ISSN (Print) - 0012-9976 | ISSN (Online) - 2349-8846

ಆರ್ಥಿಕತೆ ಮತ್ತು ಜನತೆ

ಆರ್ಥಿಕ ಸಮೀಕ್ಷೆಯ ಅಲಂಕಾರಿಕ ಮಾತುಗಳೇನೇ ಇದ್ದರೂ ಆರ್ಥಿಕತೆಯ ಸ್ಥಿತಿಗತಿ ಮತ್ತು ಜನತೆಯ ಪರಿಸ್ಥಿತಿ ಎರಡೂ ಕೆಟ್ಟದಾಗಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಬಜೆಟ್ಟಿಗೆ ಮುನ್ನ ಸರ್ಕಾರವು ಹೊರತಂದಿರುವ ಭಾರತದ ಆರ್ಥಿಕ ಸಮೀಕ್ಷೆ-೨೦೧೭-೧೮ ರ ಪ್ರಕಾರ ೨೦೧೭-೧೮ರಲ್ಲಿ ಭಾರತದ ನೈಜ ಜಿಡಿಪಿ ಅಭಿವೃದ್ಧಿ ದರ ಶೇ.೬.೭೫ ಅಗಿದ್ದು, ೨೦೧೮-೧೯ರಲ್ಲಿ ಶೇ.೭-೭.೫ರಷ್ಟಾಗಬಹುದು. ಇದರ ಜೊತೆಗೆ ೨೦೧೪-೧೫ ಮತ್ತು ೨೦೧೬-೧೭ರ ನಡುವೆ  ಭಾರತದ ಜಿಡಿಪಿಯ ಸರಾಸರಿ ಅಭಿವೃದ್ಧಿ ದರ ಶೇ.೭.೫ರಷ್ಟಿತ್ತೆಂದು ಕೇಂದ್ರೀಯ ಅಂಕಿಅಂಶಗಳ ಇಲಾಖೆಯ ಹೇಳುತ್ತದೆ. ಇವೆರಡೂ ಅಂಕಿಅಂಶಗಳನ್ನು ನಂಬುವುದೇ ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂದಾಗುತ್ತದೆ. ಇದಲ್ಲದೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ನಿಫ್ಟಿ-೫೦ ಸೂಚ್ಯಂಕಗಳಲ್ಲಿನ ಸತತ ಏರಿಕೆಗಳು ತೋರಿಸುವಂತೆ ಶೇರು ಮಾರುಕಟ್ಟೆ ಸತತ ಏರಿಕೆಯನ್ನು ಕಾಣುತ್ತಾ ಉತ್ಕರ್ಷದಲ್ಲಿದೆ. ಆರ್ಥಿಕ ಸಮೀಕ್ಷೆಯ ಶಿಫಾರಸ್ಸಿನ ಪ್ರಕಾರ ಭಾರತವು ತನ್ನ ತೀವ್ರಗತಿಯ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗಬೇಕೆಂದರೆ ಅದನ್ನು ಆಗುಮಾಡುವ ಎರಡು ಇಂಜಿನ್‌ಗಳಾದ ಖಾಸಗಿ ಹೂಡಿಕೆ ಮತ್ತು ರಫ್ತುಗಳ ಅಭಿವೃದ್ಧಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಬೇಕು. ಈ ಸಮೀಕ್ಷೆಯ ಕರ್ತೃಗಳು ಭಾರತವು ೨೦೦೩-೪ ಮತ್ತು ೨೦೦೭-೦೮ರ ಅವಧಿಯಲ್ಲಿ ಕಂಡಂಥ ಅಧಿಕ ಏರಿಕೆ ದರವನ್ನು ಮುಟ್ಟಬೇಕು ಮಾತ್ರವಲ್ಲದೆ ಆ ದರವನ್ನು ದೀರ್ಘಕಾಲ ಉಳಿಸಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅದು ಹೇಗೆ ಸಾಧ್ಯವಾದೀತೆಂಬುದು ಅವರಿಗೆ ತಿಳಿದಂತಿಲ್ಲ. ಅದನ್ನು ತಿಳಿಯಬೇಕೆಂದರೆ ಆ ಅಧಿಕ ಅಭಿವೃದ್ಧಿದರವು ಏಕೆ ಇಲ್ಲದಂತಾಯಿತು ಮತ್ತು ಅದರೊಳಗಿದ್ದ ಬಗೆಹರಿಯಲಾದಂಥ ಸಮಸ್ಯೆಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿರುತ್ತದೆ. ಆರ್ಥಿಕ ಸಮೀಕ್ಷೆಯಲ್ಲಿ ಇತರ ದೇಶಗಳಲ್ಲಿ ಹೂಡಿಕೆ ಮತ್ತು ಉಳಿತಾಯಗಳು ಇಳಿಮುಖವಾಗಿದ್ದಕ್ಕೆ ಕಾರಣವೇನೆಂಬುದನ್ನು ತಿಳಿದು ಕೊಳ್ಳುವ ಪ್ರಯತ್ನವಿದೆಯಾಗಲೀ ಭಾರತದಲ್ಲಿನ ಅನುಭವಗಳನ್ನು ಅರಿಯುವ ಪ್ರಯತ್ನಗಳಾಗಿಲ್ಲ.

