ನವ ಮೀಸಲಾತಿಪರವಾದಿಗಳ ಹುಟ್ಟು
ಮೀಸಲಾತಿ ಬೇಕೆಂದು ಹುಟ್ಟುಕೊಂಡಿರುವ ಹೊಸ ಆಗ್ರಹಗಳು ಹೊಸ ಉದ್ಯೋಗ ಸೃಷ್ಟಿಯೂ ಆಗಬೇಕೆಂಬ ಆಗ್ರಹಗಳನ್ನು ಒಳಗೊಳ್ಳಬೇಕು. .
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಮೀಸಲಾತಿಯ ಪರಿಧಿಯೊಳಗೆ ತಮ್ಮ ಜಾತಿಗಳನ್ನೂ ಸೇರಿಸಬೇಕೆಂದು ಆಗ್ರಹಿಸಿ ವಿವಿಧ ಜಾತಿಗಳು ದೇಶಾದ್ಯಂತ ನಡೆಸುತ್ತಿರುವ ಹೋರಾಟಗಳು ಕುತೂಹಲಕಾರಿ ಘಟ್ಟವನ್ನು ಪ್ರವೇಶಿಸುತ್ತಿದೆ. ಮೀಸಲಾತಿ ವಿರೋಧಿಗಳು ಮೀಸಲಾತಿಯೆಂದರೆ ಒಂದು ಕಳಂಕಿತ ಪರಿಕಲ್ಪನೆಯೆಂಬ ರೀತಿಯಲ್ಲಿ ಕಟ್ಟಿರುವ ಕಥನವನ್ನೂ ಅದು ಮುರಿಯಬಯಸುತ್ತದೆ. ಅದೇ ಸಮಯದಲ್ಲಿ ಈ ಪ್ರಕ್ರಿಯೆಯು ಕಟ್ಟರ್ ಮೀಸಲಾತಿ ವಿರೋಧಿಗಳು ತಮ್ಮ ವಿರೋಧವನ್ನು ನೇರವಾಗಿಯಲ್ಲದೆ ದೇಶದ ಹಿತಾಸಕ್ತಿಯೆಂಬ ಅಮೂರ್ತ ರೂಪದಲ್ಲಿರಿಸುವಂತೆ ಮಾಡಿದೆ. ಕೆಲವು ದಶಕಗಳ ಕೆಳಗೆ ಈ ಮೀಸಲಾತಿ ವಿರೋಧಿಗಳು ಮೀಸಲಾತಿ ತತ್ವಗಳನ್ನು ಕಳಂಕಿತಗೊಳಿಸಲು ಮೀಸಲಾತಿ ಸೌಲಭ್ಯಗಳನ್ನು ಪಡೆಯುತ್ತಿದ್ದವರ ಬಗ್ಗೆ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬಗ್ಗೆ ನೈತಿಕವಾಗಿ ಆಕ್ರಮಣಾಕಾರಿ ಭಾಷೆಯನ್ನು ಬಳಸುತ್ತಿದ್ದರು. ಮೀಸಲಾತಿಯ ಫಲಾನುಭವಿಗಳನ್ನು ಸರ್ಕಾರದ ಅಳಿಯಂದಿರು (ಎಂದರೆ ಯೋಗ್ಯತೆ ಇಲ್ಲದಿದ್ದರೂ ಸರ್ಕಾರ ಅವರನ್ನು ಪುರಸ್ಕರಿಸುತ್ತದೆ ಎಂಬರ್ಥದಲ್ಲಿ). ಪ್ರತಿಭೆಯ ಶತ್ರುಗಳು, ಮತ್ತು ದಕ್ಷತೆ ಮತ್ತು ಸಾಮರ್ಥ್ಯಕ್ಕೆ ದೊಡ್ದ ತೊಡರು ಎಂದೆಲ್ಲಾ ಮೀಸಲಾತಿ ವಿರೋಧಿಗಳು ಬಣ್ಣಿಸುತ್ತಿದ್ದರು. ಇಂಥಾ ಹೀನಾಯ ವಿಮರ್ಶೆಗೆ ಗುರಿಯಾಗುತ್ತಿದ್ದವರು ನಿರ್ದಿಷ್ಟವಾಗಿ ಒಂದು ಸಮುದಾಯಕ್ಕೆ ಸೇರಿದವರೇ ಆಗಿರುತ್ತಿದ್ದರು. ಮೀಸಲಾತಿ ವಿರೋಧಿಗಳು ಇಲ್ಲಿ ಮೀಸಲಾತಿಯನ್ನೇ ನೇರವಾಗಿ ಗುರಿಯಾಗಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ಅವರು ಮೀಸಲತಿಯಿಂದ ಸಾರ್ವಜನಿಕ ಸೇವೆಯ ಸಾಂಸ್ಥಿಕ ಗುಣಮಟ್ಟಕ್ಕೆ ಹಾನಿ ಮಾಡುತ್ತಿದ್ದಾರೆಂದು ಆರೋಪಿಸುತ್ತಾ ಮೀಸಲಾತಿಯ ಫಲಾನುಭವಿಗಳನ್ನು ಗುರಿಯಾಗಿರಿಸಿಕೊಳ್ಳುತ್ತಿದ್ದರು. ಇಲ್ಲಿ ಕುತೂಹಲಕಾರಿ ಸಂಗತಿಯೇನೆಂದರೆ ಇಂಥಾ ಕುತ್ಸಿತ ಅಪಪ್ರಚಾರವನ್ನು ಮಾಡುವಾಗಲೂ ಅವರು ತಾವು ಯಾವುದೇ ಸಮುದಾಯವನ್ನಾಗಲೀ ಅಥವಾ ಮೀಸಲಾತಿ ತತ್ವವನ್ನಾಗಲೀ ಹೀಗೆಳೆಯುತ್ತಿಲ್ಲವೆಂದೂ ತಮ್ಮ ನಿಜವಾದ ಕಾಳಜಿ ದೇಶದ ಸಾಂಸ್ಥಿಕ ಯೋಗಕ್ಷೇಮವೇ ಆಗಿದೆಯೆಂದೂ ಹೇಳುತ್ತಿದ್ದರು. ಈ ವಾದದ ಸಾರಾಂಶವೇನು? ಬೇರೆ ಮಾತಿನಲ್ಲಿ ಹೇಳುವುದಾದರೆ ಅದು ಮೀಸಲಾತಿಯನ್ನು ಇಲ್ಲಾವಾಗಿಸುವ ಮೂಲಕ ಮಾತ್ರ ಸಾರ್ವಜನಿಕ ಸಂಸ್ಥೆಗಳಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಪುನರ್‌ಸ್ಥಾಪಿಸಬಹುದೆಂದು ವಾದಿಸುತ್ತದೆ. ಹೀಗಾಗಿಯೇ ಮಂಡಲ್ ವಿರೋಧಿ ಪ್ರತಿಭಟನೆಗಳಲ್ಲಿ ಮೀಸಲಾತಿ ತತ್ವವನ್ನು ಕಳಂಕಿತಗೊಳಿಸುವ ನೈತಿಕವಾಗಿ ಆಕ್ರಮಣಕಾರಿಯಾದ ಭಾಷೆಯೇ ಸಹಜ ಜಾತಿ ಪ್ರಜ್ನೆಯ ಪ್ರಮುಖ ಅಂಶವಾಗಿತ್ತು.
