ISSN (Print) - 0012-9976 | ISSN (Online) - 2349-8846

ನಗರದ ನಕ್ಸಲರೆಂದರೆ ಯಾರು?

ತನ್ನ ಮಾಜಿ ಸಹೋದ್ಯೋಗಿಯಾಗಿದ್ದ ನಗರದ ನಕ್ಸಲ ಗೌತಮ್ ನವಲಾಕ ಅವರ ಬಗ್ಗೆ ಬರ್ನಾಡ್ ಡಿಮೆಲ್ಲೋ ಬರೆಯುತ್ತಾರೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ ಮತ್ತು ಹಿಂದೂತ್ವವಾದಿ ರಾಷ್ಟ್ರೀಯವಾದಿಗಳು ತಮ್ಮ ಸಾಂಸ್ಕೃತಿಕ ಮೂಲಭೂತವಾದಕ್ಕಾಗಿ ನಡೆಸುವ ರಕ್ಕಸೀ ಪ್ರಯತ್ನಗಳಿಗೆ ಕೊನೆಮೊದಲಿಲ್ಲ. ಹಿಂದೂತ್ವವಾದಿಗಳ ಇಂಥಾ ಎಲ್ಲಾ ನಡೆಗಳಿಗೆ ಬಿಜೆಪಿ ಸರ್ಕಾರದ ಸಂಪೂರ್ಣ ಬೆಂಬಲವಿರುವುದು ತೀವ್ರ ಕಳವಳ ಹುಟ್ಟಿಸುತ್ತದೆ. ಅದೇ ರೀತಿ ಪ್ರಭುತ್ವ ಭಯೋತ್ಪಾದನೆಯ ಮೂಲಕ ತನ್ನ ಅತ್ಯಗತ್ಯ ಶತ್ರುಗಳನ್ನು ನಗರದ ನಕ್ಸಲರೆಂದು ವರ್ಗೀಕರಿಸಿ ನಿಯಂತ್ರಸುವ ಭಾರತದ ಪ್ರಭುತ್ವದ ಕ್ರಮಗಳು ಸಹ ಇಷ್ಟೇ ಕಳವಳಕಾರಿಯಾಗಿದೆ. ಅಂಥ ಒಂದು ಕ್ರಮಗಳ ಭಾಗವಾಗಿಯೇ ೨೦೧೮ರ ಜೂನ್ ಮತ್ತು  ಆಗಸ್ಟ್‌ನಲ್ಲಿ ಕಾರ್ಯಕರ್ತರ ಬಂಧನಗಳಾಗಿವೆ. ಇದಕ್ಕೆ ಮೊದಲು ಇಂಥಾ ದಮನಕಾರಿ ಕ್ರಮಗನ್ನು ಮುಸ್ಲಿಮರ ಮೇಲೆ,  ದಮನಿತ ರಾಷ್ಟ್ರೀಯತೆಗಳ ಸಮರಶೀಲ ಹೋರಾಟಗ ಮೇಲೆ ಹಾಗೂ ಮಾವೋವಾದಿಗಳ ಮೇಲೆ ಪ್ರಯೋಗಿಸಲಾಗುತ್ತಿತ್ತು. ಸರ್ಕಾರದ ವರ್ಗೀಕರಣದ ಪ್ರಕಾರ ನಗರದ ನಕ್ಸಲರೆಂದರೆ ಸಿಪಿಐ (ಮಾವೋವಾದಿ) ಪಕ್ಷದ ಸದಸ್ಯರೆಂದೇ ಭಾವಿಸಲಾಗುವ ವಕೀಲರು, ಮಾನವ ಹಕ್ಕುಗಳ ಹೋರಾಟಗಾರರು, ಕವಿಗಳು, ಬರಹಗಾರರು, ಪತ್ರಕರ್ತರು ಮತ್ತು ಪ್ರೊಫೆಸರುಗಳೇ ಆಗಿದ್ದಾರೆ. ಕನಿಷ್ಟ ಪಕ್ಷ ಸರ್ಕಾರದ ಈವರೆಗಿನ ವರ್ಗೀಕರಣ ಇದನ್ನೇ ತೋರಿಸುತ್ತದೆ. 

