ISSN (Print) - 0012-9976 | ISSN (Online) - 2349-8846

ಲಾಲೂ ಪ್ರಸಾದರ ಮೇಲಿನ ದಾಳಿ: ಈಗೇಕೆ?

ಲಾಲೂ ಪ್ರಸಾದ ಯಾದವರ ಮೇಲೆ ನಡೆದ ದಾಳಿಯ ಸಂದರ್ಭವು ಅದರ ಹಿಂದಿನ ಉದ್ದೇಶ ರಾಜಕೀಯ ಹಗೆತನವೇ ಹೊರತು ಭ್ರಷ್ಟಾಚಾರ ನಿಗ್ರಹವಲ್ಲ ಎಂಬುದನ್ನು ಸೂಚಿಸುತ್ತದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರತಿಯೊಂದು ಪಕ್ಷವೂ ಕೇಂದ್ರೀಯ ತನಿಖಾ ದಳ (ಸಿಬಿಐ) ಅನ್ನು ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಯುವುದಕ್ಕೇ ಬಳಸಿಕೊಂಡಿವೆ. ಈಗ ಅಧಿಕರದಲ್ಲಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಸರ್ಕಾರದ ದಾಳಿಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಯ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತವರ ಕುಟುಂಬದವರು ಗುರಿಯಾಗಿದ್ದಾರೆ. ಯಾದವ್ ಮತ್ತವರ ಕುಟುಂಬದವರು ಹಲವಾರು ಮೋಸಪೂರಿತ ವ್ಯವಹಾರಗಳನ್ನು ನಡೆಸಿ ಸರ್ಕಾರಕ್ಕೆ ೧೦೦೦ ಕೋಟಿಯಷ್ಟು ತೆರಿಗೆಯನ್ನು ವಂಚಿಸಿದ್ದಾರೆಂಬ ಆರೋಪದ ಮೇಲೆ ಕೇಂದ್ರದ ಆದಾಯ ತೆರಿಗೆ ಇಲಾಖೆಯು ೨೦೧೭ರ ಜೂನ್ ೨೦ರಂದು ಬೇನಾಮಿ ವ್ಯವಹಾರ ನಿಷೇಧ ಕಾಯಿದೆ (೧೯೮೮)ರಡಿ ಪ್ರಕರಣವನ್ನು ದಾಖಲಿಸಿತು. ಅದಾದ ಸ್ವಲ್ಪ ಸಮಯದಲ್ಲೇ, ೨೦೧೭ರ ಜುಲೈ ೭ ರಂದು ಸಿಬಿಐ ಯಾದವ್ ಕುಟುಂಬದ ಹಲವಾರು ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿತು. ಹಾಗೂ ಲಾಲೂ ಪ್ರಸಾದ್ ಯಾದವ್ ಅವರು ೨೦೦೪-೦೯ರ ನಡುವೆ ರೈಲ್ವೆ ಮಂತ್ರಿಯಾಗಿದ್ದ ಸಮಯದಲ್ಲಿ ರೈಲ್ವೆ ಇಲಾಖೆಯ ಪಾರಂಪರಿಕ ಹೋಟೆಲ್‌ಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಸುಳ್ಳು ಟೆಂಡರ್‌ಗಳನ್ನು ನೀಡಿದ್ದರೆಂಬ ಅನುಮಾನದ ಮೇಲೆ ದೂರನ್ನು ದಾಖಲಿಸಿಕೊಂಡಿತು. ಈಗಾಗಲೇ ಮುಖ್ಯವಾಹಿನಿ ಮಾಧ್ಯಮಗಳು ಈ ಪ್ರಕರಣದಲ್ಲಿ ಯಾದವರ ವಿರುದ್ಧ ತಮ್ಮ ತೀರ್ಪನ್ನು ಪ್ರಕಟಿಸಿಬಿಟ್ಟಿವೆ. ಆದರೆ ಯಾದವ್ ಅವರು ಈ ತನಿಖೆಗಳು ಬಿಜೆಪಿ ಪಕ್ಷದಿಂದ ಪ್ರೇರಿತಗೊಂಡಿರುವ ರಾಜಕೀಯ ದುರುದ್ದೇಶವುಳ್ಳ ತನಿಖೆಯೆಂದು ಪ್ರತ್ಯಾರೋಪ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪದ ಸತ್ಯಾಸತ್ಯತೆ ಏನೇ ಇದ್ದರೂ ಯಾದವ್ ಅವರು ಮಾಡಿರುವ ಪ್ರತ್ಯಾರೋಪದಲ್ಲಂತೂ ಹುರುಳಿದೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಯಾವುದೇ ಬಗೆಯ ವಿರೋಧದ ಬಗ್ಗೆ ಈ ಹಿಂದೆ ಯಾವುದೇ ಸರ್ಕಾರಗಳು ತೋರದಷ್ಟು ಅಸಹನೆಯನ್ನೂ ತೋರುತ್ತಾ ಬಂದಿದೆ. ಮೋದಿ ಮತ್ತು ಅಮಿತ್ ಶಾ ಅವರು ಜೊತೆಗೂಡಿ ಪಕ್ಷದೊಳಗೇ ಅಥವಾ ಪಕ್ಷದ ಹೊರಗೆ ತಮ್ಮ ವಿರುದ್ಧ ಕೇಳಿಬರುವ ಯಾವುದೇ ಧ್ವನಿಗಳನ್ನು ಯಶಸ್ವಿಯಾಗಿ ಅಣಗಿಸುತ್ತಾ ಬಂದಿದ್ದಾರೆ. ಇದು ೨೦೦೦ದಲ್ಲಿ ಬಿಜೆಪಿಯು ಗುಜರಾತಿನಲ್ಲಿ ಅಧಿಕಾರಕ್ಕೆ ಬಂದಾಗಲೇ ಸ್ಪಷ್ಟವಾಗಿ ಕಂಡುಬಂದಿತ್ತು.  ಕಾಂಗ್ರೆಸ್ ಪಕ್ಷದ ನಂತರ ಈಗ ಆಮ್ ಆದ್ಮಿ ಪಾರ್ಟಿ (ಆಪ್), ಮತ್ತು ಯಾದವ್ ಹಾಗೂ ಆರ್‌ಜೆಡಿUಳ ಮೇಲಿನ ರಾಜಕೀಯ ದಾಳಿ ನಡೆಸುತ್ತಿದೆ. ಯಾದವ ಆವರ ಮೇಲೆ ದಾಳಿ ನಡೆದ ಸಂದರ್ಭ ಮತ್ತು ದಾಳಿಯ ರೀತಿಗಳೇ ಈ ದಾಳಿಯು ಬಿಜೆಪಿಯ ಆದೇಶದಂತೆ ನಡೆದಿರುವ ರಾಜಕೀಯ ದಾಳಿಯೆಂಬ ಆರೋಪದಲ್ಲಿ ಹುರುಳಿದೆಯೆಂದು ತೋರಿಸುತ್ತದೆ.

ವಾಸ್ತವವಾಗಿ, ಎನ್‌ಡಿಎ ಒಕ್ಕೂಟದ ಹೊರಗಿರುವ ಪಕ್ಷಗಳಲ್ಲಿ ಐಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ವಿರೋಧಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ವಿರೋಧಪಕ್ಷಗಳ ಜಂಟಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಮಾತುಕತೆಯನ್ನು ೨೦೧೭ರ ಮೇ ತಿಂಗಳಿಂದಲೇ ತಮ್ಮ ನಡುವೆ ಪ್ರಾರಂಭಿಸಿದ್ದರು. ಲೋಕಸಭೆಯಲ್ಲಿ ತಮಗಿರುವ ಬಹುಮತವನ್ನು ಬಳಸಿಕೊಂಡು ಬಿಜೆಪಿಯು ಹಲವಾರು ಮಸೂದೆಗಳನ್ನು ಮತ್ತು ತಿದ್ದುಪಡಿಗಳನ್ನು ಮುಂದೆ ತರುತ್ತಿರುವಾಗ ಮತ್ತು ಅಂಥಾ ಮಸೂದೆಗಳಿಗೆ ಸಮ್ಮತಿ ನೀಡದೆ ಮತ್ತೊಮ್ಮೆ ಪರಿಶೀಲಿಸಲು ಸಂಸತ್ತಿಗೆ ವಾಪಸ್ ಕಳಿಸುವ ಪರಮಾಧಿಕಾರ ರಾಷ್ಟ್ರಪತಿಗೆ ಇರುವಾಗ ವಿರೋಧ ಪಕ್ಷಗಳ ಈ ಪ್ರಯತ್ನ ಸಹಜವಾಗಿಯೇ ಇತ್ತು. ಮೂಡಿಬರುತ್ತಿದ್ದ ಈ ವಿರೋಧ ಪಕ್ಷಗಳ ಐಕ್ಯತೆಗೆ ಲಾಲೂ ಪ್ರಸಾದ್ ಯಾದವರು ಪ್ರಮುಖ ಧ್ವನಿ ಮತ್ತು ಮುಖವಾಗಿದ್ದರಿಂದಲೇ, ಆಳುವ ಪಕ್ಷದ  ಕೆಂಗಣ್ಣಿಗೆ ಗುರಿಯಾದದ್ದು ನಿರೀಕ್ಷಿತವಾಗಿತ್ತು.

