ISSN (Print) - 0012-9976 | ISSN (Online) - 2349-8846

’ನಕ್ಸಲ್’ ಹಣೆಪಟ್ಟಿ ಕಟ್ಟುವುದರ ಹಿಂದಿನ ರಾಜಕೀಯ

ಸರ್ಕಾರವು ಇತ್ತೀಚೆಗೆ ಬುದ್ಧಿಜೀವಿಗಳನ್ನು ಮತ್ತು ಕಾರ್ಯಕರ್ತರನ್ನು ಬಂಧಿಸಿರುವುದು ಕ್ರಮ ಬಾಹಿರವಾಗಿದೆ  ಮತ್ತು ನೈತಿಕವಾಗಿ ಅಪಮಾನಕಾರಿಯಾಗಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ದೇಶದ ಪ್ರಮುಖ ಸಾಮಾಜಿಕ ಕಾರ್ಯಕರ್ತರುಗಳನ್ನು ಬಂಧಿಸಿ, ಇಬ್ಬರು ಪ್ರಖ್ಯಾತ ದಲಿತ ಬುದ್ಧಿಜೀವಿಗಳ ಮನೆಗಳ ಮೇಲೆ ನಡೆಸಿದ ದಾಳಿಗಳು ಪ್ರಜಾತಾಂತ್ರಿಕ ಹಕ್ಕಾದ ಭಿನ್ನಮತವನ್ನು ಹತ್ತಿಕ್ಕಲು ಕೈಗೊಂಡ ಕ್ರಮಗಳೇ ಆಗಿವೆ ಎಂದು  ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿರುವವರು ಪರಿಗಣಿಸಿದ್ದಾರೆ. ರಾಜ್ಯ ಸರ್ಕಾರದ ಈ ಕ್ರಮಗಳು ಎರಡು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ; ತಾನು ಅನುಮಾನದ ಆಧಾರದಲ್ಲಿ ಬಂಧಿಸುವ ಆರೋಪಿಗಳಿಗೆ ಸರ್ಕಾರವು ’ನಕ್ಸಲ್’ ಎಂದು ಹಣೆಪಟ್ಟಿಯನ್ನು  ಏಕೆ ಕಟ್ಟುತ್ತದೆ? ಮತ್ತು ಈ ಬಗೆಯಲ್ಲಿ ಗೃಹ ಇಲಾಖೆಯು ತನ್ನ ಪೊಲೀಸ್ ಯಂತ್ರಾಂಗದ ಮೂಲಕ ಅತಿರೇಕಗಳನ್ನು ನಡೆಸಿದಾಗ ಬುದ್ಧಿಜೀವಿಗಳು ತೆರಬೇಕಾದ ಸಾಮಾಜಿಕ ಮತ್ತು ನೈತಿಕ ಬೆಲೆ ಏನು?