ಆರ್ಥಿಕ ಸಮೀಕ್ಷೆಯಲ್ಲಿನ ಅಂಕಿಅಂಶಗಳನ್ನು ಗಮನಿಸಿ ಹೇಳುವುದಾದರೆ ಆರ್ಥಿಕತೆಯ ಸರಬರಾಜು ಮತ್ತು ಬೇಡಿಕೆಯ ವಲಯಗಳಲ್ಲಿ ಮೊದಲು ಬೇಡಿಕೆಯ ಕಡೆಯಿಂದ ನೋಡುವುದಾದಲ್ಲಿ ಬಂಡವಾಳ ಹೂಡಿಕೆಯು ಗಣನೀಯವಾಗಿ ಕುಸಿದಿದೆ. ಆದರೂ ಅದು ಜಿಡಿಪಿ ಬೆಳವಣಿಗೆಯ ದರದ ಮೇಲೆ ಅಷ್ಟೇ ತೀವ್ರವಾಗಿ ಪರಿಣಾಮಬೀರಿಲ್ಲ. ಆದರೆ ಬಂಡವಾಳ-ಉತ್ಪಾದನೆಯ ಅನುಪಾತದ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿದ್ದರೆ ಮಾತ್ರ ಜಿಡಿಪಿ ಅಭಿವೃದ್ಧಿ ದರದ ಬಗ್ಗೆ ಸಮೀಕ್ಷೆಯ ಅಧಿಕೃತತೆಯನ್ನು ನಂಬಬಹುದಾಗಿತ್ತು. ಆದರೆ ಈ ಅನುಪಾತವು ಕಡಿಮೆಯಾಗಿದೆಯೆಂದು ಹೇಳಬಲ್ಲ ಯಾವುದೇ ಬೆಳವಣಿಗೆಗಳು ಆಗಿಲ್ಲ. ಬಂಡವಾಳ ಹೂಡಿಕೆಯ ಅಂಕಿಅಂಶಗಳು ಲಭ್ಯವಿರುವುದು ಕೇವಲ ೨೦೧೫-೧೬ ಸಾಲಿನವರೆಗೆ ಮಾತ್ರ. ಜಿಡಿಪಿಯ ಅನುಪಾತದಲ್ಲಿ ಬಂಡವಾ ಹೂಡಿಕೆ-ಒಟ್ಟಾರೆ ಬಂಡವಾಳ ಸೃಷ್ಟಿಯ ಪ್ರಮಾಣವು ೨೦೧೧-೧೨ರಲ್ಲಿ ಶೇ.೩೯ರಷ್ಟಿದ್ದದ್ದು ೨೦೧೫-೧೬ರಲ್ಲಿ ಶೇ.೩೩.೩ಕ್ಕೆ ಕುಸಿದಿದೆ. ಅದು ೨೦೧೬-೧೭ರಲ್ಲಿ ಇನ್ನೂ ಶೇಕಡಾ ೨ ರಷ್ಟು ಕುಸಿತವನ್ನು ಕಂಡಿದೆ. ದೇಶದ ಆರ್ಥಿಕತೆಯೆ ಬೆಳವಣಿಗೆಯ ಇಂಜಿನ್ ಖಾಸಗಿ ಕಾರ್ಪೊರೇಟ್ ಬಂಡವಾಳ ಹೂಡಿಕೆಯೇ ಆಗಿರುವಾಗ ಈ ಸಾಲಿನಲ್ಲೂ ಇದರ  ಪ್ರಮಾಣ ಇನ್ನಷ್ಟು ಕಡಿಮೆಯೇ ಆಗುವ ಸಾಧ್ಯತೆಯೇ ಹೆಚ್ಚಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಖಾಸಗಿ ಕಂಪನಿಗಳು ಎದುರಿಸುತ್ತಿರುವ ಸಾಲ ಮರುಪಾವತಿಸಲಾಗದ ಬಿಕ್ಕಟ್ಟು ಹಾಗೂ ಸಾರ್ವಜನಿಕ ಬ್ಯಾಂಕುಗಳು ಎದುರಿಸುತ್ತಿರುವ ಕೆಟ್ಟ ಸಾಲದ ಸಮಸ್ಯೆಗಳೆ ಬಂಡವಾಳ ಹೂಡಿಕೆಯಲ್ಲಿ ಆಗಿರುವ ಕುಸಿತಕ್ಕೆ ಕಾರಣ.