ಆಗಸ್ಟ್‌ನಲ್ಲಿ ಬಂಧಿತರಾದ ಐದು ಜನರ ಮೇಲೆ ಇತರ ಕ್ರಿಮಿನಲ್ ಸೆಕ್ಷನ್‌ಗಳ ಜೊತೆ ಅನ್‌ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಷನ್) ಆಕ್ಟ್ (ಯುಎಪಿಎ- ಕಾನೂನುಬಾಹಿರ ಚಟುವಟಿಗಳ ಪ್ರತಿಬಂಧಕ ಕಾಯಿದೆ)ಅನ್ನೂ ಹಾಕಲಾಗಿದೆ. ಈ ನಗರದ ನಕ್ಸಲರ ಮತ್ತು ಸರ್ಕಾರವು ಬೆದರಿಸಬೇಕೆಂದು ನಿರ್ಧರಿಸಿದ್ದ ಇನ್ನಿತರರ ಮನೆ ಮತ್ತು ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ಬಗ್ಗೆ ಅಪಪ್ರಚಾರ ಮಾಡಿ ಅಮಾನ್ಯಗೊಳಿಸುವ ಉದ್ದೇಶದ ಭಾಗವಾಗಿಯೇ ಪ್ರಭುತ್ವದ ಕೆಲವು ಸಾಕು ಮಾಧ್ಯಮಗಳು ಬಂಧಿತರಲ್ಲಿ ಕೆಲವರ ಮೇಲೆ ಮಾಡಲಾಗಿರುವ ಆಪಾದನೆಗಳ ಬಗ್ಗೆ ತಮ್ಮ ಪ್ರೈಂ ಸಮಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದರು. ಕೆಲವು ಮಾಧ್ಯಮಗಳಂತೂ ಅವರನ್ನು ಬಹಿರಂಗವಾಗಿ ಅಪರಾಧಿಗಳೆಂದು ಪರಿಗಣಿಸಿ ಅವರುಗಳನ್ನು ದೇಶದ್ರೋಹಿಗಳೆಂದೂ, ರಾಷ್ಟ್ರದ ಅಗೋಚರ ಶತ್ರುಗಳೆಂದೂ, ಸಿಪಿಐ (ಮಾವೋವಾದಿ)ಗಳಿಗೆ ಸಹಕರಿಸುತ್ತಿರುವುದರಿಂದ ಭಾರತೀಯ ಪ್ರಜಾತಂತ್ರಕ್ಕೆ ಗಂಭೀರವಾದ ಬೆದರಿಕೆಯನ್ನೊಡ್ಡುತ್ತಿದ್ದಾರೆಂದೂ ಘೋಷಿಸಿಬಿಟ್ಟವು.

ರಾಷ್ಟ್ರದ ಅಗೋಚರ ಶತ್ರುಗಳಲ್ಲಿ ಮತ್ತು ಭಾರತದ ಪ್ರಜಾತಂತ್ರಕ್ಕೆ ತೀವ್ರತರನಾದ ಬೆದರಿಕೆ ಒಡ್ಡುತ್ತಿರುವವರಲ್ಲಿ ಈ ಪತ್ರಿಕೆ- ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ (ಇಪಿಡಬ್ಲ್ಯೂ)-ಯ ಪ್ರಖ್ಯಾತ ಪತ್ರಕರ್ತರಾದ ಗೌತಮ್ ನವಲಾಕ ಸಹ ಒಬ್ಬರು. ಗೌತಮ್ ನವಲಾಕ ಅವರು ೧೯೮೦ರ ಮೊದಲ ಭಾಗದಲ್ಲಿ ಇಪಿಡಬ್ಲ್ಯೂ ವನ್ನು ಸೇರಿಕೊಂಡರು. ಮತ್ತು ನಾನು ಕಂಡ ಅತ್ಯುತ್ತಮ ಭಾರತೀಯ ಪತ್ರಕರ್ತರಾದ ರಜನಿ ದೇಸಾಯಿ, ಎಮ್‌ಎಸ್ ಪ್ರಭಾಕರ ಮತ್ತು ಕೃಷ್ಣರಾಜ್ ಅವರ ಜೊತೆಜೊತೆಗೆ ಕೆಲಸ ಮಾಡಿದರು. ನಂತರ ೮೦ರ ಉತ್ತರಾರ್ಧದಲ್ಲಿ ಅವರು ತಮ್ಮ ವಾಸವನ್ನು ದೆಹಲಿಗೆ ಸ್ಥಳಾಂತರಿಸಿದ ನಂತರವೂ ಇಪಿಡಬ್ಲ್ಯೂನ ಸಂಪಾದಕೀಯ ಸಲಹೆಗಾರರಾಗಿ ತಮ್ಮ ನಂಟನ್ನು ಮುಂದುವರೆಸಿದರು. ಈ ಸಂಬಂಧ ೨೦೦೬ರವರೆಗೂ ಮುಂದುವರೆಯಿತು. ಆದರೆ ತಾವು ದೆಹಲಿಯ ನಾಗರಿಕ ಹಕ್ಕುಗಳ ಸಂಘಟನೆಯಾದ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಪಿಯುಡಿಆರ್) ಗೆ ಹೆಚ್ಚು ಸಮಯ ಕೊಡಬೇಕಾಗಿರುವುದರಿಂದ ಇಪಿಡಬ್ಲ್ಯೂನೊಂದಿಗಿನ ತಮ್ಮ ಈ ಔಪಚಾರಿಕ ಸಂಬಂಧದಿಂದ ಮುಕ್ತಗೊಳಿಸಬೇಕೆಂದು ಆಗಿನ ಸಂಪಾದಕರಾದ ಸಿ. ರಾಮಮೋಹನ ರೆಡ್ಡಿಯವರನ್ನು ನವಲಾಕ ಅವರು ಕೋರಿಕೊಂಡರು. ಆ ನಂತರವೂ ಅವರು ಇಪಿಡಬ್ಲ್ಯೂಗೆ ನಿರಂತರವಾಗಿ ಬರೆಯುತ್ತಲೇ ಇದ್ದಾರೆ.

