’ಅಸಹಕಾರಿ’ ಒಕ್ಕೂಟ ವ್ಯವಸ್ಥೆ
೧೫ನೇ ಹಣಕಾಸು ಅಯೋಗದ ಮಾರ್ಗಸೂಚಿಗಳನ್ನು ಬದಲಿಸದಿದ್ದರೆ ರಾಜ್ಯಗಳು ತಮ್ಮ ವಿತ್ತೀಯ ಅಧಿಕಾರಗಳನ್ನೇ ಕಳೆದುಕೊಳ್ಳುತ್ತವೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಹಣಕಾಸು ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚಿಕೆಯನ್ನು ನಿಗದಿ ಮಾಡುವ ಸ್ವತಂತ್ರ ಸಂಸ್ಥೆಯಾಗಿದೆ. ಸಂವಿಧಾನದ ೭ನೇ ಶೆಡ್ಯೂಲಿನಲ್ಲಿ ನಿಗದಿಪಡಿಸಿರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತಮ್ಮ ವೆಚ್ಚಗಳ ಜವಾಬ್ದಾರಿಯನ್ನು ಪೂರೈಸಲು ಅನುವಾಗುವಂತೆ ಕೇಂದ್ರೀಯ ತೆರಿಗೆಗಳನ್ನು ಹಂಚಿಕೆ ಮಾಡುವುದು ಅದರ ಪ್ರಮುಖ ಹೊಣೆಗಾರಿಕೆಯಾಗಿದೆ. ಈ ಹಿಂದೆ ಹಣಕಾಸು ಅಯೋಗವು ಈ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿತ್ತು ಮತ್ತು ಸಂಬಂಧಪಟ್ಟ ಎಲ್ಲರಿಂದಲೂ ಅಪಾರ ಮನ್ನಣೆಯನ್ನು ಗಳಿಸಿಕೊಂಡಿತ್ತು. ದೇಶದ ವಿತ್ತೀಯ ವ್ಯವಸ್ಥೆಯ ಭಾಗವಾಗಿ ಒಂದು ಸ್ವತಂತ್ರ ಹಣಕಾಸು ಅಯೋಗವಿರುವುದು ಭಾರತದ ಒಕ್ಕೂಟ ವ್ಯವಸ್ಥೆಯ ಒಂದು ಶಕ್ತಿಯಾಗಿದೆ. ಅದು ಒಕ್ಕೂಟ ರಚನೆಯ ತಳಹದಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪಾತ್ರವನ್ನು ವಹಿಸುತ್ತಾ ಬಂದಿದೆ. ಅಯೋಗಕ್ಕೆ ನೀಡಲಾಗುವ ಮಾರ್ಗಸೂಚಿ ಅಂಶಗಳು (ಟರ್ಮ್ಸ್ ಆಫ್ ರೆಫೆರೆನ್ಸ್- ಟಿಒಆರ್) ಅದರ ಕಾರ್ಯೋದ್ದೇಶಗಳನ್ನು ನಿಗದಿಗೊಳಿಸುತ್ತವೆ. ಆದರೆ ೧೫ನೇ ಹಣಕಾಸು ಅಯೋಗಕ್ಕೆ ನೀಡಲಾಗಿರುವ ಮಾರ್ಗಸೂಚಿ ಅಂಶಗಳು ರಾಜ್ಯ ಸರ್ಕಾರಗಳಲ್ಲಿ ಅಪಾರ ಆತಂಕ ಹಾಗೂ ಅನುಮಾನಗಳನ್ನು ಹುಟ್ಟಿಸಿವೆ. ಅಯೋಗವು ತನ್ನ ಹಂಚಿಕೆಯ ಲೆಕ್ಕಾಚಾರಕ್ಕೆ ೧೯೭೧ರ ಜನಗಣತಿಯ ಬದಲಿಗೆ ೨೦೧೧ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬ ನಿರ್ದೇಶನವನ್ನು ನೀಡಲಾಗಿದೆ. ಇದು ಹಲವಾರು ರಾಜ್ಯಗಳ ಹಣಕಾಸಿನ ಪಾಲನ್ನು ಕಡಿಮೆ ಮಾಡುವುದರಿಂದ ಈಗಾಗಲೇ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ಇದಲ್ಲದೆ ಅಯೋಗಕ್ಕೆ ನೀಡಲಾಗಿರುವ ಮಾರ್ಗಸೂಚಿಗಳು ಕೇಂದ್ರದ ಬಗ್ಗೆ ಪಕ್ಷಪಾತಿಯಾಗಿರುವ ಹಲವಾರು ಅಂಶಗಳನ್ನು ಹೊಂದಿದೆ. ಈ ಬಗ್ಗೆ ೧೫ನೇ ಹಣಕಾಸು ಅಯೋಗವು ಸಮತೋಲನದ ನಿಲುವನ್ನು ತೋರದಿದ್ದರೆ ಈಗಾಗಲೇ ಶ್ರೇಣೀಕೃತವಾಗಿರುವ ಕೇಂದ್ರ-ರಾಜ್ಯಗಳ ವಿತ್ತೀಯ ಸಂಬಂಧಗಳು ನಿರ್ದೇಶನ ಮತ್ತು ನಿಯಂತ್ರಣಗಳ ಆಧಾರದಲ್ಲಿರುವ ಅಪ್ರಜಾಸತ್ತಾತ್ಮಕ ಸಂಬಂಧವಾಗಿ ಪರಿವರ್ತನೆಯಾಗಲಿದೆ. ಇದು ಯೋಜನಾ ಅಯೋಗವು ರದ್ದಾದ ನಂತರದಲ್ಲಿ ರಚನೆಗೊಂಡ ಮೊದಲನೇ ಹಣಕಾಸು ಅಯೋಗವಾಗಿದೆ. ಹೀಗಾಗಿ ಅದು ತಾನು ಶಿಫಾರಸ್ಸು ಮಾಡುವ ಮಾರ್ಗದಿಂದ ಮಾತ್ರವಲ್ಲದೆ ಇತರ ಮಾರ್ಗಗಳಿಂದಲೂ ಒದಗುವ ಸಂಪನ್ಮೂಲಗಳನ್ನು ಒಳಗೊಂಡಂತೆ ಒಟ್ಟಾರೆ ಕೇಂದ್ರ ಮತ್ತು ರಾಜ್ಯಗಳ ಸಂಪನ್ಮೂಲಗಳ ಬಗ್ಗೆ ಸಮಗ್ರವಾದ ಮತ್ತು ಸಂತುಲಿತವಾದ ದೃಷ್ಟಿಕೋನವನ್ನು ಹೊಂದಿರಬೇಕಾದದ್ದು ಅತ್ಯಗತ್ಯವಾಗಿದೆ. ೧೪ನೇ ಹಣಕಾಸು ಅಯೋಗವು ಆದಾಯ ಮತ್ತು ವೆಚ್ಚಗಳ ಬಗ್ಗೆ ಸಮಗ್ರವಾದ ದೃಷ್ಟಿಕೋನವನ್ನು ಇಟ್ಟುಕೊಂಡಿತ್ತು. ಮತ್ತು ರಾಜ್ಯಗಳ ಯೋಜನಾ ವೆಚ್ಚ ಮತ್ತು ಯೋಜನೇತರ ವೆಚ್ಚಗಳನ್ನು ಭರಿಸಲು ಕೇಂದ್ರ ಸಂಪನ್ಮೂಲಗಳಿಂದ ಶೇ.೪೨ರಷ್ಟುಸಂಪನ್ಮೂಲವನ್ನು ರಾಜ್ಯಗಳಿಗೆ ವರ್ಗಾಯಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಅದೇ ರೀತಿ ಕೇಂದ್ರೀಯ ಪಟ್ಟಿಯಲ್ಲಿ ಇರುವ ಜವಾಬ್ದಾರಿಗಳಿಗಾಗಿ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳಿಗಾಗಿ ಮಾಡುವ ವೆಚ್ಚಗಳಿಗಾಗಿ ೨೦೧೫-೧೬ ಮತ್ತು ೨೦೧೯-೨೦ರ ಅವಧಿಯಲ್ಲಿ ಕೇಂದ್ರಕ್ಕೆ ಅಗತ್ಯವಾಗುವಷ್ಟು ಸಂಪನ್ಮೂಲವನ್ನು ೧೪ನೇ ಹಣಕಾಸು ಅಯೋಗವು ಸಮರ್ಪಕವಾಗಿ ಅಂದಾಜಿಸಿ ಒದಗಿಸಿತ್ತು. ಆದರೆ, ಈಗ ರಾಜ್ಯಗಳಿಗೆ ಅಧಿಕ ಸಂಪನ್ಮೂಲ ವರ್ಗಾವಣೆ ಮಾಡಿರುವುದರಿಂದ ಕೇಂದ್ರದ ವಿತ್ತೀಯ ಪರಿಸ್ಥಿತಿಯ ಮೇಲೆ ಮತ್ತು ’ನವ ಭಾರತ-೨೦೨೨’ ಎಂಬ ಯೋಜನೆಯನ್ನೂ ಒಳಗೊಂಡಂತೆ ಅತ್ಯಗತ್ಯವಾಗಿ ಕೈಗೊಳ್ಳಲೇ ಬೇಕಿದ್ದ ಇತರ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಆಗಿರುವ ಪರಿಣಾಮಗಳನ್ನು ಅಂದಾಜು ಮಾಡಬೇಕೆಂಬ ಮಾರ್ಗಸೂಚಿಯನ್ನು ೧೫ನೇ ಹಣಕಾಸು ಅಯೋಗಕ್ಕೆ ನೀಡಲಾಗಿದೆ.
ಈ ’ನವ ಭಾರತ-೨೦೨೨’ ಎಂದರೇನು? ಒಂದು ಸರ್ಕಾರದ ಅವಧಿ ೨೦೧೯ಕ್ಕೆ ಮುಕ್ತಾಯವಾಗುತ್ತಿರುವಾಗ, ಕೇಂದ್ರೀಯ ನಿಧಿಯನ್ನು ೨೦೨೨ರ ತನಕ ಉಳಿಸಿಕೊಂಡು ತನ್ನ ದೃಷ್ಟಿಕೋನವನ್ನೇ ಮುಂದೆ ಬರುವವರು ಅನುಸರಿಸಬೇಕೆಂದು ಕಡ್ಡಾಯ ಮಾಡಬಹುದೇ?
ಈ ನವ ಭಾರತ ಯೋಜನೆಯ ದೃಷ್ಟಿಯು ಸಾಮಾಜಿಕ-ಆರ್ಥಿಕ ಕ್ಷೇತ್ರದ ಇತರ ಯೋಜನೆಗಳ ಮೇಲೂ ತನ್ನ ಪ್ರಭಾವವನ್ನು ಬೀರಬಹುದು. ಮೇಲಾಗಿ ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಒಟ್ಟಾರೆ ವೆಚ್ಚಗಳಲ್ಲಿ ಶೇ.೫೮ರಷ್ಟನ್ನು ರಾಜ್ಯಗಳೇ ವೆಚ್ಚ ಮಾಡಬೇಕಿರುವಾಗ ಇಂಥ ಯಾವುದೇ ’ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯು ರಾಜ್ಯಗಳಿಗೆ ವರ್ಗಾಯಿಸಬೇಕಾದ ಸಂಪನ್ಮೂಲಗಳನ್ನು ತಡೆಗಟ್ಟಬಹುದೇ?
ಹೀಗಾಗಿ ೧೫ನೇ ಹಣಕಾಸು ಅಯೋಗಕ್ಕೆ ನೀಡಿರುವ ಮಾರ್ಗಸೂಚಿಯ ಹಿಂದಿನ ಉದ್ದೇಶಗಳು ಸ್ಪಷ್ಟವಾಗಿವೆ. ರಾಜ್ಯಗಳಿಗೆ ನೀಡಲಾಗುತ್ತಿದ್ದ ವಿತ್ತೀಯ ಸ್ವಾಯತ್ತತೆಯನ್ನು ಕಡಿತಗೊಳಿಸಿ ರಾಜ್ಯಗಳ ಸಂಪನ್ಮೂಲಗಳ ಮೇಲೆ ಮತ್ತು ಕಾರ್ಯಭಾರಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಕೇಂದ್ರವು ಉತ್ಸುಕವಾಗಿದೆ.
