ISSN (Print) - 0012-9976 | ISSN (Online) - 2349-8846

ಕಾಶ್ಮೀರದ ಪರಿಸ್ಥಿತಿ ದುರಸ್ಥಿಯಾಗದಷ್ಟು ಹದಗೆಟ್ಟಿದೆಯೇ?

ನವದೆಹಲಿಯು ಅನುಸರಿಸುತ್ತಿರುವ ಕಟು ಧೋರಣೆಯು ಮಾತುಕತೆಯ ಎಲ್ಲಾ ಸಾಧ್ಯತೆಗಳನ್ನು ಮುಚ್ಚುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಅನುರಾಧಾ ಭಾಸಿನ್ ಜಮ್ವಾಲ್ ಬರೆಯುತ್ತಾರೆ:

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾದ ಮೆಹಬೂಬಾ ಮುಫ್ತಿಯವರು ಮೇ ೯ ರಂದು ಕರೆದ ಸರ್ವ ಪಕ್ಷಗಳ ಸಭೆಯಲ್ಲಿ ರಂಜಾನ್ ತಿಂಗಳಲ್ಲಿ ಕದನ ವಿರಾಮ ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಇದು ಭರವಸೆಗಳಿಗಿಂತ ಹೆಚ್ಚಾಗಿ ಅನುಮಾನಗಳನ್ನೇ ಮೂಡಿಸುವಂತಿದೆ. ಒಂದೊಮ್ಮೆ ಕದನ ವಿರಾಮವನ್ನು ಘೋಷಿಸಿದರೂ ಈಗಾಗಲೇ ಬಂದೂಕು ಮತ್ತು ಬೀದಿ ಮೆರವಣಿಗೆಗಳ ಮೂಲಕ ಕಾಶ್ಮೀರಿ ಯುವಜನತೆ ಹೊಸಬಗೆಯ ಪ್ರತಿರೋಧವನ್ನು ಕಂಡುಕೊಂಡಿದ್ದು ಕದನವಿರಾಮಕ್ಕೆ ಕಾಶ್ಮೀರ ಯಾವ ಬಗೆಯಲ್ಲಿ ಪ್ರತಿಕ್ರಿಯುಸತ್ತೆದೆಂಬುದನ್ನು ಊಹಿಸುವುದು ಕಷ್ಟ. ಈ ಪ್ರತಿರೋಧವು ಈಗ ಯುವಜನತೆ ಅನುಭವಿಸುತ್ತಿರುವ ಪರಕೀಯತೆ ಗೆ ಪ್ರತಿಕ್ರಿಯೆಯಾಗಿ ಅಥವಾ ದಮನದ ವಿರುದ್ಧ ಹುಟ್ಟುತ್ತಿರುವ ಆಕ್ರೋಶವಾಗಿ ಮಾತ್ರವೇ ಉಳಿದಿಲ್ಲ. ಕಾಶ್ಮೀರದ ಬೀದಿಬೀದಿಗಳಲ್ಲಿ ಕಂಡುಬರುತ್ತಿರುವ ಈ ಆಕ್ರೋಶವು ಭಾರತದ ಭದ್ರತಾ ಪಡೆಗಳು ಸುರಿಸುವ ಗುಂಡುಗಳ ಅಥವಾ ಪೆಲೆಟ್ಟುಗಳ ಬಗ್ಗೆ ಯಾವ ಭೀತಿಯೂ ಇಲ್ಲದ ಜನಬಂಡಾಯದ ಲಕ್ಷಣಗಳನ್ನು ಸ್ಪಷ್ಟವಾಗಿ ತೋರಿಸುತ್ತಿವೆ; ಮತ್ತು ಈ ಬಂಡಾಯವು ಯಾವ ಸಹಜ ಜಡತೆಗಳಿಗೂ ಪಕ್ಕಾಗದೆ ನಿರಂತರವಾಗಿ ಮುಂದುವರೆಯುತ್ತಿದೆ. ಈ ಬಂಡಾಯದ  ಹಿಂದೆ ಒಂದು ಕುರುಡು ಬದ್ಧತೆಯೇ ಇರಬಹುದು ಅಥವಾ ಭಾರತ ಭದ್ರತಾ ಪಡೆಗಳನ್ನು ಕೊಲ್ಲುತ್ತಾ ಅಥವಾ ದಣಿಸುತ್ತಾ ಭಾರತಕ್ಕೆ ರಕ್ತಸ್ರಾವ ಉಂಟುಮಾಡುವ ವ್ಯೂಹತಂತ್ರವೇ ಇರಬಹುದು ಅಥವಾ ನಿರಂತರ ಅಪಮಾನಕ್ಕೆ ಪ್ರತೀಕಾರವಾಗಿ ಮಾಡಿಕೊಂಡಿರುವ ಆಯ್ಕೆಯೇ ಆಗಿರಬಹುದು..ಏನೇ ಇದ್ದರೂ ಇದೊಂದು ಬಗೆಯ ಮಾಡು ಅಥವಾ ಮಡಿ ಎಂಬ ರೀತಿಯ ಯುದ್ಧವಾಗಿ ಬಿಟ್ಟಿದೆ. ಕಾಶ್ಮೀರ ಮತ್ತು ನವದೆಹಲಿಗಳ ನಡುವೆ ಉಂಟಾಗಿರುವ ವಿಶ್ವಾಸದ ಬೃಹತ್ ಕಂದರವು ಯಾವುದೇ ಬಗೆಯ ಶಾಂತಿಯುತ ಪ್ರತಿರೋಧದ ಬಗೆಗಿನ ವಿಶ್ವಾಸವನ್ನೇ ತೀವ್ರವಾಗಿ ಕುಂದಿಸುತ್ತಿದೆ. ಈವರೆಗೆ ತನ್ನ ವಿದ್ಯಾರ್ಥಿಗಳಿಗೆ ಶಾಂತಿಯುತ ಪ್ರತಿಭಟನೆಗಳ ಬಗ್ಗೆ ಮತ್ತು ಉದಾರವಾದಿ ಚಿಂತನೆಗಳ ಬಗ್ಗೆ ಪಾಠ ಮಾಡುತ್ತಿದ್ದ ಕಾಶ್ಮೀರ ವಿಶ್ವವಿದ್ಯಾಲಯದ ಅದ್ಯಾಪಕರೊಬ್ಬರು ತೀರಾ ಇತ್ತಿಚೆಗೆ ಭದ್ರತಾ ಪಡೆಗಳಿಂದ ಹತ್ಯೆಯಾಗುವ ಎರಡು ದಿನ ಮೊದಲು ತಾವೇ ಸ್ವಯಂ ಮಿಲಿಟೆಂಟರ ಗುಂಪೊಂದನ್ನು ಸೇರಿಕೊಂಡಿದ್ದರೆಂದರೆ ಇದು ಕೇವಲ ಶಾಂತಿಯುತ ಅಭಿವ್ಯಕ್ತಿಯ ಅವಕಾಶಗಳನ್ನು ಇಲ್ಲಾವಾಗಿಸುತ್ತಿರುವ ಸಮಸ್ಯೆಯಾಗುಳಿದಿಲ್ಲ; ಅದು ಶಾಂತಿಯುತ ಪರಿಹಾರ ಅಥವಾ ಪ್ರತಿರೋಧಗಳ ಬಗ್ಗೆ ವಿಶ್ವಾಸವೇ ಶೂನ್ಯವಾಗುತ್ತಿರುವ ಸಮಸ್ಯೆಯೂ ಆಗಿದೆ.

ಬಹುಮುಖ್ಯ ಪ್ರಶ್ನೆಯೆಂದರೆ ಎಲ್ಲ ಪಕ್ಷಗಳು ಒಟ್ಟಾಗಿ ಮಾಡಿರುವ ಬೇಡಿಕೆಯು ಕಾಶ್ಮೀರದ ಬಗ್ಗೆ ನವದೆಹಲಿಯು ಈಗಲಾದರೂ ಭಿನ್ನವಾಗಿ ಯೋಚಿಸುವಂತೆ ಪ್ರಚೋದಿಸುತ್ತದೆಯೇ ಎಂಬುದಾಗಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಕೊನೆಗೊಳಿಸುವ ಸಲುವಾಗಿ ಮಾತುಕತೆಯನ್ನು ಪ್ರಾರಂಭಿಸಬೇಕೆಂದು ಮುಖ್ಯಮಂತ್ರಿ ಮಫ್ತಿಯವರು ಮಾಡಿಕೊಂಡಿದ್ದ ಹಲವಾರು ಮನವಿಗಳನ್ನು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಪರಿಗಣಿಸಿಯೇ ಇಲ್ಲ. ಹಾಗೆ ನೋಡಿದರೆ ಬಿಜೆಪಿ ನೇತೃತ್ವದ ಸರ್ಕಾರವು ಕಾಶ್ಮೀರದ ಬಗ್ಗೆ ಈ ಹಿಂದಿನ ಎಲ್ಲಾ ಸರ್ಕಾರಗಳಿಗಿಂತಲೂ ತೀವ್ರವಾದ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಈ ಹಿಂದಿನ ಸರ್ಕಾರಗಳಂತೆ ಅದು ತನ್ನ ಕ್ರೂರ ದಮನ ನೀತಿಗಳಿಗೆ ಪರಸ್ಪರರ ವಿಶ್ವಾಸವನ್ನು ಹೆಚ್ಚಿಸುವ ಕ್ರಮಗಳು ಇತ್ಯಾದಿಗಳೆಂಬ ಬಾಯುಪಚಾರದ ಪ್ರಜಾತಾಂತ್ರಿಕ ಸೋಗನ್ನೂ ಸಹ ಹೊದಿಸುತ್ತಿಲ್ಲ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೈದ್ಧಂತಿಕ ಸ್ಪೂರ್ತಿಯಿಂದ ಕೆಲಸ ಮಾಡುವ ಬಿಜೆಪಿ ಈ ವಿಷಯಗಳಲ್ಲಿ ತನ್ನ ಉದ್ದೇಶಗಳಿಗೆ ಯಾವುದೇ ಮುಖವಾಡವನ್ನೂ ತೊಡಿಸುವುದಿಲ್ಲ. ಅದು ಕೇವಲ ಕಾಶ್ಮೀರದಲ್ಲಿ ಮಾತ್ರ ದಮನ ಮಾಡುತ್ತಿರುವುದಲ್ಲ. ಅದರ ಜೊತೆಗೆ ಭಾರತದ ಪರಿಕಲ್ಪನೆಯನ್ನೇ ಬದಲಾಯಿಸಿ ಪ್ರಜಾತಂತ್ರಕ್ಕೆ ಶಾಶ್ವತ ಹಾನಿಯುಂಟುಮಾಡುವ ನೀತಿಗಳನ್ನು ದೇಶಾದ್ಯಂತ ಅನುಸರಿಸುತ್ತಿದೆ. ಕಾಶ್ಮೀರದ ಜನಸಂಖ್ಯಾ ಸ್ವರೂಪವನ್ನು ಬದಲಾಯಿಸಿ, ಅಲ್ಲಿರುವ ಮುಸ್ಲಿಂ ಜನತೆಯನ್ನು ದಮನ ಮಾಡುತ್ತಾ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ತನ್ನ ದೂರಗಾಮಿ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದು ಕಾಶ್ಮೀರದ ಬಗ್ಗೆ ಅದು ಅನುಸರಿಸುತ್ತಿರುವ ನೀತಿಯ ಸಾರವಾಗಿದೆ. ಒಂದು ಅಸ್ಥಿರ, ಹಿಂಸಾಪೂರಿತ ಮತ್ತು ಉದ್ರಿಕ್ತ ಕಾಶ್ಮೀರ ಅಂಥಾ ಗುರಿಯನ್ನು ಈಡೇರಿಸಿಕೊಳ್ಳಲು ಪೂರಕವಾಗಿರುತ್ತದೆ.