೧೯೯೦ರ ನಂತರದಲ್ಲಿ ಅವರು ಜಮ್ಮೂ-ಕಾಶ್ಮೀರದ ನಾಗರಿಕ ಸಮಾಜದ ಒಕ್ಕೂಟದೊಡನೆ ಹೆಚ್ಚು ಒಡನಾಟವನ್ನು ಮಾಡುತ್ತಾ ಹಲವಾರು ಸತ್ಯ ಶೋಧನಾ ಸಮಿತಿಗಳಲ್ಲಿ ಭಾಗವಹಿಸುತ್ತಾ, ಅವುಗಳ ಪ್ರಚಾರಾಂದೋಲನದಲ್ಲಿ ಭಾಗವಹಿಸುತ್ತಾ, ಅವುಗಳ ವರದಿಗಳನ್ನು ಬರೆಯುತ್ತಾ ಹೋದಂತೆ ಅವರ ಬರಹಗಳಲ್ಲಿ ಒಂದು ಸ್ಪಷ್ಟವಾದ ವ್ಯತ್ಯಾಸ ಬರತೊಡಗಿತು. ಸತ್ಯಕ್ಕೆ ಪರಮ ಬದ್ಧತೆಯನ್ನು ತೋರುತ್ತಿದ್ದ ಗೌತಮ್ ನವಲಾಕಾ ಅವರು ಭಾರತದ ಪ್ರಭುತ್ವವು ಕಾಶ್ಮೀರ ಕಣಿವೆಯ ಗುರುತಿರದ ಗೋರಿಗಳೊಳಗೆ ಬಚ್ಚಿಟ್ಟ ಘನಘೋರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಇಪಿಡಬ್ಲ್ಯೂ ನಲ್ಲಿ ಹಾಗೂ ಇತರ ಪತ್ರಿಕೆಗಳಲ್ಲಿ ಬಿಚ್ಚಿಡತೊಡಗಿದರು: ಬಲವಂತದ ಕಣ್ಮರೆಗಳು ಮತ್ತು ನಂತರದ ಸುಳ್ಳು ಎನ್‌ಕೌಂಟರಿನಲ್ಲಿ ತಣ್ಣಗೆ ನಡೆಯುತ್ತಿದ್ದ ಭೀಬತ್ಸ ಕೊಲೆಗಳು ಮತ್ತು ಭಾರತೀಯ ಸೇನೆ, ಅರೆಸೇನೆ ಮತ್ತು ಪೊಲೀಸ್ ಅಧಿಕಾರಿಗಳು ನಡೆಸುವ ಈ ಅಕ್ರಮಗಳಿಗಿರುವ ಕಾನೂನಿನ ಸುರಕ್ಷೆ ಇತ್ಯಾದಿಗಳ ಬಗ್ಗೆ ನವಲಾಕ ಬರೆಯುತ್ತಲೇ ಹೋದರು.