ಹಣಕಾಸು ಹಂಚಿಕೆಯ ನಂತರವೂ ರಾಜ್ಯಗಳು ಎದುರಿಸಬಹುದಾದ ವಿತ್ತೀಯ ಕೊರತೆಯನ್ನು ಕೇಂದ್ರವು ಅನುದಾನವನ್ನು ಒದಗಿಸುವ ಮೂಲಕ ಪೂರೈಸುವ ಸೌಲಭ್ಯವನ್ನು ೨೭೫ನೇ ಕಲಂ ಒದಗಿಸಿಕೊಡುತ್ತದೆ. ಈಗ ನೀಡಲಾಗಿರುವ ಮಾರ್ಗಸೂಚಿಯ ಪ್ರಕಾರ ಅಸಲು ರಾಜ್ಯಗಳ ಹಂಚಿಕೆಯೋತ್ತರ ಆದಾಯ ಕೊರತೆಯನ್ನು ಪೂರೈಸುವ ಅನುದಾನವನ್ನು ಕೇಂದ್ರವು ನೀಡಬೇಕೋ, ಬೇಡವೋ ಎಂಬುದನ್ನೂ ಸಹ ಹಣಕಾಸು ಅಯೋಗವು ಪರಿಶೀಲಿಸಬಹುದಾಗಿದೆ. ಒಂದು ವೇಳೆ ಹಣಕಾಸು ಅಯೋಗವು ಈ ಹಂಚಿಕೆಯೋತ್ತರ ಆದಾಯ ಕೊರತೆಯನ್ನು ನೀಗಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ತೆಗೆದೇ ಬಿಟ್ಟರೆ ಆದಾಯ ಕೊರೆತೆಯನ್ನು ಪೂರೈಸಿಕೊಳ್ಳಲು ಇತರ ಯಾವ ಪರ್ಯಾಯ ಮಾರ್ಗಗಳನು ಅಳವಡಿಸಿಕೊಳ್ಳಬಹುದು? ಹೀಗಾಗಿ ಸಂಪನ್ಮೂಲ ಹಂಚಿಕೆಯ ನಂತರ ಯಾವ ರಾಜ್ಯಗಳೂ ಆದಾಯ ಕೊರತೆಯನ್ನು ತೋರಿಸಬಾರದೆಂಬುದೇ ಈ ಮಾರ್ಗಸೂಚಿಯ ಪರಿಣಾಮವಾಗಿದೆ. ಇದರಿಂದಾಗಿ ರಾಜ್ಯಗಳ ಆದಾಯ ಮತ್ತು ವೆಚ್ಚಗಳ ಬಗ್ಗೆ ಅಯೋಗವು ಮಾಡಿರುವ ಅವಾಸ್ತವಿಕ ಅಂದಾಜುಗಳನ್ನು ಸಮರ್ಥಿಸಿಕೊಳ್ಳಲೇ ಅನಿವಾರ್ಯತೆಯನ್ನು ಸೃಷ್ಟಿಯಾಗುತ್ತದೆ.
ಮಾರ್ಗಸೂಚಿಗಳು ಹಲವಾರು ಪೂರ್ವ ಶರತ್ತುಗಳನ್ನು ಒಡ್ಡುತ್ತದೆ. ಅದರಲ್ಲಿನ ೭ನೇ ಮಾರ್ಗಸೂಚಿಯು ಹಲವಾರು ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರಗಳ ಸಾಧನೆಯನ್ನು ಅಳೆಯಬಹುದಾದ ಮಾನದಂಡಗಳನ್ನು ಸೂಚಿಸಿ ಅದರ ಆಧಾರದಲ್ಲಿ ಉತ್ತೇಜಕ ಅನುದಾನಗಳನ್ನು ನಿಗದಿಪಡಿಸುವ ಪ್ರಸ್ತಾಪವನ್ನು ಪರಿಶೀಲಿಸಬಹುದೆಂದು ಹೇಳುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಏಳುತ್ತವೆ. ರಾಜ್ಯಗಳ ಸಾಧನೆಯನ್ನು ಅಳೆಯಲು ಮತ್ತು ಅದನ್ನು ಆಧರಿಸಿ ಉತ್ತೇಜನ ಅನುದಾನಗಳನ್ನು ನಿಗದಿಪಡಿಸಲು ಹಣಕಾಸು ಅಯೋಗವು ಸೂಕ್ತ ವೇದಿಕೆಯೇ? ಹಣಕಾಸು ಅಯೋಗದ ಮುಖ್ಯ ಕರ್ತವ್ಯವೇ ವಿತ್ತೀಯ ಅಸಮರ್ಥತೆಯನ್ನು