ISSN (Print) - 0012-9976 | ISSN (Online) - 2349-8846

ಜೀವನದಿಯೊಂದನ್ನು ನಿರ್ಜೀವಗೊಳಿಸುವ ಪರಿ..

ಗಂಗೆಯ ಕೂಗನ್ನು ಕೇಳಿಸಿಕೊಳ್ಳಲು ರಾಜಕೀಯ ಇಚ್ಚಾಶಕ್ತಿ ಮತ್ತು ತಾತ್ವಿಕ ಹೊಣೆಗಾರಿಕೆಗಳೆರಡರ ಅಗತ್ಯವೂ ಇದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ನದಿ ಎಂದರೆ ಹರಿಯಬೇಕು. ಹೀಗಾಗಿ ನದಿಯ ಹರಿವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಮಾತ್ರ ಅದು ವ್ಯರ್ಥವಾಗದಂತೆ ತಡೆಗಟ್ಟಬಹುದೆಂಬ ತರ್ಕವು ರೂಪುಗೊಂಡಿದೆ. ಅದೇನೇ ಇರಲಿ ಈಗ ಈ ಬಳಕೆಯು ಯಾವ ತಾರಕಕ್ಕೆ ಮುಟ್ಟಿದೆಯೆಂದರೆ ಒಂದು ನದಿಯು ನಿಜಕ್ಕೂ ಜೀವಂತವಾಗಿದೆಯೋ ಇಲ್ಲವೋ ಎಂದು ನಿರ್ಧರಿಸಲು ಆಗುತ್ತಿಲ್ಲ. ಈಗ ನದಿಗಳನ್ನು ನಾಲೆಗಳಿಗೆ ಹರಿಸುವುದರಿಂದ; ಅಥವಾ ಕೆಲವೊಮ್ಮೆ ಅವು ಕೊಚ್ಚೆ ಹಾಗೂ ಹಾನಿಕಾರಕ ತ್ಯಾಜ್ಯಗಳಿಂದ ತುಂಬಿ ಹೋಗಿರುವುದರಿಂದ; ಅಥವಾ ನದಿಗಳ ಜೋಡಣೆಯ ಯೋಜನೆಗಳಿಗಾಗಿ ಅವನ್ನು  ನೀರಿನ ಪೈಪಿನಂತೆ ಕತ್ತರಿಸಿ, ತಿರುಚಿ ಮರು ಜೋಡಣೆ ಮಾಡಬಹುದು ಎಂದು ಭಾವಿಸಿಕೊಂಡಿರುವುದರಿಂದ ಜೀವಂತ ನದಿಯೊಂದನ್ನು ಪತ್ತೆ ಹಚ್ಚುವುದು ಕಷ್ಟದ ಸಂಗತಿಯಾಗಿಬಿಟ್ಟಿದೆ. ಮತ್ತು ಇವೆಲ್ಲವನ್ನೂ ಒಂದು ನದಿಯನ್ನು ಆರಾಧಿಸುವ ಹೆಸರಿನಲ್ಲಿ ಅಥವಾ ಅಭಿವೃದ್ಧಿಯ ಹೆಸರಿನಲ್ಲಿ ನದಿಯ ಹರಿವಿಗೆ ಅಡ್ಡಿಪಡಿಸುತ್ತಲೇ ಅದನ್ನು ಪುನರುಜ್ಜೀವನ ಗೊಳಿಸುತ್ತೇವೆಂಬ ಹೆಸರಿನಡಿಯಲ್ಲಿ ಮಾಡಬಹುದು. ಹೀಗಾಗಿ ಅದು ನಿಜಕ್ಕೂ ಜೀವಂತವಾಗಿದೆಯೋ ಅಥವಾ ಕೃತಕ ಉಸಿರಾಟದ ಮೂಲಕ ಜೀವದೊರಸೆ ಉಳಿಸಿಕೊಳ್ಳಲಾಗಿದೆಯೋ ಎಂಬುದನ್ನು ನಿರ್ಧರಿಸುವುದು ಕಷ್ಟ. ಒಂದು ನದಿಯು ತನ್ನ ಅಸ್ಥಿತ್ವಕ್ಕೆ ಅಂತರ್ಗತವಾಗಿರುವ ಭೂಗರ್ಭ ಮತ್ತು ಪರಿಸರ ಸಂಬಂಧಿ ಕರ್ತವ್ಯಗಳನ್ನು ಪೂರೈಸಲಾಗದಷ್ಟು ಮಟ್ಟಿಗೆ ಅದರ ಹರಿವನ್ನು ಬಳಸಿಕೊಂಡು ಅದರ ಪ್ರಕೃತಿಸಹಜ ಸ್ಥಿತಿಯನ್ನೇ ಮಾರ್ಪಾಡು ಮಾಡಿರುವಾಗ ಒಂದು ನದಿಯು ಜೀವಂತವಾಗಿದೆಯೇ ಎಂದು ಹೇಳುವುದು ಇನ್ನೂ ಕಷ್ಟಕರ. ಒಂದು ನದಿಯನ್ನು ಇಡಿಯಾಗಿ ಅಲ್ಲದೆ ತುಂಡು ತುಂಡಿನಲ್ಲಿ ಮಾತ್ರ ಜೀವಂತವಾಗುಳಿಸಿ ಉಳಿದಂತೆ  ಅದರ ಸಾವಯವ ಸಮಗ್ರತೆಯನ್ನು ಮತ್ತು ಸ್ವಂತವಾಗಿ ಪುನರುಜ್ಜೀವಗೊಳ್ಳುವ ಸಾಮರ್ಥ್ಯವನ್ನು ಇಲ್ಲದಂತೆ ಮಾಡಿದಾಗಲೂ ಅದು ಜೀವಂತವಾಗಿದೆ ಎಂದು ಹೇಳಲಾಗದು.

ದೇಶದ ಇತರ ನದಿಗಳ ಪರಿಸ್ಥಿತಿಗಳು ಸಹ ಅತ್ಯಂತ ಸೂಕ್ಷ್ಮವಾಗಿದ್ದರೂ ಗಂಗಾ ನದಿಯ ಪರಿಸ್ಥಿತಿ ಮಾತ್ರ ಸರ್ಕಾರಗಳು ಹೆಚ್ಚಿನ ಗಮನ ಕೊಟ್ಟ ನಂತರವೂ ಮತ್ತು ಹೆಚ್ಚಿನ ಗಮನ ಕೊಟ್ಟ ಕಾರಣದಿಂದಲೂ ಇನ್ನೂ ಹೆಚ್ಚು ಸೂಕ್ಷ್ಮವಾಗಿಬಿಟ್ಟಿದೆ. ಗಂಗೆಯ ಕರೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ವಾರಣಾಸಿಯಿಂದ ಸ್ಪರ್ಧಿಸುವಂತೆ ಮಾಡಿತು. ಅದೇನೇ ಇದ್ದರೂ, ಹಿಂದೂತ್ವದ ರೀತಿಯಲ್ಲೇ ಗಂಗತ್ವವನ್ನೂ ಜನರ ರೋಷಾವೇಷಗಳನ್ನು ಬಡಿದೆಬ್ಬಿಸಲು ಬಳಸಲಾಗುತ್ತಿದೆಯೇ ವಿನಃ ಅದಕ್ಕೂ ಗಂಗೆಯ ಅಭಿವೃದ್ಧಿಗೂ ಯಾವ ನೈಜ ಸಂಬಂಧವೂ ಕಂಡುಬಂದಿಲ್ಲ. ಗಂಗೆಯ ಕರೆಯು ಪ್ರಧಾನಿಯವರ ಕಿವಿಗೆ ನಿಜಕ್ಕೂ ಕೇಳಿಸುತ್ತದೆ ಎಂದು ನಂಬಿಕೊಂಡಿದ್ದ ಮಾಜಿ ಪರಿಸರ ಇಂಜನಿಯರ್ ಹಾಗೂ ಸಾಧು ಜಿ.ಡಿ. ಅಗರ್‌ವಾಲ್ ಅವರು ೧೧೨ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಪ್ರಾಣವನ್ನೇ ಕಳೆದುಕೊಂಡರು. ಉತ್ತರಖಂಡ್‌ನ ಬಹುಪಾಲು ಜನರ ಆಗ್ರಹದಂತೆ ಅಗರ್‌ವಾಲ್ ಅವರ ಆಗ್ರಹವೂ ಸಹ ಗಂಗೆಯ ಸುತ್ತಲೂ ನಡೆಯುತ್ತಿರುವ ಮರಳು ಗಣಿಗಾರಿಕೆ ಮತ್ತು ಜಲವಿದ್ಯುತ್ ಸ್ಥಾವರಗಳು ಹಲವು ಕಡೆ ಗಂಗೆಯ ಹರಿವನ್ನು ಕೇವಲ ತೊಟ್ಟಿಕ್ಕುವಂತೆ ಮಾಡಿರುವ ಗಂಭೀರ ವಿದ್ಯಮಾನದ ವಿರುದ್ಧವೇ ಆಗಿತ್ತು. ಗಂಗೆಯ ಹರಿವಿನ ನಿರಂತರತೆ ಕಾರಣವಾಗಿರುವ ಹಿಮಾಲಯವು ಸಹ ಹೆಚ್ಚೆಚ್ಚು ಬರಡಾಗುತ್ತಿದೆ, ಮತ್ತು ಶಿಥಿಲಗೊಳಿಸಲಾಗುತ್ತಿದೆ.