ಆದರೆ ಕೀನ್ಸ್ ಹೇಳುವಂತೆ ನೈಜ ಆರ್ಥಿಕತೆಯಲ್ಲಿ ಬಂಡವಾಳ ಹೂಡಿಕೆಯ ಪ್ರವೃತ್ತಿಯನ್ನು ಹೆಚ್ಚಿಸುವಂತೆ ಮಾಡಬೇಕಾದ ಬೇಡಿಕೆ ರಂಗದ ಪರಿಸ್ಥಿತಿಯೇನು? ೨೦೦೩-೪ ಮತ್ತು ೨೦೦೭-೮ರ ಅವಧಿಯಲ್ಲಿ ಬಂಡವಾಳ ಹೂಡಿಕೆಯ ಪ್ರವೃತ್ತಿಯನ್ನು ಹೆಚ್ಚಿಸಿದ್ದು ದೇಶದ ಆಸ್ತಿಪಾಸ್ತಿಗಳನ್ನು ಅಗ್ಗದ ದರದಲ್ಲಿ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ದೊರೆಯುವಂತೆ ಮಾಡಿದ್ದು. ಇದಕ್ಕೆ ಕಾರಣ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಬಿಡಿಗಾಸಿಗೆ ಖಾಸಗೀಕರಣ ಮಾಡುವ ನೀತಿಗಳನ್ನು ಜಾರಿಗೆ ತಂದದ್ದು. ನಂತರದಲ್ಲಿ ಯುಪಿಎ ಸರ್ಕಾರ ಸಹ ದೇಶದ ಖನಿಜ, ಅರಣ್ಯ, ಕಲ್ಲಿದ್ದಲು,  ಟೆಲಿಕಾಂ ತರಂಗಾಂತರಗಳಾನ್ನೂ ಒಳಗೊಂಡಂತೆ ದೇಶದ ಸಂಪನ್ಮೂಲಗಳನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಅಗ್ಗದ ದರಗಳಿಗೆ ಪರಭಾರೆ ಮಾಡುವುದನ್ನು ಮುಂದುವರೆಸಿತು. ಇದರ ಜೊತೆ ಕಾರ್ಪೊರೇಟ್ ಕಂಪನಿಗಳು ಲಾಭದಾಯಕವಲ್ಲ ಎಂದು ಭಾವಿಸುವ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯ ಮೂಲಭೂತ ಸೌಕರ್ಯ ಯೋಜನೆಗಳಿಗೆ (ಪಿಪಿಪಿ) ವಯಬಿಲಿಟಿ ಗ್ಯಾಪ್ ಫಂಡಿಂಗ್ (ಲಾಭದಾಯಕತೆ ಕೊರತೆಯನ್ನು ತುಂಬುವ ಅನುದಾನ) ಹೆಸರಿನಲ್ಲಿ ದೊಡ್ಡ ಮೊತ್ತದ ಬಂಡವಾಳ ಸಬ್ಸಿಡಿ ಒದಗಿಸಿದ್ದು ಬೇರೆ ನಡೆಯಿತು. ಆದರೆ ಬಯಲಾದ ಭ್ರಷ್ಟಾಚಾರಗಳು ಮತ್ತು ಸಾರ್ವಜನಿಕರ ಪ್ರತಿರೋಧಗಳ ಕಾರಣದಿಂದಾಗಿ ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಸಂಪನ್ಮೂಲ ಪರಭಾರೆ ಮಾಡುವ ನೀತಿಗಳನ್ನು ರಾಜಕೀಯವಾಗಿ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಒಂದು ವೇಳೆ ೨೦೧೯ರ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಅಗ್ಗದ ಬೆಲೆಗೆ ಕಾರ್ಪೊರೇಟ್ ಕಂಪನಿಗಳಿಗೆ ವ್ಯೂಹಾತ್ಮಕವಾಗಿ ಮಾರುವ ಹಳೆಯ ಎನ್‌ಡಿಎ ಸರ್ಕಾರದ ನೀತಿಗಳನ್ನು ಮುಂದುವರೆಸುವರೇ?