ಸರಿಪಡಿಸುವುದಾಗಿದ್ದಲ್ಲಿ ಈ ಉತ್ತೇಜಕ ಅನುದಾನದ ಪ್ರಸ್ತಾಪವನ್ನು ಎಲ್ಲಿ ಸೇರಿಸುತ್ತಾರೆ? ತೆರಿಗೆ ಹಂಚಿಕೆಯನ್ನು ಉತ್ತೇಜಕ ಮಾನದಂಡಗಳನ್ನು ಅನುಸರಿಸಿ ನಿಗದಿಪಡಿಸುವುದಾಗಿದ್ದಲ್ಲಿ ವಿತ್ತೀಯ ಸಮಾನತೆಯ ಆಶಯಗಳಲ್ಲಿ ರಾಜಿ ಮಾಡಿಕೊಂಡಂತಾಗುವುದಿಲ್ಲವೇ? ಇದನ್ನು ಒಂದು ಅನುದಾನ ಪದ್ಧತಿಯ ಮೂಲಕ ಜಾರಿಗೆ ತರುವುದದರೆ ಅಷ್ಟರಮಟ್ಟಿಗೆ ವಿತ್ತೀಯ ವರ್ಗಾವಣೆಗೆ ಸಿಗಬೇಕಾದ ಸಂಪನ್ಮೂಲವನ್ನು ಶರತ್ತಿನ ಅನುದಾನಗಳಿಗಾಗಿ ಕಡಿತಗೊಳಿಸಿದಂತಾಗುವುದಿಲ್ಲವೇ? ಕೇಂದ್ರ ಸರ್ಕಾರವು ಉತ್ತೇಜಕಗಳನ್ನು ಮತ್ತು ಅನುದಾನಗಳನ್ನು ಹಣಕಾಸು ಅಯೋಗೇತರ ಮಾರ್ಗಗಳಿಂದ ಕೊಡುವ ಸಾಧ್ಯತೆ ಇದ್ದೇ ಇರುವಾಗ ಈ ಏಳನೇ ಮಾರ್ಗಸೂಚಿಯ ಮೂಲಕ ಹಣಕಾಸು ಅಯೋಗದ ಕಾರ್ಯನಿರ್ವಹಣೆಯನ್ನು ಸೀಮಿತಗೊಳಿಸುತ್ತಿರುವ ಉದ್ದೇಶವೇನು?
ಅಂತಿಮವಾಗಿ ಋಣಭಾರ, ಕೊರತೆ ಮತ್ತು ವಿತ್ತೀಯ ಹೊಣೆಗಾರಿಕೆಗಳ ಪ್ರಶ್ನೆಗಳು ಉದ್ಭವವಾಗುತ್ತವೆ. ರಾಜ್ಯಗಳು ಒಟ್ಟಾರೆಯಾಗಿ ವಿತ್ತೀಯ ಶಿಸ್ತನ್ನು ಪಾಲಿಸುತ್ತಿವೆ. ೨೦೧೭-೧೮ರ ಸಾಲಿನಲ್ಲಿ ಎಲ್ಲಾ ರಾಜ್ಯಗಳ ಒಟ್ಟು ವಿತ್ತೀಯ ಕೊರತೆ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಶೇ.೨.೭ರಷ್ಟಿತ್ತು. ಹೀಗಾಗಿ ೧೫ನೇ ಹಣಕಾಸು ಅಯೋಗವು ವಿಧಿಸುವ ರಾಜ್ಯ ಸರ್ಕಾರಗಳ ಋಣಭಾರದ ಯಾವುದೇ ಶರತ್ತುಬದ್ಧ ಇಳಿಕೆಗಳು ರಾಜ್ಯಗಳ ವೆಚ್ಚದ ಮೇಲೆ ಅದರಲ್ಲೂ ಮುಖ್ಯವಾಗಿ ಅವುಗಳ ಅಭಿವೃದ್ಧಿ ವೆಚ್ಚಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. ವಾಸ್ತವವಾಗಿ ವಿತ್ತೀಯ ನಡೆವಳಿಕೆಯನ್ನು ಸುಧಾರಿಸಿಕೊಳ್ಳುವ ಬಗ್ಗೆ ಕೇಂದ್ರಕ್ಕೆ ಹೇಳಬೇಕೆ ಹೊರತು ರಾಜ್ಯಗಳಿಗಲ್ಲ. ೨೦೦೮ರ ನಂತರದಲ್ಲಿ ಕೇಂದ್ರದಲ್ಲಿದ್ದ ಯಾವುದೇ ಸರ್ಕಾರಗಳು ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯಿದೆಗೆ ಬದ್ಧವಾಗಿಲ್ಲ ಎಂಬುದನ್ನು ಇಲ್ಲಿ ಮರೆಯಬಾರದು.