ಆದರೆ ಇಂದು ಬೇರೆಬೇರೆ ಜಾತಿಗಳು ಮೀಸಲಾತಿಯನ್ನು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಮೀಸಲಾತಿ ವಿರೋಧಿಗಳು ಕನಿಷ್ಟ ಪಕ್ಷ ತಮ್ಮ ಸಾರ್ವಜನಿಕ ಅಭಿವ್ಯಕ್ತಿಯಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯ ಎಂಬ ಪದಗಳನ್ನು ಹೆಚ್ಚಿಗೆ ಬಳಸುತ್ತಿಲ್ಲ. ಆದರೆ ಆಂತರ್ಯದಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುವ ಅಭಿವ್ಯಕ್ತಿಗಳಲ್ಲಿ ಮೀಸಲಾತಿಯ ಬಗ್ಗೆ ನಂಜಿನ ಮತ್ತು ಹೀನಾಯವಾದ ಭಾಷಾ ಪ್ರಯೋಗವೇ ಮುಂದುವರೆದಿದೆ. ಇದೀಗ ಮೀಸಲಾತಿ ವಿರೋಧವು ಕೆಲವು ಜಾತಿಗಳಿಗೆ ದೊರೆಯುವ ವಿಶೇಷ ಪಾಲಿನ ಬಗೆಗಿರುವ ವಿರೋಧಕ್ಕಿಂತ ದೇಶದ ಅಭಿವೃದ್ಧಿ ಮತ್ತು ಸಮಾಜದ ಐಕ್ಯತೆಗೆ ಧಕ್ಕೆ ಎಂಬ ಮುಸುಕನ್ನು ಧರಿಸುತ್ತಿದೆ. ಜಾತಿ ಆಧರಿತ ಮೀಸಲಾತಿಯು ಸಮಾಜದಲ್ಲಿ ಜಾತಿಯನ್ನು ನಾಶಗೊಳಿಸುವ ಬದಲು ಜಾತಿವಾದವನ್ನು ಹೆಚ್ಚಿಸುತ್ತದೆಯಾದ್ದರಿಂದ ಮೀಸಲಾತಿಯನ್ನು ವಿರೋಧಿಸಬೇಕು ಎಂಬುದು ಈಗ ಅವರ ವಾದ. ಆದರೆ ಅವರು ಮರೆಮಾಚಲು ಪ್ರಯತ್ನಿಸುತ್ತಿರುವ ಪ್ರಶ್ನೆಗಳಾದ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಮಾತ್ರ ಅವರು ಸಂದೇಹಾತ್ಮಕ ಧೋರಣೆ ಮುಂದುವರೆದೇ ಇದೆ. ಇದು ಏಕೆಂದು ಅವರನ್ನು ನಾವು ಪ್ರಶ್ನಿಸಲೇ ಬೇಕಿದೆ.
ಸಾರ್ವಜನಿಕ ಸಂಸ್ಥೆಗಳೇ ಈಗ ನೇಮಕಾತಿ ಬಿಕ್ಕಟ್ಟನು ಎದುರಿಸುತ್ತಿವೆ. ಮೊದಲನೆಯದಾಗಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯೆ ಆಗುತ್ತಿಲ್ಲಾ. ಒಂದು ವೇಳೆ ಭರ್ತಿಯಾದರೂ ಪ್ರಸ್ತುತ ಸರ್ಕಾರದ ಆಳ್ವಿಕೆಯಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಸೈದ್ಧಾಂತಿಕ ಧೋರಣೆಯನ್ನು ಆಧರಿಸಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಎರಡನೆಯದಾಗಿ ಈ ಮೊದಲು ಯಾವ ಕೆಲವರು ಮೀಸಲಾತಿಯೆಂದರೆ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಆಧರಿಸಿದ ಸಾಂಸ್ಥಿಕ ಒಳಿತಿಗೆ ತದ್ವಿರುದ್ಧವಾದದ್ದು ಎಂದು ವಾದಿಸುತ್ತಿದ್ದರೋ ಅವರೇ ಈಗ ಅವೆಲ್ಲವೂ ಮೀಸಲಾತಿಯಲ್ಲಿ ಬೆರೆತಿರುತ್ತದೆ ಎಂಬ ನಿಲುವಿಗೆ ಬಂದಿದ್ದಾರೆ. ಆದರೆ ಅವರ ಈ ಹೊಸ ನಿಲುವನ್ನು ಮೀಸಲಾತಿಗಾಗಿ ಹೊಸ ಜಾತಿಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲೇ ಪರಿಗಣಿಸಬೇಕು. ಮೀಸಲಾತಿಯ ಸುತ್ತ ಈಗ ಹುಟ್ಟಿಕೊಂಡಿರುವ ಹೊಸ ಸಂಕಥನಗಳಿಂದಾಗಿ ಮೀಸಲಾತಿಯ ತತ್ವವನ್ನು ಪರಿಶಿಷ್ಟ ಜಾತಿಗೆ ಹತ್ತಿದ್ದ ಕಳಂಕದಿಂದ ಬೇರ್ಪಡಿಸಿ ನೋಡಬಹುದಾಗಿದೆ. ಇದೊಂದು ಸಕಾರಾತ್ಮಕವಾದ ಬೆಳವಣಿಗೆಯೆಂದೇ ಪರಿಗಣಿಸಬೇಕು. ಏಕೆಂದರೆ ಮೀಸಲಾತಿಗಾಗಿನ ಆಗ್ರಹದ ಪ್ರಜಾತಾಂತ್ರೀಕರಣದಿಂದಾಗಿ ಮೀಸಲಾತಿಯ ತತ್ವದ ಸುತ್ತ ಆವರಿಸಿಕೊಂಡಿದ್ದ ನಂಜಿನ ಮತ್ತು ಕಟುವಾದ ಆಕ್ರೋಶಗಳು ಈಗ ತಟಸ್ಥಗೊಳ್ಳುತ್ತಾ ಸಾಗಿರುವುದು ಸಮಾಧಾನಕರವಾದ ವಿದ್ಯಮಾನವೇ ಆಗಿದೆ. ಇದರಿಂದಾಗಿ ಭಾರತದ ಕೆಲವು ಜಾತಿ ಗುಂಪುಗಳ ನಡುವೆ ಸಕ್ರಿಯವಾಗಿದ್ದ ಸಾಮಾಜಿಕ ವೈಷ್ಯಮ್ಯಗಳು ಸಡಿಲವಾಗಲೂ ಕಾರಣವಾಗಬಹುದಾದ್ದರಿಂದ ಇದೊಂದು ಸ್ವಾಗತಾರ್ಹ ಬೆಳವಣಿಗೆಯೆಂದೂ ಇನ್ನೂ ಕೆಲವರು ಭಾವಿಸಬಹುದು. ಆದರೆ ಈ ಬೇಡಿಕೆಗಳು ಸಾಕಾರವಾಗಲು ಬೇಕಾಗುವಷ್ಟು ಒತ್ತಡಗಳನ್ನು ಈ ಆಗ್ರಹಗಳು ಸರ್ಕಾರದ ಮೇಲೆ ಬೀರಲು ಸಾಧ್ಯವಾಗಿಲ್ಲ.
