಘೋಷಿಸಿದ್ದಲ್ಲದೆ ಸುಪ್ರೀಂ ಕೋರ್ಟಿನ ಉಳಿದ ನ್ಯಾಯಾಧೀಶರು ತೀರ್ಮಾನವನ್ನು ಬದಲಿಸುವಂತೆ ಮಾಡಿದರು.
ಭಾರತದ ಕಾರ್ಪೊರೇಟ್ ಮಾಧ್ಯಮಗಳು ಸೂಚನೆ ದೊರೆತ ಅಲ್ಪಾವಧಿಯಲ್ಲೇ ಭಾರತದ ಸೇನಾಪಡೆಗಳು ನಿಯೋಜನೆಗೊಳ್ಳಲು ಸನ್ನದ್ಧವಾಗಿವೆಯೆಂದು ವರದಿ ಮಾಡುತ್ತಿವೆ. ಆದರೆ ಮಾಲ್ಡೀವ್ಸ್‌ನ ಸೇನಾಪಡೆಗಳು ಈಗಲೂ ಯಾಮೀನ್‌ಗೆ ನಿಷ್ಟವಾಗಿವೆಯೆಂಬುದನ್ನೂ, ಹಾಗೂ ಭಾರತವು ಮಾಲ್ಡೀವ್ಸ್‌ನ ಅಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಆ ದ್ವೀಪರಾಷ್ಟ್ರದ ಸಾರ್ವಭೌಮತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಚೀನಾ ಗಟ್ಟಿಯಾಗಿ ಆದರೆ ಪರೋಕ್ಷವಾಗಿ ಸ್ಪಷ್ಟಪಡಿಸಿರುವುದನ್ನು ಭಾರತ ಸರ್ಕಾರ ಗಮನದಲ್ಲಿರಿಸಿಕೊಳ್ಳಬೇಕಿದೆ. ಅಷ್ಟು ಮಾತ್ರವಲ್ಲ. ಭಾರತದ ಸೇನಾಕ್ರಮವನ್ನು ಅಮೆರಿಕ ಮತ್ತು ಬ್ರಿಟನ್ ಬೆಂಬಲಿಸಿದರೂ ಸಹ ತಾನು ಅಮೆರಿಕದೆದುರು ವ್ಯೂಹಾತ್ಮಕ ಸ್ವಾಯತ್ತತೆಯನ್ನು ಕಾಪಾಡಿಕೊಂಡಿದೆ ಎಂದು ಕೊಚ್ಚಿಕೊಳ್ಳುವ ಭಾರತದ ನಿಲುವಿನ ವಿಶ್ವಾಸಾರ್ಹತೆಗೂ ಅದರಿಂದ ಧಕ್ಕೆ ತಗಲುತ್ತದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟಿನ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತನಾಡಿದ್ದಾರೆ. ಮತ್ತು ಆ ಸಂಭಾಷಣೆಯ ಮುದ್ರಿತ ಪ್ರತಿಯನ್ನು ಟ್ರಂಪ್ ಆಡಳಿತ ಬಿಡುಗಡೆ ಮಾಡಿದೆ. ಈ ಹಿಂದೆ ಹೇಗೆ ಅಮೆರಿಕ ಮತ್ತು ಭಾರತ ಜೊತೆಗೂಡಿ ಶ್ರೀಲಂಕಾದಲ್ಲಿ ಚೀನಾದ ಪರವಾದ ನಿಲುವು ತೆಗೆದುಕೊಳ್ಳುತ್ತಿದೆ ಎಂದು ತಾವು ಭಾವಿಸಿದ್ದ ಮಹೀಂದ್ರ ರಾಜಪಕ್ಸೆಯವರ ಸರ್ಕಾರದಿಂದ ಸಿರಿಸೇನಾ ಮೈತ್ರಿಪಾಲಾರವರು ಪಕ್ಷಾಂತರ ಮಾಡುವಂತೆ ಮಾಡಿ, ಅವರನ್ನು ೨೦೧೫ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧಪಕ್ಷಗಳ ಸರ್ವ ಸಮ್ಮತ ಅಭ್ಯರ್ಥಿಯಾಗಿಸಿ ಗೆಲ್ಲುವಂತೆ ಮಾಡಿ ಶ್ರೀಲಂಕಾದಲ್ಲಿ ಆಳುವಕೂಟದ ಬದಲಾವಣೆಗೆ ಕಾರಣರಾಗಿದ್ದರೋ ಅದೇರೀತಿ ಮಾಲ್ಡೀವ್ಸ್‌ನಲ್ಲೂ ಆಳುವ ಸರ್ಕಾರದಲ್ಲಿ ಬದಲಾವಣೆ ತರಲು ತಂತ್ರೋಪಾಯಗಳನ್ನು ಮಾಡುತ್ತಿವೆ. ೧೯೮೮ರಲ್ಲಿ ಮಾಲ್ಡೀವ್ಸ್‌ನ ಆಗಿನ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಅವರ ಸರ್ವಾಧಿಕಾರಿ ಆಡಳಿತದ ವಿರುದ್ಧ ನಡೆದ ಕ್ಶಿಪ್ರಕ್ರಾಂತಿಯನ್ನು ಹತ್ತಿಕ್ಕಲು ಭಾರತದ ಸಹಕರಿಸಿತ್ತು. ನಂತರ ಗಯೂಮ್ ಅವರು ಭಾರತದ ಬೆಂಬಲದೊಂದಿಗೆ ೨೦೦೮ರ ತನಕ ಅಧ್ಯಕ್ಷರಾಗಿ ಮುಂದುವರೆದಿದ್ದರು.