 ಸುಮಾರು  ೨೦,೦೦೦ ಕೋಟಿ ರೂ.  ವೆಚ್ಚದ ನಮಾಮಿ ಗಂಗೆ ಯೋಜನೆಯು ನಿರಂತರವಾದ ಮತ್ತು ಆದ್ದರಿಂದಲೇ ನಿರ್ಮಲವಾದ ಗಂಗೆಯ ಹರಿವನ್ನು ಖಾತರಿಗೊಳಿಸುವ ಭರವಸೆಯನ್ನು ನೀಡಿದ್ದರೂ ಇಡೀ ಗಂಗಾ ನದಿಯ ಹರಿವನ್ನೇ ನದಿ ಪಾತ್ರದಿಂದ ಬೇರೆಡೆಗೆ ಹರಿಯುವಂತೆ ಮಾಡುತ್ತಿರುವಾಗ ನಿರ್ಮಲ ಮತ್ತು ನಿರಂತರ ಗಂಗೆ ಸಾಧ್ಯವಾಗುವುದಾದರೂ ಹೇಗೆ? ನಮಾಮಿ ಗಂಗೆ ಯೋಜನೆಯು ನದಿಯ ಸಮಗ್ರತೆಯನ್ನು ಪುನರ್‌ಸ್ಥಾಪಿಸುವ ಲಕ್ಷ್ಯವನ್ನು ಇಟ್ಟುಕೊಂಡಿದ್ದರಿಂದ ಅದಕ್ಕೆ ನಿರಂತರತೆ ಮತ್ತು ನಿರ್ಮಲತೆಯ ಪರಿಕಲ್ಪನೆಗಳ ಗ್ರಹಿಕೆ ಇದೆಯೆಂದು ಭಾವಿಸಿಕೊಳ್ಳಲಾಗಿತ್ತು. ಆದರೆ ವಾಸ್ತವದಲ್ಲಿ ಒಂದು ನದಿಯು ಜೀವ ಉಳಿಸಿಕೊಳ್ಳಲು ಅತ್ಯಗತ್ಯವಾಗಿ ಬೇಕಾದ ಕನಿಷ್ಟ ನೀರಿನ ಹರಿವಿನ ನಿಯಮವನ್ನೂ ಸಹ ಯೋಜನೆಯ ಒಡೆಯರು ಪಾಲಿಸುತ್ತಿಲ್ಲ. ಅದನ್ನು ಪಾಲಿಸುವುದನ್ನು ಕಾನೂನುಗಳು ಕಡ್ಡಾಯವಾಗಿಸಲಿಲ್ಲ. ಮತ್ತು ಅದರ ಪ್ರಮಾಣವನ್ನು ಪದೇಪದೇ ಬದಲಿಸಲಾಗುತ್ತಿತ್ತು.