ಕಾಶ್ಮೀರಿಗಳ ರಕ್ತಕ್ಕೆ ಬೆಲೆಯಿಲ್ಲವಾದರೂ ಈಗಾಗಲೇ ಅಲ್ಲಿ ಪ್ರಾಣ ಕೊಟ್ಟಿರುವ ಭಾರತದ ಸೈನಿಕರ ಪ್ರಾಣಗಳ ಬಗ್ಗೆಯಾದರೂ ಭಾರತ ಸರ್ಕಾರಕ್ಕೆ ಕಾಳಜಿ ಇರಬೇಕಿತ್ತು. ಆದರೆ ಸರ್ಕಾರಕ್ಕೆ ಅದರ ಬಗ್ಗೆಯೂ ಯಾವುದೇ ಕಾಳಜಿಯಿಲ್ಲ. ೨೦೧೮ರಲ್ಲಿ ೪೦ ಮಿಲಿಟೆಂಟರನ್ನು ಕೊಲ್ಲಲಾಗಿದ್ದರೆ ೨೪ ಸೈನಿಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಈ ರೀತಿ  ಸಾವಿನ ಅನುಪಾತ ೨:೧ ಇರುವಾಗ ಕೇಂದ್ರದ ಕಾಶ್ಮೀರ ನೀತಿಯಲ್ಲಿರುವ ಸೈನಿಕ ವಿವೇಕವೇ ಅತ್ಯಂತ ಪ್ರಶ್ನಾರ್ಹವಾಗಿದೆ. ಇದಲ್ಲದೆ ಈ ಹಿಂಸಾತ್ಮಕ ಸಂಘರ್ಷವು ಒಬ್ಬ ಪ್ರವಾಸಿಯನ್ನೂ ಒಳಗೊಂಡಂತೆ ೩೭ ನಿಶಸ್ತ್ರ ನಾಗರಿಕರನ್ನು ಬಲಿ ತೆಗೆದುಕೊಂಡಿದೆ ಹಾಗೂ ನೂರಾರು ಜನರು ಗುಂಡು ಮತ್ತು ಪೆಲೆಟ್ಟುಗಳಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಂಘರ್ಷದಲ್ಲಿ ಹೀಗೆ ನೂರಾರು ನಾಗರಿಕರು ಸಹಬಲಿಯಾಗುತ್ತಿದ್ದರೂ ಅವ್ಯಾವುದೂ ಅಲ್ಲಿ ನಡೆಯುತ್ತಿರುವ ಸಶಸ್ತ್ರ ಸಂಘರ್ಷವನ್ನು ತಡೆಯುತ್ತಲೂ ಇಲ್ಲ.. ಅದರ ತೀವ್ರತೆಯನ್ನೂ ಕಡಿಮೆಗೊಳಿಸುತ್ತಿಲ್ಲ. ಮಾಯದ ಗಾಯದಂತಿರುವ ಕಾಶ್ಮೀರಿಗಳ ಮನಸ್ಸಿನಲ್ಲಿ ಈ ಸಾವುಗಳು ನೂರಾರು ಸಂಖ್ಯೆಯಲ್ಲಿ ಹೊಸ ಮಿಲಿಟೆಂಟುಗಳ ಹುಟ್ಟಿಗೆ ನೆರವಾಗುವ ಗೊಬ್ಬರವಾಗುತ್ತಿವೆ. 

