ISSN (Print) - 0012-9976 | ISSN (Online) - 2349-8846

ಕಲ್ಲಿದ್ದಲು ಹಗರಣ ಕಲಿಸುವ ಗುಣಪಾಠಗಳು

ಕಲ್ಲಿದ್ದಲು ಹಗರಣದಲ್ಲಿ ಒಬ್ಬ ನಿವೃತ್ತ ಹಿರಿಯ ಅಧಿಕಾರಿಯು ಶಿಕ್ಷೆಗೊಳಗಾಗಿರುವುದು ದೇಶದಲ್ಲಿನ ಕಾನೂನು ಪಾಲನೆಯ ಬಗ್ಗೆ ಹಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಇದೇ ಮೇ ೨೩ ರಂದು ನ್ಯಾಯಮೂರ್ತಿ ಭರತ್ ಪರಾಶರ್ ಅವರು ಕಲ್ಲಿದ್ದಲು ನಿಕ್ಷೇಪ ಹೊಂದಿದ್ದ ಪ್ರದೇಶವೊಂದನ್ನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣದಲ್ಲಿ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಹರೀಶ್ ಚಂದ್ರ ಗುಪ್ತಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಇದು ಅಧಿಕಾರಿಗಳ ವಲಯದಲ್ಲಿ ತೀವ್ರವಾದ ಆತಂಕದ ಅಲೆಗಳನ್ನೇ ಹುಟ್ಟಿಹಾಕಿದೆ. ಕೇಂದ್ರೀಯ ತನಿಖಾ ದಳವು (ಸಿಬಿಐ) ದಾಖಲು ಮಾಡಿದ್ದ ಈ ಕ್ರಿಮಿನಲ್ ಪ್ರಕರಣಗಳ ನ್ಯಾಯ ವಿಚಾರಣೆ ನಡೆಸಲೆಂದೇ ರಚಿಸಲಾಗಿದ್ದ ವಿಶೇಷ ಕೋರ್ಟಿನ ಈ ತೀರ್ಮಾನವನ್ನು ಭಾರತೀಯ ಆಡಳಿತ ಸೇವೆಯ (ಐಎಎಸ್) ಸೇವಾ ನಿರತ ಮತ್ತು ನಿವೃತ್ತ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಗುಪ್ತಾ ಅವರು ಅತ್ಯಂತ ಪ್ರಾಮಾಣಿಕ ಅಧಿಕಾರಿಯಾಗಿದ್ದು ಕಲ್ಲಿದ್ದಲು ನಿಕ್ಷೇಪ ಪ್ರದೇಶಗಳ ಹಂಚಿಕೆಗೆ ಸಂಬಂಧಪಟ್ಟಂತೆ ಸರ್ಕಾರದ ದೋಷಪೂರಿತ ನೀತಿಗಳನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಅವರು ಅನ್ಯಾಯಯುತವಾಗಿ ಶಿಕ್ಷೆಗೊಳಗಾಗುತ್ತಿದ್ದಾರೆಂದು ಈ ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ.