ಬಿಜೆಪಿ ಮತ್ತು ಯಾದವರ ನಡುವಿನ ಹಗೆತನಕ್ಕೆ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯೊಂದಿಗೇ ಯಾವುದೇ ಬಗೆಯ ಸಖ್ಯ ಹೊಂದದೆ ಬಿಜೆಪಿಯ ಹಾಗೂ ಅದರ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ  ಕೋಮುವಾದದ ವಿರುದ್ಧ ಸತತವಾಗಿ ಹೋರಾಡುತ್ತಲೇ ಬಂದ ಏಕೈಕ ಪ್ರಾದೇಶಿಕ ಪಕ್ಷವೆಂಬ ಹೆಗ್ಗಳಿಕೆಯನ್ನು ಲಾಲೂ ಯಾದವರ ಪಕ್ಷವು ಹೊಂದಿದೆ. ೧೯೯೦ರಲ್ಲಿ ಕೋಮು ಘರ್ಷಣೆಯನ್ನು ಹುಟ್ಟುಹಾಕಿದ ಆರೋಪದ ಮೇಲೆ ಲಾಲ್ ಕೃಷ್ಣ ಅದ್ವಾನಿಯವರನ್ನು ಬಂಧಿಸಿ ಬಿಹಾರದ ಮೂಲಕ ಅಯೋಧ್ಯೆಗೆ  ಸಾಗುತ್ತಿದ್ದ ರಾಮ ರಥ ಯಾತ್ರೆಯನ್ನು ತಡೆಗಟ್ಟಿದ ಪ್ರಖ್ಯಾತಿಯೂ ಸಹ ಲಾಲೂ ಪ್ರಸಾದ್ ಯಾದವ್ ಅವರಿಗಿದೆ. ಈ ಪತ್ರಿಕೆಯ ಲೇಖನಗಳಲ್ಲಿ ((“Where is the Caste in Development? Bihar Assembly Elections 2015”, ೨೦೧೫ರ ನವಂಬರ್ ೭ ರ ಸಂಚಿಕೆ) ೨೦೧೫ರಲ್ಲಿ ಯಾದವ್ ಅವರು ಬಿಜೆಪಿಯ ವಿರುದ್ಧ ಗಳಿಸಿದ ಚುನಾವಣಾ ವಿಜಯಕ್ಕೆ ಈ ಹಿಂದುಳಿದ ವರ್ಗದ ನಾಯಕ ತೆಗೆದುಕೊಂಡ ಎರಡು ಕೆಚ್ಚೆದೆಯ ತೀರ್ಮಾನಗಳು ಕಾರಣವೆಂದು ಪ್ರತಿಪಾದಿಸಲಾಗಿದೆ; ಒಂದು ಬಿಜೆಪಿಯ ಎರಡು ಅವಿವೇಕಗಳಾದ ಕೋಮುವಾದ ಮತ್ತು ಬ್ರಾಹ್ಮಣವಾದಗಳಗಿರುವ ಸಂಬಂಧಗಳನ್ನು ಎಂಎಸ್ ಗೋಳ್ವಾಲ್ಕರ್ ಮತ್ತು ನರೇಂದ್ರ ಮೋದಿಯವರ ಮೀಸಲಾತಿ ವಿರೋಧಿ ನಿಲುವುಗಳನ್ನು ಬಯಲು ಪಡಿಸುವ ಮೂಲಕ ಎತ್ತಿತೋರಿಸಿದ್ದು ಮತ್ತು ಎರಡನೆಯದು ಬಿಜೆಪಿಯ ಗೋ ಮಾಂಸ ರಾಜಕಾರಣದ ವಿರುದ್ಧ ತನ್ನ ನಿಲುವನ್ನು (ಹಿಂದೂಗಳಲ್ಲೂ ಗೋ ಮಾಂಸ ಭಕ್ಷಣೆಯ ಪದ್ಧತಿ ಇತ್ತೆಂದು ಸಾಬೀತುಪಡಿಸುವ ಸಾಹಿತ್ಯಗಳನ್ನು ಉಲ್ಲೇಖಿಸುತ್ತಾ) ಸ್ಪಷ್ಟ ಪಡಿಸಿದ್ದು. ಹೀಗಾಗಿ ಯಾದವ್ ಅವರು ಬಿಜೆಪಿಗೆ ಒಂದು ಸೈದ್ಧಾಂತಿಕ ಸವಾಲನ್ನೇ ಒಡ್ಡಿದ್ದಾರೆ. ಬಿಹಾರದಲ್ಲಿ ಪಡೆದುಕೊಂಡ ಚುನಾವನಾ ಗೆಲುವಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಾಜಕಾರಣದಲ್ಲೂ ತನಗೊಂದು ದೊಡ್ಡ ಪಾತ್ರವನ್ನು ನಿರೀಕ್ಷಿಸುತ್ತಿರುವ ಯಾದವ್ ಅವರು ಕಾಂಗ್ರೆಸ್ ಮತ್ತಿತರ ಜಾತ್ಯತೀತ ಪಕ್ಷಗಳ ಬೆಂಬಲದೊಂದಿಗೆ ತನ್ನ ಪಾತ್ರವನ್ನು ಸಂದರ್ಭ ಸಿಕ್ಕಾಗಲೆಲ್ಲಾ ಪ್ರತಿಪಾದಿಸುತ್ತಿದ್ದಾರೆ.

