ವರ್ಗಾವಣೆಗಳು ಶಿಕ್ಷೆಯಾಗುವುದಿಲ್ಲ
ಪೊಲೀಸ್ ಸಿಬ್ಬಂದಿಗಳು ತಮ್ಮ ಜಾತಿ ಹಾಗೂ ಕೋಮುವಾದಿ ಪ್ರಜ್ನೆಯಿಂದ ಹೊರಬರುವಂತೆ ತರಬೇತಿ ನೀಡಲಾಗುತ್ತಿದೆಯೇ?
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಐಪಿಎಸ್ ಅಧಿಕಾರಿಯಾಗಿರುವ ಭಾಗ್ಯಶ್ರೀ ನವ್‌ಟಾಕೆಯವರು ತಾವು ಹೇಗೆ ದಲಿತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ, ಮುಸ್ಲಿಮರಿಗೆ ಕಿರುಕುಳ ನೀಡಿ ಮರಾಠರನ್ನು ರಕ್ಷಿಸುತ್ತಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಲ್ಲಿ ವಿಸ್ತೃತವಾಗಿ ಹಂಚಿಕೆಯಾಗಿ ವೈರಲ್ ಆಗಿಬಿಟ್ಟಿತು. ಮಹಾರಾಷ್ಟ್ರ ಸರ್ಕಾರ ಇದೀಗ ಆ ಅಧಿಕಾರಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿದೆ. ಅಧಿಕಾರಿಗಳನ್ನು ಮತ್ತು ಪೊಲೀಸರನ್ನು ವರ್ಗಾವಣೆ ಮಾಡುವುದು ಒಂದು ಶಿಕ್ಷಾಕ್ರಮವೆಂದು ಭಾವಿಸಲಾಗಿದೆ. ಆದರೆ ಸರ್ಕಾರ ಮತ್ತು ಪ್ರಬಲ ರಾಜಕಾರಣಿಗಳು ಈ ವರ್ಗಾವಣೆಯನ್ನು ಎರಡೂ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಒಂದು ತಮ್ಮ ಇಚ್ಚೆಯಂತೆ ಕೆಲಸ ಮಾಡದ ಅಧಿಕಾರಿಯನ್ನು ಶಿಕ್ಷಿಸಲು, ಎರಡನೆಯದು ಯಾವುದಾದರೂ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುವ ಸಾರ್ವಜನಿಕರ ಮನ ಗೆದ್ದುಕೊಳ್ಳಲು. ನವ್‌ಟಾಕೆಯವರು ಕೊಚ್ಚಿಕೊಂಡಿರುವ ಕ್ರಮಗಳು ದಲಿತರು ಮತ್ತು ಮುಸ್ಲಿಮರ ವಿರುದ್ಧ ಅವರಲ್ಲಿ ಆಳವಾಗಿ ಬೇರುಬಿಟ್ಟಿರುವ ಪುರ್ವಗ್ರಹಗಳನ್ನು ವಿವರವಾಗಿ ಬಿಚ್ಚಿಡುತ್ತದೆ. ಈ ಪ್ರಕರಣದಿಂದ ಎರಡು ಅಂಶಗಳು ಹೊರಬಂದಿವೆ: ಕೇವಲ ವರ್ಗಾವಣೆ ಆಗುವುದರಿಂದ ವಿಡಿಯೋದಲ್ಲಿ ವ್ಯಕ್ತವಾಗಿರುವ ಅವರ ಜಾತಿವಾದಿ ಮತ್ತು ಕೋಮುವಾದಿ ಧೋರಣೆಗಳು ಕಡಿಮೆಯಾಗಬಲ್ಲವೇ? ಪೊಲೀಸ್ ತರಬೇತಿ ಕೈಪಿಡಿಯಲ್ಲಿ ಏನೇ ಹೇಳಿದ್ದರೂ ಪೊಲೀಸರು ತಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಬೇರುಬಿಟ್ಟಿರುವ ಪೂರ್ವಗ್ರಹ ಮತ್ತು ದ್ವೇಷಗಳಿಂದ ಮುಕ್ತರಾಗಿರಬಲ್ಲರೇ?
ಇತರ ಎಲ್ಲಾ ಆಡಳಿತಶಾಹಿ ಸಂಸ್ಥೆಗಳಂತೆ ಪೊಲೀಸ್ ಪಡೆಗಳೂ ಸಹ ಜಾತಿ, ಕೋಮುವಾದ ಮತ್ತು ಪುರುಷಾಧಿಪತ್ಯಗಳಿಂದ ಕೂಡಿದ ಆಳುವ ಸಿದ್ಧಾಂತಗಳಿಂದ ಈಗಲೂ ಪ್ರಭಾವಿತವಾಗುತ್ತಿವೆ ಎಂಬುದು ಸುಲಭವಾಗಿಯೇ ಅರ್ಥವಾಗುವ ವಿಷಯ. ಅದರಲ್ಲೂ ಪೊಲೀಸ್ ವ್ಯವಸ್ಥೆಯು ಇನ್ನೂ ಆಳವಾದ ಪುರುಷಾಧಿಪತ್ಯ ಧೋರಣೆಯಿಂದಲೂ, ಮಹಿಳೆಯರು, ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಧೋರಣೆಯಿಂದಲೂ ಕೂಡಿದೆ ಎಂಬುದು ಜನಜನಿತವಾದ ಸಂಗತಿಯೇ ಆಗಿದೆ.
ಸಾಮಾಜಿಕ-ಆರ್ಥಿಕ ಅಂಶಗಳ ಹೋಲಿಕೆಯಲ್ಲಿ ಹೇಳುವುದಾದರೆ ಮಹಾರಾಷ್ಟ್ರ ರಾಜ್ಯವನ್ನು ಪ್ರಗತಿಪರ ರಾಜ್ಯವೆಂದು ಪರಿಗಣಿಸಲಾಗುತ್ತದೆ. ಅಷ್ಟಿದ್ದರೂ, ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಸೇರಿದ ಆರೋಪಿಗಳನ್ನು ತಾನು ಹೇಗೆ ನಡೆಸಿಕೊಳ್ಳುತ್ತೇನೆಂದು ಕೊಚ್ಚಿಕೊಂಡ ಮಹಿಳಾ ಅಧಿಕಾರಿಯ ಮಾತುಗಳು ರಾಜ್ಯದ ಇಂದಿನ ಪರಿಸ್ಥಿತಿಗೆ ಒಂದು ಕೈಗನ್ನಡಿಯಂತಿದೆ. ಇತ್ತೀಚಿನ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡೇ ಹೇಳುವುದಾದರೆ, ೨೦೦೬ರಲ್ಲಿನ ಖೈರ್ಲಾಂಜಿ ಹತ್ಯಾಂಕಾಂಡದಿಂದ ಹಿಡಿದು ಇತ್ತೀಚಿನ ಭೀಮಾ-ಕೋರೆಗಾಂವ್ ಹಿಂಸಾಚಾರದವರೆಗೆ ರಾಜ್ಯದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳ ಘಟನೆಗಳನ್ನು ಗಮನಿಸಿದರೆ ಪೊಲೀಸರು ದಲಿತ ವಿರೋಧಿ ಮನೋಭಾವ ಹೊಂದಿದ್ದಾರೆಂಬ ಭಾವನೆ ಪ್ರಧಾನವಾಗಿ ಮೂಡುತ್ತದೆ. ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಹಿಡಿಯಲು ರಚಿತವಾದ ೧೯೮೯ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಮರಾಠಾ ಸಮುದಾಯವು ೨೦೧೬ರಲ್ಲಿ ನಡೆಸಿದ ಮೂಕಮೋರ್ಚಾಗಳ ಸಂದರ್ಭದಲ್ಲಿ ದಲಿತ ಸಮುದಾಯದ ಮೇಲೆ ನಡೆಸಲಾದ ಹಿಂಸಾಚಾರ ಮತ್ತು ಆಸ್ತಿಪಾಸ್ತಿ ದಹನದಂಥ ದಾಳಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ನಿಷ್ಖ್ರಿಯರಾಗಿದ್ದ ಬಗ್ಗೆ ಹಲವಾರು ದೂರುಗಳು ಕೇಳಿಬಂದವಲ್ಲದೆ ಇದರ ಬಗ್ಗೆ ಬಾಂಬೆ ಹೈಕೋರ್ಟಿನಲ್ಲಿ ಒಂದು ಮೊಕದ್ದಮೆಯನ್ನೂ ಹೂಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಉತ್ತರಪ್ರದೇಶದ ಪೊಲೀಸರು ಆರೋಪಿಗಳು ಯಾವ ಧಾರ್ಮಿಕ ಸಮುದಾಯಕ್ಕೆ ಸೇರಿದವರೆಂಬುದನ್ನು ಆಧರಿಸಿ ಆಕ್ರಮಣಕಾರಿಯಾಗಿಯೂ ಇಲ್ಲವೇ ನಿಷ್ಕ್ರಿಯರಾಗಿಯೂ ಇರುವಷ್ಟು ಕುಖ್ಯಾತರಾಗಿಬಿಟ್ಟಿದ್ದಾರೆ. ಎನ್‌ಕೌಂಟರ್ ಹೆಸರಿನಲ್ಲಿ ಗುಂಡಿಟ್ಟು ಕೊಂದುಹಾಕುವುದು, ರೋಮಿಯೋ ಸ್ಕ್ವಾಡ್ ಹೆಸರಿನಲ್ಲಿ ಯುವ ಜೋಡಿಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ಹಿಂದೂ-ಮುಸ್ಲಿಂ ಜೋಡಿಗಳನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವುದು, ಲವ್ ಜಿಹಾದ್ ಬಗ್ಗೆ ನಂಜಿನ ಹಾಗೂ ದ್ವೇಷಪೂರಿತ ಪ್ರಚಾರ ನಡೆಸುತ್ತಿರುವುದು, ಮತ್ತು ಹಸುಗಳ್ಳರೆಂಬ ನೆಪದಲ್ಲಿ ಆರೋಪಿತರನ್ನು ಗುಂಪುಗೂಡಿ ಕೊಂದುಹಾಕುತ್ತಿರುವುದೆಲ್ಲವೂ ಆ ರಾಜ್ಯದ ಪೊಲೀಸರು ಸಮಾಜದಲ್ಲಿನ ಪೂರ್ವಗ್ರಹ ಮತ್ತು ಪಕ್ಷಪಾತಗಳಿಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದನ್ನು ಸಾಬೀತುಪಡಿಸುತ್ತದೆ. ವಾಸ್ತವವಾಗಿ, ಇತ್ತೀಚೆಗೆ ಲಕ್ನೌನಲ್ಲಿ ಕಾರ್ಪೊರೇಟ್ ಕಂಪನಿಯೊಂದರ ನಿರಾಯುಧ ಅಧಿಕಾರಿಯನ್ನು ವಿನಾಕಾರಣ ಕೊಂದಿದ್ದಕ್ಕೆ ತಮ್ಮ ಮೇಲೆ ಕ್ರಮತೆಗೆದುಕೊಂಡಿದ್ದನ್ನು ವಿರೋಧಿಸಿ ಪೊಲೀಸರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದರು. ದೆಹಲಿ ಹೈಕೋರ್ಟು ಇತ್ತೀಚೆಗೆ ಹಾಶಿಂಪುರ ಘಟನೆಯ ಬಗ್ಗೆ ನೀಡಿದ ತೀರ್ಮಾನಕ್ಕೂ ಈ ರಾಜ್ಯ ಸಾಕ್ಷಿಯಾಗಿದೆ. ಉತ್ತರಪ್ರದೇಶ ಪ್ರಾಂತೀಯ ಸಶಸ್ತ್ರ ಪೊಲೀಸ್ ಪ್ಪಡೆಗೆ ಸೇರಿದ್ದ ಪೊಲೀಸರು ಉದ್ದೇಶಪೂರ್ವಕವಾಗಿ ಹಾಶಿಂಪುರದಲ್ಲಿ ೪೨ ಮುಸ್ಲಿಮರನ್ನು ಕೊಂದು ದೇಹಗಳನ್ನು ಹತ್ತಿರದ ಕಾಲುವೆಗೆ ಎಸೆದಿದ್ದರು ಈ ಪ್ರಕರಣದಲ್ಲಿ ೩೧ ವರ್ಷಗಳ ನಂತರ ನ್ಯಾಯತೀರ್ಮಾನವನ್ನು ಕೋರ್ಟು ನೀಡಿತು. ಹಾಗೂ ತನ್ನ ತೀರ್ಮಾನದಲ್ಲಿ ಅದು ಈ ಹತ್ಯಾಕಾಂಡವು ಕಾನೂನನ್ನು ಜಾರಿಗೊಳಿಸಬೇಕಾದ ಸಂಸ್ಥೆಯಲ್ಲಿ ಬೇರುಬಿಟ್ಟಿರುವ ಸಾಂಸ್ಥಿಕ ಪೂರ್ವಗ್ರಹಗಳನ್ನು ಬಯಲು ಮಾಡಿದೆ ಎಂದು ಹೇಳಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಒದಗಿದಾಗ, ದೊಂಬಿ ಮತ್ತು ಇತರ ವೈಷಮ್ಯಗಳು ಭುಗಿಲೆದ್ದ ಸಂದರ್ಭದಲ್ಲಿ ಮಾತ್ರವಲ್ಲದೆ ಖಾಸಗಿ ವಲಯದಲ್ಲಿ ಹಿಂಸೆಗಳು ಸಂಭವಿಸಿದಾಗಲೂ ಕ್ರಮಗಳನ್ನು ತೆಗೆದುಕೊಳ್ಳಲು, ಮಧ್ಯಸ್ಥಿಕೆ ವಹಿಸಲು, ಸಾಂತ್ವನ ಮಾಡಲು ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಮುಖವಾಗಿ ಮತ್ತು ಪದೇಪದೇ ನಿಯುಕ್ತಗೊಳ್ಳುವ ಸಂಸ್ಥೆಯಾದ ಪೊಲೀಸ್ ವ್ಯವಸ್ಥೆಯು ಎಲ್ಲರ ದೃಷ್ಟಿಗೆ ಹೆಚ್ಚಾಗಿ ಕಂಡುಬರುವ ಪ್ರಭುತ್ವದ ಅಂಗವಾಗಿದೆ. ಆ ಸಂಸ್ಥೆಯ ಪುರುಷ ಹಾಗೂ ಮಹಿಳಾ ಸಿಬ್ಬಂದಿಗಳು ನಾಗರಿಕರೊಡನೆ ಪ್ರತಿನಿತ್ಯ ವ್ಯವಹರಿಸುತ್ತಾರೆ. ಪೊಲೀಸರೆಂದರೆ ಜನಸ್ನೇಹಿಗಳೆಂದೂ ಮತ್ತು ಜನರಿಗೆ ’ಸೇವೆ’ ಮಾಡಲು ಸದಾ ಸಿದ್ಧರಾಗಿರುವವರೆಂದು ಬಿಂಬಿಸಲು ಪದೇಪದೇ ಸಾರ್ವಜನಿಕ ಸಂಪರ್ಕ ಅಭಿಯಾನಗಳನ್ನು ಸಹ ಕೈಗೊಳ್ಳಲಾಗಿದೆ. ಆದರೆ ಅವರು ಸೇವೆ ಮಾಡುವ ಸಮುದಾಯಗಳು ಮತ್ತು ನೆರೆಹೊರೆಯವರು ಪೊಲೀಸರನ್ನು ಹೇಗೆ ಪರಿಭಾವಿಸುತ್ತಾರೆ? ಭಾರತದಂಥ ಬಹುಧರ್ಮೀಯ, ಬಹುಬಗೆಯ ಸಮಾಜವಿರುವ ದೇಶದಲ್ಲಿ ಈ ಬಹುತ್ವವನ್ನು ನಿಭಾಯಿಸುವ ನಿಟ್ಟಿನಲ್ಲಿ ಪೋಲಿಸರು ಎಷ್ಟರ ಮಟ್ಟಿಗೆ ಸಂಸಿದ್ಧರಾಗಿದ್ದಾರೆ? ಎಲ್ಲಕ್ಕಿಂತ ಹೆಚ್ಚಾಗಿ ಅವರು ಬೆಳೆಸಿಕೊಂಡು ಬಂದಿರುವ ಪೂರ್ವಗ್ರಹ ಮತ್ತು ಪಕ್ಷಪಾತಿತನಗಳನ್ನು ಮೀರುವಂತೆ ಮಾಡುವಲ್ಲಿ ಅವರಿಗೆ ನೀಡುವ ತರಬೇತಿಗಳು ಎಷ್ಟರಮಟ್ಟಿಗೆ ಸಮರ್ಥವಾಗಿವೆ?