ಉತ್ಪಾದಕ ಕ್ಷೇತ್ರದಲ್ಲಿ ಒಟ್ಟಾರೆ ಮೌಲ್ಯ ಸಂಚಯನ (ಜಿವಿಎ)ದ ಅಂಕಿಅಂಶಗಳು ೨೦೧೭-೧೮ರ ಎರಡನೇ ತ್ರೈಮಾಸಿಕದಲ್ಲಿ ಸ್ವಲ್ಪ ವೃದ್ಧಿಯನ್ನು ಕಂಡಿದ್ದರೂ ೨೦೧೫-೧೬ರ ಕೊನೆಯ ತ್ರೈಮಾಸಿಕದಿಂದ ಸತತ ಇಳಿಮುಖವನ್ನೂ ತೋರುತ್ತಿರುವುದು ಗಂಭೀರವಾದ ಸಂಗತಿಯಾಗಿದೆ. ಇದಕ್ಕೆ ಭೂಮಿ ಬೆಲೆಯು ಗಗನಕ್ಕೇರುತ್ತಿರುವುದು ಮತ್ತು ಸಾಲ ಮರುಪಾವತಿ ಸಮಸ್ಯೆಗಳಿಂದಾಗಿ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿರುವುದನ್ನು ತತ್‌ಕ್ಷಣದ ಕಾರಣಗಳೆಂದು ಸೂಚಿಸಲಾಗುತ್ತಿದೆ. ಆದರೆ ಆಮದು ಸರಕುಗಳು ಒಡ್ಡುತ್ತಿರ್ರುವ ಸ್ಪರ್ಧೆಯು ಈ ಉದ್ಯಮಗಳ ಮಾರಾಟದ ಆದಾಯದ ಮೇಲೂ, ಸಾಮರ್ಥ್ಯದ ಬಳಕೆಯ ಮೇಲೂ ತೀವ್ರವಾದ ಪರಿಣಾಮವನ್ನು ಉಂಟುಮಾಡಿದೆ. ಹೀಗಾಗಿ ಅವುಗಳ ಲಾಭಾಂಶವು ಕಡಿಮೆಯಾಗುತ್ತಿದೆ. ಇದು ಅವುಗಳ ಲಾಭದ ದರದ ನಿರೀಕ್ಷೆಯ ಮೇಲೂ ಹಾಗೂ ಆ ಮೂಲಕ ಹೂಡಿಕೆಯ ಪ್ರವೃತ್ತಿಯ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ. ಅಷ್ಟು ಮಾತ್ರವಲ್ಲದೆ ೨೦೧೬-೧೭ ಮತ್ತು ೨೦೧೭-೧೮ರಲ್ಲಿ ನಿರ್ಮಾಣ ಕ್ಷೇತ್ರದ ಜಿವಿಎ ನಲ್ಲೂ ಅಭಿವೃದ್ಧಿ ಕಂಡುಬರುತ್ತಿಲ್ಲ. ಇದರಿಂದಾಗಿ ಉಕ್ಕು, ಸಿಮೆಂಟ್, ಉದ್ಯೋಗ ಮತ್ತಿತರ ಭೌತಿಕ ಒಳಸುರಿಗಳ ಬೇಡಿಕೆಯ ಮೇಲೂ ನಕಾರಾತ್ಮಕ ಪರಿಣಾಮವನ್ನೂ ಬೀರಿದೆ. ಪರಿಣಾಮವಾಗಿ ಈ ಕೈಗಾರಿಕೆಗಳ ನಿರೀಕ್ಷಿತ ಲಾಭದ ದರಗಳು ಮತ್ತು ಹೂಡಿಕೆಗಳು ಕಡಿಮೆಯಾಗಿವೆ.