ಮತ್ತೊಂದೆಡೆ ೨೦೧೪ರಿಂದಲೂ ಸತತ ವಿಜಯದ ಹಾದಿಯಲ್ಲೇ ನಡೆಯುತ್ತಿದ್ದ ಬಿಜೆಪಿಯು ಬಿಹಾರದಲ್ಲಿ ಎದುರಿಸಬೇಕಾಗಿ ಬಂದ ಸೋಲಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ೨೦೧೯ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯು ಏಕಾಂಗಿಯಾಗಿ ಅಥವಾ ತನ್ನ ಮೈತ್ರಿಕೂಟದೊಂದಿಗೆ ಸರಳ ಬಹುಮತ ಪಡೆಯಬೇಕೆಂದರೂ ಅದಕ್ಕೆ ಬಿಹಾರ ತುಂಬಾ ಪ್ರಮುಖವಾದ ಸವಾಲಾಗಿದೆ. ಆರ್‌ಜೆಡಿ ಮತ್ತು ನಿತೀಶ್ ಕುಮಾರರ ಜೆಡಿ(ಯುನೈಟೆಡ್) ನಡುವೆ ಏರ್ಪಟ್ಟಿರುವ ಮಹಾಮೈತ್ರಿಯನ್ನು ಒಡೆಯದೆ ಇದನ್ನು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ಯಾದವ್ ಮತ್ತವರ ಕುಟುಂಬದ ಮೇಲೆ ದಾಖಲಿಸಲಾಗುತ್ತಿರುವ ಪ್ರಕರಣಗಳು, ಯಾದವ್ ಅವರು ಅಧಿಕಾರಕ್ಕೆ ಬಂದಿದ್ದರಿಂದ ಬಿಹಾರ ಮತ್ತೆ ಗೂಂಡಾ ರಾಜ್ಯಕ್ಕೆ ಮರಳಿದೆ ಎಂಬ ಬಿಜೆಪಿಯ ಪ್ರಚಾರಕ್ಕೆ ಪೂರಕವಾಗಿದೆ. ಇದು ಸ್ವಚ್ಚ ಸರ್ಕಾರವನ್ನುಕೊಡುತ್ತೇವೆಂಬ ಭರವಸೆ ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತದೆ. ೨೦೧೪ರ ಚುನಾವಣೆಯಲ್ಲಿ ನರೆಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರಿಂದ ನಿತೀಶ್ ಕುಮಾರ್ ಅವರು ಎನ್‌ಡಿಎ ಯೊಂದಿಗೆ ತಮ್ಮ ೧೭ ವರ್ಷಗಳ ಮೈತ್ರಿಯನ್ನು ಮುರಿದುಕೊಂಡರು. ನಿತೀಶ್ ಮುಮಾರ್ ವರನ್ನು ಮತ್ತೆ ತಮ್ಮೆಡೆಗೆ ಸೆಳೆದುಕೊಂಡು ಮಹಾಮೈತ್ರಿಯನ್ನು ಮುರಿಯಬೇಕೆಂಬ ಬಿಜೆಪಿಯ ತಂತ್ರವು ರಾಷ್ಟ್ರಪತಿ ಚುನಾವಣೆಯಲ್ಲಿ ಒಂದಷ್ಟು ಕಾವನ್ನು ಪಡೆದುಕೊಂಡರೂ ಅದೇನೂ ಬದಲಾಯಿಸಲಸಾಧ್ಯವಾದ ಬೆಳವಣಿಗೆಯೇನಲ್ಲ.