ಈ ವಾಸ್ತವಿಕ ಪರಿಸ್ಥಿತಿಗಳನ್ನು ಪರಿಹರಿಸಲು ಬೇಕಾದ ನಿರ್ದಿಷ್ಟ  ಕ್ರಮಗಳನ್ನು ತೆಗೆದುಕೊಳ್ಳುವ ಬದಲಿಗೆ ಪ್ರಧಾನಿಗಳು ತದ್ವಿರುದ್ಧ ದಿಕ್ಕಿನಲ್ಲಿ ಕೇವಲ ಸಾಂಕೇತಿಕವಾದ ನಡೆಗಳಲ್ಲಿ ತೊಡಗಿ ಸಮಸ್ಯೆಯ ಗಂಭೀರತೆಯನ್ನು ಕ್ಷುಲ್ಲಕಗೊಳಿಸುತ್ತಿದ್ದಾರೆ ಅಥವಾ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ರುಜುವಾತು ಮಾಡುತ್ತಾ ಗಂಗೆಯ ಹರಿವನ್ನು ಮತ್ತಷ್ಟು  ಬದಲಾಯಿಸುವ ಅಥವಾ ತಮ್ಮ ಅಗತ್ಯಕ್ಕೆ ತಕ್ಕಂತೆ ಮಣಿಸುವಂಥ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ನದಿಯ ಹರಿವನ್ನು ಸುಗಮಗೊಳಿಸು, ಅದರ ಹರಿವಿನ ಪಾತ್ರವನ್ನು ಸರಿಯಾಗಿ ನಿರ್ವಹಣೆ ಮಾಡುವ, ನದಿಯಿಂದ ಹೆಚ್ಚು ನೀರನ್ನು ಮೇಲೆತ್ತದಂತೆ ನೋಡಿಕೊಳ್ಳುವ, ನದಿಯೊಳಗೆ ತ್ಯಾಜ್ಯಗಳ ಸುರಿಯ ಮೇಲೆ ಕಣ್ಣಿಡುವ, ಅರಣ್ಯವನ್ನು ಉಳಿಸಿ-ಬೆಳೆಸುವ ಕ್ರಮಗಳನ್ನು ತೆಗೆದುಕೊಳ್ಳುವ ಮತ್ತು ನದಿ ನೀರಿಗೆ ಹರಿದು ಕೂಡುವ ಇತರ ಜಲಾಸರೆಗಳನ್ನು ಪುನರುಜ್ಜೀವಗೊಳಿಸುವಂಥ ಕ್ರಮಗಳಿಗೆ ಮುಂದಾಗುವ ಬದಲು ಬಹಳಷ್ಟು ಪ್ರಕರಣಗಳಲ್ಲಿ ನದಿಗಳ ಪುನರುತ್ಥಾನವೆಂದರೆ ನದಿಮುಖಜ ಪ್ರದೇಶದ ಅಭಿವೃದ್ಧಿಯೆಂದು ತಪ್ಪಾಗಿ ಗ್ರಹಿಸಲಾಗಿದೆ. ಹೀಗಾಗಿ ಅಂಥ ಬಹಳಷ್ಟು ಯೋಜನೆಗಳಲ್ಲಿ ನದಿತೀರದ ಪ್ರದೇಶಗಳನ್ನು ಮತ್ತು ನೆರೆಬಯಲನ್ನು ವಾಣಿಜ್ಯ ಉದ್ದೇಶಗಳಿಗಾಗಿ  ಒತ್ತುವರಿ ಮಾಡಿಕೊಳ್ಳಲಾಗಿದೆ ಮತ್ತು ಇತರ ಮೂಲಗಳಿಂದ ನದಿಗೆ ನೀರಿನ ಸರಬರಾಜು ಮಾಡಿ ನದಿಯು ಇನ್ನೂ ಜೀವಂತವಾಗಿದೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ.