ತಮ್ಮ ತಮ್ಮ ಜಾತಿಗಳನ್ನು ಮೀಸಲಾತಿಯ ಪರಿಧಿಯೊಳಗೆ ತರಬೇಕೆಂದು ಜಾತಿ ಮತ್ತು ಸಮುದಾಯಗಳ ಆಧಾರದ ಮೇಲೆ ನಡೆಯುತ್ತಿರುವ ಬೃಹತ್ ಸಂಘಟನಾ ಪ್ರದರ್ಶನಗಳು ಆಯಾ ಸರ್ಕಾರಗಳಿಗೆ ಈಗಲೇ ಅಷ್ಟೊಂದು ತಲೆನೋವನ್ನೇನೂ ತರುತ್ತಿಲ್ಲ. ಏಕೆಂದರೆ ಈ ಎಲ್ಲಾ ಚಳವಳಿಗಳು ಮೀಸಲಾತಿ ಮಾರ್ಗದಿಂದ ತಮ್ಮ ತಮ್ಮ ಸಮುದಾಯಗಳಿಗೆ ಉದ್ಯೋಗ ದೊರಕಿಸಿಕೊಳ್ಳುವುದನ್ನು ಗುರಿಯಾಗಿಟ್ಟುಕೊಂಡಿವೆಯೇ ವಿನಃ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕೆಂಬ ಮೂಲಭೂತ ಆಗ್ರಹಗಳನ್ನೇನು ಮುಂದಿಟ್ಟಿಲ್ಲ. ಅಂಥ ಒಂದು ಮೂಲಭೂತ ಆಗ್ರಹವೇ ಇಲ್ಲದ ಸನ್ನಿವೇಶವು ಸರ್ಕಾರಕ್ಕೆ ಸುಳ್ಳು ಭರವಸೆಗಳನ್ನು ನೀಡುವಂಥ ಅಥವಾ ನ್ಯಾಯಾಲಯದ ಆದೆಶವನ್ನು ತೋರಿಸಿ ಚಳವಳಿಯ ಅಸ್ತಿಭಾರವನ್ನೇ ಅಲುಗಾಡಿಸುವಂಥಾ ಅವಕಾಶಗಳನ್ನು ಮಾಡಿಕೊಡುತ್ತದೆ. ವಿಪರ್ಯಾಸವೆಂದರೆ ಚಳವಳಿಗಳು ಸಾಗುತ್ತಿರುವ ದಿಸೆಯೇ ಸಮಸ್ಯೆಗಳ ಬಗ್ಗೆ ಯಾವುದೇ ನೈಜ ಪರಿಹಾರವನ್ನು ಒದಗಿಸದೇ ಜನರ ಸಮಸ್ಯೆಗಳೊಂದಿಗೆ ಆಟವಾಡುವ ಅವಕಾಶವನ್ನೂ ಸಹ ಸರ್ಕಾರಕ್ಕೆ ಕಲ್ಪಿಸಿಕೊಡುತ್ತಿದೆ. ಹೀಗಾಗಿ ಸರ್ಕಾರಗಳು ಸಾಧ್ಯ ಮತ್ತು ಅಸಾಧ್ಯಗಳ ಲೋಕದ ನಡುವೆ ಯಾವ ನಿಲುವನ್ನಾದರೂ ತೆಗೆದುಕೊಳ್ಳುತ್ತಿವೆ. ಉದಾಹರಣೆಗೆ ಮಹಾರಾಷ್ಟ್ರ ಸರ್ಕಾರವು ಮರಾಠರಿಗೆ ಶೇ.೧೬ರಷ್ಟು ಮೀಸಲಾತಿಯನ್ನು ಕಲ್ಪಿಸುವುದಾಗಿ ಹೇಳುತ್ತಿದ್ದರೂ ಮತ್ತೊಂದೆಡೆ ನ್ಯಾಯಾಲಯವು ವಿಧಿಸಿರುವ ಅಡೆತಡೆಗಳು ಅನುಷ್ಠಾಕ್ಕೆ ಆಡ್ಡಿಯಾಗಬಹುದೆಂಬ ಶರತ್ತಿನ ಕಲಮನ್ನೂ ಸೇರಿಸಿದೆ. ತಮ್ಮನ್ನು ಹೊಸದಾಗಿ ಮೀಸಲಾತಿ ಪರಿಧಿಯೊಳಗೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸುತ್ತಿರುವ ಹೊಸ ಜಾತಿ ಸಮುದಾಯಗಳು ಹೊಸ ಉದ್ಯೋಗ ಸೃಷ್ಟಿಯನ್ನೂ ಮಾಡಬೇಕೆಂದು ಆಗ್ರಹಿಸಬೇಕಿರುವ ಅಗತ್ಯದ ಬಗ್ಗೆ ಹೆಚ್ಚು ಗಮನಹರಿಸಿದಂತಿಲ್ಲ. ಅಂಥ ಒಂದು ಬೃಹತ್ ಚಳವಳಿಯು ಮೊದಲಿಗೆ ಸರ್ಕಾರದ ವಿವಿಧ ಹಂತಗಳಲ್ಲಿ ಭರ್ತಿಯಾಗದೆ ಬಾಕಿ ಬಿದ್ದಿರುವ ೨೪ ಲಕ್ಷ ಹುದ್ದೆಗಳನ್ನು ತುಂಬಬೇಕೆಂಬ ಆಗ್ರಹವನ್ನು ಮುಂದಿಡಬೇಕು.
