ISSN (Print) - 0012-9976 | ISSN (Online) - 2349-8846

ಗುಂಪುದ್ವೇಷ ದಾಳಿ (ಲಿಂಚಿಂಗ್) ಸಮಸ್ಯೆಯ ಮೂಲವೇನು?

ಒಂದು ರಾಜಕೀಯ ಕಾರ್ಯಾಂಗಕ್ಕೆ ಅಧೀನವಾಗಿರುವ ಅಸಮರ್ಪಕ ಪೊಲೀಸ್ ವ್ಯವಸ್ಥೆಯು ಅಪರಾಧಗಳ ತನಿಖೆಯಲ್ಲೂ ಮತ್ತು ಶಿಕ್ಷೆಯನ್ನು ಖಾತರಿಗೊಳಿಸುವಲ್ಲೂ ವಿಫಲವಾಗುತ್ತದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

೨೦೧೭ರ ಏಪ್ರಿಲ್ ೫ರಂದು ಸುಮಾರು ೨೦೦ ಜನರಿಗೂ ಹೆಚ್ಚಿದ್ದ ಗುಪೊಂದು ಹಾಡುಹಗಲಲ್ಲೇ ಪೆಹ್ಲೂ ಖಾನ್ ಮೇಲೆ ದಾಳಿ ಮಾಡಿ ಹೊಡೆದು ಬಡಿದು ಮಾರಣಾಂತಿಕವಾಗಿ ಗಾಯಗೊಳಿಸಿದರು. ಇದರಿಂದಾಗಿಯೇ ನಂತರ ಆತ ಆಸ್ಪತ್ರೆಯಲ್ಲಿ ಮೃತನಾದ.

೨೦೧೮ರ ಜುಲೈ ೧೭ರಂದು ತೆಹ್ಸೀನ್ ಪೂನಾವಾಲ ಎಂಬುವರು ದೇಶಾದ್ಯಂತ ಹೆಚ್ಚುತ್ತಿರುವ ಇಂಥಾ ಗುಂಪು ಹಿಂಸಾಚಾರದ (ಲಿಂಚಿಂಗ್)ಘಟನೆಗಳನ್ನೂ ನ್ಯಾಯಾಲಯದ ಗಮನಕ್ಕೆ ತಂದು ಈ ಹಿಂಸಾಚಾರಗಳನ್ನು ನಿಗ್ರಹಿಸಲು ಹಾಗೂ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ವಿಧಿಸಲೂ ಬೇಕಾದ ಮಾರ್ಗದರ್ಶನವನ್ನೂ ಕೇಂದ್ರಕ್ಕೂ ಮತ್ತು ರಾಜ್ಯ ಸರ್ಕಾರಗಳಿಗೂ ನೀಡಬೇಕೆಂದು ಅಹವಾಲು ಸಲ್ಲಿಸಿದರು.

೨೦೧೯ರ ಆಗಸ್ಟ್ ೬ರಂದು ಲಿಂಚಿಂಗ್  ಮತ್ತು ಸಂಬಂಧಿತ ಪ್ರಕರಣದ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸಲು ಅನುವಾಗುವಂತೆ ರಾಜಸ್ಥಾನದ ವಿಧಾನ ಸಭೆಯು ಗುಂಪುದ್ವೇಷದ (ಲಿಂಚಿಂಗ್) ಹಿಂಸಾಚಾರದಿಂದ ರಕ್ಷಣೆ ಕಾಯಿದೆ, ೨೦೧೯ನ್ನು ಅನುಮೋದಿಸಿತು.

೨೦೧೯ರ ಆಗಸ್ಟ್ ೧೪ರಂದು ಪೆಹ್ಲೂ ಖಾನ್ ಕೊಲೆಯ ಆರು ಆರೋಪಿಗಳನ್ನು ರಾಜಸ್ಥಾನದ ಆಲ್ವಾರ್ ನ್ಯಾಯಾಲಯದ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರು ದೋಷಮುಕ್ತಗೊಳಿಸಿದರು.