 ಗಂಗಾ ಹರಿವಿನ ಹಾಲ್ಡಿಯಾ- ವಾರಣಾಸಿ ವಿಭಾಗದ ೧೬೦೦ ಕಿಮೀ ಉದ್ದದ ಮೇಲ್ ಹರಿವಿನ ವ್ಯಾಪ್ತಿಯಲ್ಲಿ ಗಂಗೆಯ ಹರಿವನ್ನು ಈಗಾಗಲೇ ಕೊಲ್ಲಲಾಗಿದೆ. ಇದೀಗ ವಿಶ್ವಬ್ಯಾಂಕಿನ ಗಣನೀಯ ಮೊತ್ತದ ಹೂಡಿಕೆಯೊಂದಿಗೆ  ೫೩೬೯ ಕೋಟಿ ರೂ. ಮೌಲ್ಯದ ಜಲ್ ಮಾರ್ಗ ವಿಕಾಸ್ ಯೋಜನೆಯು ಜಾರಿಯಾಗುತ್ತಿದೆ. ಇತ್ತೀಚೆಗೆ, ಪ್ರಧಾನಿಗಳು ಗಂಗಾ ನದಿಯು ಎಷ್ಟು ಹೊರೆ ಹೊರಬೇಕಾಗಬಹುದು ಮತ್ತು ಅದಕ್ಕೆ ಎಷ್ಟು ಹಾನಿಯಾಗಬಹುದೆಂಬುದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ವಾರಣಾಸಿಯಲ್ಲಿ ಪೆಪ್ಸಿ ಕಂಪನಿಯ ಒಂದು ಅತಿ ದೊಡ್ಡ ಸಾಗಾಣಿಕಾ ವಾಹನಕ್ಕೆ ಸ್ವಾಗತ ಕೋರಿದರು. ಗಂಗಾ ನದಿಗೆ ೧೫೦೦ ಟನ್ ಸಾಮರ್ಥ್ಯದ ಹಡಗಿನ ಸಾಗಾಣಿಕೆಯನ್ನು ಹೊರುವ ಸಾಮರ್ಥ್ಯವಿಲ್ಲದಿರುವುದರಿಂದ ನದಿಯ ಹರಹನ್ನು ಅಷ್ಟರ ಮಟ್ಟಿಗೆ ಕೃತಕವಾಗಿ ಸಜ್ಜುಗೊಳಿಸುವ, ನದಿ ಪಾತ್ರವನ್ನು ಮಣ್ಣು, ಹಾಗೂ ಸಾವಯ ಕಳೆಗಳಿಂದ ಮುಕ್ತಗೊಳಿಸುವ, ಮತ್ತು ಪದೇಪದೇ ಹೂಳೆತ್ತುವ ಮತ್ತು ಕೃತಕವಾಗಿ ಅದರ ಪಾತ್ರವನ್ನು ಇನ್ನಷ್ಟು ಆಳಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರ ಹಿಂದೆ ಹಲವಾರು ಪರಸ್ಪರ ಪೂರಕ  ವಾಣಿಜ್ಯ ಹಿತಾಸಕ್ತಿಗಳ ಕೈವಾಡವಿದೆ; ಉದಾಹರಣೆಗೆ ನದಿ ಪಾತ್ರದಿಂದ ಮೇಲೆತ್ತಲಾಗುವ ಹೂಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ನದಿ ಪಾತ್ರವನ್ನು ಸಮಗ್ರವಾಗಿ ಸಿದ್ಧಗೊಳಿಸುವ ಗುತ್ತಿಗೆಯನ್ನು ಆದಾನಿ ಕಂಪನಿಯನ್ನೂ ಒಳಗೊಂಡಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳಿಗೆ ವಹಿಸಲಾಗಿದೆ. ಇದರಿಂದ ಉಂಟಾಗಬಹುದಾದ ಗಣನೀಯ ಮಟ್ಟದ ಪರಿಸರ ಮಾಲಿನ್ಯದ ಸಂಗತಿಗಳನ್ನು ನಿರ್ಲಕ್ಷಿಸಲಾಗಿದೆ. ಅಷ್ಟೇ ಮಟ್ಟಿಗೆ ಜಲಚರಗಳ ಆಸರೆಗಳು ನಾಶವಾಗುವ ಮತ್ತು ಮೀನುಗಾರರ ಮತ್ತು ಅಂಬಿಗರ ಜೀವನೋಪಾಯಗಳು ನಾಶವಾಗುವ ಸಂಗತಿಗಳನ್ನೂ ಸಹ ನಿರ್ಲಕ್ಷಿಸಲಾಗಿದೆ. ವಾರಣಾಸಿಯಲ್ಲಿದ್ದ ಆಮೆಗಳ ಅಭಯಾರಾಣ್ಯವನ್ನು ಅಪಸೂಚಿತ ( ಡಿ-ನೋಟಿಫೈ) ಗೊಳಿಸಲಾಗುತ್ತಿದೆ. ಗಂಗಾ ನದಿ ಡಾಲ್ಫಿನ್‌ಗಳಂತ ಅಳಿವಿನಂಚಿನಲ್ಲಿರುವ ಜೀವಿಗಳನ್ನು ಅಳಿವಿನತ್ತ ದೂಡಲಾಗುತ್ತಿದೆ.