ಈ ದೇಶದಲ್ಲಿ ಕಾನೂನುಗಳು ಹೇಗೆ ಪಾನೆಯಾಗುತ್ತಿವೆ ಎಂಬುದರ ಬಗ್ಗೆ ಎರಡು ಗಮನಾರ್ಹ ಸಂಗತಿಗಳನ್ನು ಈ ಪ್ರಕರಣವು ಮುನ್ನೆಲೆಗೆ ತಂದಿದೆ. ಮೊದಲನೆಯದು: ಕಾನೂನಿನಲ್ಲಿ ಸ್ಪಷ್ಟವಾಗಿರದ ಕೆಲವು ಅಂಶಗಳು ಹೇಗೆ ಅಧಿಕಾರದ ದುರ್ಬಳಕೆಗೆ ಅವಕಾಶ ಮಾಡಿಕೊಡುತ್ತವೆ ಎಂಬುದು. ಎರಡನೆಯದು: ೧೯೯೩ರ ನಂತರದಲ್ಲಿ ಖಾಸಗಿ ಸಂಸ್ಥೆಗಳಿಗೆ ೨೧೪ ಕಲ್ಲಿದ್ದಲು ನಿಕ್ಷೇಪಳನ್ನು ಮಂಜೂರು ಮಾಡಿದ್ದ ಮತ್ತು ೨೦೧೪ರಲ್ಲಿ ಸುಪ್ರೀಂ ಕೋರ್ಟು ಅವೆಲ್ಲವನ್ನೂ ಅಸಿಂಧುವೆಂದು ಘೋಷಿಸಿದ ಮತ್ತು ಕಲ್ಲಿದ್ದಲು ಹಗರಣ (ಕೋಲ್‌ಗೇಟ್) ಎಂದೇ ಕುಖ್ಯಾತವಾದ ಈ ಪ್ರಕರಣದಲ್ಲಿ ಅಪರಾಧದ ವಿಚಾರಣೆಗಳು ನಡೆದ ರೀತಿ.

ಇದು ಮುಂದಿಡುತ್ತಿರುವ ಅತಿಮುಖ್ಯ ಪ್ರಶ್ನೆಯೆಂದರೆ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿದ  ಮತ್ತು ಜೈಲಿನಲ್ಲಿ ಕೊಳೆಯಲು ಅರ್ಹರಾದ ಈ ಅಧಿಕಾರಿಗಳ ರಾಜಕೀಯ ಗುರುಗಳನ್ನೇಕೆ ಕಂಡುಹಿಡಿಯಲು ನ್ಯಾಯಾಲಯಗಳಿಗೆ ಏಕೆ ಸಾಧ್ಯವಾಗುತ್ತಿಲ್ಲವೆಂಬುದು. ಹಾಗೆಯೇ ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳು ಸಹ ಅಧಿಕಾರಿಗಳ ಬಗ್ಗೆ  ಮತ್ತು ಉದ್ಯಮ ಸಂಸ್ಥೆಗಳ ಕುರಿತು ತನಿಖೆ ನಡೆಸಿದಾಗ ತೋರಿದಷ್ಟು ಶ್ರದ್ಧೆ ಮತ್ತು ಉತ್ಸಾಹಗಳನ್ನು ರಾಜಕಾರಣಿಗಳ ಬಗ್ಗೆ ತನಿಖೆ ನಡೆಸುವಾಗ ತೋರಲಿಲ್ಲ.

ಕಾನೂನುಗಳನ್ನು ಉಲ್ಲಂಘಿಸಿಯೇ ಖಾಸಗಿ ಉದ್ಯಮಿಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಲಾಗಿದೆಯೆಂಬುದನ್ನು ಭಾರತದ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್- ಸಿಎಜಿ (ಮಹಾಲೇಖಾಧಿಕಾರಿ)-ಯವರು ೨೦೧೨ರಲ್ಲಿ ನೀಡಿದ ವರದಿಯು ಮುಖಕ್ಕೆ ರಾಚುವಂತೆ ಬಯಲುಗೊಳಿಸಿದ್ದು ನಿಜವೇ ಆದರೂ ಅದು  ಬಹಳ ವರ್ಷಗಳಿಂದ ಗೊತ್ತಿದ್ದ ಸಂಗತಿಯೇ ಆಗಿತ್ತು. ಆ ವರದಿಯ ಪ್ರಕಾರ ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಏನಿಲ್ಲವೆಂದರೂ ೧,೮೬,೦೦೦ ಕೋಟಿ ರೂಪಾಯಿಗಳು ಎಂದರೆ ೩೦ ಬಿಲಿಯನ್ ಡಾಲರ್‌ಗಳಷ್ಟು ಸಂಭಾವ್ಯ ನಷ್ಟವಾಗುತ್ತಿತ್ತು. ಹೀಗಾಗಿ ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಗರಣವೆಂದು ಕುಖ್ಯಾತಿ ಪಡೆಯಿತು. ಹಾಗೆಯೇ ಕಲ್ಲಿದ್ದಲು ನಿಕ್ಷೇಪಗಳನ್ನು ಬಹಿರಂಗ ಹರಾಜಿನ ಮೂಲಕ ಖಾಸಗಿ ಸಂಸ್ಥೆಗಳಿಗೆ ನೀಡಬೇಕೆಂಬ ನಿರ್ಧಾರಕ್ಕೆ ಬರಲು ಮಾಜಿ ಪ್ರಧಾನಿ ಮನಮೋಹನ್ ಸಿಂಗರಿಗೆ (ಕಲ್ಲಿದ್ದಲ ನಿಕ್ಷೇಪಗಳು ಕಾನೂನು ಬಾಹಿರವಾಗಿ  ಖಾಸಗಿಯವರಿಗೆ ಮಂಜೂರಾದ ಹಗರಣ ನಡೆದ ಕಾಲಾವಧಿಯಲ್ಲಿ ಬಹುಪಾಲು ಅವರೇ ಕಲ್ಲಿದ್ದಲು ಇಲಾಖೆಯನ್ನೂ ನಿಭಾಯಿಸುತ್ತಿದ್ದರು) ಎಂಟು ವರ್ಷಗಳು ಬೇಕಾಯಿತೆಂಬುದೂ ಸಹ ಎಲ್ಲರೂ ಬಲ್ಲ ಸಂಗತಿಯೇ ಆಗಿದೆ. ಈ ಮಧ್ಯಂತರ ಕಾಲಾವಧಿಯಲ್ಲಿ ಬಹುಪಾಲು ಅಧಿಕಾರಿಗಳೇ ಇದ್ದ ಪರಾಮರ್ಶನ ಸಮಿತಿಯು ಯಾವ ಖಾಸಗಿ ಉದ್ಯಮ ಸಂಸ್ಥೆಗೆ ಯಾವ ನಿಕ್ಷೇಪಗಳನ್ನು ನೀಡಬೇಕೆಂಬುದನ್ನು ತೀರ್ಮಾನಿಸುತ್ತಿತ್ತು. ಈ ಸಮಿತಿಯು ಅತ್ಯಂತ ಅಪಾರದರ್ಶಕವಾಗಿ ಮತ್ತು ತನಗೇ ಹೇಗೆ ಬೇಕೋ ಹಾಗೆ ತೀರ್ಮಾನಗಳನ್ನು ತೆಗೆದುಕೊಳುತ್ತಿದ್ದದ್ದು ಮಾತ್ರವಲ್ಲದೆ, ಸುಪ್ರೀಂ ಕೋರ್ಟೇ ಗುರುತಿಸಿದಂತೆ, ಹಲವಾರು ಕಾನೂನುಗಳನ್ನೂ ಉಲ್ಲಂಘಿಸಿತ್ತು. ಗುಪ್ತಾ ಅವರು ೨೦೦೮ರ ನವಂಬರ್‌ನಲ್ಲಿ ನಿವೃತ್ತರಾಗುವ ಮುನ್ನ ಎರಡು ವರ್ಷಗಳ ಕಾಲ ಈ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಕಾಲಾವಧಿಯಲ್ಲಿ ಕನಿಷ್ಯ ೪೦ ಕಲ್ಲಿದ್ದಲು ನಿಕ್ಷೇಪಗಳನ್ನು ಮಂಜೂರು ಮಾಡಲಾಗಿತ್ತು. ಈಗ ಅವರಿಗೆ ಶಿಕ್ಷೆ ನೀಡಲಾದ ಪ್ರಕರಣವು ಮಧ್ಯಪ್ರದೇಶದ ಕಮಲ್ ಸ್ಪಾಂಜ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (ಕೆಎಸ್‌ಎಸ್‌ಪಿಎಲ್) ಗೆ ಸಂಬಂಧಪಟ್ಟಿದ್ದು ಅದರ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಅಹ್ಲುವಾಲಿಯ ಮತ್ತು ಕಲ್ಲಿದ್ದಲು ಇಲಾಖೆಯ ಇನ್ನೂ ಇಬ್ಬರು ಅಧಿಕಾರಿಗಳಾದ ಕೆ.ಎಸ್. ಕ್ರೋಫಾ ಮತ್ತು ಕೆ.ಸಿ. ಸಮಾರಿಯಾ ಅವರೂ ಸಹ ಇದರಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣವನ್ನು ಹೊರತು ಪಡಿಸಿ ಇನ್ನೂ ೧೦ ಪ್ರಕರಣಗಳಲ್ಲಿ ಗುಪ್ತಾ ಅವರು  ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಈ ಕಲ್ಲಿದ್ದಲು ಹಗರಣದಲ್ಲಿ ಕಾನೂನನ್ನು ಜಾರಿ ಮಾಡಬೇಕಾದ ಯಂತ್ರಾಂಗವು ಅನುಮಾನಾಸ್ಪದವಾದವರ ಮೇಲೆ ಕ್ರಮ ತೆಗೆದುಕೊಳ್ಳುವಾಗ ಹೇಗೆ ಪಕ್ಷಪಾತಿಯಾಗಿ ವರ್ತಿಸಿದೆ ಎಂಬುದನ್ನು ಪರಿಶೀಲಿಸುವ ಮುನ್ನ ೧೯೮೮ರ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ೧೩ (೧)(ಡಿ)(iii) ಕಲಮಿನಲ್ಲಿ ಹೇಗೆ ಅಸ್ಪಷ್ಟತೆಯು ರಾಜ್ಯಭಾರ ಮಾಡುತ್ತಿದೆ ಎಂಬುದನ್ನು ಪ್ರಸ್ತಾಪಿಸಲೇ ಬೇಕು. ಈ ಕಲಮಿನ ಪ್ರಕಾರ ಯಾವುದೇ ಸಾರ್ವಜನಿಕ ಸೇವಕರು ಯಾವುದೇ ಬಗೆಯ ಸಾರ್ವಜನಿಕ ಹಿತಾಸಕ್ತಿ ಇಲ್ಲದಿದ್ದರೂ ಯಾವುದೇ ವ್ಯಕ್ತಿಯಿಂದ ಯಾವುದೇ ಬೆಲೆಬಾಳುವ ವಸ್ತುಗಳನ್ನು ಅಥವಾ ಆರ್ಥಿಕ ಲಾಭಗಳನ್ನು ಪಡೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಂದರೆ ಈ ಕಲಮಿನ ಪ್ರಕಾರ ಸಿಬಿಐ ಅಥವಾ ಇನ್ಯಾವುದೇ ತನಿಖಾ ಸಂಸ್ಥೆಗಳು ಆರೋಪಿತ ಸಾರ್ವಜನಿಕ ಸೇವಕನನ್ನು ವಿಚಾರಣೆಗೆ ಗುರಿಪಡಿಸುವ ಮುನ್ನ ಆ ವ್ಯಕ್ತಿಗೆ ಈ ಅಪ್ರಾಧದಲ್ಲಿ ತೊಡಗುವಾಗ ಕ್ರಿಮಿನಲ್ ಉದ್ದೇಶ  ಇತ್ತೆಂಬುದನ್ನೂ ಅಥವಾ ಲಾಭ ಪಡೆದುಕೊಂಡಿದ್ದಕ್ಕೆ ಪ್ರತಿಫಲಾಪೇಕ್ಷೆಯ ಉದ್ದೇಶವಿತ್ತೆಂಬುದನ್ನು ಸಾಬೀತು ಮಾಡಬೇಕೆಂಬ ಜರೂರಿಯಿಲ್ಲ. ಸದ್ಯಕ್ಕೆ ಈ ಕಲಮನ್ನು ರದ್ದು ಮಾಡುವ ಪ್ರಸ್ತಾಪವೊಂದನ್ನು ಸಂಸದೀಯ ಸಮಿತಿಯೊಂದು ಪರಿಶೀಲಿಸುತ್ತಿದೆ. ಗುಪ್ತಾ ಮತ್ತು ಅವರನ್ನು ಬೆಂಬಲಿಸುತ್ತಿರುವ ಐಎಎಸ್ ಲಾಬಿಯು ಮುಂದಿಡುತ್ತಿರುವ ತರ್ಕ ಇದೇ ಆಗಿದೆ. ಆ ಲಾಬಿಯ ಪ್ರಕಾರ ಕೆಎಸ್‌ಎಸ್‌ಪಿಎಲ್ ಗೆ ಕಲ್ಲಿದ್ದಲು ನಿಕ್ಷೇಪವನ್ನು ಮಂಜೂರು ಮಾಡುವಾಗ ಗುಪ್ತಾ ಅವರು ಹೆಚ್ಚೆಂದರೆ ಒಂದು ತಪ್ಪ ನ್ನು ಮಾಡಿರಬಹುದೇ ವಿನಃ ಅವರಿಗೆ ಕ್ರಿಮಿನಲ್ ಉದ್ದೇಶವಾಗಲೀ ಅಥವಾ ಪ್ರತಿಫಲಾಪೇಕ್ಷೆಯ ಉದ್ದೇಶವಾಗಲೀ ಇರಲಿಲ್ಲ. ಅದೇನೇ ಇದ್ದರೂ ನ್ಯಾಯಮೂರ್ತಿ ಪರಾಶರ್ ಅವರ ಪ್ರಕಾರ ಗುಪ್ತಾ ಅವರು ಈ ಮಂಜೂರಾತಿಗೆ ಅಂತಿಮ ಒಪ್ಪಿಗೆಯನ್ನು ಪಡೆಯುವಾಗ ಪ್ರಧಾನಿ ಹಾಗೂ ಕಲ್ಲಿದ್ದಲು ಮಂತ್ರಿಯಿಂದ ಮಾಹಿತಿಗಳನ್ನು ಮರೆಮಾಚಿ ತಪ್ಪು ದಾರಿಗೆಳೆದಿದ್ದಾರೆ. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಲು ಸಾಧ್ಯ.

ಈ ವಿಷಯದಲ್ಲಿ ಎದ್ದುಬಂದಿರುವ ದೊಡ್ಡ ಪ್ರಶ್ನೆಯೆಂದರೆ  ಸಿಬಿಐ ಆಗಲೀ, ನ್ಯಾಯಾಲಯಗಳಾಗಲೀ ಈ ಹಗರಣದಲ್ಲಿ ಸಿಕ್ಕಿಕೊಂಡಿರುವ ರಾಜಕೀಯ ನಾಯಕರುಗಳನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದೇ ಆಗಿದೆ. ಈ ಹಗರಣದಲ್ಲಿ ಆರೋಪಿತರಾಗಿರುವ ರಾಜಕೀಯ ನಾಯಕರುಗಳೆಂದರೆ: ಕೇಂದ್ರದಲ್ಲಿ ಕಲ್ಲಿದ್ದಲು ಖಾತೆಯ ರಾಜ್ಯ ಮಂತ್ರಿಗಳಾಗಿದ್ದ ಸಂತೋಷ್ ಬರ್ಗೋದಿಯಾ ಮತ್ತು ದಾಸರಿ ನಾರಾಯಣ ರಾವ್, ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿದ್ದ ಮತ್ತು ಲೋಕಮತ್ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ವಿಜಯ್ ದರ್ದಾ ಮತ್ತು ಅವರ ಸಹೋದರ ಹಾಗು ಮಹಾರಾಷ್ಟ್ರದ ಮಾಜಿ ಶಿಕ್ಷಣ ಮಂತ್ರಿಯಾಗಿದ್ದ ರಾಜೆಂದ್ರ ದರ್ದ. ಇವೆಲ್ಲಕ್ಕಿಂತ ಅತ್ಯಂತ ಹೀನಾಯವಾದ ಉದಾಹರಣೆಯೆಂದರೆ ಕಾಂಗ್ರೆಸ್ಸಿನ ಮಾಜಿ ಸಂಸದ ಹಾಗೂ ಈ ಹಗರಣದಲ್ಲಿ ಅತಿ ಹೆಚ್ಚು ಫಲಾನುಭವಿಗಳಾದ ಖಾಸಗಿ ಉದ್ಯಮ ಸಮೂಹಗಳ ಮುಖಸ್ಥರೂ ಆಗಿರುವ ದೈತ್ಯ ಉದ್ಯಮಿ ನವೀನ್ ಜಿಂದಾಲ್. ಇವರ ಮೇಲೆ ಪ್ರತಿಫಲಾಪೇಕ್ಷೆಯಿಂದ ರಾವ್ ಅವರಿಗೆ ಲಂಚ ನೀಡಿದ ಆರೋಪವಿದೆ. ಇವರುಗಳಲ್ಲದೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳು ಈ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಸಿಬಿಐ ನ ಮಾಜಿ ನಿರ್ದೇಶಕರಾದ ರಂಜಿತ್ ಸಿನ್ಹಾ ರವರು ಈ ಆರೋಪಿಗಳನ್ನು ಖಾಸಗಿಯಾಗಿ ಭೇಟಿ ಮಾಡಿ ತನಿಖೆಯ ಮೇಲೆ ಪ್ರಭಾವ ಬೀರಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆಂದು ಆರೋಪಿಸಿ ಸಿಬಿಐ ಅವರ ಮೇಲೆ ಏಪ್ರಿಲ್ ೨೫ರಂದು ದೂರೊಂದನ್ನು ದಾಖಲಿಸಿದೆ.

ಸಿಬಿಐ ಅನ್ನು ತಮ್ಮ ರಾಜಕೀಯ ವಿರೋಧಿಗಳಾದ ಮಾಜಿ ಹಣಕಾಸು ಮಂತ್ರಿ ಪಿ ಚಿದಂಬರಂ ಮತ್ತವರ ಪುತ್ರ ಕಾರ್ತಿ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವರ ಪುತ್ರಿಯ ಮೇಲೆ ದಾಳಿ ಮಾಡಲು ದುರ್ಬಳಕೆ ಮಾಡಿಕೊಂಡಿದೆ ಎಂಬ ಟೀಕೆಯನ್ನು ನರೇಂದ್ರ ಮೋದಿಯವರ ಸರ್ಕಾರವು ಎದುರಿಸುತ್ತಿರುವಾಗ ದೇಶದ ಈ ಅತಿ ದೊಡ್ಡ ಹಗರಣದಲ್ಲಿ ಸಿಲುಕಿಕೊಂಡಿರುವ ಪ್ರಭಾವಿಗಳ ಮೇಲೆ ಕ್ರಮಗಳನ್ನು ತೆಗೆದುಕೊಳ್ಳುವಾಗ ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳು ಪಕ್ಷಪಾತವಿಲ್ಲವೆಂಬಂತೆ ನಡೆದುಕೊಳ್ಳುವುದು ಅತ್ಯಗತ್ಯ. ಆದರೆ ಈವರೆಗೆ ಅವುಗಳು ಹಾಗೆ ನಡೆದುಕೊಳ್ಳುತ್ತದೆಯೆಂಬುದಕ್ಕೆ ಪುರಾವೆಯೇನೂ ದೊರೆತಿಲ್ಲ. 

Updated On : 13th Nov, 2017
Back to Top