ಭಾರತೀಯ ಪ್ರಜಾತಂತ್ರದ ಪೊಳ್ಳುತನ ಕಾಶ್ಮೀರದಲ್ಲಿ ಹೇಗೆ ಬೆತ್ತಲಾಗಿದೆ ಎಂಬುದನ್ನು ನವಲಾಕ ತೋರಿಸತೊಡಗಿದರು. ಭಾರತದ ದೊಡ್ಡದೊಡ್ಡ ಮಾಧ್ಯಮಗಳು ಪ್ರಭುತ್ವದ ಸಾಕು ಮಾಧ್ಯಮಗಳಾಗಿ ಪ್ರಭುತ್ವದ ತುತ್ತೂರಿಗಳಾಗಿರುವ ಈ ಸಂದರ್ಭದಲ್ಲಿ ನವಲಾಕಾರಂತವರು ಮಾತ್ರ ಧೈರ್ಯಶಾಲಿಗಳಾಗಿ ನಿರ್ಭೀತ ಪತ್ರಕರ್ತರಾಗಿ ಮತ್ತು ಮಾನವ ಹಕ್ಕುಗ ಕಾರ್ಯಕರ್ತರಾಗಿ ಮುಂದುವರೆಯಲು ಸಾಧ್ಯ. ಹಿಂಸೆಗೆ ಬಲಿಯಾಗಿರುವವರನ್ನೇ ಹಿಂಸೆಯ ಪ್ರಚೋದಕರೆಂಬಂತೆ ನಿರಂತರ ಪ್ರಚಾರ ಮಾಡುತ್ತಿರುವಾಗ ಕೋಪೋದ್ರಿಕ್ತ ಓದುಗರು ನಿಮಗೆ ಕಿವಿಗೊಡಲೂ ಸಿದ್ಧರಿರುವುದಿಲ್ಲ. ಭಾರತದ ಸಂಸದೀಯ ಎಡಪಂಥಕ್ಕೆ ಸೇರಿದ ಕೆಲವರೂ ಸಹ ನವಲಾಕ ಅವರ ಬರಹಗಳನ್ನು ತಿರಸ್ಕರಿಸುತ್ತಾರೆ ಮತ್ತು ಅವರನ್ನು ದಾರಿ ತಪ್ಪಿಸಲಾಗಿದೆ ಎಂದು ನಂಬುತ್ತಾರೆ. ಆದರೆ ವಾಸ್ತವಾಂಶಗಳನ್ನು ಮತ್ತು ತರ್ಕಗಳನ್ನು ಬಲವಾಗಿ ಮುಂದಿಡುತ್ತಾ ನವಲಾಕ ಅವರು ತಮ್ಮ ಪ್ರತಿಪಾದನೆಯನ್ನು ಧೃಢವಾಗಿ ಮಾಡುತ್ತಲೇ ಇದ್ದಾರೆ ಮತ್ತು ಭಾರತೀಯ ನಿಯಂತ್ರಣದಲ್ಲಿರುವ ಕಾಶ್ಮೀರದಲ್ಲಿ ಭಾರತವು ಕಾಶ್ಮೀರವನ್ನು ಅಂತರಿಕ ವಸಾಹತುವನ್ನಾಗಿ ಪರಿಗಣಿಸುತ್ತಿದೆ ಎಂಬ ತಮ್ಮ ಆಪಾದನೆಯನ್ನು ಹಿಂಜರಿಕೆಯಿಲ್ಲದೆ ಪ್ರತಿಪಾದಿಸುತ್ತಿದ್ದಾರೆ.