ಕಳೆದೆರಡು ವರ್ಷಗಳಲ್ಲಿ ನಡೆದ ಮೇಲಿನ ಘಟನಾವಳಿಗಳ ಅನುಕ್ರಮಣಿಕೆಯು ನ್ಯಾಯಸಮ್ಮತವಾಗಿಯೇನೂ ಇಲ್ಲ; ಕ್ರಿಮಿನಲ್ ಕಾನೂನುಗಳನ್ನು ಪೂರ್ವಾನ್ವಯವಾಗಿ ಲಾಗೂ ಮಾಡಲು ಆಗುವುದಿಲ್ಲ ಮತ್ತು ಸುಪ್ರೀಂಕೋರ್ಟು ಪೊಲೀಸ್ ಇಲಾಖೆಯನ್ನು ನಡೆಸಲು ಆಗುವುದಿಲ್ಲ. ಆದರೂ ಈ ಘಟನಾವಳಿಗಳ ಅನುಕ್ರಮಣಿಕೆಯನ್ನು ಅದೇ ಆಧಾರದಲ್ಲಿ ಕೊಡಲು ಕಾರಣ ಲಿಂಚಿಂಗ್ ಸಮಸ್ಯೆಯ ಮೂಲವನ್ನು ತಪ್ಪಾಗಿ ಗ್ರಹಿಸಿ, ಆ ತಪ್ಪು ಗ್ರಹಿಕೆಯ ಆಧಾರದ ಮೇಲೆ ಪರಿಹಾರಗಳನ್ನು ಹುಡುಕುವಂತಾಗಬಾರದೆಂಬುದೇ ಆಗಿದೆ.

ಈ ನಿಟ್ಟಿನಲ್ಲಿ ಸಮಸ್ಯೆಯ ಮೂಲವನ್ನು ಮೊದಲು ತಪ್ಪಾಗಿ ಗ್ರಹಿಸಿದ್ದೇ ಸುಪ್ರೀಂ ಕೋರ್ಟು. ಪೂನಾವಾಲ ಅವರು ಸಲ್ಲಿಸಿದ ಅಹವಾಲಿನಲ್ಲಿ ಸುಪ್ರೀಂ ಕೋರ್ಟು ಲಿಂಚಿಂಗ್ ನಿಗ್ರಹಿಸಲು ಮಾರ್ಗದರ್ಶನಗಳನ್ನು ರೂಪಿಸುವ ಸಂದರ್ಭದಲ್ಲೇ ತಪ್ಪನ್ನು ಎಸಗಿತು. ೨೦೧೮ರ ಜುಲೈ ೨೧ರ ನಮ್ಮ ಸಂಪಾದಕೀಯದಲ್ಲಿ ಗುರುತಿಸಿದಂತೆ ಸುಪ್ರೀಂ ಕೋರ್ಟಿನ ಮಾರ್ಗದರ್ಶನಗಳು ಈ ಸಂಗತಿಯನ್ನು ಈ ಕೊಲೆಗಳ ಹಿಂದಿರುವ ಹಿಂದಿರುವ ರಾಜಕೀಯ ಪ್ರೇರಣೆಯನ್ನು ಗಮನಿಸದೆ ಕೇವಲ ಒಂದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನಾಗಿ ಪರಿಗಣಿಸುತ್ತದೆ. ಪರಿಣಾಮವಾಗಿ ಮುಸ್ಲಿಮರ, ದಲಿತರ ಮತ್ತು ಆದಿವಾಸಿಗಳ ಲಿಂಚಿಂಗ್ ಕೊಲೆಗಳು ಎಗ್ಗಿಲ್ಲದೆ ಮುಂದುವರೆದಿರುವುದು ಮಾತ್ರವಲ್ಲದೆ ಒಂದು ಧೃವೀಕೃತ ಮತ್ತು ದ್ವೇಶ ತುಂಬಿದ ರಾಜಕೀಯ ಸನ್ನಿವೇಶದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸುವುದೂ ಕಷ್ಟವಾಗುತ್ತಿದೆ.

ಲಿಂಚಿಂಗ್ ಸಮಸ್ಯೆಯನ್ನು ಎರಡನೆಯದಾಗಿ ತಪ್ಪಾಗಿ ಗ್ರಹಿಸಿದ್ದು ಕಾಂಗ್ರೆಸ್ ಸರ್ಕಾರ. ಅದು ಜನರಲ್ಲಿ ಶಿಕ್ಷಾ ಭಯವಿಲ್ಲದಿರುವುದರಿಂದಲೇ ಲಿಂಚಿಂಗ್ ನಡೆಯುತ್ತಿದೆಯೆಂದು ತಪ್ಪಾಗಿ ಗ್ರಹಿಸಿ ಕಾನೂನಿಗೆ ತಿದ್ದುಪಡಿ ತರುವುದರ ಮೂಲಕ ಪರಿಹಾರ ಕಂಡುಕೊಳ್ಳಲು ಯತ್ನಿಸಿತು. ಆದರೆ ಲಿಂಚಿಂಗ್ ಕೊಲೆಗಳಿಗೆ ಅಸ್ಥಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆಯ ಅಡಿಯಲ್ಲೇ ಮರಣದಂಡನೆಯವರೆಗೆ ಯಾವ ಬಗೆಯ ಶಿಕ್ಷೆಯನ್ನಾದರೂ ವಿಧಿಸುವ ಅವಕಾಶವಿದೆ.

ಆದರೆ ಲಿಂಚಿಂಗ್‌ಗಳು ಪೂರ್ವಗ್ರಹಗಳಿಂದ ಮತ್ತು ಒಂದು ದಮನಿತ ಜನವರ್ಗದ ಮೇಲೆ ತಮ್ಮ ಅಧಿಪತ್ಯವನ್ನು ಸಾಧಿಸುವ ಉದ್ದೇಶಗಳಿಂದ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಮತ್ತೊಮ್ಮೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅದೇ ರೀತಿ ವ್ಯವಸ್ಥೆಯ ಉಳಿದೆಲ್ಲಾ ಯಂತ್ರಾಂಗಗಳಲ್ಲಿ ಯಾವುದೇ ಬದಲಾವಣೆ ಬರದೆ ಕೇವಲ ಕೇವಲ ಅಪರಾಧ ನಿಗ್ರಹ ಮತ್ತು ನ್ಯಾಯದಾನ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ ತರುವುದರಿಂದ  ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೆಂಬುದನ್ನೂ ಸಹ ಪುನರುಚ್ಚರಿಸುವ ಅಗತ್ಯವಿದೆ.

ಆದರೂ ಅಪರಾಧ ನಿಗ್ರಹ ಮತ್ತು ನ್ಯಾಯದಾನ ವ್ಯವಸ್ಥೆಯಲ್ಲಿ ಯಾವ ನಿರ್ದಿಷ್ಟ ಬದಲಾವಣೆಗಳ ಅಗತ್ಯವಿದೆ?

ಪೆಹ್ಲೂಖಾನ್ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿದ ವಿದ್ಯಮಾನವು ಹಲವು ಸಮಸ್ಯೆಗಳನ್ನು ಅನಾವರಣ ಮಾಡುತ್ತದೆ. ಆರೋಪಿಗಳನ್ನೂ ಖುಲಾಸೆ ಮಾಡಿದ ಆದೇಶವು ಪೆಹ್ಲೂ ಖಾನ್ ಸಾವಿಗೆ ಕಾರಣವೇನೆಂಬುದರ ಸುತ್ತ ಹುಟ್ಟಿಕೊಂಡ ಅನುಮಾನಗಳನ್ನೂ ಮೊದಲುಗೊಂಡು ತನಿಖೆ ಮತ್ತು ಕಾನೂನುಪ್ರಕ್ರಿಯೆಗಳ  ಎಲ್ಲಾ ಹಂತಗಳಲ್ಲೂ ನಡೆದ ಅತ್ಯಂತ ಹೀನಾಯವಾದ ವೈಫಲ್ಯಗಳನ್ನು ಆಧರಿಸಿದೆ. ಪೆಹ್ಲೂ ಖಾನ್ ಅವರ ಮರಣಪ್ರಮಾಣ ಪತ್ರ ಹಾಗೂ ಮರಣೋತ್ತರ ಪರೀಕ್ಷಾ ವರದಿಗಳ ನಡುವೆ ವೈರುಧ್ಯಗಳಿದ್ದವು. ಹಾಗೂ ಸರ್ಕಾರಿ ವಕೀಲರು ಪೆಹ್ಲೂ ಖಾನ್ ಅವರ ಸಾವಿಗೆ ಕಾರಣವಾದ ಘಟನೆಗಳನ್ನು ಆಧರಿಸಿ ಒಂದು ಸುಸಂಗತವಾದ ಘಟನಾಕ್ರಮವನ್ನು ಮುಂದಿಡಲೇ ಇಲ್ಲ.