ಮಹಾರಾಷ್ಟ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಮತ್ತು ಶಿವಸೇನಾ ಸಮ್ಮಿಶ್ರ ಸರ್ಕಾರವು ಈ ಬುದ್ಧಿಜೀವಿಗಳ ಮತ್ತು ನಾಗರಿಕ ಹಕ್ಕು ಕಾರ್ಯಕರ್ತರುಗಳ ಬಂಧನವು ಒಂದು  ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೆಂದು ಪ್ರಚಾರ ಮಾಡುತ್ತಿದೆ. ಅದಕ್ಕೆ ಎರಡು ಪ್ರಧಾನ ಉದ್ದೇಶಗಳಿವೆ. ಮೊದಲನೆಯದಾಗಿ ಹತ್ತಿರವಾಗುತ್ತಿರುವ ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲಿ ತಮ್ಮ ಗೆಲುವು ದಿನಗಳೆದಂತೆ ಕಠಿಣವಾಗುತ್ತಾ ಹೋಗುತ್ತಿದೆ ಎಂಬ ಅನಿಸಿಕೆ ಬಲವಾಗುತ್ತಿರುವುದರ್ತಿಂದ  ಅವರು ಈ ಕಾನೂನು ಮತ್ತು ಸುವ್ಯವಸ್ಥೆಯ ಗುಮ್ಮವನ್ನು ಮುಂದಿಡುತ್ತಿದ್ದಾರೆ. ಆದ್ದರಿಂದಲೇ ಅವರು ಭೀಮಾ-ಕೋರೆಗಾಂವ್ ಪ್ರಕರಣದ ಹಿನ್ನೆಲೆಯಲ್ಲಿ ನಕ್ಸಲ್ ವಿದ್ಯಮಾನವನ್ನು ಒಂದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೆಂದು ಪ್ರಚಾರ ಮಾಡುತ್ತಿದ್ದಾರೆ. ಎರಡನೆಯದಾಗಿ ತಮ್ಮ ಹಿಡಿತದಲ್ಲಿರುವ ಮಾಧ್ಯಮಗಳು ಮತ್ತು ಇತರೇ ಪ್ರಚಾರ ಸಾಧನಗಳ ಮೂಲಕ ರಾಷ್ಟ್ರೀಯತೆಗೆ ಮತ್ತು ದೇಶದ ಹಿತಾಸಕ್ತಿಗೆ ಸಂಬಂಧಪಟ್ಟ ವಿಷಯಗಳಲ್ಲಿ ನಕ್ಸಲರ ಬಗ್ಗೆ ನಕಾರಾತ್ಮಕ ಧೋರಣೆಯನ್ನು ಬಿತ್ತುತ್ತಿದ್ದಾರೆ. ಹಾಗೂ ಆ ಮೂಲಕ ಕನಿಷ್ಟ ಪಕ್ಷ ನಗರದ ಮಧ್ಯಮ ವರ್ಗದ ಗಮನವನ್ನು ತೀವ್ರವಾಗಿ ಭಾಧಿಸುತ್ತಿರುವ ಹಣುದುಬ್ಬರ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದ ಬೇರೆಡೆಗೆ ಹರಿಯುವಂತೆ ಮಾಡುವ ಜರೂರತ್ತನ್ನು ಪೂರೈಸಿಕೊಳ್ಳುತ್ತಿದೆ. ಆದರೆ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಅಗಾಧ ವೈಫಲ್ಯಗಳ ಕಾರuದಿಂದಾಗಿ ಜನರ ಆತಂಕವು ಇಷ್ಟು ಮಾತ್ರದಿಂದಲೇ ಬಗೆಹರಿಯುವುದಂತೂ ಸಾಧ್ಯವಿಲ್ಲ.