ಆದರೆ ಅಧ್ಯಕ್ಷ ಯಾಮೀನ್ ಅವರು ರಾಷ್ಟ್ರೀಯ ಭದ್ರತೆಗೆ ತೀವ್ರ ಗಂಡಾಂತರವಿದೆಯೆಂಬ ನೆಪವೊಡ್ಡಿ ತುರ್ತುಸ್ಥಿತಿಯನ್ನು ಇನ್ನೂ ಮೂವತ್ತು ದಿನಗಳ ಕಾಲ ವಿಸ್ತರಿಸಿ ಭಾರತ ಮತ್ತು ಅಮೆರಿಕವನ್ನು ದಿಗ್ಭ್ರಾಂತಗೊಳಿಸಿದ್ದಾರೆ. ತನ್ನ ಹಿತ್ತಲಲ್ಲೇ ತನ್ನ ಪ್ರಭಾವವು ಕಳೆಗುಂದುವುದಕ್ಕೆ ಭಾರತವು ಅವಕಾಶ ನೀಡಬಾರದೆಂದು ಭಾರತದ ಕಾರ್ಪೊರೇಟ್ ಮಾಧ್ಯಮಗಳು ಮತ್ತು ಭದ್ರತಾ ವ್ಯವಸ್ಥೆಯ ಮುಖ್ಯಸ್ಥರುಗಳು ಸಲಹೆಗಳನ್ನು ಕೊಡುತ್ತಿದ್ದರೂ ಭಾರತವು ಈವರೆಗೆ ತನ್ನ ಪ್ರತಿಕ್ರಿಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ತನ್ನ ಹಿತ್ತಲಲ್ಲಿ ನಡೆಯುತ್ತಿರುವ ಬೆಳವಣಿಗಳನ್ನೇ ತಾನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಭಾರತವು ಹೇಗೆತಾನೆ ಒಂದು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವೆಂದು ಕೆಲವು ಭದ್ರತಾ ಪರಿಣಿತರು ಪ್ರಶ್ನಿಸಿದ್ದಾರೆ. ಕಾರ್ಪೊರೇಟ್ ಮಾಧ್ಯಮದಲ್ಲಿನ ಒಂದು ವರ್ಗ ಭಾರತವು ಬಲಪ್ರಯೋಗದ ರಾಜತಾಂತ್ರಿಕತೆಯನ್ನು ಅನುಸರಿಸಬೇಕೆಂದೂ ಅಗತ್ಯಬಿದ್ದರೆ ಸೈನಿಕ ಮಧ್ಯಪ್ರವೇಶವನ್ನೂ ಮಾಡಬೇಕೆಂದೂ ಆಗ್ರಹಿಸುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಹೆಚ್ಚುತ್ತಿರುವ ಚೀನೀ ಪ್ರಭಾವಕ್ಕೆ ತಡೆಯೊಡ್ಡುವುದು ಹೇಗೆ ಎಂಬುದು ಸರ್ಕಾರದ ವರ್ತುಲಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಚೀನೀ ಪ್ರಭಾವವನ್ನು ಯಾವ್ಯಾವ ರೀತಿಗಳಲ್ಲಿ ತಡೆಗಟ್ಟಬಹುದೆಂಬುದರ ಬಗ್ಗೆಯೇ ಟ್ರಂಪ್ ಮತ್ತು ಮೋದಿಯವರೂ ಸಹ ತಲೆಕೆಡಿಸಿಕೊಂಡಿದ್ದಾರೆ. ಚೀನಾ ತನ್ನ ವಿದೇಶೀ ವ್ಯಾಪಾರಕ್ಕಾಗಿ ಅವಲಂಬಿಸಿರುವ ಸಮುದ್ರಮಾರ್ಗದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವುದು ಅವರ ಪ್ರಧಾನ ಲಕ್ಷ್ಯವಾಗಿದೆ. ಮಾಲ್ಡೀವ್ಸ್ ನಲ್ಲಿ ಒಂದು ಸೇನಾನೆಲೆಯನ್ನು ಸ್ಥಾಪಿಸಿ ಅಲ್ಲಿಂದ ಸೀಶೆಲ್ಸ್ ಮತ್ತು ಡಿಯಾಗೋ ಗಾರ್ಸಿಯಾಗಳಲ್ಲಿರುವ ತಮ್ಮ ಸೇನಾನೆಲೆಗಳೊಂದಿಗೆ ಜಾಲವನ್ನು ನಿರ್ಮಿಸಿಕೊಳ್ಳಲು ಭಾರತ ಮತ್ತು ಅಮೆರಿಕಗಳು ಪಣ ತೊಟ್ಟಿರುವಂತೆ ಕಾಣುತ್ತದೆ. ಪ್ರಾಯಶಃ, ಮಾಲ್ಡೀವ್ಸ್ ನಲ್ಲಿ ಸರ್ಕಾರವು ಬದಲಾದ ನಂತರ ಅಲ್ಲಿ ಸೇನಾ ನೆಲೆಯನ್ನು ಸ್ಥಾಪಿಸಲು ಬೇಕಾದ ಶಾಸನಾತ್ಮಕ ಚೌಕಟ್ಟನ್ನು ಒದಗಿಸುವ ಸ್ಟೇಟಸ್ ಆಫ್ ಫೋರ್ಸ್ ಅಗ್ರಿಮೆಂಟ್ಗೆ ಸಹಿ ಹಾಕುವಂತೆ ಹೊಸ ಸರ್ಕಾರದ ಮೇಲೆ ಟ್ರಂಪ್ ಆಡಳಿತವು ಒತ್ತಡ ಹಾಕಲಿದೆ.