ಲಾಲೂ ಪ್ರಸಾದ್ ಯಾದವ್ ಅವರು ಒಬ್ಬ ನುರಿತ ಹಿರಿಯ ರಾಜಕಾರಣಿಯಾಗಿದ್ದು ಮೇವು ಹಗರಣದ ಕುಖ್ಯಾತಿಯ ನಂತರವೂ ಬಿಹಾರದ ರಾಜಕಾರಣವನ್ನು ನಿಯಂತ್ರಿಸುವ ಸ್ಥಾನಕ್ಕೆ ಮರಳಿದ್ದಾರೆ. ಅವರ ಗ್ರಾಮೀಣ ಸೊಗಡು, ನೇರ ನಿಷ್ಟುರ ನಡೆನುಡಿ, ಮತ್ತು ಜಿಗುಟು ಸ್ವಭಾವಗಳು ಗ್ರಾಮೀಣ ಮತದಾರರಲ್ಲಿ ಅವರ ಬಗ್ಗೆ ಒಲವನ್ನು ಮೂಡಿಸಿ ಹಲವಾರು ರಾಜಕೀಯ ಬಿರುಗಾಳಿಯನ್ನೂ ಎದುರಿಸಿ ನಿಲ್ಲುವಂತೆ ಮಾಡಿದೆ. ಹೀಗಾಗಿ ಲಾಲೂ ಪ್ರಸಾದರ ಮೇಲೆ ಬಿಜೆಪಿ ನಡೆಸುತ್ತಿರುವ ಪ್ರತಿಯೊಂದು ದಾಳಿಯೂ ಅವರಿಗೆ ವಿರುದ್ಧವಾಗಿ ತಿರುಗಿಕೊಳ್ಳುವ ಸಂಭವವಿದೆ. ಲಾಲೂ ಯಾದವ್ ಅವರು  ಸಿಬಿಐ ದಾಳಿಯಾದ ನಂತರದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ತನ್ನ ರಾಜಕೀಯ ಅಸ್ಥಿತ್ವಕ್ಕೆ ಸಂಚಕಾರ ಬಂದರೂ ಎದೆಗುಂದದೆ ಬಿಜೆಪಿ ಮತ್ತು ಮೋದಿಯ ಕೋಮುವಾದದ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸುತ್ತೇನೆಂದು ಗುಡುಗಿದ್ದಾರೆ. ಈ ಪ್ರಕರಣದಲ್ಲಿ ಲಾಲೂ ಯಾದವರಿಗೆ ಜೈಲು ಶಿಕ್ಷೆಯಾದರೆ ಅವರ ರಾಜಕೀಯ ಜೀವನ ಮುಕ್ತಾಯವಾಗುವುದರಿಂದ ಈ ಸಂಘರ್ಷವು ಮಹತ್ತರ ಪರಿಣಾಮಗಳನ್ನು ಹೊಂದಿರುವ ಕದನವಾಗಿ ಮಾರ್ಪಟ್ಟಿದೆ. ಆದರೆ ಲಾಲೂ ಯಾದವ್ ಅವರು  ತನ್ನ ವಿರೋಧಿಗಳ ತಂತ್ರವನ್ನು ಮೀರಿ ಮುನ್ನಡೆ ಸಾಧಿಸಬೇಕೆಂದರೆ ೨೦೧೫ರ ವಿಧಾನ ಸಭಾ ವಿಜಯದ ನಂತರ ಅವರು ಕೊಟ್ಟ ಭರವಸೆಗೆ ಮರಳಬೇಕಿದೆ. ಅದೆಂದರೆ ವಿರೋಧ ಪಕ್ಷಗಳಲ್ಲಿ ಐಕ್ಯತೆಯನ್ನು ಮೂಡಿಸುತ್ತಾ ಕೋಮುವಾದ ವಿರೋಧಿ ಸಂಘರ್ಷವನ್ನೂ ಬಿಹಾರಕ್ಕೆ ಮಾತ್ರ ಸೀಮಿತಗೊಳಿಸದೆ ಬಿಹಾರದ ಹೊರಗೂ ಆ ಸಂಘರ್ಷವನ್ನು ಬೀದಿಬೀದಿಗಳಲ್ಲಿ ಮುನ್ನಡೆಸುವುದು.  

Updated On : 13th Nov, 2017
Back to Top