ಒಬ್ಬ ನಿಜವಾದ ಮಾರ್ಕ್ಸ್‌ವಾದಿ-ಸಮಾಜವಾದಿಯು ಜನಾಂಗೀಯ, ರಾಷ್ಟ್ರೀಯ, ಜಾತಿ, ವರ್ಗ, ಬಣ್ಣ ಅಥವಾ ಲಿಂಗಾಧಾರಿತವಾದ ಎಲ್ಲಾ ಬಗೆಯ ದಮನಗಳನ್ನು ವಿರೋಧಿಸಬೇಕು. ಇದೇ ಮಾರ್ಕ್ಸ್‌ವಾದಿ-ಸಮಾಜವಾದಿ ನೈತಿಕತೆಯ ತಿರುಳಾಗಿದೆ. ಮಾರ್ಕ್ಸ್‌ವಾದವು ತುಳಿತಕ್ಕೊಳಗಾದವರ, ಕಾರ್ಮಿಕವರ್ಗದ ಮತ್ತು ಬಡರೈತರಂತ ಅರೆ-ಕಾರ್ಮಿಕವರ್ಗದ ತತ್ವಶಾಸ್ತ್ರವಾಗಿದೆ.  ಮಾರ್ಕ್ಸ್‌ವಾದವೆಂಬುದು ಅಧಿಕಾರದ ತತ್ವಶಾಸ್ತ್ರವಲ್ಲ; ಅದು ಸಮಾನತೆಯ ತತ್ವಶಾಸ್ತ್ರವಾಗಿದೆ ಮತ್ತು ಅದನ್ನೇ ನವಲಾಕ ಅವರು ಅಂತರಂಗೀಕರಿಸಿಕೊಂಡರು ಮತ್ತು ಆಚರಿಸಿದರು. ಹೀಗೆ ಪತ್ರಕರ್ತನಾಗಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತನಾಗಿ ಅವರು ನಡೆಸುತ್ತಿದ್ದ ಸತ್ಯಶೋಧನೆಯು ಅವರನ್ನು ಮಾವೋವಾದಿ ಬಂಡಾಯವು ಗರಿಗೆದರಿದ್ದ ದಕ್ಷಿಣ ಚತ್ತೀಸ್‌ಘಡಕ್ಕೆ ಕರೆದುಕೊಂಡು ಬಂದಿತು. ಆ ಪ್ರದೇಶದಲ್ಲಿ ೨೦೦೯ರಿಂದ ಆಪರೇಷನ್ ಗ್ರೀನ್ ಹಂಟ್ ಹೆಸರಿನಲ್ಲಿ ಭಾರತದ ಪ್ರಭುತ್ವವು ಕ್ರಾಂತಿ ವಿರೋಧಿ ಪ್ರತಿಯುದ್ಧವನ್ನು ಪ್ರಾರಂಭಿಸಿತ್ತು.

ಇಲ್ಲಿ ನವಲಾಕಾ ಅವರು ೧೯೩೦ರ ದಶಕದಲ್ಲಿ ಚೀನಾದಲ್ಲಿ ಎಡ್ಗರ್ ಸ್ನೋ ಅವರು ಯಾವ ಪಾತ್ರವನ್ನು ನಿರ್ವಹಿಸಿದರೋ ಅದೇ ಪಾತ್ರವನ್ನು ನಿರ್ವಹಿಸಿದರು. ಎಡ್ಗರ್ ಸ್ನೋ ಅವರು ೧೯೩೦ರ ಮಧ್ಯಭಾಗದಲ್ಲಿ ಚೀನಾದ ಕಮ್ಯುನಿಸ್ಟರ ಹಿಡಿತದಲ್ಲಿದ್ದ ಕೆಂಪು ಪ್ರದೇಶದೊಳಗೆ ಪ್ರವೇಶಿಸಿದರು ಮತ್ತು ಚೀನಾ ಜನತೆಯ ವಿಮೋಚನಾ ಸೇನೆಯ ಬಗ್ಗೆ, ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕರ ಬಗ್ಗೆ  ಮತ್ತು ಆ ಪಕ್ಷದ ಕಾರ್ಯಕ್ರಮ ಹಾಗೂ ನೀತಿಗಳ ಬಗ್ಗೆ ತಾವು ಕಂಡದ್ದನ್ನು ಕಂಡಂತೆಯೇ ವರದಿ ಮಾಡಲಾರಂಭಿಸಿದರು. ಅವರು ಬರೆದ ರೆಡ್ ಸ್ಟಾರ್ ಓವರ್ ಚೀನಾ ಎಂಬ ಪುಸ್ತಕವು ೧೯೩೮ರಲ್ಲಿ ಪ್ರಕಟವಾಯಿತು. ನವಲಾಕ ಅವರು ೨೦೧೨ರಲ್ಲಿ ಪ್ರಕಟಿಸಿದ ಡೇಸ್ ಅಂಡ್ ನೈಟ್ಸ್ ಇನ್ ಹಾರ್ಟ್‌ಲ್ಯಾಂಡ್ ಆಫ್ ರೆಬಲಿಯನ್ (ಬಂಡಾಯದ ಗುಂಡಿಗೆಯಲ್ಲಿ ಕಳೆದ ದಿನ ರಾತ್ರಿಗಳು) ಎಂಬ ಪುಸ್ತಕವು ದಕ್ಷಿಣ ಚತ್ತೀಸ್‌ಘಡದ ಮಾವೋವಾದಿಗಳ ಗೆರಿಲ್ಲ ನೆಲೆಯಲ್ಲಿ ಅವರು ಕಂಡ ವಾಸ್ತವಾಂಶಗಳನ್ನು ವರದಿ ಮಾಡುತ್ತವೆ. ನವಲಾಕಾ ಅವರು ಅಂತರ್ಯುದ್ಧದ ಬಗ್ಗೆ ತಮ್ಮ ತಿಳವಳಿಕೆಯನ್ನು ಆಧರಿಸಿ ಭಾರತದ ಪ್ರಭುತ್ವ ಮತ್ತು ಸಿಪಿಐ (ಮಾವೋವಾದಿ) ಪಕ್ಷಗಳೆರಡೂ ೧೯೪೯ರ ಜೆನೀವಾ ಕನ್ವೆನ್ಷನ್ನಿನ ೩ನೇ ಸನ್ನದನ್ನು ಮತ್ತು ದೇಶದೊಳಗಿನ ಸಶಸ್ತ್ರ ಸಂಘರ್ಷದ ಬಗೆಗಿನ ೧೯೭೭ರ ಪ್ರೋಟೋಕಾಲ್ ೨ರ ಶಿಷ್ಟಾಚಾರವನ್ನೂ ಸಮಾನವಾಗಿ ಪಾಲಿಸಬೇಕೆಂದು ಅಗ್ರಹಿಸುತ್ತಾ ಬಂದಿದ್ದಾರೆ. 

