ISSN (Print) - 0012-9976 | ISSN (Online) - 2349-8846

ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವದರ ಪ್ರಾಮುಖ್ಯತೆ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆಯೇ?

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ತನ್ನ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಜೆಂಡಾಗಳಿಗೆ ಅಡ್ಡಿಯಾಗುವ ಸಂಸ್ಥೆಗಳನ್ನು ನರೇಂದ್ರ ಮೋದಿ ಸರ್ಕಾರವು ವಶಪಡಿಸಿಕೊಳ್ಳುತ್ತಿರುವ ಅಥವಾ ನಿರ್ವೀರ್ಯಗೊಳಿಸುತ್ತಿರುವ ವೇಗವನ್ನು ಗಮನಿಸುತ್ತಿರುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೂ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್- ಎನ್‌ಜಿಟಿ) ಸಹ ಅದರ ದಾಳಿಗೆ ತುತ್ತಾಗಿರುವುದು ಆಶ್ಚರ್ಯವನ್ನೇನೂ ಉಂಟುಮಾಡುತ್ತಿಲ್ಲ. ೨೦೧೦ರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯನ್ವಯ ಈ ಹಸಿರು ನ್ಯಾಯಮಂಡಳಿಯು ಏರ್ಪಟ್ಟಿದೆ. ಇದು ಪರಿಸರವನ್ನು ರಕ್ಷಣೆಗೆ ಸಂಬಂಧಪಟ್ಟ, ಅರಣ್ಯ ಮತ್ತು ಪ್ರ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಪಟ್ಟ, ಪರಿಸರದ ಬಗೆಗಿನ ಕಾನೂನಾತ್ಮಕ ಹಕ್ಕುಗಳ ಜಾರಿಗೆ ಸಂಬಂಧಪಟ್ಟ ಮತ್ತು  ಪರಿಸರ ಹಾನಿಯಿಂದಾಗಿ ಆಸ್ಥಿಪಾಸ್ತಿಗಳ ನಷ್ಟಕ್ಕೆ ಗುರಿಯಾದವರಿಗೆ ಪುನರ್‌ವಸತಿ ಮತ್ತು ಪರಿಹಾರವನ್ನು ಕೊಡುವುದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಹೊಂದಿದೆ. ಪರಿಸರಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಅಗತ್ಯವಿರುವಷ್ಟು ಪರಿಣಿತಿಯಿಂದ ವಿಲೇವಾರಿ ಮಾಡಲೆಂದೇ ಈ ಮಂಡಳಿಯನ್ನು ಸ್ಥಾಪಿಸಲಾಯಿತು. ಈ ನ್ಯಾಯಮಂಡಳಿಯ ಆದೇಶಗಳನ್ನು ಕೇವಲ ಸುಪ್ರೀಂ ಕೋರ್ಟು ಮಾತ್ರ ಬದಲಾಯಿಸಬಲ್ಲದು. ಆದ್ದರಿಂದಲೇ ತನ್ನ ಅಭಿವೃದ್ಧಿ ಮಾದರಿಯನ್ನು ಜಾರಿಗೆ ತರುವ ತರಾತುರಿಯಲ್ಲಿರುವ ಸರ್ಕಾರವೊಂದಕ್ಕೆ ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಸತ್ವಂತ್ರವಾಗಿ  ತೀರ್ಮಾನ ತೆಗೆದುಕೊಳ್ಳುವ ಹಸಿರು ಪೀಠವೊಂದರ ಅಸ್ಥಿತ್ವವೇ ಕಸಿವಿಸಿ ಉಂಟುಮಾಡುವ ವಿಷಯವಾಗಿಬಿಟ್ಟಿದೆ.