ಎರಡನೆಯದಾಗಿ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜೊತೆಗೂಡಿ ನಗರದ ನಕ್ಸಲ್ ಎಂಬ ನಾಮಾಂಕಿತವನ್ನು ಹುಟ್ಟುಹಾಕಿದೆ. ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್, ಗೋವಿಂದ ಪಾನ್ಸರೆ, ಪ್ರೋ.ಕಲ್ಬುರ್ಗಿ ಮತ್ತು ಗೌರಿ ಲಂಕೇಶರ ಹತ್ಯ ಪ್ರಕರಣಗಳಲ್ಲಿ ನಡೆದಿರುವ ಆರೋಪಿಗಳ ಬಂಧನಗಳು ಇಡೀ ಹಿಂದೂತ್ವ ಪಡೆಗೆ ಹಿನ್ನೆಡೆಯನ್ನು ಉಂಟುಮಾಡಿರುವ ಸಂದರ್ಭದಲ್ಲಿ ಜನತೆಯ  ಗಮನವನ್ನು ದಿಕ್ಕುತಪ್ಪಿಸಲೆಂದೇ ನಗರದ ನಕ್ಸಲರ ಹಣೆಪಟ್ಟಿಯ ಹೆಸರಿನಲ್ಲಿ ಬಂಧನಗಳು ನಡೆದಿವೆ. ಇದನ್ನು ಸಾಧಿಸುವ ಸಲುವಾಗಿಯೇ ಮಹಾರಾಷ್ಟ್ರದ ಪೊಲೀಸರು ಅತ್ಯಂತ ತ್ವರಿತಗತಿಯಲ್ಲಿ ಕ್ರಮಗಳನ್ನು ಜರುಗಿಸಿದ್ದಾರೆ. ತಮ್ಮ ಪ್ರತಿಪಾದನೆಗಳನ್ನೇ ಮುಂದೆ ಸಾಕ್ಷಿಗಳನ್ನಾಗಿ ಪರಿವರ್ತಿಸುವ ಮೂಲಕ ಬಂಧಿತ ಸಾಮಾಜಿಕ ಕಾರ್ಯಕರ್ತರಿಗೆ  ಮಾವೋವಾದಿಗಳೊಂದಿಗೆ ಸಂಬಂಧವಿತ್ತೆಂದು ಸಾಬೀತುಪಡಿಸುವುದು ಅವರ ಹುನ್ನಾರವಾಗಿದೆ. ಈ ದುರುದ್ದೇಶದ ಕ್ರಮಗಳಿಗಾಗಿ ಮಹಾರಾಷ್ಟ್ರ ಪೊಲೀಸರನ್ನು ಸುಪ್ರೀಂ ಕೋರ್ಟು ಸಹ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದೂ ಇದನ್ನೇ ರುಜುವಾತು ಮಾಡುತ್ತದೆ. ವಿಚಾರವಾದಿಗಳ ಹಂತಕರಿಗೆ ಹಿಂದೂತ್ವವಾದಿಗಳೊಂದಿಗಿದ್ದ ನಂಟಿನ ಬಗ್ಗೆ ಕೇಂದ್ರೀಕೃತವಾಗಿದ್ದ ಸಾರ್ವಜನಿಕರ ಗಮನವು ಈ ಬೆಳವಣಿಗೆಗಳಿಂದಾಗಿ ದಿಕ್ಕುತಪ್ಪಿದೆ.

ಎರಡನೆಯ ಪ್ರಶ್ನೆ ಪೊಲೀಸರು ತಮ್ಮ ವಿಚಾರಣೆಯ ಪ್ರಕ್ರಿಯೆಯಲ್ಲೇ ಅಂತರ್ಗತಗೊಳಿಸಿಕೊಂಡಿರುವ ಕ್ರಮಗಳ ಮೂಲಕ ಬಂಧಿತ ಕಾರ್ಯಕರ್ತರನ್ನು ಮತ್ತು ವಿದ್ವಾಂಸರನ್ನು ನೈತಿಕವಾಗಿ ವಿನಾಶ ಮಾಡುವ ಅನುಭವಗಳಿಗೆ ಈಡುಮಾಡುವ ಹುನ್ನಾರಗಳಿಗೆ ಸಂಬಂಧಪಟ್ಟದ್ದು. ಹೈದಾರಾಬಾದಿನ ದಲಿತ ವಿದ್ವಾಂಸರ ಮತ್ತು ಅವರ ಕುಟುಂಬದವರ ವಿಚಾರಣೆ ನಡೆಸಿದ ಶೈಲಿಯಲ್ಲಿ ಪೊಲೀಸರ ಈ ಹುನ್ನಾರಗಳು ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿವೆ.

ಹೀಗಾಗಿ ಪ್ರಭುತ್ವವು ಯಾರಿಗಾದರೂ ’ನಕ್ಸಲ್’ಎಂದು ಹಣೆಪಟ್ಟಿ ಕಟ್ಟುವುದು ಕೇವಲ ಒಂದು ನಾಮಕರಣದ ಪ್ರಕ್ರಿಯೆಯಾಗಿರುವುದಿಲ್ಲ. ಬದಲಿಗೆ ಅದು ಭೀತಿಯನ್ನು ಹುಟ್ಟಿಸುವ ಮತ್ತು ನೈತಿಕವಾಗಿ ಆಕ್ರಮಣಕಾರಿಯಾಗಿಯು ಇರುವ ಕ್ರಮಗಳನ್ನೂ ಒಳಗೊಂಡಿರುತ್ತದೆ. ಈ ವಿದ್ವಾಂಸರ ಮತ್ತು ಕಾರ್ಯಕರ್ತರ ಮನೆಗಳಿಗೆ ಪೊಲೀಸರು ತಮ್ಮ ದೊಡ್ಡ ಪಡೆಯೊಂದಿಗೆ ದಾಳಿ ಮಾಡುವ ಮೂಲಕ ಭಯಭೀತಿಯನ್ನು ಹುಟ್ಟುಹಾಕುವ ದೃಶ್ಯಾವಳಿಯನ್ನೇ ಸೃಷ್ಟಿಸುತ್ತಾರೆ. ಕೆಲವು ಬುದ್ಧಿಜೀವಿಗಳು ವ್ಯಕ್ತಪಡಿಸಿದ ಅಭಿಪ್ರಾಯದಂತೆ ಈ ಕ್ರಮಗಳು ಅಪಮಾನಕಾರಿಯಾಗಿಯೂ ಇದ್ದಿವೆ. ಇಂಥಾ ಅಪಮಾನವು ದಲಿತ ಬುದ್ಧಿಜೀವಿಗಳ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿಗೆಯೇ ಸಂಭವಿಸುತ್ತದೆ. ಇಂಥಾ ದಾಳಿಗಳನ್ನು ನಡೆಸುವಾಗ ಅನುಸರಿಸಬೇಕಾದ ನಿಗದಿತ ವಿಧಿವಿಧಾನಗಳನ್ನು ಪೊಲೀಸರು ಅನುಸರಿಸುವುದಿಲ್ಲ. ಈ ಮೂಲಕವೇ ವಿದ್ವಾಂಸರಿಗೆ ಮತ್ತು ಕಾರ್ಯಕರ್ತರಿಗೆ ಅಪಮಾನ ಮಾಡುವ ಕ್ರಮಗಳು ಆರಂಭಗೊಳ್ಳುತ್ತವೆ.  