ಒಂದು ನದಿಯ ಜೀವಂತಿಕೆಯನ್ನು ಮತ್ತು ಆರೋಗ್ಯವನ್ನು ಅದು ಸೌಹಾರ್ದಯುತವಾಗಿ ತನ್ನೊಂದಿಗೆ ಬದುಕುತ್ತಿರುವ ಜೀವಿಗಳನ್ನು ಎಷ್ಟರಮಟ್ಟಿಗೆ ಪೊರೆಯುವ ಸಾಮರ್ಥ್ಯಹೊಂದಿದೆ ಎಂಬ ಮಾನದಂಡಗಳಿಗಿಂತ ಎಷ್ಟರಮಟ್ಟಿಗೆ ಅದನ್ನು ಜಲಮಾರ್ಗವಾಗಿ, ಶಕ್ತಿಮೂಲವಾಗಿ, ಮತ್ತು ಧಾರ್ಮಿಕ ಪ್ರವಾಸಿ ತಾಣವಾಗಿ ಬಳಕೆ ಮಾಡಬಹುದೆಂಬ ವಾಣಿಜ್ಯ ಮಾನದಂಡಗಳಿಂದ ಅಳೆಯಲಾಗುತ್ತಿದೆ. ಎಲ್ಲಿಯತನಕ ಒಂದು ನದಿಯನ್ನು ತಮಗೆ ಬೇಕಂತೆ ಬಳಸಬಹುದಾದ ಸಾಧನವೆಂದು ಮಾತ್ರ ಪರಿಗಣಿಸಲಾಗುತ್ತಿರುತ್ತದೋ ಅಲ್ಲಿಯವರೆಗೆ ಅದರ ಮಾಲಿನ್ಯ ಮತ್ತು ಕಾಂಕ್ರೀಟೀಕರಣ ಅಡೆತಡೆಯಿಲ್ಲದೆ ಸಾಗುತ್ತಿರುತ್ತದೆ. ಇಂಥಾ ಉಲ್ಲಂಘನೆಗಳನ್ನು ಸಂಜ್ನೇಯ ಅಪರಾಧನ್ನಾಗಿ ಪರಿಗಣಿಸಿ ಒಂದು ಸಶಸ್ತ್ರ ಗಂಗಾ ರಕ್ಷಣಾ ಪಡೆಯನ್ನು ರೂಪಿಸುವ ಅವಕಾಶವನ್ನು ಕಲ್ಪಿಸುವ ರಾಷ್ಟ್ರೀಯ ಗಂಗಾ ನದಿ (ಪುನರುಜ್ಜೀವನ, ರಕ್ಷಣೆ ಮತ್ತು ನಿರ್ವಹಣೆ) ಮಸೂದೆಯೊಂದು ಸದನದಲ್ಲಿ ಮಂಡನೆಯಾಗಲಿದೆ. ಆದರೆ ಖುದ್ದು ಸರ್ಕಾರವೇ ಇಂಥಾ ದೊಡ್ಡ ಮಟ್ಟದಲ್ಲಿ ಅವೆಲ್ಲ ಉಲ್ಲಂಘನೆಗಳನ್ನು ಮಾಡುತ್ತಾ ಮೇಲ್ಪಂಕ್ತಿ ಹಾಕಿಕೊಡುತ್ತಿರುವಾಗ ಯಾವುದೇ ಮಸೂದೆಗಳು ಇಂಥಾ ಅಪರಾಧಗಳನ್ನು ತಡೆಗಟ್ಟಲಾರವು.

 

Back to Top