ಇದರ ಜೊತೆಗೆ ಪ್ರಾಥಮಿಕ ತನಿಖಾಧಿಕಾರಿಯಾಗಿದ್ದ ರಮೇಶ್ ಸಿನ್‌ಸಿನ್ವಾರ್ ಅವರು ಪೆಹ್ಲೂ ಖಾನರ ಮರಣಾಸನ್ನ ಹೇಳಿಕೆಯನ್ನು ಅತ್ಯಂತ ನಿರ್ಲಕ್ಷದಿಂದ ದಾಖಲಿಸಿದ್ದ ರೀತಿಯೂ ಸಹ ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಈ ಹೇಳಿಕೆಯನ್ನು ಮಾಡುವಾಗ ಪೆಹ್ಲೂ ಖಾನ್ ಅವರು ವೈದ್ಯಕೀಯವಾಗಿ ಸಮರ್ಥರಿದ್ದರೂ ಎಂಬುದನ್ನು ಖಾತರಿಗೊಳಿಸುವ ಮೂಲಕ ಆ ಹೇಳಿಕೆಗೆ ಸಾಕ್ಷಿಯಾಗುವ ಮೌಲ್ಯವನ್ನು ಗಳಿಸಿಕೊಡಲೂ ಆ ಅಧಿಕಾರಿಯು ಪ್ರಯತ್ನಿಸಲಿಲ್ಲ. ಅಥವಾ ಅವರು ಸಾಯುವ ಮುನ್ನ ತಮ್ಮ  ಹೇಳಿಕೆಯಲ್ಲಿ ಹೆಸರಿಸಿದ  ವ್ಯಕ್ತಿಗಳನ್ನು ಅವರ ಮುಂದೆ ಹಾಜರುಪಡಿಸಿ ಗುರುತು ಖಾತರಿ ಪಡಿಸಿಕೊಳ್ಳುವ ಯತ್ನವನ್ನೂ ಮಾಡಲಿಲ್ಲ. ಸರಿಯಾದ ಆಧಾರವಿಲ್ಲದೆ ಈ ಪ್ರಕರಣದಲ್ಲಿ ಹಲವರ ಹೆಸರನ್ನು ಸೇರಿಸುತ್ತಾ ಮತ್ತು ತೆಗೆಯುವ ಮೂಲಕ ಪೊಲೀಸ್ ತನಿಖೆಂiನ್ನು ಉದ್ದಕ್ಕೂ ಗೊಂದಲಮಯಗೊಳಿಸಲಾಗಿತ್ತು.

ಪೆಹ್ಲೂಖಾನ್ ಅವರ ಮೇಲೆ ನದೆದ ದಾಳಿಯನ್ನು ವಿಡೀಯೋ ಚಿತ್ರೀಕರಣ ಮಾಡಿ ವಿಸ್ತೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರಿಂದ ಆರೋಪವನ್ನು ಸಾಬೀತುಪಡಿಸುವಲ್ಲಿ ಇದು ಅತ್ಯುತ್ತಮ ಸಾಕ್ಷಿಯಾಗುತ್ತದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ನ್ಯಾಯಾದೇಶದ ವಿವರಗಳು ಹೇಳುವಂತೆ ಈ ಎಲೆಕ್ಟ್ರಾನಿಕ್ ಸಾಕ್ಶ್ಯವನ್ನು ಪೊಲೀಸರು ನಿಭಾಯಿಸಿದ ರೀತಿ ಮಾತ್ರ ಅತ್ಯಂತ ಎಚ್ಚರಿಕೆಗೇಡಿತನದಿಂದ ಕೂಡಿತ್ತು. ಈ ವಿಡೀಯೋ ಸಾಕ್ಷ್ಯವನ್ನು ಎಲ್ಲಿಂದ, ಹೇಗೆ ಮತ್ತು ಯಾವ ಸಾಧನದಿಂದ ಪಡೆದುಕೊಳ್ಳಲಾಯಿತು ಎನ್ನುವುದನ್ನು ದಾಖಲಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಈ ವಿಡಿಯೋ ಬಗ್ಗೆ ಬೇರೆಬೇರೆ ಸಾಕ್ಷಿಗಳು ನೀಡಿದ ಪರಸ್ಪರ ವಿರುಧ್ಹವಾದ ಮತ್ತು ಗೊಂದಲಕಾರಿ ಹೇಳಿಕೆಗಳಿಂದಾಗಿ ಕೋರ್ಟು ಈ ವಿಡಿಯೋ ಒಂದು ಅನಮಾನಸ್ಪದವಾದ ಸಾಕ್ಷಿಯೆಂಬ ತೀರ್ಮಾನಕ್ಕೆ ಅನಿವಾರ್ಯವಾಗಿ ಬರಬೇಕಾಯಿತು. ಮತ್ತು ಆರೋಪಿಗಳನ್ನು ಗುರುತು ಹಿಡಿಯಲು ಈ ವಿಡಿಯೋದಲ್ಲಿನ ಸ್ಕ್ರೀನ್ ಶಾಟ್ ಅನ್ನು ಆಧರಿಸಿರುವುದನ್ನು ಕಾನೂನಾತ್ಮಕವಾಗಿ ಅನುಮೋದಿಸಲು ಸಾಧ್ಯವಿಲ್ಲವೆಂಬ ತೀರ್ಮಾನಕ್ಕೂ ಬರಬೇಕಾಯಿತು. 