ಕೆಲವು ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಹೈದಾರಾಬಾದಿನ ದಲಿತ ವಿದ್ವಾಂಸರ ಮನೆಯ ಮೇಲೆ ದಾಳಿ ನಡೆಸಿದ ಮಾಹಾರಾಷ್ಟ್ರ ಪೊಲೀಸರು ಅವರಿಗೆ ಮತ್ತು ಅವರ ಕುಟುಂಬದವರಿಗೆ ಹೆಚ್ಚೆಚ್ಚು ಅಪಮಾನಕಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ಉದಾಹರಣೆಗೆ ಪೊಲೀಸರು ಕೇಳಿದ ಕೆಲವು ಪ್ರಶ್ನೆಗಳಲ್ಲಂತೂ ಜಾತಿ ರೋಗದ ದುರ್ವಾಸನೆ ಹೊಡೆಯುತ್ತಿತ್ತು. ಅಂತರ್ಜಾತಿ ಮದುವೆಗಳು ಬ್ರಾಹ್ಮಣೀಯ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಅವರು ಗಳಹಿದ್ದಾರೆ. ಪೊಲೀಸ್ ಯೂನಿಫಾರ್ಮಿನ ಹಿಂದೆ ಅಡಗಿರುವ ಜಾತಿ ಮನಸ್ಸು ಕಾನೂನು ಪಾಲಕನ ಕರ್ತವ್ಯವನ್ನೂ ಮರೆಸುತ್ತದೆ. ಕಾನೂನು ವಿಧಿ ವಿಧಾನಗಳು ಪೊಲೀಸ್ ವ್ಯವಸ್ಥೆಯಲ್ಲಿರುವ ಜಾತಿ ಕೊಳಕನ್ನು ನಿವಾರಿಸುವುದರಲ್ಲಿ ಹೇಗೆ ವಿಫಲವಾಗಿದೆ ಎಂಬುದನ್ನೂ ಸಹ ಇದು ಸೂಚಿಸುತ್ತದೆ. ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ಬಂಧಿಸುವ ತಮ್ಮ ಯೋಜನೆಯ ರಣತಂತ್ರದ  ಭಾಗವಾಗಿ ಪೊಲೀಸರು ದಲಿತ ವಿದ್ವಾಂಸರ ವಿಚಾರಣೆಯನ್ನೂ ನಡೆಸಿದ್ದಾರೆ; ಇಂಥಾ ಅನಪೇಕ್ಷಿತ ವಿಚಾರಣೆಯ ಮೂಲಕ ತಮ್ಮ ಒಳಮನಸ್ಸಿನಲ್ಲಿ ಅಡಗಿಕೊಂಡಿರುವ ಜಾತಿ ಕಾಮನೆಗಳನ್ನು ಪೊಲೀಸರು ಪೂರೈಸಿಕೊಂಡಿದ್ದಾರೆ. ಈ ಅತಿರೇಕಗಳು ಕೇವಲ ಒಬ್ಬ ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಮಾತ್ರವಲ್ಲ. ಬದಲಿಗೆ ಬೇಶರತ್ ವ್ಯಕ್ತಿಗತ ಘನತೆಯ ಬಗ್ಗೆ ವ್ಯಕ್ತಿಗಳಿರುವ ನೈತಿಕ ಹಕ್ಕಿನ ಉಲ್ಲಂಘನೆಯೂ ಆಗಿದೆ. ಪೊಲೀಸ್ ವಿಚಾರಣೆಯು ಈ ವ್ಯಕ್ತಿಗತ ಘನತೆಯನ್ನು ಅಪಾಮಾನಿಸಿದೆ. ಒಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ಆಧರಿಸಿದ ರಾಷ್ಟ್ರದ ಪರಿಕಲ್ಪನೆಯಲ್ಲಿ ಅಂತರ್ಗತವಾಗಿರುವ ವೈರುಧ್ಯವನ್ನು ಪ್ರಭುತ್ವವು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಇಲ್ಲಿ ತುಂಬಾ ಪ್ರಮುಖವಾಗಿ ಗುರುತಿಸಲೇಬೇಕಿದೆ. ಹೈದರಾಬಾದಿನ ದಲಿತ ವಿದ್ವಾಂಸರಿಗೆ ಒದಗಿರುವ ಪರಿಸ್ಥಿತಿಯನ್ನು ಗಮನಿಸುವುದಾದರೆ ಅಮೂರ್ತವಾದ ರಾಷ್ಟ್ರವನ್ನು ರಕ್ಷಿಸುವ ಕಾಳಜಿ  ಹೊಂದಿರುವ ಪೊಲೀಸರು ಮೂರ್ತರೂಪದಲ್ಲಿರುವ ಮನುಷ್ಯರನ್ನು ಮಾತ್ರ ಅಪಾರ ತಿರಸ್ಕಾರದಿಂದ ನೋಡುತ್ತಾರೆ ಎಂಬುದು ತಿಳಿಯುತ್ತದೆ. ಇಂಥಾ ನೈತಿಕವಾಗಿ ಆಕ್ರಮಣಕಾರಿಯಾಗಿರುವ ಮತ್ತು ರಾಜಕೀಯವಾಗಿ ಭಯವನ್ನು ಹುಟ್ಟಿಸುವ ಕೃತ್ಯಗಳಿಂದಾಗಿ ಪೊಲೀಸರು ಒಂದೆಡೆ ಸಾಮಾಜಿಕ ಕಾರ್ಯಕರ್ತರನ್ನೂ ದುರ್ಬಲರ ಪರವಾಗಿ ನಿಲ್ಲಲೂ ಬಿಡುವುದಿಲ್ಲ ಮತ್ತೊಂದೆಡೆ ತಾನೂ ಯಾರ ಹಕ್ಕುಗಳನ್ನು ರಕ್ಷಿಸಬೇಕೋ ಅವರ ಹಕ್ಕುಗಳನ್ನೂ ರಕ್ಷಿಸುವುದಿಲ್ಲ.

 

Back to Top