ಹೀಗಾಗಿ ಸರ್ವಪಕ್ಷ ನಿಯೋಗವು ನವದೆಹಲಿಯಿಂದ ಯಾವುದೇ ಪರಿಹಾರವನ್ನು ಪಡೆದುಕೊಳ್ಳಲಾರದು. ಆಗ ಈ ಸಂಘರ್ಷವನ್ನು ತಿಳಿಮಾಡುವ ಯಾವ ಮಾರ್ಗಗಳು ಮಫ್ತಿಯವರ ಬಳಿ ಇರಲು ಸಾಧ್ಯವಿಲ್ಲ. ಅಲ್ಪಸ್ವಲ್ಪ ಸುಧಾರಣೆ ಮಾಡಬಲ್ಲ ಮತ್ತು ಮಫ್ತಿಯವರ ವ್ಯಾಪ್ತಿಯಲ್ಲೇ ಇರುವ ಕ್ರಮವೆಂದರೆ ಕಲ್ಲೂ ತೂರಾಟಗಾರರ ಬಗ್ಗೆ ಅವರ ಸರ್ಕಾರ ತೆಗೆದುಕೊಂಡಿರುವ ಕಟು ನಿಲುವನ್ನು ಮೃದುಗೊಳಿಸುವುದು. ಕಲ್ಲು ತೂರಾಟದ ಆರೋಪದಲ್ಲಿ ಬಂಧನಗಳು, ಎಫ್‌ಐಆರ್‌ಗಳು ಮತ್ತು ಸತತ ಕಿರುಕುಳದ ವಿಷಚಕ್ರದಲ್ಲಿ ಸಿಲುಕಿಕೊಂಡಿರುವಂಥ ಆ ಯುವಕರು ನಿಧಾನವಾಗಿ ಬಂದೂಕುಗಳನ್ನು ಹಿಡಿಯುವ ಮಿಲಿಟೆಂಟುಗಳಾಗಿ ಅನಿವಾರ್ಯವಾಗಿ ಬದಲಾಗುವ ಹೊಸ್ತಿಲಲ್ಲಿದ್ದಾರೆ.  ಆದರೂ ಈ ಕ್ರಮವು ಸಹ ಕೇವಲ ಸಾಂಕೇತಿಕವಾದದ್ದು ಮಾತ್ರ. ಪಿಡಿಪಿ- ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತರುಣದಲ್ಲಿ ಆಗಿನ ಮುಖ್ಯಮಂತ್ರಿ ದಿವಂಗತ ಮಫ್ತಿ ಮೊಹಮ್ಮದ್ ಸೈಯದ್ ಅವರು ಮಸಾರತ್ ಅಲಾಮ್ ಎಂಬ ಪ್ರತ್ಯೇಕತಾವಾದಿ ನಾಯಕನನ್ನು ಬಿಡುಗಡೆ ಮಾಡಿದರೂ ಕೇಂದ್ರದ ಒತ್ತಡಕ್ಕೆ ಮಣಿದು ಸ್ವಲ್ಪ ಸಮಯದಲ್ಲೇ ಮತ್ತೆ ಬಂಧಿಸಲೇ ಬೇಕಾಯಿತು. ಇದು ಸಂದರ್ಭದ ಗಂಭೀರತೆಗೆ ಒಂದು ಉದಾಹರಣೆಯಾಗಿದೆ.