 ಈ ತನಿಖೆ ನಡೆದಿರುವ ರೀತಿಯ ಬಗ್ಗೆ ಕಾಂಗ್ರೆಸ್ ಸರ್ಕಾರವು ಹೊಸದಾದ ತನಿಖೆಗೆ ಆದೇಶ ನೀಡಿದೆ . ಇದು ಉತ್ತಮವಾದ ಬೆಳವಣಿಗೆಯಾಗಿದ್ದರೂ ಇದರ ಹಿಂದಿರುವ ಮೂಲಭೂತ ಮತ್ತು ವಿಶಾಲ ರೂಪದ ಸಮಸ್ಯೆಗೆ ಇದು ಪರಿಹಾರವಲ್ಲ. ಇದರ ಹಿಂದಿರುವ ವಿಶಾಲವಾದ ಸಮಸ್ಯೆಯೇನೆಂದರೆ ಪೊಲೀಸರ ಸಿಬ್ಬಂದಿ ಮತ್ತು ಸಾಮರ್ಥ್ಯ-ಸಾಧನಗಳ ಕೊರತೆ ಹಾಗೂ ಇಡೀ ಇಲಾಖೆಯು ರಾಜಕೀಯ ಕಾರ್ಯಾಂಗಕ್ಕೆ ಅಧೀನವಾಗಿರುವುದು. ಇದರಿಂದಲೇ  ಸರಿಯಾಗಿ ತನಿಖೆ ನಡೆಸಲು ಮತ್ತು ಅಪರಾಧಗಳಿಗೆ ಶಿಕ್ಷೆ ವಿಧಿಸಲು ಆಗುತ್ತಿಲ್ಲ.

ಆದರೆ ಇವ್ಯಾವುದು ಲಿಂಚಿಂಗ್ ಸಮಸ್ಯೆಗೆ ತತ್‌ಕ್ಷಣದ ಪರಿಹಾರ ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಹುಟ್ಟಿಸಬಾರದು.

ಗೋ ರಕ್ಷಣೆಯ ಹೆಸರಿನಲ್ಲಿ ಕಾರ್ಯಾಚರಿಸುವ ರೌಡಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವುದರ ಮೂಲಕವೇ ಲಿಂಚಿಂಗ್ ಅನ್ನು ಹತ್ತಿಕ್ಕಲು ಬೇಕಾದ ಪ್ರಯತ್ನಗಳನ್ನು ಪ್ರಾರಂಭಿಸಬಹುದು. ಅದೇ ರೀತಿ ಗೋ ರಕ್ಷಣೆಯ ವಿಷಯದಲ್ಲಿ ಹಿಂದೂತ್ವವಾದಿ ದೃಷ್ಟಿಕೋನವನ್ನು ಹೇರುವ ಗೋ ಹತ್ಯಾ ಕಾನೂನುಗಳನ್ನು ಮರುಪರಿಶೀಲಿಸುವುದೂ ಕೂಡ ಒಂದು ಉತ್ತಮ ಹೆಜ್ಜೆಯಾಗಬಹುದು. ಇದನ್ನು ಮಾಡಲು ರಾಜಕೀಯ ಇಚ್ಚಾಶಕ್ತಿಯ ಅಗತ್ಯವಿದೆ. ಈ ತಿದ್ದುಪಡಿಗಳನ್ನು ರಾಜ್ಯ ಮಟ್ಟದಲ್ಲಿಯೇ ಮಾಡಿಕೊಳ್ಳಬಹುದು. ಹೀಗಾಗಿ ಲಿಂಚಿಂಗ್ ಅನ್ನು ತಡೆಗಟ್ಟುವ ಪರಿಣಾಮಕಾರಿ ಕ್ರಮಗಳ ಬಗ್ಗೆ ಕೇವಲ ಮಾತುಗಳನ್ನು ಮಾತ್ರ ಆಡದೆ ಕಾರ್ಯರೂಪದಲ್ಲಿ ತನ್ನ ನೀತಿಗಳನ್ನು ಜಾರಿಗೆ ತರಲು ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ಇದು ಸಕಾಲವಾಗಿದೆ.

Comments

(-) Hide

EPW looks forward to your comments. Please note that comments are moderated as per our comments policy. They may take some time to appear. A comment, if suitable, may be selected for publication in the Letters pages of EPW.

Back to Top