ಪೊಲೀಸ್ ಸುಧಾರಣೆಗಳ ಬಗ್ಗೆ ಸುಮಾರಷ್ಟು ಚರ್ಚೆಗಳು ನಡೆದರೂ ಯಾವ ರಾಜ್ಯ ಸರ್ಕಾರಗಳೂ ಅದನ್ನು ಅನುಷ್ಠಾನಕ್ಕೆ ತರುವ ಕಾಳಜಿಯನ್ನು ವಹಿಸಿಲ್ಲ. ೧೯೭೮ರ ರಾಷ್ಟ್ರೀಯ ಪೊಲೀಸ್ ಸಮಿತಿಯಿಂದ ಮೊದಲುಗೊಂಡು, ಉತ್ತರಪ್ರದೇಶದ ಮಾಜಿ ಪೊಲೀಸ್ ಮಹಾ ನಿರ್ದೇಶಕರು ೧೯೯೫ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಅದರ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ), ೧೯೯೮ರ ಜೂಲಿಯಸ್ ರಿಬೇರೋ ಸಮಿತಿ, ತದನಂತರದ ಪದ್ಮನಾಭಯ್ಯ, ಮಳೀಮಠ್ ಮತ್ತು ಸೋಲಿ ಸೊರಾಬ್ಜಿ ಸಮಿತಿಗಳು ಈ ಬಗ್ಗೆ ಸಾಕಷ್ಟು ಸಲಹೆಗಳನ್ನು ಕೊಟ್ಟಿವೆ. ೨೦೦೬ರಲ್ಲಿ ಸುಪ್ರೀಂಕೋರ್ಟು ಈ ಬಗ್ಗೆ ಆರು ನಿರ್ದೇಶನಗಳನ್ನು ನೀಡಿತ್ತು. ಅದರಲ್ಲಿ ನಾಲ್ಕನೆಯ ನಿರ್ಣಯವು: ಭಾರತದಂಥ ಬಹುತ್ವವುಳ್ಳ ಸಮಾಜದಲ್ಲಿ ಪೊಲೀಸರು ತಮ್ಮ ಕೆಲಸ ಮಾಡಬೇಕಾದರೆ ಅನುಸರಿಸಬೇಕಾದ ಪ್ರಜಾತಾಂತ್ರಿಕ ಸೂತ್ರಗಳ ಬಗ್ಗೆ ಪೊಲೀಸರನ್ನು ಸಂವೇದನಾಶೀಲರನ್ನಾಗಿಸುವ ರೀತಿಯಲ್ಲಿ ಪೊಲೀಸ್ ತರಬೇತಿಯು ವಿನ್ಯಾಸಗೊಳ್ಳಬೇಕು ಎಂದು ನಿರ್ದೇಶಿಸುತ್ತದೆ. ದೇಶದಲ್ಲಿ ಸಮಾಜದ ದುರ್ಬಲ ಸಮುದಾಯಗಳ ಮೇಲೆ ನಡೆದ ಮತ್ತು ನಡೆಯುತ್ತಿರುವ ಹಲವಾರು ಪೊಲೀಸ್ ತಾರತಮ್ಯದ ಪ್ರಕರಣದಲ್ಲಿ ಭಾಗಿಗಳಾಗಿರುವ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳ ವಿಷಯದಲ್ಲಿ ಈ ತರಬೇತಿಯು ವಿಫಲವಾಗಿರುವುದು ಸ್ಪಷ್ಟವಾಗಿದೆ.
ಮಹಾರಾಷ್ಟ್ರವನ್ನೂ ಒಳಗೊಂಡಂತೆ ಹಲವಾರು ರಾಜ್ಯಗಳು ಜಾರಿಗೆ ತಂದಿರುವ ಮಾದರಿ ಪೊಲೀಸ್ ಕಾಯಿದೆಯಿಂದ ಅಲ್ಪಸ್ವಲ್ಪ ಸುಧಾರಣೆಯಾಗಿದೆ. ಆದರೆ ಸಮಗ್ರ ಸುಧಾರಣೆಯ ಭಾಗವಾಗದ ಬಿಡಿಬಿಡಿ ಮತ್ತು ಪ್ರತ್ಯೇಕವಾದ ಕ್ರಮಗಳಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಒಟ್ಟಾರೆ ಸಮಾಜದಲ್ಲಿರುವ ಪೂರ್ವಗ್ರಹಗಳು ಮತ್ತು ಪಕ್ಷಪಾತಗಳು ನಿವಾರಣೆಯಾಗಲು ತುಂಬಾ ಸಮಯ ಬೇಕಾಗುತ್ತದೆ. ಆದರೆ ಅಂಥಾ ಸಾಮಾಜಿಕ ಪಕ್ಷಪಾತದ ವಿರುದ್ಧ ಪೊಲೀಸರಿಗೆ ತರಬೇತಿ ನೀಡಬೇಕಿದೆ.