ನಮ್ಮ ಅಧಿಕಾರ ರಚನೆಯ ಸ್ವರೂಪಗಳು  ಕಾಶ್ಮೀರದ ಬಗ್ಗೆ ಕೇಂದ್ರಕ್ಕೆ ಅಪರಿಮಿತವಾದ ಅಧಿಕಾರವನ್ನು ಒದಗಿಸಿದೆ ಮತ್ತು ರಾಜ್ಯ ಸರ್ಕಾರದ ಅಧಿಕಾರ ಮತ್ತು ಸಾಮರ್ಥ್ಯದ ಮೇಲೆ ತೀವ್ರವಾದ ಮಿತಿಗಳನ್ನು ಹೇರುತ್ತವೆ. ಈ ಸದ್ಯಕ್ಕಂತೂ ಪಿಡಿಪಿ ಯು ಮುಂದಿಡುವ ಯಾವುದೇ ಮರುಸಂಧಾನದ ಪ್ರಯತ್ನಗಳನ್ನು ಕೇಂದ್ರವು ಖಡಾಖಂಡಿತವಾಗಿ ನಿರಾಕರಿಸುತ್ತದೆ. ಕಥುವಾದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಮಫ್ತಿಯವರು ಬಿಜೆಪಿಯ ಯಾವುದೇ ಒತ್ತಡಗಳಿಗೆ ಮಣಿಯದೇ ಧೃಢವಾದ ನಿಲುವು ತೆಗೆದುಕೊಂಡಿದ್ದು ಒಂದು ಅಪರೂಪದ ಅಪವಾದವಷ್ಟೆ. ಆ ವಿಷಯದಲ್ಲಿ ಬಿಜೆಪಿಯ ನಿಜವಾದ ಉದ್ದೇಶವು ನ್ಯಾಯ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುವುದಕ್ಕಿಂತ ರಾಜ್ಯದಲ್ಲಿ ಆಳವಾದ ಕೋಮುವಾದಿ ವಿಭಜನೆಯನ್ನು ಉಂಟುಮಾಡುವುದೇ ಆಗಿದ್ದರೆ ಅದನ್ನು ಬಿಜೆಪಿಯು ಆ ವೇಳೆಗಾಗಲೇ ಸಾಧಿಸಿಬಿಟ್ಟಿತ್ತು. 

ಮಾತುಕತೆಗೆ ಮುಂದಾಗಬೇಕೆಂಬ ಪಿಡಿಪಿಯ ಪ್ರಯತ್ನ ವಿಫಲವಾಗಬಹುದು. ಆದರೆ ಆ ನಂತರವೂ ಕಾಶ್ಮೀರಿ ಯುವಕರ ನಂಜುಭರಿತ ಯುವಶಕ್ತಿಯನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬಹುದಾದ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಏನೇ ಘಟನೆಗಳು ನಡೆದರೂ ಪ್ರತಿಬಾರಿ ಶಾಲಾ ಕಾಲೇಜುಗಳನ್ನು ಮುಚ್ಚುವುದರ ಬದಲು ಅವುಗಳನ್ನು ಅಭಿಪ್ರಾಯ ಮತ್ತು ಆಲೋಚನಗೆಳನ್ನು ವ್ಯಕ್ತಪಡಿಸುವ ಮುಕ್ತ ವೇದಿಕೆಗಳನ್ನಾಗಿ ಮಾಡಬಹುದು. ಸರ್ಕಾರವು ಪ್ರತಿಭಟನೆಗಳನ್ನು ಹತ್ತಿಕ್ಕುವ ಯಾವ ಸಾಧ್ಯತೆಯೂ ಇಲ್ಲ. ಅದು ಹೊಸ ಪೀಳಿಗೆಯ ಮೆದುಳು ಮತ್ತು ಮನಸ್ಸುಗಳಲ್ಲಿ ಅಚ್ಚೊತ್ತಿಬಿಟ್ಟಿದೆ. ಸರ್ಕಾರವು ಮಾಡಬಹುದಾದ ಏಕಮಾತ್ರ ಕೆಲಸವೆಂದರೆ ಶಾಂತಿಯುತ ಮತ್ತು ಹೆಚ್ಚು ಅರ್ಥಪೂರ್ಣ ಪ್ರತಿರೋಧಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಡುವುದು. ಅದೇ ಮಾತುಕತೆಗೆ ಸಾಧ್ಯವಾಗಿಸಬಲ್ಲ ಸಂದರ್ಭವನ್ನೂ ಮುಂದೆ ಸೃಷ್ಟಿಸಬಹುದು.

 

                                                                                                               

Updated On : 17th May, 2018
Back to Top