೨೦೧೪ರ ಮೇ ತಿಂಗಳಲ್ಲಿ ಮೋದಿ ಸರ್ಕಾರ ಅಧಿಕಾರ ಸ್ವೀಕರಿಸಿದ ಕೆಲವು ತಿಂಗಳಲ್ಲೇ ಎನ್‌ಜಿಟಿಯ ಅಧಿಕಾರಗಳನ್ನು ಮೊಟಕುಗೊಳಿಸಲಾಗುವುದೆಂಬ ಮಾತುಗಳು ಅಧಿಕಾರದ ವರ್ತುಲದಿಂದ ಕೇಳಿಬರಲು ಪ್ರಾರಂಭಿಸಿತ್ತು. ಎನ್‌ಜಿಟಿ ಕಾಯಿದೆಗೆ ನೇರವಾಗಿ ತಿದ್ದುಪಡಿಗಳನ್ನು ತರುವ ಪ್ರಯತ್ನಗಳೇನೂ ನಡೆಯದಿದ್ದರೂ ೨೦೧೭ರ ಹಣಕಾಸು ಕಾಯಿದೆ ಮೂಲಕ ತಂದ ತಿದ್ದುಪಡಿಗಳಂತೂ ಅದೇ ಉದ್ದೇಶವನ್ನೂ ಸಾಧಿಸಿವೆ. ಈ ಕಾಯಿದೆಯು ನ್ಯಾಯಮಂಡಳಿಯ ಸ್ಥಾಪನೆಗೆ ಬಗ್ಗೆ ಹಲವಾರು ತಿದ್ದುಪಡಿಗಳನ್ನು ತಂದಿದ್ದು ಅದು ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಗೂ ಅನ್ವಯಿಸುತ್ತದೆ. ಈವರೆಗೆ ಇದ್ದ ಕಾಯಿದೆಯ ಪ್ರಕಾರ ಹಸಿರು ಪೀಠದ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟಿನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಅಥವಾ ಯಾವುದಾದರೂ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಷ್ಟೆ ನೇಮಿಸಬಹುದಿತ್ತು. ಅರ್ಥಾತ್ ನ್ಯಾಯಿಕ ವಿಚಾರಗಳಲ್ಲಿ ಅನುಭವ ಇರುವವರು ಮಾತ್ರ ಈ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಹೊಸ ನಿಯಮಾವಳಿಗಳ ಪ್ರಕಾರ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗುವ ಅರ್ಹತೆ ಪಡೆದ ಯಾರು ಬೇಕಾದರೂ ಪೀಠದ ಮುಖ್ಯಸ್ಥರಾಗಬಹುದು. ಅಂದರೆ ಯಾವುದೇ ಹೈಕೋರ್ಟಿನಲ್ಲಿ ೧೦ ವರ್ಷಗಳ ಕಾಲ ವಕೀಲನಾಗಿ ಸೇವೆ ಸಲ್ಲಿಸುವ ಮೂಲಕ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗಲು ತಾಂತ್ರಿಕವಾಗಿ ಅರ್ಹತೆ ಪಡೆದ ಯಾರನ್ನು ಬೇಕಾದರೂ ಹಸಿರು ಪೀಠದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬಹುದು. ಅಲ್ಲದೆ ಈವರೆಗೆ ಹಸಿರು ನ್ಯಾಯಮಂಡಳಿಯ ಇತರ ಸದಸ್ಯರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನೇಮಕವಾದ ಸಮಿತಿಯು ಆಯ್ಕೆ ಮಾಡುತ್ತಿತ್ತು. ಆದರೆ ಇನ್ನು ಮುಂದೆ ಮಂಡಳಿಯ ಸದಸ್ಯರನ್ನು ಸರ್ಕಾರಿ ಅಧಿಕಾರಿಗಳು ಆಯ್ಕೆ ಮಾಡುತ್ತಾರೆ. ಇದರ ದೂರಗಾಮಿ ಪರಿಣಾಮಗಳು ಪೀಠವು ಕೊಡುವ ನ್ಯಾಯಾದೇಶದ ಗುಣಮಟ್ಟದ ಮೇಲಾಗುತ್ತದೆ. ಇನ್ನು ಮುಂದೆ ಹಸಿರು ಪೀಠದ ತೀರ್ಪುಗಳು ನ್ಯಾಯಾಂಗದ ಅನುಭವದ ಲಾಭವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಅದರ ಸ್ವಾತಂತ್ರ್ಯದ ಜೊತೆಗೂ ರಾಜಿಯಾಗಿರುತ್ತದೆ;ಬಹಳಷ್ಟು ಸಾರಿ ಈ ಮಂಡಳಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮಗಳ ಬಗ್ಗೆ ತೀರ್ಪು ಕೊಡಬೇಕಾಗಿರುತ್ತದಾದ್ದರಿಂದ ಈ ಸ್ವಾತಂತ್ರ್ಯವು ಅತ್ಯವಶ್ಯಕವಾಗಿತ್ತು.

ಎನ್‌ಜಿಟಿಯ ಈ ಬಗೆಯ ಸ್ವಾತಂತ್ರ್ಯ ಹರಣ ಒಂದು ದುರಂತ ಮತ್ತು ವಿಪರ್ಯಾಸಕರ. ಏಕೆಂದರೆ ಹಸಿರು ಪೀಠಕ್ಕೆ ಇರಬಹುದಾದ ಸ್ವಾತಂತ್ರ್ಯವು  ನರೇಂದ್ರ ಮೋದಿಯವರ ಹೃದಯಕ್ಕೆ ಹತ್ತಿರವಾದ ಸಂಗತಿಯ ಬಗ್ಗೆಯೂ ಹೇಗೆ ಪರಿಣಾಮಕಾರಿಯಾಗಿರಬಲ್ಲದೆಂಬುದು ಇತ್ತೀಚೆಗೆ ತಾನೆ ರುಜುವಾತಾಗಿತ್ತು.

೧೯೮೫ರಲ್ಲಿ ಪ್ರಖ್ಯಾತ ಪರಿಸರವಾದಿ ಎಂ.ಸಿ. ಮೆಹ್ತಾ ಅವರು  ಗಂಗಾ ನದಿಯ ಮಾಲಿನ್ಯದ ಬಗ್ಗೆ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿಯ ದಾವೆಗೆ ಪ್ರತಿಸ್ಪಂದನೆಯಾಗಿಯೇ ೧೯೮೬ರಲ್ಲಿ ಗಂಗಾ ನದಿ ಹರಿಯುವ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ೨೫ ಪಟ್ಟಣಗಳಲ್ಲಿ ಮೊದಲನೇ ಗಂಗಾ ಕ್ರಿಯಾ ಯೋಜನೆ (ಗಂಗಾ ಆಕ್ಷನ್ ಪ್ಲಾನ್- ಗ್ಯಾಪ್) ಅನ್ನು ಜಾರಿ ಮಾಡಲಾಗಿತ್ತು. ೧೯೯೩ರಲ್ಲಿ ಪ್ರಾರಂಭವಾದ ಎರಡನೇ ಹಂತದ ಯೋಜನೆಯಲ್ಲಿ ಗಂಗೆಯ ಉಪನದಿಗಳಾದ ಯಮುನಾ ಮತ್ತು ದಾಮೋದರ್ ನದಿಗಳನ್ನೂ ಸೇರಿಸಿಕೊಳ್ಳಲಾಯಿತು. ಈ ಮಧ್ಯೆ ಮೆಹ್ತಾ ಪ್ರಕರಣವು ಸುಪ್ರಿಂಕೋರ್ಟಿನಲ್ಲಿ ಇತ್ಯರ್ಥವಾಗದೆ ತೆವಳುತ್ತಾ ಸಾಗತೊಡಗಿತು. ಹಾಗೆಯೇ ಗಂಗಾನದಿಯಲ್ಲಿ ಸೇರಿಕೊಳ್ಳುತ್ತಿದ್ದ ಮಾಲಿನ್ಯದ ಹೊರೆಗೆ ಹೋಲಿಸಿದಲ್ಲಿ ಗ್ಯಾಪ್ ಯೋಜನೆಯು ಗಂಗೆಯನ್ನು ಯಾವುದೇ ರೀತಿಯಲ್ಲು ಮಾಲಿನ್ಯ ಮುಕ್ತ ಮಾಡಿರಲಿಲ್ಲ.  ೨೦೧೫ರಲ್ಲಿ ಮೋದಿ ಸರ್ಕಾರವು ನಮಾಮಿ ಗಂಗೆ ಎಂಬ ಹೊಸ ಹೆಸರಲ್ಲಿ ಈ ಯೋಜನೆಗೆ ಹೊಸಜೀವ ಕೊಟ್ಟು ಗಂಗಾ ನದಿಯನ್ನು ಸ್ವಚ್ಚಗೊಳಿಸಲು ಐದು ವರ್ಷಗಳ ಅವಧಿಗೆ ೨೦,೦೦೦ ಕೋಟಿಯ ಅನುದಾನವನ್ನು ನೀಡಿತು. ಈಗಾಗಲೇ ಅದರಲ್ಲಿ ೭೦೦೦ ಕೋಟಿ ರೂ.ಗಳು ವ್ಯಯವಾಗಿದ್ದರೂ ಕಣ್ಣಿಗೆ ಕಾಣಿಸುವಂಥ ಯಾವ ಬದಲಾವಣೆಯೂ ಕಂಡುಬಂದಿಲ್ಲ.

೨೦೧೪ರಲ್ಲಿ ಸುಪ್ರೀಂ ಕೋರ್ಟು ಎಂ.ಸಿ.ಮೆಹ್ತಾ ಪ್ರಕರಣವನ್ನು ಎನ್‌ಜಿಟಿಗೆ ಒಪ್ಪಿಸಿತು. ಈ ಪ್ರಕರಣದಲ್ಲಿ ಜುಲೈ ೧೩ ರಂದು ಎನ್‌ಜಿಟಿಯು ಒಂದು ಮಹತ್ತರವಾದ ತೀರ್ಪನ್ನು ನೀಡಿತು. ಗಂಗಾ ನದಿಯನ್ನು ಸ್ವಚ್ಚಗೊಳಿಸುವ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯ ಮಾಡಿದ್ದರೂ ಗುಣಮಟ್ಟದಲಾಗಲೀ ಅಥವಾ ಇತರ ವಿಷಯಗಳಲ್ಲಾಗಲೀ ಗಂಗಾ ನದಿಯ ಗುಣಮಟ್ಟ ಯಾವ ರೀತಿಯಲ್ಲೂ ಸುಧಾರಿಸದೆ ಒಂದು ಗಂಭೀರವಾದ ಪರಿಸರ ಸಮಸ್ಯೆಯಾಗಿಯೇ ಮುಂದುವರೆದಿದೆ ಎಂದು ಎನ್‌ಜಿಟಿ ಈ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಅಲ್ಲದೆ ನದಿಯ ಪಾತ್ರದ ಇಕ್ಕೆಲಗಳಲ್ಲೂ ಕನಿಷ್ಟ ೧೦೦ ಮೀಟರ್ ದೂರದವರೆಗೆ ಯಾವುದೇ ಕಟ್ಟಡಗಳನ್ನೂ ಕಟ್ಟಕೂಡದೆಂದೂ, ನದಿಯ ಪಾತ್ರದ ಇಕ್ಕೆಲಗಳಲ್ಲಿ ೫೦೦ ಮೀಟರ್ ದೂರದ ವರೆಗೆ ಯಾವುದೇ ಬಗೆಯ ತ್ಯಾಜ್ಯಗಳನ್ನು ಸುರಿಯಬಾರದೆಂದೂ, ಹಾಗು ದಶಕಗಳಿಂದ ಗಂಗಾ ನದಿಗೆ ತಮ್ಮ ಕಾರ್ಖಾನೆಗಳ ತ್ಯಾಜ್ಯವನ್ನು ಸುರಿಯುತ್ತಿದ್ದ ಕಾನ್‌ಪುರದ ಚರ್ಮೋದ್ಯಮಗಳನ್ನು