೨೦೧೬-೧೭ರ ಕೊನೆಯ ತ್ರೈಮಾಸಿಕದ ನಂತರದಲ್ಲಿ ಕೃಷಿಯಲ್ಲೂ ಜಿವಿಎ ಯ ಅಭಿವೃದ್ಧಿ ದರ ಹೊಡೆತವನ್ನನುಭವಿಸಿದೆ. ಆರ್ಥಿಕ ಸಮೀಕ್ಷೆಯು ೨೦೧೭-೧೮ರ ಎರಡನೇ ಅವಧಿಯಲ್ಲಿ ಕೃಷಿಯು ಚೇತರಿಸಿಕೊಳ್ಳುತ್ತದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದೆ. ಆದರೆ ಹಾಗಾಗಬೇಕೆಂದರೆ ಅಹಾರ ಧಾನ್ಯ ಮತ್ತು ವಾಣಿಜ್ಯ ಬೆಳಗಳೆರಡಕ್ಕೂ ಲಾಭದಾಯಕ ದರಗಳನ್ನು ಖಾತರಿಪಡಿಸುವ ವ್ಯವಸ್ಥೆಯು ಪುನಶ್ಚೇತನಗೊಳ್ಳಬೇಕು. ಅಷ್ಟು ಮಾತ್ರವಲ್ಲದೆ ವಾಣಿಜ್ಯಬೆಳೆಗಳ ಮಾರಾಟ ನಿಗಮಗಳ ಮಾರುಕಟ್ಟೆ ವ್ಯವಹಾರಗಳು ನವೀಕರಣಗೊಳ್ಳಬೇಕು. ರೈತರ ಸಾಲ ಪರಿಹಾರದ ಜೊತೆಜೊತೆಗೆ ಇಂಥಾ ಬೆಲೆ ಬೆಂಬಲದ ಯೋಜನೆಗಳು ಜೊತೆಗೂಡಬೇಕು. ರೈತಾಪಿಯ ಸಾಲ ಮನ್ನ ಮಾಡುವುದು ಒಂದು ನೈತಿಕ ಅವಘಡಕ್ಕೆ ದಾರಿಮಾಡಿಕೊಡಬಹುದೆಂಬ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ ಅದೇ ಮಹಾಶಯರುಗಳು ಕೈಗಾರಿಕೋದ್ಯಮಿಗಳು, ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದಿದ್ದರೂ, ಸಾಲ ಮನ್ನ ಯೋಜನೆಗಳ ಫಲಾನುಭವಿಗಳಾಗುತ್ತಲೇ ಇರುವುದರ ಬಗ್ಗೆ ಚಕಾರವೆತ್ತುವುದಿಲ್ಲ. ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದ ಉದ್ಯಮಿಗಳಿಗೆ ಸೀಮಿತ ಹೊಣೆಗಾರಿಕೆ (ಲಿಮಿಟೆಡ್ ಲಯಬಿಲಿಟಿ) ಸೌಲಭ್ಯಗಳು ದೊರೆಯದಂತೆ ಕಂಪನಿ ಕಾನೂನುಗಳಿಗೆ ತಿದ್ದುಪಡಿ ತರಬೇಕೆಂದು ಸಲಹೆ ಮಾಡಿದರೆ ಸಾಕು ಇವರೆಲ್ಲರೂ ತಿರುಗಿಬೀಳುತ್ತಾರೆ.