ಹಾಗಿದ್ದಲ್ಲಿ ನಗರದ ನಕ್ಸಲ್ ಎಂದರೆ ಯಾರು? ನವಲಾಕಾ ಅವರ ನಂಬಿಕೆ ಮತ್ತು ಆಚರಣೆಗಳನ್ನು ಗಮನಿಸಿದ ನಂತರ ನಾನೂ ನಕ್ಸಲ್ ಎಂದರೆ ಯಾರು ಎಂಬುದನ್ನು ಹೀಗೆ ಗ್ರಹಿಸುತ್ತೇನೆ: ಯಾರು ಭಾರತದ ಬಹುಪಾಲು ಜನತೆ ಇನ್ನೂ ಹೊಟ್ಟೆ ತುಂಬಾ ಊಟ ಮಾಡಲಾಗದ ಪರಿಸ್ಥಿಯಲ್ಲಿರುವುದನ್ನೂ, ಮೈ ಮುಚ್ಚುವಷ್ಟು ಬಟ್ಟೆಯನ್ನೂ ಧರಿಸಲಾಗದ ಸ್ಥಿತಿಯಲ್ಲಿರುವುದನ್ನೂ, ನಿಲ್ಲಲು ಸುಭದ್ರ ಸೂರಿಲ್ಲದಿರುವುದನ್ನೂ, ಅರೆಬರೆ ಅಕ್ಷರ ಕಲಿಯಲೂ ಪಾಡು ಪಡಬೇಕಿರುವುದನ್ನೂ, ಸರಿಯಾದ ವೈದ್ಯಕೀಯ ಸೌಲಭ್ಯಗಳು ದೊರಕಂತಿರುವುದನ್ನೂ ಕಂಡರೂ ಕಾಣದಂತೆ ಸುಮ್ಮನಿರಲು ಆಗದ ವ್ಯಕ್ತಿ. ಮತ್ತು ಈ ಪರಿಸ್ಥಿತಿಗೆ ಭಾರತದ ದಮಕಾರಿ ಮತ್ತು ಶೋಷಕ ವ್ಯವಸ್ಥೆಯೇ ಕಾರಣವೆಂದು ಭಾವಿಸಿ ಈ ವ್ಯವಸ್ಥೆಯ ಕ್ರಾಂತಿಕಾರಿ ಬದಲಾವಣೆಯ ಅಗತ್ಯವಿದೆಯೆಂದು ಭಾವಿಸುವ ವ್ಯಕ್ತಿ. ನಕ್ಸಲರೆಂದರೆ ಇಂಥವರು ಎಂದಾದಲ್ಲಿ ಭಾರತದ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಬದುಕುತ್ತಿರುವ ಬಹುಪಾಲು ಜನ, ನನ್ನಂಥವರೂ ಮತ್ತು ನವಲಾಕರಂತವರೂ ಕೂಡಾ ನಕ್ಸಲರೇ ಎಂದಾಗುತ್ತದೆ. ಅದಕ್ಕಾಗಿ ಅವರು ಸಿಪಿಐ (ಮಾವೋವಾದಿ) ಪಕ್ಷದ ಸದಸ್ಯರೋ ಅಥವಾ ಬೆಂಬಲಿಗರೇ ಆಗಬೇಕೆಂದಿಲ್ಲ.

 

Back to Top