ಎರಡು ವಾರಗಳಲ್ಲಿ ಸ್ಥಳಾಂತರಿಸಬೇಕೆಂದೂ ಆದೇಶಿಸಿತು. ಈ ಅಭಿಪ್ರಾಯಗಳು ವ್ಯಕ್ತವಾಗಿರುವುದು ನದಿಯ ಒಂದು ಹಂತದ ಬಗ್ಗೆ ಮಾತ್ರ. ಐದು ರಾಜ್ಯಗಳಲ್ಲಿ ಹಾದು ಅಂತಿಮವಾಗಿ ಬಂಗಾಳಕೊಲ್ಲಿಯಲ್ಲಿ ಸಾಗರವನ್ನು ಸೇರುವ ಗಂಗಾ ನದಿಯಲ್ಲಿನ ಮಾಲಿನ್ಯವನ್ನು ವಿವಿಧ ಹಂತಗಳಲ್ಲಿ ವ್ಯವಸ್ಥಿತವಾಗಿ ಸಮೀಕ್ಷೆ ಮಾಡಲು ನ್ಯಾಯಾಲಯ ನಿರ್ಧರಿಸಿದೆ.

ಈ ಬಗೆಯ ನ್ಯಾಯಾಂಗ ಮಧ್ಯಪ್ರವೇಶದ ಪ್ರಮುಖ ಪರಿಣಾಮವೇನೆಂದರೆ ಅದರ ಆದೇಶಗಳು ನಿರ್ದಿಷ್ಟವಾಗಿದ್ದು ಅವುಗಳ ಉಸ್ತುವಾರಿಗೆ ಕ್ರಮಗಳನ್ನು ರೂಪಿಸಲಾಗಿದ್ದು ಅದರ ಮೇಲ್ವಿಚಾರಣೆಯನ್ನು ಈ ಹಿಂದಿನಂತೆ ಬೇಜವಾಬ್ದಾರಿ ರಾಜ್ಯಸರ್ಕಾರಗಳಿಗೆ ವಹಿಸದೆ ಖುದ್ದು ನ್ಯಾಯಾಲಯವೇ ವಹಿಸಿಕೊಳ್ಳಲಿದೆ. ಇಂಥ ಕ್ರಮಗಳಿಂದ ಮಾತ್ರ ಏನಾದರೂ ಬದಲಾವಣೆಗಳು ಸಂಭವಿಸಲು ಸಾಧ್ಯ. ಆದರೆ ಇತರ ಎಲ್ಲಾ ಪರಿಸರ ಸಂಬಂಧೀ ಪ್ರಕರಣಗಳಲ್ಲೂ ಕಂಡುಬರುವಂತೆ ಇಂಥಾ ಪರಿಣಾಮಗಳು ಸಾಧ್ಯವಾಗುವುದು ಹಸಿರು ನ್ಯಾಯಮಂಡಳಿಯು ಸ್ವತಂತ್ರವಾಗಿದ್ದಾಗ ಮಾತ್ರ.

ಗಂಗಾ ಯೋಜನೆಯಲ್ಲಿ ಸ್ವತಂತ್ರ ಹಸಿರು ನ್ಯಾಯಮಂಡಳಿಯು ನೀಡಿರುವ ತೀರ್ಪನ್ನು ನೋಡಿಯಾದರೂ ಮೋದಿ ಸರ್ಕಾರ ಒಂದು ಸ್ವತಂತ್ರ ಹಸಿರು ಪೀಠದ ಲಾಭಗಳ ಬಗ್ಗೆ ತನ್ನ ನಿಲುವನ್ನು ಪುನರ್ ಪರಿಶೀಲಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Updated On : 13th Nov, 2017
Back to Top