ಸ್ವಲ್ಪ ಹಿಂದೆ, ಎಂದರೆ, ಸಾರ್ವಜನಿಕ ಜೀವನದಲ್ಲಿ ಅಪ್ರಾಮಾಣಿಕತೆಯು ಇಂದಿನ ಮಟ್ಟವನ್ನು ತಲುಪಿರದ ಕಾಲದಲ್ಲಿ, ಬ್ರೆಜಿಲ್ ದೇಶದಲ್ಲಿ ಸೇನಾಡಳಿತವು ಇದ್ದ ಸಂದರ್ಭದಲ್ಲಿ ಅದರ ಅಧ್ಯಕ್ಷರು ಒಮ್ಮೆ ಅಮೆರಿಕಕ್ಕೆ ಭೇಟಿ ನೀಡಿದಾಗ ಪತ್ರಕರ್ತರು ಬ್ರೆಜಿಲ್‌ನ್ ಆರ್ಥಿಕತೆಯ ಸ್ಥಿತಿಗತಿ ಹೇಗಿದೆಯೆಂದು ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಅವರು:  ನನ್ನ ದೇಶದಲ್ಲಿ ಆರ್ಥಿಕತೆಯ ಸ್ಥಿತಿಗತಿ ಚೆನ್ನಾಗಿಯೇ ಇದೆ. ಆದರೆ ಜನತೆಯ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಉತ್ತರಿಸುತ್ತಾರೆ. ಮೋದಿ ಸರ್ಕಾರವು ಜಾರಿಗೆ ತಂದ ನೋಟು ನಿಷೇಧ ಮತ್ತು ಜಿಎಸ್‌ಟಿಯೆಂಬ ಕ್ರಮಗಳು ಅಸಂಘಟಿತ ವಲಯದ ಜನಜೀವನದ ಮೇಲೆ ಆಘಾತಕಾರವಾದ ದಾಳಿ ಮಾಡಿದ್ದರೂ ಅದನ್ನು ಆಟದ ಸ್ವರೂಪವನ್ನೇ ಬದಲಿಸಿದ ಮಹತ್ವದ ಕ್ರಮಗಳೆಂದು ಕೊಚ್ಚಿಕೊಳ್ಳಲಾಗುತ್ತದೆ. ಆವರ ಪ್ರಕಾರ ಇವುಗಳ ಒಂದೇ ಒಂದು ಅನುದ್ದೇಶಿತ ನಕಾರಾತ್ಮಕ ಪರಿಣಾಮವೆಂದರೆ ಜಿಡಿಪಿ ಬೆಳವಣಿಗೆಯ ದರಗಳಲ್ಲಿ ಒಂದು ಸಣ್ಣ ಇಳಿತವಾಗಿರುವುದು. ಆದರೆ ಉದ್ಯೋಗ ಮತ್ತು ಜೀವನೋಪಾಯಗಳ ಮೇಲೆ ಅದು ಮಾಡಿರುವ ನಕಾರಾತ್ಮಕ ಪರಿಣಾಮಗಳನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡಲಾಗುತ್ತಿದೆ.

ಈ ಪತ್ರಿಕೆಯ ಅಂಕಣಗಳಲ್ಲಿ ನೋಟು ನಿಷೇಧದಿಂದ ಜನಸಾಮಾನ್ಯರ ಬದುಕಿನ ಮೇಲಾಗಿರುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಚರ್ಚಿಸಿದ್ದೇವೆ. ಆದರೂ ಜಿಎಸ್‌ಟಿ ಯು ಹೇಗೆ ಅಸಂಘಟಿತ ಕ್ಷೇತ್ರವನ್ನು ಹಿಂಡುತ್ತಿದೆ ಎಂಬ ಬಗ್ಗೆ ಒಂದೆರಡು ಮಾತುಗಳು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಜಿಎಸ್‌ಟಿಯು ಅಸಂಘಟಿತ ಕ್ಷೇತ್ರದ ಉದ್ಯಮಗಳ ವಹಿವಾಟು ಮಾಡುವ ವೆಚ್ಚವನ್ನು ಹೆಚ್ಚಿಸಿದೆ ಮತ್ತು ಜಿಎಸ್ಟಿ ಮರುಪಾವತಿಗೆ ಕಾಯುವ ವೆಚ್ಚವನ್ನು ಹೆಚ್ಚಿಸಿದೆ. ಅಲ್ಲದೆ ಅಸಂಘಟಿತ ಕ್ಷೇತ್ರವನ್ನು ತೆರಿಗೆ ಬಲೆಯೊಳಗೆ ತಂದುಕೊಂಡು ಖಾಸಗಿ ಕಾರ್ಪೊರೇಟ್ ಕಂಪನಿಗಳ ಮೇಲಿನ ಪರೋಕ್ಷ ತೆರಿಗೆ ಭಾರವನ್ನು ಕಡಿಮೆ ಮಾಡಲಾಗಿದೆ. ಕೃಷಿ ಕ್ಷೇತ್ರವನ್ನೂ ಒಳಗೊಂಡಂತೆ ಅಸಂಘಟಿತ ಕ್ಷೇತ್ರವು ಜಿಡಿಪಿಗೆ ಶೇ.೪೫ರಷ್ಟು ಕೊಡುಗೆಯನ್ನು ನೀಡುತ್ತಿದ್ದು ಶೇ.೭೫ ರಷ್ಟು ಕಾರ್ಮಿಕರನ್ನು ಹೊಂದಿದೆ. ಈಗ ಕೃಷಿಯೇತರ ಅಸಂಘಟಿತ ಕ್ಷೇತ್ರದ ಗಣನೀಯ ಪ್ರಮಾಣದ ವಹಿವಾಟನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತಂದುಕೊಂಡಿರುವುದರಿಂದ ಅತ್ಯಂತ ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವ್ಯವಹರಿಸುತ್ತಿದ್ದ ಈ ಕ್ಷೇತ್ರದ ಬಹುಪಾಲು ವಹಿವಾಟುಗಳೇ ಅಸುನೀಗುವ ಸಾಧ್ಯತೆಗಳು ಹೆಚ್ಚಿವೆ, ಇದರಿಂದ ಉದ್ಯೋಗಗಳಿಗೆ ಮತ್ತು ಜೀವನೋಪಾಯಗಳಿಗೆ ಹುದೊಡ್ಡ ಹೊಡೆತ ಬೀಳಲಿದೆ.

ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು (ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್) ಹೊರತಂದಿರುವ ಜಾಗತಿಕ ಹಸಿವು ಸೂಚ್ಯಂಕ: ಹಸಿವಿನ ಅಸಮಾನತೆಗಳು-೨೦೧೭ (೨೦೧೭ ಗ್ಲೋಬಲ್ ಹಂಗರ್ ಇಂಡೆಕ್ಸ್: ದಿ ಇನ್‌ಈಕ್ವಾಲಿಟೀಸ್ ಆಫ್ ಹಂಗರ್)ನ ಪ್ರಕಾರ ಭಾರತದಲ್ಲಿನ ಐದು ವರ್ಷದೊಳಗಿನ ಮಕ್ಕಳು ಎದುರಿಸುತ್ತಿರುವ ಅಪೌಷ್ಟಿಕತೆ, ದೇಹದ ಬೆಳವಣಿಗೆಯಾಗದಿರುವುದು, ಬಲಹೀನತೆ ಮತ್ತು ಸಾವುಗಳ ಪ್ರಮಾಣವು ಬಂಗ್ಲಾದೇಶ ಮತ್ತು ಕೆಲವು ಆಫ್ರಿಕಾ ದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತದಲ್ಲಿ ಅಗತ್ಯವಿರುವಷ್ಟು ಕ್ಯಾಲೋರಿ ಆಹಾರವನ್ನು ಸೇವಿಸದಿರುವುದರಿಂದ ಶೇ.೩೮ರಷ್ಟು ಮಕ್ಕಳ ದೇಹದ ಬೆಳವಣಿಗೆಯು ಸರಿಯಾಗಿ ಆಗದೆ ಬೆಳೆಯಬೇಕಾದ ಎತ್ತರಕ್ಕೆ ಬೆಳೆಯುವುದೇ ಇಲ್ಲ. ಮೇಲಿನ ಜಾಗತಿಕ ಹಸಿವು ವರದಿಯನ್ನು ಉಲ್ಲೇಖಿಸುವ ಆರ್ಥಿಕ ಸಮೀಕ್ಷೆಯು ಭಾರತದಲ್ಲಿ ಖಾಯಿಲೆಯ ಭಾರವನ್ನು ಹೆಚ್ಚಿಸುವ ಅತಿ ದೊಡ್ಡ (ಶೇ.೧೪.೬) ಅಂಶವೆಂದರೆ ಅಪೌಷ್ಟಿಕತೆಯೆಂದು ಒಪ್ಪಿಕೊಳ್ಳುತ್ತದೆ. ಇನ್ನೂ ದೊಡ್ಡ ಸಮಸ್ಯೆಯೆಂದರೆ ಬಡತನ, ಸಂಕಷ್ಟಗಳು ಮತ್ತು ದಾರಿದ್ರ್ಯಗಳ ವಿಶಾಲ ಸಾಗರದಲ್ಲಿ ಸಂಪತ್ತು, ಐಷಾರಾಮ, ಮತ್ತು ನಾಗರಿಕತೆಗಳ ದ್ವೀಪಗಳು ಸೃಷ್ಟಿಯಾಗಿರುವುದು. ಗ್ರಾಮೀಣ ಪ್ರದೇಶದ ೪/೫ ಭಾಗದಷ್ಟು ಜನರು ದೈನಂದಿನ ಅಗತ್ಯವಾಗಿರುವ ೨೪೦೦ ಕ್ಯಾಲೋರಿಗಳಷ್ಟು ಶಕ್ತಿಯನ್ನು ನೀಡುವ  ಆಹಾರಕ್ಕಾಗಿ ಮತ್ತು ನಗರ ಪ್ರದೇಶದಲ್ಲಿ ೩/೫ ಭಾಗದಷ್ಟು ಜನರು ೨೧೦೦ ಕ್ಯಾಲೋರಿಯಷ್ಟು ಆಹಾರಕ್ಕಾಗಿ ಅಗತ್ಯವಿರುವಷ್ಟು ವೆಚ್ಚವನ್ನು ಮಾಡಲಾಗದ ಪರಿಸ್ಥಿಯಲ್ಲಿದ್ದಾರೆ. ಇವರ ಪರಿಸ್ಥಿತಿಗಳನ್ನು ಭಾರತ ಸಮಾಜದ ಮತ್ತೊಂದು ತುದಿಯಲ್ಲಿರುವ ೧೦೦ ಡಾಲರ್ ಬಿಲಿಯನಾಧೀಶರ ಅಭೂತಪೂರ್ವ ಐಷಾರಾಮಗಳೊಂದಿಗೆ ಹೋಲಿಸಿ ನೋಡಬೇಕು. ಈ ಕಾರಣಕ್ಕಾಗಿಯೇ ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ (ಐಸಿಡಿಎಸ್) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಿಗೆ (ನರೇಗ) ಅಗತ್ಯವಿರುವಷ್ಟು ಸಂಪನ್ಮೂಲಗಳನ್ನು ಒದಗಿಸಬೇಕಾಗಿರುವುದು ಅತ್ಯವಶ್ಯವಾಗಿದೆ.

ಆರ್ಥಿಕ ಸಮೀಕ್ಷೆಯ ಜಿಡಿಪಿ ಮತ್ತು ಜಿವಿಎ ಬಗೆಗಿನ ವಿಶ್ವಾಸಕ್ಕೆ ಯೋಗ್ಯವಲ್ಲದ ಅಂಕಿಅಂಶಗಳು, ಅಭಿವೃದ್ಧಿಯ ಬಗೆಗಿನ ಅದರ ಗೀಳು, ಅಭಿವೃದ್ಧಿ ಪ್ರಕ್ರಿಯೆಗಳು ಏಕೆ ದಾರಿ ತಪ್ಪುತ್ತಿವೆ ಮತ್ತು ಅದನ್ನು ಸರಿದಾರಿಗೆ ತರುವುದು ಹೇಗೆ ಎಂಬ ಬಗ್ಗೆ ಅದರ ತಿಳವಳಿಕೆಗಳು, ಸುಲಭವಾಗಿ ಭಾರತದಲ್ಲಿ ಉದ್ಯಮ ನಡೆಸುವಂತಾಗಲು ಮತ್ತೊಂದು ಮಜಲನ್ನು ಮುಟ್ಟಲು ಅದು ತೋರುತ್ತಿರುವ ಕಾತರಗಳು, ಹವಾಮಾನ ಬದಲಾವಣೆ ಮತ್ತು ಲಿಂಗ ಅಸಮಾನತೆಯ ಬಗ್ಗೆ ಅದರ ಬಾಯುಪಚಾರದ ಮಾತುಗಳೆಲ್ಲವು ಬಜೆಟ್ಟಿನಲ್ಲಿದೆ. ಆದರೂ ಅದರ ಮುಖ್ಯ ಉದ್ದೇಶ  ಮಾತ್ರ ಬಂಡವಾಳ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವುದೇ ಆಗಿದೆ. ಆದರೆ ವಾಸ್ತವದಲ್ಲಿ ದೇಶದ ಆರ್ಥಿಕತೆಯ ಸ್ಥಿತಿಗತಿಗಳೂ ಚೆನ್ನಾಗಿಲ್ಲ. ಜನರ ಪರಿಸ್ಥಿತಿಗಳೂ ಚೆನ್ನಾಗಿಲ್ಲ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top