ಅದರ ಬದಲಿಗೆ ಮೀಸಲಾತಿಯಲ್ಲಿ ಒಳಗೊಳ್ಳಬೇಕೆಂಬ ಏಕೈಕ ಆಗ್ರಹವು ಲಭ್ಯವಿರುವ ಒಂದೇ ಬಗೆಯ ಅವಕಾಶಗಳ ಮೇಲೆ ಅಪಾರವಾದ ಒತ್ತಡವನ್ನು ನಿರ್ಮಿಸುತ್ತದೆ. ಉತ್ತರ ಭಾರತದ ಜಾಟ್ ಮತ್ತು ಗುಜ್ಜಾರರು ಮತ್ತು ಪಶ್ಚಿಮ ಭಾರತದ ಪಟಿದಾರರು ಮತ್ತು ಮರಾಠರು ಹಾಗೂ ದಕ್ಷಿಣದ ಕಾಪುವಿನಂಥ ಕೃಷೀ ಕಸುಬನ್ನೇ ಪ್ರಧಾನವಾಗಿ ಆಧರಿಸಿದ್ದ ಜಾತಿಗಳು ಕೃಷಿ ಕಸುಬಲ್ಲಿ ಅಭಿವೃದ್ಧಿಯಾಗುವುದು ಕಷ್ಟವೆಂದು ಭಾವಿಸುತ್ತಾ ಶಿಕ್ಷಣದತ್ತ ಹೆಚ್ಚೆಚ್ಚು ಒಲವು ತೋರಿಸಲು ಪ್ರಾರಂಭಿಸಿದ್ದಾರೆ. ಆದರೆ ಈ ಸಮುದಾಯಗಳು ಶಿಕ್ಷಣ ಮತ್ತು ಉದ್ಯೋಗದ ಕಡೆ ಮುಖ ಮಾಡುವ ಹೊತ್ತಿಗೆ ಒಂದೋ ಆ ಕ್ಷೇತ್ರಗಳಲ್ಲಿ ಅವಕಾಶಗಳೇ ಇಲ್ಲವಾಗಿದ್ದವು ಅಥವಾ ಇದ್ದರೂ ಬಹಳ ಕಡಿಮೆಯಾಗಿದ್ದವು. ಹೀಗಾಗಿ ಈ ನವ ಮೀಸಲಾತಿವಾದಿಗಳು ಮೀಸಲಾತಿಗೆ ಆಗ್ರಹಿಸುತ್ತಲೇ ಏಕಕಾಲದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರದ ಮೇಲೆ ಒತ್ತಡ ನಿರ್ಮಿಸುವ ಅಗತ್ಯವಿದೆ. ಉದ್ಯೋಗಗಳು ನೈಜವಾಗಿ ಲಭ್ಯವಾಗುವ ಸಂದರ್ಭದಲ್ಲಿ ಮೀಸಲಾತಿಯನ್ನು ಆಗ್ರಹಿಸುವ ಬೇಡಿಕೆಯು ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಘನತೆಯುಳ್ಳ ಉದ್ಯೋಗ ಸೃಷ್ಟಿಸುವ ಪ್ರಕ್ರಿಯೆಯಲ್ಲೇ ನೈಜವಾದ ಅವಕಾಶಗಳು ಹುಟ್ಟಿಕೊಳ್ಳುತ್ತವೆ.